ಹೊಸ ರೆನಾಲ್ಟ್ ಡಸ್ಟರ್ vs ಹ್ಯುಂಡೈ ಕ್ರೆಟಾ: ಒಂದಕ್ಕಿಂತ ಒಂದು ಚೆನ್ನಾಗಿವೆ.. ಯಾವುದು ಬೆಸ್ಟ್, ನೀವೇ ಹೇಳಿ?
ನಿನ್ನೆ 2026ರ ಹೊಸ ರೆನಾಲ್ಟ್ ಡಸ್ಟರ್ (Renault Duster) ಎಸ್‌ಯುವಿಯನ್ನು ಅನಾವರಣಗೊಳಿಸಲಾಯಿತು. ಇದಕ್ಕೆ ಹ್ಯುಂಡೈ ಕ್ರೆಟಾ (Hyundai Creta) ನೇರವಾದ ಎದುರಾಳಿಯಾಗಿದೆ. ಈ ಕಾರುಗಳು ಹೆಚ್ಚು ಅತ್ಯಾಧುನಿಕವಾಗಿದ್ದು, ನಾನಾ ಬಗೆಯ ಹೊಸತನಗಳಿಗೂ ಸಾಕ್ಷಿಯಾಗಿವೆ. ನಾವಿಲ್ಲಿ ಇವೆರೆಡು ಎಸ್‌ಯುವಿಗಳ ಬೆಲೆ, ಕಾರ್ಯಕ್ಷಮತೆ ಹಾಗೂ ವೈಶಿಷ್ಟ್ಯಗಳ ಕುರಿತು ಹೋಲಿಕೆ ಮಾಡಿದ್ದೇವೆ. ಆ ಬಗ್ಗೆ ಇಲ್ಲಿದೆ ಹೆಚ್ಚಿನ ಮಾಹಿತಿ.
ಬೆಲೆ (Price):
ಸದ್ಯಕ್ಕೆ 'ರೆನಾಲ್ಟ್ ಡಸ್ಟರ್'ನ ಬೆಲೆಯನ್ನು ಕಂಪನಿಯು ಘೋಷಿಸಿಲ್ಲ. ಆದರೂ ರೂ.9.50 ಲಕ್ಷದಿಂದ ರೂ.19 ಲಕ್ಷ (ಎಕ್ಸ್-ಶೋರೂಂ) ದರವನ್ನು ಪಡೆದಿರಬಹುದು ಎಂದು ಹೇಳಲಾಗಿದೆ. ಅದೇ ರೀತಿಯಲ್ಲಿ 'ಹ್ಯುಂಡೈ ಕ್ರೆಟಾ' ರೂ.10.79 ಲಕ್ಷದಿಂದ ರೂ.20.20 ಲಕ್ಷ ಬೆಲೆಯನ್ನು ಹೊಂದಿದೆ. ದರದ ವಿಚಾರದಲ್ಲಿ ಕ್ರೆಟಾಗೆ ಹೋಲಿಕೆ ಮಾಡಿದರೆ, ಡಸ್ಟರ್ ಸ್ವಲ್ಪ ಮಟ್ಟಿಗೆ ಅಗ್ಗವಾಗಿರಲಿದೆ ಎನ್ನಲಾಗಿದೆ.

ವಿನ್ಯಾಸ (Design):
ಈ ಕಾರುಗಳು ಒಂದಕ್ಕಿಂತ ಒಂದು ಅದ್ಬುತವಾದ ವಿನ್ಯಾಸವನ್ನು ಒಳಗೊಂಡಿವೆ. 'ರೆನಾಲ್ಟ್ ಡಸ್ಟರ್' ತುಂಬಾ ಚೆನ್ನಾಗಿರುವ ಎಲ್ಇಡಿ ಹೆಡ್‌ಲ್ಯಾಂಪ್‌ಗಳು, ಎಲ್ಇಡಿ ಡಿಆರ್‌ಎಲ್‌ಗಳು, ಎಲ್ಇಡಿ ಟೈಲ್‌ಲೈಟ್‌ಗಳು ಹಾಗೂ 18-ಇಂಚಿನ ಅಲಾಯ್ ವೀಲ್‌ಗಳನ್ನು ಪಡೆದಿದೆ. ಜೇಡ್ ಮೌಂಟೇನ್ ಗ್ರೀನ್, ಪರ್ಲ್ ವೈಟ್, ಮೂನ್‌ಲೈಟ್ ಸಿಲ್ವರ್ ಮತ್ತು ಸ್ಟೆಲ್ತ್ ಬ್ಲ್ಯಾಕ್ ಸೇರಿದಂತೆ ವಿವಿಧ ಬಣ್ಣಗಳೊಂದಿಗೂ ಲಭ್ಯವಿದೆ.
