Tata: ಟಾಟಾ ಗ್ರೀನ್‌ಫೀಲ್ಡ್ ಪ್ಲಾಂಟ್ ಉದ್ಘಾಟನೆ: 9,000 ಕೋಟಿ ಹೂಡಿಕೆ: 5,000 ಉದ್ಯೋಗಾವಕಾಶ ಸೃಷ್ಟಿ
ಭಾರತದ ಪ್ರಮುಖ ಕಾರು ಮತ್ತು ಎಸ್‌ಯುವಿ ತಯಾರಕ ಕಂಪನಿಯಾದ ಟಾಟಾ ಮೋಟಾರ್ಸ್ (Tata Motors) ಮತ್ತು ಅದರ ಅಂಗಸಂಸ್ಥೆಯಾದ ಜಾಗ್ವಾರ್ ಲ್ಯಾಂಡ್ ರೋವರ್ (Jaguar Land Rover), ತಮಿಳುನಾಡಿನ ರಾಣಿಪೇಟೆ ಜಿಲ್ಲೆಯ ಪನಪಾಕ್ಕಂನಲ್ಲಿರುವ ತಮ್ಮ ಹೊಸ ಉತ್ಪಾದನಾ ಘಟಕವನ್ನು ಕಾರ್ಯಾರಂಭ ಮಾಡಿದೆ. ತಮಿಳುನಾಡು ಮುಖ್ಯಮಂತ್ರಿ ಎಂ.ಕೆ. ಸ್ಟಾಲಿನ್ ಮತ್ತು ಟಾಟಾ ಮೋಟಾರ್ಸ್ ಪ್ಯಾಸೆಂಜರ್ ವೆಹಿಕಲ್ಸ್‌ನ ಅಧ್ಯಕ್ಷ ಎನ್. ಚಂದ್ರಶೇಖರನ್ ಅವರು ಈ ಬೃಹತ್ ಉತ್ಪಾದನಾ ಘಟಕವನ್ನು ಉದ್ಘಾಟಿಸಿದರು.
ಈ ಪ್ರಸ್ತುತ ಘಟಕವು ಟಾಟಾ ಮೋಟಾರ್ಸ್ ಮತ್ತು ಜಾಗ್ವಾರ್ ಲ್ಯಾಂಡ್ ರೋವರ್ ಎರಡೂ ಬ್ರ್ಯಾಂಡ್‌ಗಳ ಎಲೆಕ್ಟ್ರಿಕ್ ವಾಹನಗಳು ಸೇರಿದಂತೆ ಮುಂದಿನ ಪೀಳಿಗೆಯ ವಾಹನಗಳನ್ನು ತಯಾರಿಸಲು ಅಭಿವೃದ್ಧಿಪಡಿಸಲಾದ ಗ್ರೀನ್‌ಫೀಲ್ಡ್ ಪ್ಲಾಂಟ್‌ನ ಮೊದಲ ಹಂತವಾಗಿದ್ದು, ಸ್ಥಳೀಯವಾಗಿ ತಯಾರಾದ ಮೊದಲ ವಾಹನವಾಗಿ ಜೆಎಲ್‌ಆರ್‌ನ ರೇಂಜ್ ರೋವರ್ ಇವೋಕ್ ಮೂಡಿಬಂದಿದೆ. ಈ ಮಾಡಲ್ ತನ್ನ ಐಷಾರಾಮಿತನ ಮತ್ತು ಅಸಾಧಾರಣ ಕುಶಲತೆಗೆ ಜಾಗತಿಕವಾಗಿ ಹೆಸರುವಾಸಿಯಾಗಿದೆ.

ಈಗ ಕಾರ್ಯಾಚರಣೆ ಆರಂಭವಾಗಿರುವುದರಿಂದ, ವಾಹನ ಉತ್ಪಾದನೆಯನ್ನು ಹಂತಹಂತವಾಗಿ ಹೆಚ್ಚಿಸಲಾಗುವುದು. ಮುಂದಿನ 5-7 ವರ್ಷಗಳಲ್ಲಿ ಈ ಘಟಕವು ವರ್ಷಕ್ಕೆ 2,50,000 ವಾಹನಗಳ ಉತ್ಪಾದನೆಯ ಗುರಿಯನ್ನು ತಲುಪಲಿದ್ದು, ಭಾರತೀಯ ಮತ್ತು ಅಂತರಾಷ್ಟ್ರೀಯ ಮಾರುಕಟ್ಟೆಗಳ ಬೇಡಿಕೆಯನ್ನು ಪೂರೈಸಲಿದೆ. ಒಟ್ಟಾರೆಯಾಗಿ, ಟಾಟಾ ತನ್ನ ದೀರ್ಘಕಾಲದ ಬೆಳವಣಿಗೆಯ ಮಹತ್ವಾಕಾಂಕ್ಷೆಗಳಿಗೆ ಪೂರಕವಾಗಿ ಈ ಉತ್ಪಾದನಾ ಘಟಕವನ್ನು ನಿರ್ಮಿಸಲು ಅಂದಾಜು 9,000 ಕೋಟಿ ರೂ. ಹೂಡಿಕೆ ಮಾಡಲಿದೆ.
