Tata: 421 ಕಿ.ಮೀ ರೇಂಜ್! ಅತಿ ಶೀಘ್ರದಲ್ಲೇ ಹೊಸ ಟಾಟಾ ಕಾರು ಬಿಡುಗಡೆ.. ಬೆಲೆ ಎಷ್ಟು, ವಿಶೇಷತೆಗಳೇನು?
'ಟಾಟಾ ಪಂಚ್ ಇವಿ' ಜನಪ್ರಿಯ ಎಲೆಕ್ಟ್ರಿಕ್ ಎಸ್‌ಯುವಿಯಾಗಿದೆ. ಈ ಕಾರಿಗೆ ಭಾರೀ ಬೇಡಿಕೆಯಿದ್ದು, ದೇಶೀಯ ಮಾರುಕಟ್ಟೆಯಲ್ಲಿ 2024ರ ಜನವರಿ 17ರಂದು ಮೊದಲ ಬಾರಿಗೆ ಬಿಡುಗಡೆಗೊಳಿಸಲಾಗಿತ್ತು. ಗ್ರಾಹಕರು ಕೂಡ ಇಷ್ಟಪಟ್ಟು ಖರೀದಿಸುತ್ತಿದ್ದಾರೆ. ಸದ್ಯ, ಇದೇ ಎಸ್‌ಯುವಿಯನ್ನು ಹೊಸ ರೂಪದಲ್ಲಿ ಮಾರಾಟಕ್ಕೆ ತರಲು ಕಂಪನಿಯು ಸಕಲ ಸಿದ್ಧತೆಗಳನ್ನು ಮಾಡಿಕೊಳ್ಳುತ್ತಿದೆ. ಎಲ್ಲವು ಅಂದುಕೊಂಡಂತೆ ನಡೆದರೆ, ಫೆಬ್ರವರಿ 20ಕ್ಕೆ ನೂತನ 'ಪಂಚ್ ಇವಿ ಫೇಸ್‌ಲಿಫ್ಟ್'ನ್ನು ಪರಿಚಯಿಸಲಾಗುತ್ತದೆ. ಆ ಬಗ್ಗೆ ಇಲ್ಲಿದೆ ಹೆಚ್ಚಿನ ಮಾಹಿತಿ.
ಬೆಲೆ (Price):
ಹೊಚ್ಚ ಹೊಸ ಟಾಟಾ ಪಂಚ್ ಇವಿ ಫೇಸ್‌ಲಿಫ್ಟ್ (Tata Punch EV Facelift) ಕೈಗೆಟುಕುವ ಬೆಲೆಯಲ್ಲಿಯೂ ಸಿಗಬಹುದು ಎಂದು ಹೇಳಲಾಗಿದೆ. ಕನಿಷ್ಠ ರೂ.10 ಲಕ್ಷ ಹಾಗೂ ಗರಿಷ್ಠ ರೂ.14 ಲಕ್ಷ (ಎಕ್ಸ್-ಶೋರೂಂ) ದರವನ್ನು ಪಡೆದಿರುವ ನಿರೀಕ್ಷೆಯಿದ್ದು, ಎಲ್ಲ ವರ್ಗದ ಜನರು ಸುಲಭವಾಗಿ ಕೊಂಡುಕೊಳ್ಳಲು ಸಾಧ್ಯವಾಗಲಿದೆ.

ವಿನ್ಯಾಸ & ಬಣ್ಣಗಳು (Design & Colours):
ಇದು ಸ್ಟ್ಯಾಂಡರ್ಡ್ 'ಟಾಟಾ ಪಂಚ್ ಫೇಸ್‌ಲಿಫ್ಟ್'ಯಂತೆ ವಿನ್ಯಾಸವನ್ನು ಹೊಂದಿರಲಿದೆ. ತುಂಬಾ ಚೆನ್ನಾಗಿರುವ ಎಲ್ಇಡಿ ಹೆಡ್‌ಲ್ಯಾಂಪ್‌ಗಳು, ಎಲ್ಇಡಿ ಡಿಆರ್‌ಎಲ್‌ಗಳು, ಎಲ್ಇಡಿ ಫಾಗ್ ಲ್ಯಾಂಪ್‌ಗಳು, ಎಲ್ಇಡಿ ಟೈಲ್ ಲೈಟ್‌ಗಳು ಮತ್ತು 16-ಇಂಚಿನ ಅಲಾಯ್ ವೀಲ್‌ಗಳನ್ನು ಒಳಗೊಂಡಿರಲಿದೆ. ಸೆಂಟಿಫಿಕ್ ಬ್ಲ್ಯೂ, ಸಿಲ್ವರ್, ರೆಡ್, ಕ್ಯಾರಮೆಲ್, ಡೇಟೋನಾ ಗ್ರೇ ಮತ್ತು ಪ್ರಿಸ್ಟೀನ್ ವೈಟ್ ಎಂಬ ಬಣ್ಣಗಳೊಂದಿಗೂ ದೊರೆಯಬಹುದು ಎಂದು ಹೇಳಲಾಗಿದೆ.
