ಹೊಸ ಟಾಟಾ ಪಂಚ್ vs ಹ್ಯುಂಡೈ ಎಕ್ಸ್‌ಟರ್: ಎರಡು ಅಗ್ಗದ ಕಾರುಗಳು.. ಯಾವುದು ಬೆಸ್ಟ್, ನೀವೇ ಹೇಳಿ?
ನಿನ್ನೆಯಷ್ಟೇ ಹೊಚ್ಚ ಹೊಸ ಟಾಟಾ ಪಂಚ್ ಫೇಸ್‌ಲಿಫ್ಟ್ (Tata Punch Facelift) ಎಸ್‌ಯುವಿಯನ್ನು ಬಿಡುಗಡೆ ಮಾಡಲಾಗಿದೆ. ಇದಕ್ಕೆ ಹ್ಯುಂಡೈ ಎಕ್ಸ್‌ಟರ್ (Hyundai Exter) ಪ್ರಬಲವಾದ ಪ್ರತಿಸ್ಪರ್ಧಿಯಾಗಿದೆ. ಈ ಕಾರುಗಳು ಹೆಚ್ಚು ಆಕರ್ಷಕವಾಗಿದ್ದು, ಕೈಗೆಟುಕುವ ಬೆಲೆಯಲ್ಲಿಯೂ ಸಿಗುತ್ತವೆ. ಮಧ್ಯಮ ವರ್ಗದ ಗ್ರಾಹಕರು ಕೂಡ ಸುಲಭವಾಗಿ ಕೊಂಡುಕೊಳ್ಳಲು ಸಾಧ್ಯವಾಗಲಿದೆ. ನಾವಿಲ್ಲಿ ಈ ಕಾರುಗಳ ಬೆಲೆ, ಕಾರ್ಯಕ್ಷಮತೆ ಹಾಗೂ ವೈಶಿಷ್ಟ್ಯಗಳ ಕುರಿತು ಹೋಲಿಕೆ ಮಾಡಿದ್ದೇವೆ.
ಬೆಲೆ (Price):
ನೂತನ 'ಟಾಟಾ ಪಂಚ್ ಫೇಸ್‌ಲಿಫ್ಟ್' ರೂ.5.59 ಲಕ್ಷದಿಂದ ರೂ.9.29 ಲಕ್ಷ ದರವನ್ನು ಪಡೆದಿದೆ. 'ಹ್ಯುಂಡೈ ಎಕ್ಸ್‌ಟರ್' ರೂ.5.74 ಲಕ್ಷದಿಂದ ರೂ.9.61 ಲಕ್ಷ (ಎಕ್ಸ್-ಶೋರೂಂ) ಬೆಲೆಯನ್ನು ಹೊಂದಿದೆ. ದರದ ವಿಚಾರದಲ್ಲಿ ಎಕ್ಸ್‌ಟರ್‌ಗೆ ಹೋಲಿಕೆ ಮಾಡಿದರೆ, ಪಂಚ್ ಸ್ವಲ್ಪ ಮಟ್ಟಿಗೆ ಅಗ್ಗವಾಗಿದೆ.

ವಿನ್ಯಾಸ (Design):
ಇವೆರೆಡು ಕಾರುಗಳು ಒಂದಕ್ಕಿಂತ ಒಂದು ಮೀರಿಸುವಂತೆ ಅದ್ಬುತವಾದ ವಿನ್ಯಾಸವನ್ನು ಒಳಗೊಂಡಿವೆ. 'ಟಾಟಾ ಪಂಚ್ ಫೇಸ್‌ಲಿಫ್ಟ್' ಉತ್ತಮವಾದ ಎಲ್ಇಡಿ ಹೆಡ್‌ಲ್ಯಾಂಪ್‌ಗಳು, ಎಲ್ಇಡಿ ಡಿಆರ್‌ಎಲ್‌ಗಳು, ಎಲ್ಇಡಿ ಟೈಲ್ ಲೈಟ್‌ಗಳು ಮತ್ತು 16-ಇಂಚಿನ ಅಲಾಯ್ ವೀಲ್‌ಗಳನ್ನು ಒಳಗೊಂಡಿದೆ. ಪ್ರಿಸ್ಟೈನ್ ವೈಟ್, ಡೇಟೋನ್ ಗ್ರೇ, ಸೈಂಟಿಫಿಕ್ ಬ್ಲೂ ಮತ್ತು ಕ್ಯಾರಮೆಲ್ ಸೇರಿದಂತೆ ವಿವಿಧ ಬಣ್ಣಗಳೊಂದಿಗೂ ದೊರೆಯುತ್ತದೆ. 193 ಎಂಎಂ ಗ್ರೌಂಡ್ ಕ್ಲಿಯರೆನ್ಸ್ & 2,445 ಎಂಎಂ ವೀಲ್‌ಬೇಸ್‌ನ್ನು ಪಡೆದಿದೆ.
