Tata: ಮುಂದಿನ ಪೀಳಿಗೆಯ 17 ಟ್ರಕ್‌ಗಳನ್ನು ಬಿಡುಗಡೆ ಮಾಡಿದ ಟಾಟಾ ಮೋಟಾರ್ಸ್: ವಿಶೇಷತೆಗಳೇನು?
ಭಾರತದ ಅತಿದೊಡ್ಡ ವಾಣಿಜ್ಯ ವಾಹನ ತಯಾರಕ ಸಂಸ್ಥೆಯಾದ ಟಾಟಾ ಮೋಟಾರ್ಸ್, ಇಂದು ಭಾರತೀಯ ಟ್ರಕ್ ಕ್ಷೇತ್ರವನ್ನೇ ಬದಲಿಸುವ ಮಹತ್ವದ ಹೆಜ್ಜೆಯಾಗಿ ಮುಂದಿನ ಪೀಳಿಗೆಯ 17 ಟ್ರಕ್‌ಗಳನ್ನು ಬಿಡುಗಡೆ ಮಾಡಿದೆ. 7 ರಿಂದ 55 ಟನ್‌ಗಳವರೆಗಿನ ವಿಭಾಗದ ಈ ಹೊಸ ಟ್ರಕ್‌ಗಳು ಸುರಕ್ಷತೆ, ಲಾಭ ಮತ್ತು ಪ್ರಗತಿಯಲ್ಲಿ ಹೊಸ ಮಾನದಂಡಗಳನ್ನು ಸ್ಥಾಪಿಸಲಿವೆ. ಈ ಸಮಗ್ರ ವಾಹನ ಬಿಡುಗಡೆಯಲ್ಲಿ ಹೊಚ್ಚ ಹೊಸ ಅಜುರಾ ಸರಣಿ, ಅತ್ಯಾಧುನಿಕ ಟಾಟಾ ಟ್ರಕ್ಸ್.ಇವಿ ಶ್ರೇಣಿ ಮತ್ತು ಈಗಾಗಲೇ ಜನಪ್ರಿಯವಾಗಿರುವ ಪ್ರೈಮಾ, ಸಿಗ್ನಾ ಹಾಗೂ ಅಲ್ಟ್ರಾ ವಾಹನಗಳ ಸುಧಾರಿತ ಆವೃತ್ತಿಗಳನ್ನು ಪರಿಚಯಿಸಲಾಗಿದೆ.
ಅಜುರಾ ಪರಿಚಯ - ILMCV ವಿಭಾಗದಲ್ಲಿ ಉತ್ಕೃಷ್ಟ ಪರಿಕಲ್ಪನೆ
ಟಾಟಾ ಮೋಟಾರ್ಸ್ ಹೊಚ್ಚ ಹೊಸದಾದ ಅಜುರಾ ಶ್ರೇಣಿಯನ್ನು ಬಿಡುಗಡೆ ಮಾಡಿದೆ. ಮಧ್ಯಮ ಮತ್ತು ಹಗುರವಾದ ವಾಣಿಜ್ಯ ವಾಹನ (ILMCV) ವಿಭಾಗದಲ್ಲಿ ಅತ್ಯುತ್ತಮ ಕಾರ್ಯಕ್ಷಮತೆ, ಹೆಚ್ಚಿನ ಸೌಕರ್ಯ ಮತ್ತು ಹೆಚ್ಚಿನ ಅವಧಿ ಕೆಲಸ ಮಾಡುವ ಸಾಮರ್ಥ್ಯವನ್ನು (ಅಪ್ ಟೈಮ್) ಒದಗಿಸಲು ಇದನ್ನು ವಿಶೇಷವಾಗಿ ವಿನ್ಯಾಸಗೊಳಿಸಲಾಗಿದೆ. ಉತ್ಪಾದಕತೆ, ಸುರಕ್ಷತೆ ಮತ್ತು ಆರಾಮದಾಯಕ ಚಾಲನೆಗೆ ಒತ್ತು ನೀಡಿ ಸಿದ್ಧಪಡಿಸಲಾದ ಅಜುರಾ, ಆಯಾಸರಹಿತ ಚಾಲನಾ ಅನುಭವ ಒದಗಿಸುತ್ತದೆ.

