ಬಡವರ ಐಷಾರಾಮಿ ಕಾರಿದು.. 7-ಸೀಟರ್.. ರೂ.5.65 ಲಕ್ಷಕ್ಕೆ ಸಿಗುತ್ತೆ.. ದೇಶಾದ್ಯಂತ ವಿತರಣೆಗಳು ಪ್ರಾರಂಭ!
ಇತ್ತೀಚೆಗೆ ಹೊಚ್ಚ ಹೊಸ ನಿಸ್ಸಾನ್ ಗ್ರಾವೈಟ್ (Nissan Gravite) ಕಾರನ್ನು ಅದ್ದೂರಿ ಬಿಡುಗಡೆಗೊಳಿಸಲಾಗಿತ್ತು. ಇದೊಂದು ಎಂಪಿವಿಯಾಗಿದೆ. ಕೆಲವೇ ದಿನಗಳ ಹಿಂದೆ, ದೇಶಾದ್ಯಂತ ವಿವಿಧ ಡೀಲರ್‌ಶಿಪ್‌ಗಳಿಗೆ ಈ ಕಾರನ್ನು ತಲುಪಿಸುವ ಕಾರ್ಯಕ್ಕೂ ಚಾಲನೆ ನೀಡಲಾಗಿತ್ತು. ಸದ್ಯ ನೂತನ 'ಗ್ರಾವೈಟ್' ವಿತರಣೆಗಳು ಪ್ರಾರಂಭವಾಗಿವೆ ಎಂದು ಕಂಪನಿಯೇ ದೃಢಪಡಿಸಿದೆ. ಬನ್ನಿ, ಈ ಎಂಪಿವಿಯ ಬೆಲೆ ಎಷ್ಟು.. ವಿಶೇಷತೆಗಳೇನು ಎಂಬುದರ ಕುರಿತಂತೆ ಸಂಪೂರ್ಣವಾದ ವಿವರಗಳನ್ನು ತಿಳಿಯೋಣ.
ಬೆಲೆ & ರೂಪಾಂತರಗಳು (Price & Variants):
ಇದು ಅಗ್ಗದ ದರದಲ್ಲೂ ದೊರೆಯಲಿದ್ದು, ಎಲ್ಲ ವರ್ಗದ ಜನರು ಖರೀದಿಸಬಹುದಾಗಿದೆ. ಕನಿಷ್ಠ ರೂ.5.65 ಲಕ್ಷ ಮತ್ತು ಗರಿಷ್ಠ ರೂ.8.93 ಲಕ್ಷ (ಎಕ್ಸ್-ಶೋರೂಂ) ಬೆಲೆಯನ್ನು ಹೊಂದಿದೆ. ವಿಸಿಯಾ (Visia), ಅಸೆಂಟಾ (Acenta), ಎನ್-ಕನೆಕ್ಟಾ (N-Connecta) ಮತ್ತು ಟೆಕ್ನಾ (Tekna) ಎಂಬ ರೂಪಾಂತರಗಳೊಂದಿಗೂ ಸಿಗುತ್ತದೆ.

ವಿನ್ಯಾಸ & ಬಣ್ಣಗಳು (Design & Colours):
ಈ ಎಂಪಿವಿಯು ಹೆಚ್ಚು ಅತ್ಯಾಧುನಿಕವಾದ ವಿನ್ಯಾಸವನ್ನು ಒಳಗೊಂಡಿದೆ. ಉತ್ತಮವಾದ ಎಲ್ಇಡಿ ಹೆಡ್‌ಲ್ಯಾಂಪ್‌ಗಳು, ಎಲ್ಇಡಿ ಡಿಆರ್‌ಎಲ್‌ಗಳು, ಎಲ್ಇಡಿ ಟೈಲ್ ಲ್ಯಾಂಪ್‌ಗಳು ಹಾಗೂ 14 ಅಥವಾ 15-ಇಂಚಿನ ವೀಲ್‌ಗಳನ್ನು ಪಡೆದಿದೆ. ಫಾರೆಸ್ಟ್ ಗ್ರೀನ್, ಓನಿಕ್ಸ್ ಬ್ಯ್ಲಾಕ್, ಮೆಟಾಲಿಕ್ ಗ್ರೇ, ಬ್ಲೇಡ್ ಸಿಲ್ವರ್ ಹಾಗೂ ಸ್ಟಾರ್ಮ್ ವೈಟ್ ಎಂಬ ಬಣ್ಣಗಳ ಆಯ್ಕೆಯಲ್ಲಿಯೂ ಲಭ್ಯವಿದೆ.