ಸುತ್ತಳತೆ (Dimension):
ಈ ಕಾರಿನ ಗಾತ್ರದಲ್ಲೂ ಯಾವುದೇ ಬದಲಾವಣೆಗಳಿರುವುದಿಲ್ಲ. 3,857 ಮಿ.ಮೀ ಉದ್ದ, 1,742 ಮಿ.ಮೀ ಅಗಲ ಹಾಗೂ 1,633 ಮಿ.ಮೀ ಎತ್ತರವಿರಲಿದೆ. ಜೊತೆಗೆ 190 ಮಿ.ಮೀ ಗ್ರೌಂಡ್ ಕ್ಲಿಯರೆನ್ಸ್ ಮತ್ತು 2,445 ಮಿ.ಮೀ ವೀಲ್‌ಬೇಸ್‌ನ್ನು ಪಡೆದಿರಲಿದೆ.
ಆಸನ ಆಯ್ಕೆ & ಬೂಟ್ ಸ್ಪೇಸ್ (Seating Capacity & Boot Space):
ನೂತನ 'ಟಾಟಾ ಪಂಚ್ ಇವಿ ಫೇಸ್‌ಲಿಫ್ಟ್' ಸಹ 5 ಆಸನಗಳನ್ನು ಹೊಂದಿರಲಿದ್ದು, ಪ್ರಯಾಣಿಕರು ಆರಾಮದಾಯಕವಾಗಿ ಕುಳಿತುಕೊಂಡು ಸಂಚಾರ ಮಾಡಬಹುದು. ವಾರಾಂತ್ಯ ಹಾಗೂ ರಜಾ ದಿನಗಳಲ್ಲಿ ದೂರದ ಊರುಗಳಿಗೆ ಪ್ರವಾಸಕ್ಕೆ ಹೋಗುವಾಗ ಹೆಚ್ಚಿನ ಲಗೇಜ್ ಕೊಂಡೊಯ್ಯಲು ಸಾಧ್ಯವಾಗುವಂತೆ 366 ಲೀಟರ್‌ನಷ್ಟು ಒಳಗೊಂಡಿರಬಹುದು ಎನ್ನಲಾಗಿದೆ.
ಕಾರ್ಯಕ್ಷಮತೆ (Performance):
ಹೊಸ 'ಪಂಚ್ ಇವಿ ಫೇಸ್‌ಲಿಫ್ಟ್' ಪವರ್‌ಟ್ರೇನ್‌ನಲ್ಲೂ ಮಾರ್ಪಾಡುಗಳಿರುವುದಿಲ್ಲ. ಇದರ 25 ಕಿಲೋವ್ಯಾಟ್ (ಕೆಡಬ್ಲ್ಯೂಹೆಚ್) ಬ್ಯಾಟರಿ ಪ್ಯಾಕ್‌ನ ಮಾಡೆಲ್, ಸಂಪೂರ್ಣ ಚಾರ್ಜ್‌ನಲ್ಲಿ 315 ಕಿಲೋಮೀಟರ್‌ವರೆಗೂ ರೇಂಜ್ (ಮೈಲೇಜ್) ನೀಡಲಿದೆ. ಈ ಕಾರಿನಲ್ಲಿರುವ ಎಲೆಕ್ಟ್ರಿಕ್ ಮೋಟಾರ್, 82 ಬಿಹೆಚ್‌ಪಿ ಅಶ್ವ ಶಕ್ತಿ (ಹಾರ್ಸ್ ಪವರ್) ಹಾಗೂ 114 ಎನ್ಎಂ (ನ್ಯೂಟನ್ ಮೀಟರ್) ಪೀಕ್ ಟಾರ್ಕ್‌ನ್ನು ಹೊರಹಾಕಬಹುದು.