ಅಜುರಾದ ಮುಖ್ಯಾಂಶಗಳು: ಇದರ ಹೊಸ 3.6-ಲೀಟರ್ ಡೀಸೆಲ್ ಎಂಜಿನ್, ತನ್ನ ವರ್ಗದಲ್ಲೇ ಅತ್ಯುತ್ತಮ ಕಾರ್ಯಕ್ಷಮತೆ ಮತ್ತು ಇಂಧನ ದಕ್ಷತೆಯನ್ನು ಹೊಂದಿದೆ. 7 ರಿಂದ 19 ಟನ್ ಹೊರುವ ಸಾಮರ್ಥ್ಯದ ವಾಹನಗಳು ಲಭ್ಯವಿದೆ. ಸಂಪೂರ್ಣ ಹೊಸ ವಾಕ್‌ಥ್ರೂ ಕ್ಯಾಬಿನ್, ಆರಾಮದಾಯಕ ಮತ್ತು ಸುರಕ್ಷಿತ ಕ್ಯಾಬಿನ್ ಡಿ+2 (ಚಾಲಕ + ಇಬ್ಬರು) ಸೀಟಿಂಗ್ ವ್ಯವಸ್ಥೆ, ವಾಲಿಸಬಹುದಾದ ಸೀಟುಗಳು ಮತ್ತು ಹೆಚ್ಚಿನ ಸ್ಥಳಾವಕಾಶವನ್ನು ಹೊಂದಿದೆ.
ಭಾರತೀಯ ರಸ್ತೆಗಳಿಗೆ ವಿಶ್ವದರ್ಜೆಯ ಸುರಕ್ಷತೆಯ ಪರಿಚಯ
ಟಾಟಾ ಮೋಟಾರ್ಸ್ ತನ್ನ ಸಂಪೂರ್ಣ ಟ್ರಕ್ ಪೋರ್ಟ್‌ಫೋಲಿಯೋವನ್ನು (ಸಿಗ್ನಾ, ಪ್ರೈಮಾ, ಅಲ್ಟ್ರಾ ಮತ್ತು ಹೊಚ್ಚ ಹೊಸ ಅಜುರಾ ಸರಣಿ ಸೇರಿದಂತೆ) ECE R29 03 ಜಾಗತಿಕ ಕ್ರ್ಯಾಶ್ ಸೇಫ್ಟಿ ಮಾನದಂಡಗಳಿಗೆ (ಯುರೋ ಕ್ರ್ಯಾಶ್ ನಿಯಮಗಳು) ಅನುಗುಣವಾಗಿ ಮೇಲ್ದರ್ಜೆಗೇರಿಸುವ ಮೂಲಕ ರಸ್ತೆ ಸುರಕ್ಷತೆಯಲ್ಲಿ ಹೊಸ ಮೈಲಿಗಲ್ಲು ಸ್ಥಾಪಿಸಿದೆ. ಈ ಟ್ರಕ್‌ಗಳ ಕ್ಯಾಬಿನ್‌ಗಳನ್ನು ಮುಖಾಮುಖಿ ಡಿಕ್ಕಿ, ವಾಹನ ಉರುಳುವಿಕೆ ಮತ್ತು ಪಾರ್ಶ್ವಗಳಲ್ಲಿ ಆಗುವ ಡಿಕ್ಕಿಗಳಿಂದ ರಕ್ಷಣೆ ನೀಡುವಂತೆ ವಿನ್ಯಾಸಗೊಳಿಸಲಾಗಿದೆ.

ಜೊತೆಗೆ, ಇವುಗಳಲ್ಲಿ ಅಡಾಪ್ಟಿವ್ ಕ್ರೂಸ್ ಕಂಟ್ರೋಲ್, ಲೇನ್ ಡಿಪಾರ್ಚರ್ ವಾರ್ನಿಂಗ್ ಮತ್ತು ಕೊಲಿಷನ್ ಮಿಟಿಗೇಷನ್ ಸಿಸ್ಟಮ್‌ಗಳಂತಹ ಭಾರತೀಯ ರಸ್ತೆಗಳಿಗೆ ಪೂರಕವಾದ 23 ಅತ್ಯಾಧುನಿಕ ಸುರಕ್ಷತಾ ತಂತ್ರಜ್ಞಾನಗಳನ್ನು ಅಳವಡಿಸಲಾಗಿದೆ. ಮುಂದಿನ ಪೀಳಿಗೆಯ ಕನೆಕ್ಟೆಡ್ ವೆಹಿಕಲ್ ಪ್ಲಾಟ್‌ಫಾರ್ಮ್ ಆದ ಫ್ಲೀಟ್ ಎಡ್ಜ್ ಮೂಲಕ ಚಾಲನಾ ವರ್ತನೆಯನ್ನು ನೈಜ ಸಮಯದಲ್ಲಿ ಮೇಲ್ವಿಚಾರಣೆ ಮಾಡಬಹುದಾಗಿದೆ.
