Tata: 9.66 ಲಕ್ಷ ರೂಪಾಯಿ.. ಭೀಮ ಬಲದ ಟಾಟಾ ಕಾರಿದು, ಆದರೂ ಗ್ರಾಹಕರು ಕೊಳ್ಳುತ್ತಿಲ್ಲ.. ಯಾಕೆ?
ಟಾಟಾ ಕರ್ವ್ (Tata Curvv) ಪ್ರಖ್ಯಾತ ಕೂಪೆ ಎಸ್‌ಯುವಿಯಾಗಿದೆ. ಆದರೂ ಈ ಕಾರನ್ನು ಕೊಂಡುಕೊಳ್ಳಲು ಗ್ರಾಹಕರು ಹಿಂದೇಟು ಹಾಕುತ್ತಿದ್ದು, ದಿನದಿಂದ ದಿನಕ್ಕೆ ಮಾರಾಟ ಸಂಖ್ಯೆಯೂ ಕುಸಿತವಾಗುತ್ತಿದೆ. ಕಳೆದ ತಿಂಗಳು (ಡಿಸೆಂಬರ್ - 2025) ಅದು ಮುಂದುವರಿದಿದೆ. ಒಟ್ಟು 1,104 ಯುನಿಟ್‌ಗಳನ್ನು ಮಾತ್ರ ಖರೀದಿದಾರರಿಗೆ ವಿತರಿಸಲಾಗಿದೆ. 2024ರ ಇದೇ ಅವಧಿಯಲ್ಲಿ 4,994 ಯುನಿಟ್‌ಗಳನ್ನು ಮಾರಲಾಗಿತ್ತು. ಈ ಅಂಕಿಅಂಶವನ್ನು ಲೆಕ್ಕ ಹಾಕಿದಾಗ ಮಾರಾಟ ಪ್ರಮಾಣವು ವರ್ಷದಿಂದ ವರ್ಷಕ್ಕೆ ಶೇಕಡ 77.89% ಇಳಿಕೆಯಾಗಿದೆ.
ನೂತನ 'ಟಾಟಾ ಕರ್ವ್' ಮಾರಾಟವು ಕಡಿಮೆಯಾಗಲು ಹಲವು ಕಾರಣಗಳಿವೆ. ಬಹುಮುಖ್ಯವಾಗಿ ಇದರ ಬೆಲೆಗಿಂತ ಅಗ್ಗದ ದರಕ್ಕೆ ಸ್ವತಃ ಟಾಟಾ ಸೇರಿದಂತೆ ಬೇರೆ ಕಂಪನಿಗಳು ಕೂಡ ಹೆಚ್ಚು ಅತ್ಯಾಕರ್ಷಕವಾಗಿರುವ ಕಾರುಗಳನ್ನು ಮಾರಾಟ ಮಾಡುತ್ತಿವೆ. ಜೊತೆಗೆ 'ಕರ್ವ್' ವಿನ್ಯಾಸವು ಗ್ರಾಹಕರನ್ನು ಸೆಳೆಯುವಲ್ಲಿ ವಿಫಲವಾಗಿದೆ. ಹೀಗಾಗಿ, ಮಾರಾಟ ಸಂಖ್ಯೆಯೂ ಇಳಿಮುಖವಾಗಿದೆ ಎಂದು ವಿಶ್ಲೇಷಣೆ ಮಾಡಲಾಗುತ್ತಿದೆ.

ಸ್ಟ್ಯಾಂಡರ್ಡ್ ಟಾಟಾ ಕರ್ವ್ ವಿಶೇಷತೆಗಳೇನು:
ಈ ಎಸ್‌ಯುವಿಯು ರೂ.9.66 ಲಕ್ಷದಿಂದ ರೂ.18.85 ಲಕ್ಷ (ಎಕ್ಸ್-ಶೋರೂಂ) ದರವನ್ನು ಪಡೆದಿದೆ. ಸ್ಮಾರ್ಟ್, ಪ್ಯೂರ್ ಪ್ಲಸ್, ಕ್ರಿಯೇಟಿವ್ ಹಾಗೂ ಅಕಂಪ್ಲಿಶ್ಡ್ ಎಂಬ ರೂಪಾಂತರಗಳ (ವೇರಿಯೆಂಟ್) ಆಯ್ಕೆಯಲ್ಲಿಯೂ ಸಿಗುತ್ತದೆ. ಸ್ಪ್ಲಿಟ್ ಹೆಡ್‌ಲ್ಯಾಂಪ್‌ಗಳು, ಎಲ್‌ಇಡಿ ಡಿಆರ್‌ಎಲ್‌ಗಳು, ಎಲ್‌ಇಡಿ ಟೈಲ್‌ಲೈಟ್‌ಗಳು ಹಾಗೂ ಡುಯಲ್-ಟೋನ್ ಅಲಾಯ್ ವೀಲ್‌ಗಳನ್ನು ಹೊಂದಿದೆ.