ಈ ಕಾರ್ಖಾನೆಯು 5,000ಕ್ಕೂ ಹೆಚ್ಚು ನೇರ ಮತ್ತು ಪರೋಕ್ಷ ಉದ್ಯೋಗಾವಕಾಶಗಳನ್ನು ಸೃಷ್ಟಿಸುವ ಸಾಮರ್ಥ್ಯವನ್ನು ಹೊಂದಿದ್ದು, ಕೌಶಲ್ಯ ಅಭಿವೃದ್ಧಿಯನ್ನು ಉತ್ತೇಜಿಸುವ ಜೊತೆಗೆ ಬಲಿಷ್ಠವಾದ ಪೂರಕ ಉದ್ಯಮಗಳ ಬೆಳವಣಿಗೆಗೆ ಬೆಂಬಲ ನೀಡಲಿದೆ. ಪನಪಾಕ್ಕಂ ಘಟಕವು ಟಾಟಾ ಸುಸ್ಥಿರತೆಗೆ ಮೊದಲ ಆದ್ಯತೆ ಎಂಬ ತತ್ವಕ್ಕೆ ನಿದರ್ಶನವಾಗಿದ್ದು, ಪ್ರತಿ ಹಂತದಲ್ಲೂ ಪರಿಸರ ಜವಾಬ್ದಾರಿಯುತ ಕಾರ್ಯಾಚರಣೆಗಳನ್ನು ಅಳವಡಿಸಿಕೊಂಡಿದೆ.

ಈ ಕಾರ್ಖಾನೆಯು ಸಂಪೂರ್ಣವಾಗಿ ನವೀಕರಿಸಬಹುದಾದ ಇಂಧನ ಮೂಲಗಳ ಮೂಲಕ ನಡೆಯುವಂತೆ ವಿನ್ಯಾಸಗೊಳಿಸಲಾಗಿದೆ. ಇದು ವಾಟರ್ ಪಾಸಿಟಿವ್ (ಬಳಸುವ ನೀರಿಗಿಂತ ಹೆಚ್ಚು ನೀರನ್ನು ಮರುಪೂರಣ ಮಾಡುವುದು) ಆಗಿರಲಿದ್ದು, ಆಟೋಮೋಟಿವ್ ಕ್ಷೇತ್ರದಲ್ಲಿ ಹಸಿರು ಉತ್ಪಾದನೆಯಲ್ಲಿ ಹೊಸ ಮಾನದಂಡವನ್ನು ಸ್ಥಾಪಿಸಲಿದೆ. ಸುಸ್ಥಿರ ಅಭ್ಯಾಸಗಳಿಗೆ ಹೆಚ್ಚಿನ ಆದ್ಯತೆ ನೀಡಿರುವ ಈ ಘಟಕವು ದಕ್ಷತೆಯನ್ನು ಹೆಚ್ಚಿಸಲು, ಇಂಗಾಲ ಹೊರಸೂಸುವಿಕೆಯನ್ನು ಕಡಿಮೆ ಮಾಡಲು ಬದ್ಧವಾಗಿರುವುದಾಗಿ ಟಾಟಾ ಹೇಳಿದೆ.
ಟಾಟಾ ಮೋಟಾರ್ಸ್ ಪ್ಯಾಸೆಂಜರ್ ವೆಹಿಕಲ್ಸ್‌ನ (ಟಿಎಂಪಿವಿ) ಪನಪಾಕ್ಕಂ ಘಟಕವು ವಿಶ್ವದರ್ಜೆಯ ವಾಹನಗಳನ್ನು ತಯಾರಿಸಲು ಸುಧಾರಿತ ಉತ್ಪಾದನಾ ತಂತ್ರಜ್ಞಾನಗಳು ಮತ್ತು ನೈಪುಣ್ಯ ಹೊಂದಿದ ಕಾರ್ಯಪಡೆಯನ್ನು ಹೊಂದಿದೆ. ಈ ಘಟಕವು ತಮಿಳುನಾಡಿನಾದ್ಯಂತ ಆಯ್ಕೆಯಾದ ವೈವಿಧ್ಯಮಯ ತಾಂತ್ರಿಕ ತಂಡದಿಂದ ನಿರ್ವಹಿಸಲ್ಪಡುತ್ತಿದ್ದು, ಈ ಸಿಬ್ಬಂದಿ ಟಾಟಾ ಮೋಟಾರ್ಸ್‌ನ ಕಾರ್ಯಕ್ರಮದ ಭಾಗವಾಗಿದ್ದಾರೆ.

