ಸರ್ಕಾರದಿಂದ ಬೃಹತ್ ಆರ್ಡರ್ ಬಾಚಿಕೊಂಡ ಟಾಟಾ: ಹೈಡ್ರೋಜನ್ ವಾಹನಗಳಿಗೆ ಒಪ್ಪಂದ!
ದೇಶವನ್ನು ಕಾರ್ಬನ್ ಮುಕ್ತವಾಗಿಸುವ ಪಯಣದಲ್ಲಿ ಒಂದು ಪ್ರಮುಖ ಹೆಜ್ಜೆಯಾಗಿ, ಭಾರತದ ಅತಿದೊಡ್ಡ ವಾಣಿಜ್ಯ ವಾಹನ ತಯಾರಕರಾದ ಟಾಟಾ ಮೋಟಾರ್ಸ್, ತಮಿಳುನಾಡಿನ ಟುಟಿಕೋರಿನ್‌ನಲ್ಲಿರುವ ವಿ.ಒ. ಚಿದಂಬರನಾರ್ ಬಂದರು ಪ್ರಾಧಿಕಾರ (ವಿಒಸಿಪಿಎ) ನೊಂದಿಗೆ 40 ಗ್ರೀನ್ ಹೈಡ್ರೋಜನ್ ಎಂಜಿನ್-ಚಾಲಿತ (ಎಚ್2 ಐಸಿಇ) ಪ್ರೈಮ್ ಮೂವರ್‌ಗಳನ್ನು ಬಂದರಿನಲ್ಲಿ ನಿಯೋಜಿಸುವ ಒಪ್ಪಂದಕ್ಕೆ (ಎಂಒಯು) ಸಹಿ ಹಾಕಿದೆ. ಕೇಂದ್ರ ಬಂದರುಗಳು, ಹಡಗು ಮತ್ತು ಜಲಮಾರ್ಗಗಳ ಸಚಿವ ಸರ್ಬಾನಂದ ಸೋನೋವಾಲ್ ಅವರ ಸಮ್ಮುಖದಲ್ಲಿ ಈ ಒಪ್ಪಂದಕ್ಕೆ ಸಹಿ ಹಾಕಲಾಯಿತು.
ಒಪ್ಪಂದದ ಭಾಗವಾಗಿ, ಟಾಟಾ ಮೋಟಾರ್ಸ್ ಹೈಡ್ರೋಜನ್-ಚಾಲಿತ ಪ್ರೈಮ್ ಮೂವರ್‌ನೊಂದಿಗೆ ಪ್ರಯೋಗಗಳನ್ನು ಪ್ರಾರಂಭಿಸುತ್ತದೆ, ನಂತರ ಮುಂದಿನ ಎರಡು ವರ್ಷಗಳಲ್ಲಿ H2 ICE-ಚಾಲಿತ ಪ್ರೈಮ್ ಮೂವರ್‌ಗಳನ್ನು ಹಂತಹಂತವಾಗಿ ನಿಯೋಜಿಸಲಿದೆ. ಈ ಯೋಜನೆಗೆ ಬಂದರುಗಳು, ಹಡಗು ಮತ್ತು ಜಲಮಾರ್ಗಗಳ ಸಚಿವಾಲಯವು ಹಣವನ್ನು ಒದಗಿಸಲಿದ್ದು, ಇದು ಭವಿಷ್ಯಕ್ಕೆ ಸಿದ್ಧವಾದ ಕಡಲ ಪರಿಸರ ವ್ಯವಸ್ಥೆಯನ್ನು ನಿರ್ಮಿಸಲು ಭಾರತ ಸರ್ಕಾರದ ಬದ್ಧತೆಯನ್ನು ಒತ್ತಿಹೇಳುತ್ತದೆ.