ಇದು 4,308 ಮಿ.ಮೀ ಉದ್ದ, 1,810 ಮಿ.ಮೀ ಅಗಲ ಹಾಗೂ 1,630 ಮಿ.ಮೀ ಎತ್ತರವಿದೆ. 208 ಮಿ.ಮೀ ಗ್ರೌಂಡ್ ಕ್ಲಿಯರೆನ್ಸ್ ಮತ್ತು 2,560 ಮಿ.ಮೀ ವೀಲ್‌ಬೇಸ್‌ನ್ನು ಒಳಗೊಂಡಿದೆ. ಫ್ಲೇಮ್ ರೆಡ್, ಪ್ರಿಸ್ಟೈನ್ ವೈಟ್, ಡೇಟೋನಾ ಗ್ರೇ, ಒಪೇರಾ ಬ್ಲೂ, ಪ್ಯೂರ್ ಗ್ರೇ ಹಾಗೂ ಗೋಲ್ಡ್ ಎಸೆನ್ಸ್ ಎಂಬ ಬಣ್ಣಗಳೊಂದಿಗೂ ಸಿಗುತ್ತದೆ.

ನೂತನ 'ಟಾಟಾ ಕರ್ವ್' 3 ಪವರ್‌ಟ್ರೇನ್‌ನ್ನು ಒಳಗೊಂಡಿದೆ. 1.2-ಲೀ. ಟರ್ಬೊ ಪೆಟ್ರೋಲ್, 1.2-ಲೀ. ಜಿಡಿಐ ಟರ್ಬೊ ಪೆಟ್ರೋಲ್ ಹಾಗೂ 1.5-ಲೀ. ಡೀಸೆಲ್ ಎಂಜಿನ್‌ನ್ನು ಹೊಂದಿದೆ. 6-ಸ್ಪೀಡ್ ಮ್ಯಾನುವಲ್ ಮತ್ತು 7-ಸ್ಪೀಡ್ ಡಿಸಿಟಿ ಗೇರ್‌ಬಾಕ್ಸ್‌ನ್ನು ಒಳಗೊಂಡಿದೆ. 17.67 ರಿಂದ 19.25 ಕಿಲೋಮೀಟರ್‌ವರೆಗೆ ಮೈಲೇಜ್ ನೀಡುತ್ತದೆ. 204 ಕೆಎಂಪಿಹೆಚ್ ಟಾಪ್ ಸ್ಪೀಡ್‌ನ್ನು ಹೊಂದಿದೆ. ಬರೀ 10.96 ಸೆಕೆಂಡುಗಳಲ್ಲಿ 0 ರಿಂದ 100 ಕೆಎಂಪಿಹೆಚ್ ವೇಗವನ್ನು ಪಡೆಯಲಿದೆ.