ತಮಿಳುನಾಡಿನ ಮುಖ್ಯಮಂತ್ರಿ ಎಂ.ಕೆ. ಸ್ಟಾಲಿನ್, "ರಾಷ್ಟ್ರ ನಿರ್ಮಾಣದಲ್ಲಿ ಟಾಟಾ ಗ್ರೂಪ್ ದೀರ್ಘಕಾಲದಿಂದ ಪ್ರಮುಖ ಪಾತ್ರ ವಹಿಸುತ್ತಿದೆ ಮತ್ತು ತಮಿಳುನಾಡಿನೊಂದಿಗೆ ಗಾಢವಾದ, ಐತಿಹಾಸಿಕ ಪಾಲುದಾರಿಕೆಯನ್ನು ಹೊಂದಿದೆ. ಈ ಹೊಸ ಉತ್ಪಾದನಾ ಘಟಕದ ಕಾರ್ಯಾಚರಣೆಯ ಪ್ರಾರಂಭ ಮತ್ತು ರಾಣಿಪೇಟೆಯ ಪನಪಾಕ್ಕಂನಲ್ಲಿ ಮೊದಲ ರೇಂಜ್ ರೋವರ್ ಇವೋಕ್ ಬಿಡುಗಡೆ ಮೂಲಕ ವಿಶ್ವದರ್ಜೆಯ ಆಟೋಮೋಟಿವ್ ಉತ್ಪಾದನೆಯ ಪ್ರಕ್ರಿಯೆಗೆ ಸಾಕ್ಷಿಯಾಗಲು ರಾಜ್ಯವು ಹೆಮ್ಮೆಪಡುತ್ತದೆ.
ತಮಿಳುನಾಡು ಈ ಮಹತ್ವದ ಮೈಲಿಗಲ್ಲನ್ನು ಸ್ವಾಗತಿಸುತ್ತದೆ. ಉದ್ಯೋಗಗಳನ್ನು ಸೃಷ್ಟಿಸುವ, ಆವಿಷ್ಕಾರವನ್ನು ಪ್ರೋತ್ಸಾಹಿಸುವ ಮತ್ತು ಉತ್ಪಾದನೆ ಹಾಗೂ ಸಾರಿಗೆ ಕ್ಷೇತ್ರದಲ್ಲಿ ಭಾರತದ ಪ್ರಮುಖ ಕೇಂದ್ರವಾಗಿ ನಮ್ಮ ಸ್ಥಾನವನ್ನು ಬಲಪಡಿಸುವ ಉದ್ಯಮಗಳನ್ನು ಬೆಂಬಲಿಸಲು ನಾವು ಬದ್ಧರಾಗಿದ್ದೇವೆ" ಎಂದು ತಮಿಳುನಾಡಿನ ಮುಖ್ಯಮಂತ್ರಿ ಎಂ.ಕೆ. ಸ್ಟಾಲಿನ್ ಹೇಳಿದರು.
ಟಾಟಾ ಪ್ಯಾಸೆಂಜರ್ ವೆಹಿಕಲ್ಸ್ ಅಧ್ಯಕ್ಷ ಎನ್. ಚಂದ್ರಶೇಖರನ್ ಮಾತನಾಡಿ, "ನಮ್ಮ ಪನಪಾಕ್ಕಂ ಘಟಕದ ಉದ್ಘಾಟನೆಯು ಭವಿಷ್ಯಕ್ಕೆ ಸಿದ್ಧವಾದ ಉತ್ಪಾದನಾ ಕ್ಷೇತ್ರದಲ್ಲಿ ಭಾರತವನ್ನು ಮುಂಚೂಣಿಯಲ್ಲಿ ನಿಲ್ಲಿಸುವ ಒಂದು ಮಹತ್ವದ ಮೈಲಿಗಲ್ಲಾಗಿದೆ. ತಮಿಳುನಾಡು ರಾಜ್ಯದೊಂದಿಗೆ ನಮ್ಮ ದೀರ್ಘಕಾಲದ ಪಾಲುದಾರಿಕೆಯನ್ನು ಮತ್ತಷ್ಟು ಗಟ್ಟಿಗೊಳಿಸಲು ನಾವು ಹೆಮ್ಮೆಪಡುತ್ತೇವೆ. ಭಾರತ ಮತ್ತು ಪ್ರಪಂಚದಾದ್ಯಂತದ ಗ್ರಾಹಕರಿಗಾಗಿ ಅಸಾಧಾರಣ ಗುಣಮಟ್ಟ, ಕುಶಲತೆ ಮತ್ತು ತಂತ್ರಜ್ಞಾನದ ವಾಹನಗಳನ್ನು ತಯಾರಿಸಲು ನಾವು ಎದುರು ನೋಡುತ್ತಿದ್ದೇವೆ" ಎಂದು ತಿಳಿಸಿದರು.


Click it and Unblock the Notifications