ಈ ಯೋಜನೆಗಾಗಿ ಬಳಸಲಾಗುವ ವಾಹನಗಳ ಸಾಲಿನಲ್ಲಿ ಟಾಟಾ ಮೋಟಾರ್ಸ್ ಪ್ರೈಮಾ 55-ಟನ್ ಪ್ರೈಮ್ ಮೂವರ್ ಒಳಗೊಂಡಿದ್ದು, ಇದನ್ನು ಸುಸ್ಥಿರ, ವೆಚ್ಚ-ದಕ್ಷ ಮತ್ತು ಹೆಚ್ಚಿನ ಕಾರ್ಯಕ್ಷಮತೆಯ ಸಾರಿಗೆ ಉದ್ದೇಶಕ್ಕಾಗಿ ವಿನ್ಯಾಸಗೊಳಿಸಲಾಗಿದೆ. ಪ್ರೀಮಿಯಂ ಪ್ರೈಮಾ ಕ್ಯಾಬಿನ್ ಮತ್ತು ಸುಧಾರಿತ ಡ್ರೈವರ್ ಅಸಿಸ್ಟ್ ಸುರಕ್ಷತಾ ವೈಶಿಷ್ಟ್ಯಗಳನ್ನು ಹೊಂದಿರುವ ಈ ಟ್ರಕ್‌ಗಳು ಚಾಲಕರಿಗೆ ಆರಾಮದಾಯಕತೆ ನೀಡುವ ಜೊತೆಗೆ ಉತ್ಪಾದಕತೆಯನ್ನು ಹೆಚ್ಚಿಸುತ್ತವೆ.
ಟಾಟಾ ಮೋಟಾರ್ಸ್ ಬ್ಯಾಟರಿ ಎಲೆಕ್ಟ್ರಿಕ್, ಸಿಎನ್‌ಜಿ, ಎಲ್‌ಎನ್‌ಜಿ, ಹೈಡ್ರೋಜನ್ ಇಂಟರ್ನಲ್ ಕಂಬಷನ್ ಮತ್ತು ಹೈಡ್ರೋಜನ್ ಇಂಧನ ಕೋಶಗಳಂತಹ ಪರ್ಯಾಯ ಇಂಧನ ತಂತ್ರಜ್ಞಾನಗಳಿಂದ ಚಾಲಿತವಾಗುವ ನವೀನ ಸಾರಿಗೆ ಉತ್ಪನ್ನಗಳನ್ನು ಅಭಿವೃದ್ಧಿಪಡಿಸುವಲ್ಲಿ ಮುಂಚೂಣಿಯಲ್ಲಿದೆ. ಇದು ಸಣ್ಣ ವಾಣಿಜ್ಯ ವಾಹನಗಳು, ಟ್ರಕ್‌ಗಳು, ಬಸ್‌ಗಳು ಮತ್ತು ವ್ಯಾನ್‌ಗಳು ಸೇರಿದಂತೆ ವಿವಿಧ ವಿಭಾಗಗಳಲ್ಲಿ ಪರ್ಯಾಯ ಇಂಧನ ಚಾಲಿತ ವಾಣಿಜ್ಯ ವಾಹನಗಳ ಬಲಿಷ್ಠ ಪೋರ್ಟ್ ಫೋಲಿಯೋವನ್ನು ಹೊಂದಿದೆ.
2025ರಲ್ಲಿ, ಟಾಟಾ ಮೋಟಾರ್ಸ್ ಭಾರತದ ಪ್ರಮುಖ ಸರಕು ಸಾಗಣೆ ಕಾರಿಡಾರ್‌ಗಳಲ್ಲಿ ಹೈಡ್ರೋಜನ್ ಚಾಲಿತ ಟ್ರಕ್ ಪ್ರಯೋಗಗಳನ್ನು ಪ್ರಾರಂಭಿಸಿತ್ತು. ಕಂಪನಿಯು 15 ಹೈಡ್ರೋಜನ್ ಎಫ್‌ಸಿಇವಿ ಬಸ್‌ಗಳ ಟೆಂಡರ್ ಅನ್ನು ಸಹ ಗೆದ್ದುಕೊಂಡಿದ್ದು, ಅವುಗಳನ್ನು ಈಗಾಗಲೇ ಭಾರತದ ರಸ್ತೆಗಳಲ್ಲಿ ಯಶಸ್ವಿಯಾಗಿ ನಿಯೋಜಿಸಲಾಗಿದೆ ಎಂದು ಟಾಟಾ ಮೋಟಾರ್ಸ್ ಪ್ರಕಟಣೆಯಲ್ಲಿ ತಿಳಿಸಿದೆ.