'ಹ್ಯುಂಡೈ ಕ್ರೆಟಾ' ಸಹ ಉತ್ತಮವಾದ ವಿನ್ಯಾಸವನ್ನು ಹೊಂದಿದೆ. ಎಲ್ಇಡಿ ಹೆಡ್‌ಲ್ಯಾಂಪ್‌ಗಳು, ಎಲ್ಇಡಿ ಡಿಆರ್‌ಎಲ್‌ಗಳು, ಎಲ್ಇಡಿ ಟೈಲ್‌ಲೈಟ್‌ಗಳು & 18-ಇಂಚಿನ ಅಲಾಯ್ ವೀಲ್‌ಗಳನ್ನು ಒಳಗೊಂಡಿದೆ. ಅಟ್ಲಾಸ್ ವೈಟ್, ಅಬಿಸ್ ಬ್ಲಾಕ್, ಟೈಟಾನ್ ಗ್ರೇ ಹಾಗೂ ರೇಂಜರ್ ಖಾಕಿಯಂತಹ ಹಲವು ಬಣ್ಣಗಳ ಆಯ್ಕೆಯಲ್ಲಿಯೂ ಸಿಗುತ್ತದೆ.
ಆಸನ ಆಯ್ಕೆ & ಬೂಟ್ ಸ್ಪೇಸ್ (Seating Capacity & Boot Space):
ಹೊಸ ರೆನಾಲ್ಟ್ ಡಸ್ಟರ್ ಮತ್ತು ಹ್ಯುಂಡೈ ಕ್ರೆಟಾ ಎಸ್‌ಯುವಿಗಳೆರಡು 5 ಆಸನ ಆಯ್ಕೆ ವ್ಯವಸ್ಥೆಯನ್ನು ಹೊಂದಿದ್ದು, ಪ್ರಯಾಣಿಕರು ಆರಾಮದಾಯಕವಾಗಿ ಕುಳಿತುಕೊಂಡು ಸಂಚಾರ ಮಾಡಬಹುದು. ಹೆಚ್ಚಿನ ಲಗೇಜ್ ಸಾಗಿಸಲು ಸಾಧ್ಯವಾಗುವಂತೆ 'ಡಸ್ಟರ್' 700 ಲೀಟರ್ ಹಾಗೂ 'ಕ್ರೆಟಾ' ಬರೀ 433 ಲೀಟರ್ ಸಾಮರ್ಥ್ಯದ ಬೂಟ್ ಸ್ಪೇಸ್‌ನ್ನು ಒಳಗೊಂಡಿದೆ.
ಕಾರ್ಯಕ್ಷಮತೆ (Performance):
ಈ ಕಾರುಗಳು ಶಕ್ತಿಶಾಲಿಯಾದ ಪವರ್‌ಟ್ರೇನ್‌ನ್ನು ಪಡೆದಿವೆ. 'ರೆನಾಲ್ಟ್ ಡಸ್ಟರ್' 1.8-ಲೀಟರ್ ಸ್ಟ್ರಾಂಗ್ ಹೈಬ್ರಿಡ್ (ಪೆಟ್ರೋಲ್+ಎಲೆಕ್ಟ್ರಿಕ್), 1.3-ಲೀಟರ್ ಟರ್ಬೊ ಪೆಟ್ರೋಲ್ ಹಾಗೂ 1.0-ಲೀಟರ್ ಪೆಟ್ರೋಲ್ ಎಂಜಿನ್‌ನ್ನು ಒಳಗೊಂಡಿದೆ. 5-ಸ್ಪೀಡ್ ಮ್ಯಾನುವಲ್, 6-ಸ್ಪೀಡ್ ಮ್ಯಾನುವಲ್, 6-ಸ್ಪೀಡ್ ಆಟೋಮೆಟಿಕ್ ಹಾಗೂ 8-ಸ್ಪೀಡ್ ಗೇರ್‌ಬಾಕ್ಸ್‌ನ್ನು ಹೊಂದಿದೆ. 13.9 ರಿಂದ 19.87 ಕಿಲೋಮೀಟರ್‌ವರೆಗೆ ಮೈಲೇಜ್‌ನ್ನು ನೀಡಬಹುದು ಎಂದು ಅಂದಾಜಿಸಲಾಗಿದೆ.