ಟ್ರಕ್ ಕ್ಷೇತ್ರದಲ್ಲಿ ಎಲೆಕ್ಟ್ರಿಕ್ ಕ್ರಾಂತಿಗೆ ಚಾಲನೆ
ಟಾಟಾ ಮೋಟಾರ್ಸ್ ತನ್ನ ಹೊಸ ಟಾಟಾ ಟ್ರಕ್ಸ್.ಇವಿ ಬ್ರಾಂಡ್ ಅಡಿಯಲ್ಲಿ 7 ರಿಂದ 55 ಟನ್ ಸಾಮರ್ಥ್ಯದ ಎಲೆಕ್ಟ್ರಿಕ್ ಟ್ರಕ್‌ಗಳ ಸಮಗ್ರ ಶ್ರೇಣಿಯನ್ನು ಬಿಡುಗಡೆ ಮಾಡಿದೆ. ಇವು ಹೊಸ ಐ-ಎಂಓಇವಿ (ಇಂಟೆಲಿಜೆಂಟ್ ಮಾಡ್ಯುಲರ್ ಎಲೆಕ್ಟ್ರಿಕ್ ವೆಹಿಕಲ್) ಆರ್ಕಿಟೆಕ್ಚರ್ ಅನ್ನು ಆಧರಿಸಿಕೊಂಡು ಸಿದ್ಧವಾಗಿದ್ದು, ಈ ಟ್ರಕ್‌ಗಳನ್ನು ಇ-ಕಾಮರ್ಸ್, ನಿರ್ಮಾಣ ಮತ್ತು ಬಂದರು ವಲಯದ ಸುಸ್ಥಿರ ಕಾರ್ಯಾಚರಣೆಗಳಿಗಾಗಿ ವಿಶೇಷವಾಗಿ ವಿನ್ಯಾಸಗೊಳಿಸಲಾಗಿದೆ.
ಈ ಎಲೆಕ್ಟ್ರಿಕ್ ಟ್ರಕ್ ಗಳಲ್ಲಿ ಒಂದಾಗಿರುವ ಅಲ್ಟ್ರಾ ಇವಿ ಸರಣಿಯು 7, 9 ಮತ್ತು 12 ಟನ್ ಸಾಮರ್ಥ್ಯಗಳಲ್ಲಿ ಲಭ್ಯವಿದ್ದು, ಇವು ಭಾರತದ ಅತ್ಯಂತ ಸುಧಾರಿತ ಎಲೆಕ್ಟ್ರಿಕ್ ಲಘು ಟ್ರಕ್‌ಗಳಾಗಿವೆ. ಪ್ರೈಮಾ E.55S ಪ್ರೈಮ್ ಮೂವರ್ 470 kW ಪವರ್ ಮತ್ತು 453 kWh ಬ್ಯಾಟರಿ ಸಾಮರ್ಥ್ಯ ಹೊಂದಿದ್ದು, ಹೆವಿ ಡ್ಯೂಟಿ ಕಾರ್ಯಕ್ಷಮತೆ ಮತ್ತು ಕಡಿಮೆ ನಿರ್ವಹಣಾ ವೆಚ್ಚದ ಲಾಭ ಒದಗಿಸುತ್ತದೆ ಎಂದು ಟಾಟಾ ಹೇಳಿದೆ.
ಗಣಿಗಾರಿಕೆ ಮತ್ತು ನಿರ್ಮಾಣ ಕ್ಷೇತ್ರಕ್ಕಾಗಿ ವಿನ್ಯಾಸಗೊಳಿಸಲಾದ ಪ್ರೈಮಾ E.28K ಟಿಪ್ಪರ್, ಹೆಚ್ಚಿನ ಟಾರ್ಕ್ ಮತ್ತು ದೃಢತೆಯನ್ನು ಹೊಂದಿದ್ದು, ವೇಗದ ಕಾರ್ಯಾಚರಣೆ ಮತ್ತು ಪರಿಸರ ಸ್ನೇಹಿ ಗಣಿಗಾರಿಕೆಯನ್ನು ಸಾಧ್ಯವಾಗಿಸುತ್ತದೆ. ಟಾಟಾ ಟ್ರಕ್ಸ್.ಇವಿ ಶ್ರೇಣಿಯನ್ನು ಸುಧಾರಿತ ಇವಿ ಆರ್ಕಿಟೆಕ್ಚರ್‌ಗಳು, ಬದ್ಧಿವಂತ ಬ್ಯಾಟರಿ ಮ್ಯಾನೇಜ್‌ಮೆಂಟ್ ಸಿಸ್ಟಮ್‌ಗಳು ಮತ್ತು ಸ್ಥಳೀಯವಾಗಿ ವಿನ್ಯಾಸಗೊಳಿಸಿದ ಬಿಡಿಭಾಗಗಳೊಂದಿಗೆ ಅಭಿವೃದ್ಧಿಪಡಿಸಲಾಗಿದೆ.


Click it and Unblock the Notifications