ಒಪ್ಪಂದದ ಕುರಿತು ಮಾತನಾಡಿದ ಟಾಟಾ ಮೋಟಾರ್ಸ್ ಟ್ರಕ್ ವಿಭಾಗದ ಉಪಾಧ್ಯಕ್ಷ ರಾಜೇಶ್ ಕೌಲ್, "ವಿ.ಓ. ಚಿದಂಬರನಾರ್ ಬಂದರು ಪ್ರಾಧಿಕಾರದೊಂದಿಗಿನ ನಮ್ಮ ಸಹಯೋಗವು ಹೈಡ್ರೋಜನ್ ಚಾಲಿತ ಹೆವಿ ಡ್ಯೂಟಿ ಟ್ರಕ್ಕಿಂಗ್ ಅನ್ನು ಬಂದರು ಕಾರ್ಯಾಚರಣೆ ವ್ಯವಸ್ಥೆಗೆ ತರುವಲ್ಲಿ ಒಂದು ಪ್ರಮುಖ ಮೈಲಿಗಲ್ಲಾಗಿದೆ. ಕಳೆದ ಕೆಲವು ತಿಂಗಳುಗಳಿಂದ, ನಾವು ಸರಕು ನಿರ್ವಹಣೆಯಲ್ಲಿ ಹೈಡ್ರೋಜನ್ ಟ್ರಕ್‌ಗಳ ಬಳಕೆಯ ಸಾಧ್ಯತೆಗಳನ್ನು ನಿರ್ಧರಿಸಲು ಬಂದರು ಅಧಿಕಾರಿಗಳೊಂದಿಗೆ ನಿಕಟವಾಗಿ ಕೆಲಸ ಮಾಡಿದ್ದೇವೆ" ಎಂದರು.
IRSEE ಅಧ್ಯಕ್ಷ VOCPA ಸುಸಂತಾ ಕುಮಾರ್ ಪುರೋಹಿತ್ ಮಾತನಾಡಿ, "ಟಾಟಾ ಮೋಟಾರ್ಸ್ ಜೊತೆಗಿನ ನಮ್ಮ ಈ ಸಹಯೋಗವು ವಿ.ಓ.ಸಿ ಬಂದರನ್ನು ಶೂನ್ಯ ಹೊರಸೂಸುವಿಕೆ ಸಾಧಿಸುವ ಕಡೆಗೆ ಕೊಂಡೊಯ್ಯುವಲ್ಲಿ ಒಂದು ಪರಿವರ್ತಕ ಹೆಜ್ಜೆಯಾಗಿದೆ. ಗ್ರೀನ್ ಹೈಡ್ರೋಜನ್ ಚಾಲಿತ ಟ್ರಕ್ ಗಳ ನಿಯೋಜನೆಯು ನಮ್ಮ ಸರಕು ನಿರ್ವಹಣಾ ಕಾರ್ಯಾಚರಣೆಗಳಲ್ಲಿ ಇಂಗಾಲದ ಹೊರಸೂಸುವಿಕೆಯನ್ನು ಗಣನೀಯವಾಗಿ ಕಡಿಮೆ ಮಾಡುತ್ತದೆ.
ಭಾರತದ ಸುಸ್ಥಿರ ಬಂದರು ಆಧಾರಿತ ಲಾಜಿಸ್ಟಿಕ್ಸ್ ವಲಯಕ್ಕೆ ಒಂದು ಹೊಸ ಮಾದರಿಯನ್ನು ಒದಗಿಸಲಿದೆ. ಈ ಗ್ರೀನ್ ಹೈಡ್ರೋಜನ್ ಟ್ರಕ್‌ಗಳ ಬಳಕೆಗೆ ಪೂರಕವಾಗಿ, ಬಂದರಿನಲ್ಲಿ 2 ಮೆಗಾವ್ಯಾಟ್ ಸಾಮರ್ಥ್ಯದ ಎಲೆಕ್ಟ್ರೋಲೈಸರ್ ಮತ್ತು ವಿಶೇಷ ಹೈಡ್ರೋಜನ್ ಇಂಧನ ತುಂಬುವ ಕೇಂದ್ರವನ್ನು ಸ್ಥಾಪಿಸಲು ಯೋಜಿಸಲಾಗುತ್ತಿದೆ. ಸುಸ್ಥಿರ ಕಡಲ ಮೂಲಸೌಕರ್ಯದಲ್ಲಿ VOC ಬಂದರನ್ನು ನಾಯಕನನ್ನಾಗಿ ಮಾಡುವ ನಮ್ಮ ಬದ್ಧತೆಯನ್ನು ಬಲಪಡಿಸುತ್ತದೆ'' ಎಂದರು.


Click it and Unblock the Notifications