ಸುತ್ತಳತೆ (Dimensions):
ಹೊಸ 'ಗ್ರಾವೈಟ್' ಎಂಪಿವಿಯು ಸಾಕಷ್ಟು ವಿಶಾಲ ಗಾತ್ರದಲ್ಲಿದೆ. 3,987 ಎಂಎಂ ಉದ್ದ, 1,734 ಎಂಎಂ ಅಗಲ ಹಾಗೂ 1,644 ಎಂಎಂ ಎತ್ತರವಿದೆ. 182 ಎಂಎಂ ಗ್ರೌಂಡ್ ಕ್ಲಿಯರೆನ್ಸ್ ಮತ್ತು 2,636 ಎಂಎಂ ವೀಲ್‌ಬೇಸ್‌ನ್ನು ಒಳಗೊಂಡಿದೆ. ಬರೋಬ್ಬರಿ 993 ಕೆಜಿ ತೂಕವಿದೆ.

ಆಸನ ಆಯ್ಕೆ & ಬೂಟ್ ಸ್ಪೇಸ್ (Seating Capacity & Boot Space):
ಇದು 7 ಆಸನ ಆಯ್ಕೆ ವ್ಯವಸ್ಥೆಯನ್ನು ಪಡೆದಿದೆ. ಪ್ರಯಾಣಿಕರು ಆರಾಮದಾಯಕವಾಗಿ ಕುಳಿತುಕೊಂಡು ಸಂಚಾರ ಮಾಡಬಹುದು. ವೀಕೆಂಡ್‌ಗಳಲ್ಲಿ ಪ್ರವಾಸಕ್ಕೆ ಹೋಗುವಾಗ ಹೆಚ್ಚಿನ ಲಗೇಜ್ ಸಾಗಿಸಲು ಸಾಧ್ಯವಾಗುವಂತೆ ಪುಟ್ಟದಾದ 84 ಲೀಟರ್ ಹಾಗೂ 3ನೇ ಸಾಲಿನ ಆಸನಗಳನ್ನು ಮಡಚಿದರೆ, 625 ಲೀಟರ್‌ನಷ್ಟು ಬೂಟ್ ಸ್ಪೇಸ್‌ನ್ನು ಲಭ್ಯವಾಗುತ್ತದೆ.
ಕಾರ್ಯಕ್ಷಮತೆ (Performance):
ಈ ಕಾರು 1.0-ಲೀಟರ್ ನ್ಯಾಚುರಲಿ ಆಸ್ಪಿರೇಟೆಡ್ ಪೆಟ್ರೋಲ್ ಎಂಜಿನ್‌ನ್ನು ಪಡೆದಿದೆ. 71 ಪಿಎಸ್ ಅಶ್ವ ಶಕ್ತಿ (ಹಾರ್ಸ್ ಪವರ್) ಮತ್ತು 96 ಎನ್ಎಂ (ನ್ಯೂಟನ್ ಮೀಟರ್) ಪೀಕ್ ಟಾರ್ಕ್ ಉತ್ಪಾದಿಸುವ ಸಾಮರ್ಥ್ಯವನ್ನು ಒಳಗೊಂಡಿದೆ. 5-ಸ್ಪೀಡ್ ಮ್ಯಾನುವಲ್ ಹಾಗೂ 5-ಸ್ಪೀಡ್ ಆಟೋಮೆಟಿಕ್ ಗೇರ್‌ಬಾಕ್ಸ್‌ನ್ನು ಒಳಗೊಂಡಿದೆ. 19.3 ರಿಂದ 19.6 ಕಿಲೋಮೀಟರ್‌ವರೆಗೆ ಮೈಲೇಜ್ ಕೊಡುತ್ತದೆ. 155 ಕೆಎಂಪಿಹೆಚ್ ಟಾಪ್ ಸ್ಪೀಡ್‌ನ್ನು ಪಡೆದಿರಬಹುದು ಎಂದು ಅಂದಾಜಿಸಲಾಗಿದೆ.