'ಹ್ಯುಂಡೈ ಕ್ರೆಟಾ' 1.5-ಲೀಟರ್ ನ್ಯಾಚುರಲ್ ಆಸ್ಪಿರೇಟೆಡ್ ಪೆಟ್ರೋಲ್, 1.5-ಲೀಟರ್ ಟರ್ಬೊ ಪೆಟ್ರೋಲ್ ಮತ್ತು 1.5-ಲೀಟರ್ ಡೀಸೆಲ್ ಎಂಜಿನ್‌ನ್ನು ಹೊಂದಿದೆ. 6-ಸ್ಪೀಡ್ ಮ್ಯಾನುವಲ್, 6-ಸ್ಪೀಡ್ ಆಟೋಮೆಟಿಕ್, ಸಿವಿಟಿ ಮತ್ತು 7-ಸ್ಪೀಡ್ ಡಿಸಿಟಿ ಗೇರ್‌ಬಾಕ್ಸ್‌ನ್ನು ಹೊಂದಿದೆ. 17.4 ರಿಂದ 21.8 ಕಿಲೋಮೀಟರ್‌ವರೆಗೆ ಮೈಲೇಜ್‌ನ್ನು ಕೊಡುತ್ತದೆ.
ಒಳಾಂಗಣ & ವೈಶಿಷ್ಟ್ಯಗಳು (Interior & Features):
ಇವೆರಡು ಎಸ್‌ಯುವಿಗಳ ಕ್ಯಾಬಿನ್ ವಿನ್ಯಾಸವನ್ನು ಅತ್ಯಾಕರ್ಷಕವಾಗಿದೆ. 'ರೆನಾಲ್ಟ್ ಡಸ್ಟರ್' 10-ಇಂಚಿನ ಟಚ್‌ಸ್ಕ್ರೀನ್ ಇನ್ಫೋಟೈನ್‌ಮೆಂಟ್ ಸಿಸ್ಟಮ್, ಪನೋರಮಿಕ್ ಸನ್‌ರೂಫ್, ಡುಯಲ್ ಜೋನ್ ಕ್ಲೇಮೇಟ್ ಕಂಟ್ರೋಲ್ ಹಾಗೂ ವೆಂಟಿಲೇಟೆಡ್ ಫ್ರಂಟ್ ಸೀಟ್‌ಗಳು ಸೇರಿದಂತೆ ವಿವಿಧ ವೈಶಿಷ್ಟ್ಯಗಳನ್ನು ಒಳಗೊಂಡಿದೆ. ಪ್ರಯಾಣಿಕರ ರಕ್ಷಣೆಗಾಗಿ 6-ಏರ್‌ಬ್ಯಾಗ್‌ಗಳು, ಲೆವೆಲ್-2 ಎಡಿಎಎಸ್ (ಅಡ್ವಾನ್ಸ್ಡ್ ಡ್ರೈವರ್ ಅಸಿಸ್ಟೆನ್ಸ್ ಸಿಸ್ಟಮ್ಸ್) ಮತ್ತು 360-ಡಿಗ್ರಿ ಕ್ಯಾಮೆರಾವನ್ನು ಹೊಂದಿದೆ.
'ಹ್ಯುಂಡೈ ಕ್ರೆಟಾ' 10.25-ಇಂಚಿನ ಡುಯಲ್ ಸ್ಕ್ರೀನ್ (ಇನ್ಫೋಟೈನ್‌ಮೆಂಟ್ ಸಿಸ್ಟಮ್ & ಇನ್ಸ್ಟ್ರುಮೆಂಟ್ ಕ್ಲಸ್ಟರ್) ಡುಯಲ್ ಝೋನ್ ಎಸಿ, 8-ಸ್ಪೀಕರ್ ಬೋಸ್ ಸೌಂಡ್ ಸಿಸ್ಟಮ್, ಸನ್‌ರೂಫ್ ಮತ್ತು ವೆಂಟಿಲೇಟೆಡ್ ಫ್ರಂಟ್ ಸೀಟ್‌ಗಳು ಒಳಗೊಂಡಂತೆ ಹಲವು ವೈಶಿಷ್ಟ್ಯಗಳನ್ನು ತನ್ನದಾಗಿಸಿಕೊಂಡಿದೆ. ಸುರಕ್ಷತೆಗಾಗಿ 6-ಏರ್‌ಬ್ಯಾಗ್‌ಗಳು, ಎಡಿಎಎಸ್ (ಅಡ್ವಾನ್ಸ್ಡ್ ಡ್ರೈವರ್ ಅಸಿಸ್ಟೆನ್ಸ್ ಸಿಸ್ಟಮ್ಸ್) ಹಾಗೂ ಹಿಲ್-ಸ್ಟಾರ್ಟ್ ಅಸಿಸ್ಟ್‌ಗಳನ್ನು ಪಡೆದಿದೆ.


Click it and Unblock the Notifications