ಮತ್ತೊಂದು 35 ಕಿಲೋವ್ಯಾಟ್ (ಕೆಡಬ್ಲ್ಯೂಹೆಚ್) ಬ್ಯಾಟರಿ ಪ್ಯಾಕ್‌ನ ಮಾಡೆಲ್, ಪೂರ್ತಿ ಚಾರ್ಜ್‌ನಲ್ಲಿ 421 ಕಿಲೋಮೀಟರ್‌ವರೆಗೂ ರೇಂಜ್ (ಮೈಲೇಜ್) ಕೊಡಬಹುದು. ಇದರೊಳಗಿರುವ ಎಲೆಕ್ಟ್ರಿಕ್ ಮೋಟಾರ್, 122 ಬಿಹೆಚ್‌ಪಿ ಅಶ್ವ ಶಕ್ತಿ (ಹಾರ್ಸ್ ಪವರ್) ಮತ್ತು 114 ಎನ್ಎಂ (ನ್ಯೂಟನ್ ಮೀಟರ್) ಪೀಕ್ ಟಾರ್ಕ್‌ನ್ನು ಉತ್ಪಾದಿಸಬಹುದು.
ವೈಶಿಷ್ಟ್ಯಗಳು (Features):
ಇದರ ಕ್ಯಾಬಿನ್ ವಿನ್ಯಾಸವು ಚೆನ್ನಾಗಿರಲಿದೆ. 10.2-ಇಂಚಿನ ಟಚ್‌ಸ್ಕ್ರೀನ್ ಇನ್ಫೋಟೈನ್‌ಮೆಂಟ್ ಸಿಸ್ಟಮ್, ಆಂಡ್ರಾಯ್ಡ್ ಆಟೋ, ಆಪಲ್ ಕಾರ್‌ಪ್ಲೇ, ಡಿಜಿಟಲ್ ಇನ್ಸ್ಟ್ರುಮೆಂಟ್ ಕ್ಲಸ್ಟರ್, ಪುಶ್-ಬಟನ್ ಸ್ಟಾರ್ಟ್, ಟೈಪ್-ಸಿ ಫಾಸ್ಟ್ ಚಾರ್ಜರ್, ಆಟೋಮೆಟಿಕ್ ಕ್ಲೇಮೇಟ್ ಕಂಟ್ರೋಲ್, ಸ್ಟೀರಿಂಗ್-ಮೌಂಟೆಡ್ ಆಡಿಯೋ ಕಂಟ್ರೋಲ್ ಮತ್ತು ಸನ್‌ರೂಫ್‌ನ್ನು ಒಳಗೊಂಡಿರುವ ಸಾಧ್ಯತೆಯಿದೆ.
ಸುರಕ್ಷತಾ ವೈಶಿಷ್ಟ್ಯಗಳು (Safety Features):
ಈ ಕಾರು ಪ್ರಯಾಣಿಕರಿಗೆ ಗರಿಷ್ಠ ಮಟ್ಟದಲ್ಲಿ ರಕ್ಷಣೆಯನ್ನು ಒದಗಿಸಬಲ್ಲದು. ಸುರಕ್ಷತೆಗಾಗಿ 6-ಏರ್‌ಬ್ಯಾಗ್‌ಗಳು, ಇಎಸ್‌ಪಿ (ಎಲೆಕ್ಟ್ರಾನಿಕ್ ಸ್ಟೆಬಿಲಿಟಿ ಪ್ರೋಗ್ರಾಂ), ಟಿಪಿಎಂಎಸ್ (ಟೈರ್ ಪ್ರೆಶರ್ ಮಾನಿಟರಿಂಗ್ ಸಿಸ್ಟಮ್), ರಿವರ್ಸ್ ಕ್ಯಾಮೆರಾ, ಕ್ರೂಸ್ ಕಂಟ್ರೋಲ್ ಹಾಗೂ 360-ಡಿಗ್ರಿ ಕ್ಯಾಮೆರಾವನ್ನು ಪಡೆದಿರುವ ನಿರೀಕ್ಷೆಯಿದೆ.


Click it and Unblock the Notifications