ಒಳಾಂಗಣ & ವೈಶಿಷ್ಟ್ಯಗಳು (Interior & Features):
ನೂತನ 'ಗ್ರಾವೈಟ್' ಎಂಪಿವಿಯ ಕ್ಯಾಬಿನ್ ವಿನ್ಯಾಸವು ನೋಡುಗರ ಕಣ್ಣು ಕುಕ್ಕುವಂತಿದೆ. 8-ಇಂಚಿನ ಟಚ್‌ಸ್ಕ್ರೀನ್ ಫ್ಲೋಟಿಂಗ್ ಇನ್ಫೋಟೈನ್‌ಮೆಂಟ್ ಸಿಸ್ಟಮ್, ಫುಲ್ ಡಿಜಿಟಲ್ ಇನ್ಸ್ಟ್ರುಮೆಂಟ್ ಕ್ಲಸ್ಟರ್, ವೈರ್‌ಲೆಸ್ ಆಂಡ್ರಾಯ್ಡ್ ಆಟೋ, ಆಪಲ್ ಕಾರ್‌ಪ್ಲೇ, 6-ಸ್ಪೀಕರ್ ಸೌಂಡ್ ಸಿಸ್ಟಮ್, ವೈರ್‌ಲೆಸ್ ಫೋನ್ ಚಾರ್ಜರ್, ಪುಶ್ ಬಟನ್ ಸ್ಟಾರ್ಟ್/ಸ್ಟಾಪ್, ಕ್ರೂಸ್ ಕಂಟ್ರೋಲ್, ಪ್ಯಾಡಲ್ ಶಿಫ್ಟರ್ಸ್ ಮತ್ತು ಮ್ಯಾನುವಲ್ ಎಸಿ ಸೇರಿದಂತೆ ವಿವಿಧ ವೈಶಿಷ್ಟ್ಯಗಳನ್ನು ಪಡೆದಿದೆ.
ಸುರಕ್ಷತಾ ವೈಶಿಷ್ಟ್ಯಗಳು (Safety Features):
ಇದು ಸುರಕ್ಷತೆಗೂ ಹೆಸರುವಾಸಿಯಾಗಿದೆ. ಪ್ರಯಾಣಿಕರಿಗೆ ಗರಿಷ್ಠ ಮಟ್ಟದಲ್ಲಿ ರಕ್ಷಣೆಯನ್ನು ಒದಗಿಸಬಲ್ಲದು. ಅದಕ್ಕಾಗಿ 6-ಏರ್‌ಬ್ಯಾಗ್, ಎಬಿಎಸ್ (ಆಂಟಿ - ಲಾಕ್ ಬ್ರೇಕಿಂಗ್ ಸಿಸ್ಟಮ್), ಇಬಿಡಿ (ಎಲೆಕ್ಟ್ರಾನಿಕ್ ಬ್ರೇಕ್‌ಫೋರ್ಸ್ ಡಿಸ್ಟ್ರಿಬ್ಯೂಷನ್), ಇಎಸ್‌ಸಿ (ಎಲೆಕ್ಟ್ರಾನಿಕ್ ಸ್ಟೆಬಿಲಿಟಿ ಕಂಟ್ರೋಲ್), ಟಿಪಿಎಂಎಸ್ (ಟೈರ್ ಪ್ರೆಶರ್ ಮಾನಿಟರಿಂಗ್ ಸಿಸ್ಟಮ್), ಹಿಲ್-ಸ್ಟಾರ್ಟ್ ಅಸಿಸ್ಟ್ ಮತ್ತು ರೇರ್ ಪಾರ್ಕಿಂಗ್ ಸೆನ್ಸಾರ್‌ಗಳನ್ನು ಪಡೆದಿದೆ.
Image Source: Youtube Shorts @aakashvlog00


Click it and Unblock the Notifications