ಈ ಕಾರು 5 ಆಸನ ಆಯ್ಕೆ ವ್ಯವಸ್ಥೆಯನ್ನು ಹೊಂದಿದೆ. ಪ್ರಯಾಣಿಕರು ಆರಾಮದಾಯಕವಾಗಿ ಕುಳಿತುಕೊಂಡು ಓಡಾಟ ನಡೆಸಬಹುದು. 12.3-ಇಂಚಿನ ಟಚ್‌ಸ್ಕ್ರೀನ್ ಇನ್ಫೋಟೈನ್‌ಮೆಂಟ್ ಸಿಸ್ಟಮ್, ಡಿಜಿಟಲ್ ಡ್ರೈವರ್ ಡಿಸ್‌ಪ್ಲೇ, ಮಲ್ಟಿ ಫಂಕ್ಷನ್ ಸ್ಟೀರಿಂಗ್ ವೀಲ್, 9-ಸ್ಪೀಕರ್ ಜೆಬಿಎಲ್ ಸೌಂಡ್ ಸಿಸ್ಟಮ್ ಹಾಗೂ ಪನೊರೊಮಿಕ್ ಸನ್‌ರೂಫ್ ಸೇರಿದಂತೆ ವಿವಿಧ ವೈಶಿಷ್ಟ್ಯಗಳನ್ನು ಒಳಗೊಂಡಿದೆ. ಪ್ರಯಾಣಿಕರ ರಕ್ಷಣೆಗಾಗಿ 6-ಏರ್‌ಬ್ಯಾಗ್‌ಗಳು, ಲೆವೆಲ್-2 ಎಡಿಎಎಸ್ (ಅಡ್ವಾನ್ಸ್ಡ್ ಡ್ರೈವರ್ ಅಸಿಸ್ಟೆನ್ಸ್ ಸಿಸ್ಟಮ್) ಮತ್ತು 360-ಡಿಗ್ರಿ ಕ್ಯಾಮೆರಾವನ್ನು ಹೊಂದಿದೆ.

ಟಾಟಾ ಕರ್ವ್ ಇವಿಯೂ ಲಭ್ಯ:
ಇದೊಂದು ಎಲೆಕ್ಟ್ರಿಕ್ ಎಸ್‌ಯುವಿಯಾಗಿದೆ. ರೂ.17.49 ಲಕ್ಷದಿಂದ ರೂ.22.24 ಲಕ್ಷ (ಎಕ್ಸ್-ಶೋರೂಂ) ಬೆಲೆಯನ್ನು ಒಳಗೊಂಡಿದೆ. 45 ಕಿಲೋ ವ್ಯಾಟ್ (ಕೆಡಬ್ಲ್ಯೂಹೆಚ್) ಹಾಗೂ 55 ಕಿಲೋ ವ್ಯಾಟ್ (ಕೆಡಬ್ಲ್ಯೂಹೆಚ್) ಸಾಮರ್ಥ್ಯದ ಬ್ಯಾಟರಿ ಪ್ಯಾಕ್‌ನ್ನು ಪಡೆದಿದೆ. ಸಂಪೂರ್ಣ ಚಾರ್ಜ್‌ನಲ್ಲಿ 502 ರಿಂದ 585 ಕಿಲೋಮೀಟರ್‌ವರೆಗೆ ರೇಂಜ್ (ಮೈಲೇಜ್) ಕೊಡುತ್ತದೆ.
ನೂತನ 'ಕರ್ವ್ ಇವಿ' 5 ಆಸನಗಳನ್ನು ಹೊಂದಿದೆ. 12.3-ಇಂಚಿನ ಟಚ್‌ಸ್ಕ್ರೀನ್ ಇನ್ಫೋಟೈನ್‌ಮೆಂಟ್ ಸಿಸ್ಟಮ್, 10.25-ಇಂಚಿನ ಡಿಜಿಟಲ್ ಡ್ರೈವರ್ ಡಿಸ್‌ಪ್ಲೇ, ಆಟೋಮೆಟಿಕ್ ಕ್ಲೇಮೇಟ್ ಕಂಟ್ರೋಲ್, ಸನ್‌ರೂಫ್ ಹಾಗೂ ವೈರ್‌ಲೆಸ್ ಫೋನ್ ಚಾರ್ಜರ್‌ನಂತಹ ವೈಶಿಷ್ಟ್ಯಗಳನ್ನು ಒಳಗೊಂಡಿದೆ. ಪ್ರಯಾಣಿಕರ ರಕ್ಷಣೆಗಾಗಿ 6-ಏರ್‌ಬ್ಯಾಗ್‌ಗಳು, ಎಡಿಎಎಸ್ (ಅಡ್ವಾನ್ಸ್ಡ್ ಡ್ರೈವರ್ ಅಸಿಸ್ಟೆನ್ಸ್ ಸಿಸ್ಟಮ್), ಟಿಪಿಎಂಎಸ್ (ಟೈರ್ ಪ್ರೆಶರ್ ಮಾನಿಟರಿಂಗ್ ಸಿಸ್ಟಮ್) ಹಾಗೂ 360-ಡಿಗ್ರಿ ಕ್ಯಾಮೆರಾವನ್ನು ಪಡೆದಿದೆ.


Click it and Unblock the Notifications