'ಹ್ಯುಂಡೈ ಎಕ್ಸ್‌ಟರ್' ಎಲ್ಇಡಿ ಹೆಡ್‌ಲ್ಯಾಂಪ್‌ಗಳು, ಎಲ್ಇಡಿ ಡಿಆರ್‌ಎಲ್‌ಗಳು, ಎಲ್ಇಡಿ ಟೈಲ್‌ಲೈಟ್‌ಗಳು ಮತ್ತು 15-ಇಂಚಿನ ಅಲಾಯ್ ವೀಲ್‌ಗಳನ್ನು ಪಡೆದಿದೆ. ಅಟ್ಲಾಸ್ ವೈಟ್, ಫೈರಿ ರೆಡ್, ಸ್ಟಾರಿ ನೈಟ್ ಹಾಗೂ ಟೈಟಾನ್ ಗ್ರೇ ಎಂಬ ಬಣ್ಣಗಳೊಂದಿಗೂ ಲಭ್ಯವಿದೆ. 185 ಎಂಎಂ ಗ್ರೌಂಡ್ ಕ್ಲಿಯರೆನ್ಸ್ ಮತ್ತು 2,450 ಎಂಎಂ ವೀಲ್‌ಬೇಸ್‌ನ್ನು ಒಳಗೊಂಡಿದೆ.

ಆಸನ ಆಯ್ಕೆ & ಬೂಟ್ ಸ್ಪೇಸ್ (Seating Capacity & Boot Space):
ನೂತನ 'ಟಾಟಾ ಪಂಚ್ ಫೇಸ್‌ಲಿಫ್ಟ್' ಹಾಗೂ 'ಹ್ಯುಂಡೈ ಎಕ್ಸ್‌ಟರ್' ಕಾರುಗಳೆರೆಡು 5 ಆಸನ ಆಯ್ಕೆ ವ್ಯವಸ್ಥೆಯನ್ನು ಪಡೆದಿವೆ. ಪ್ರಯಾಣಿಕರು ಆರಾಮದಾಯಕವಾಗಿ ಕುಳಿತುಕೊಂಡು ಓಡಾಟ ನಡೆಸಬಹುದು. 'ಪಂಚ್' 366 ಲೀಟರ್ ಮತ್ತು 'ಎಕ್ಸ್‌ಟರ್' 391 ಲೀಟರ್‌ನಷ್ಟು ಬೂಟ್ ಸ್ಪೇಸ್‌ನ್ನು ಹೊಂದಿದೆ.
ಕಾರ್ಯಕ್ಷಮತೆ (Permanence):
ಈ ಎಸ್‌ಯುವಿಗಳು ಶಕ್ತಿಯುತವಾದ 3 ಪವರ್‌ಟ್ರೇನ್‌ನ್ನು ಒಳಗೊಂಡಿವೆ. 'ಟಾಟಾ ಪಂಚ್ ಫೇಸ್‌ಲಿಫ್ಟ್' 1.2-ಲೀ. ನ್ಯಾಚುರಲಿ ಆಸ್ಪಿರೇಟೆಡ್ ಪೆಟ್ರೋಲ್, 1.2-ಲೀ. ಟರ್ಬೋಚಾರ್ಜ್ಡ್ ಪೆಟ್ರೋಲ್ ಮತ್ತು 1.2-ಲೀ. ಸಿಎನ್‌ಜಿ ಎಂಜಿನ್‌ನ್ನು ಪಡೆದಿದೆ. 5-ಸ್ಪೀಡ್ ಮ್ಯಾನುವಲ್, 5-ಸ್ಪೀಡ್ ಆಟೋಮೆಟಿಕ್ ಮತ್ತು 6-ಸ್ಪೀಡ್ ಮ್ಯಾನುವಲ್ ಗೇರ್‌ಬಾಕ್ಸ್‌ನ್ನು ಒಳಗೊಂಡಿದೆ. 19 ರಿಂದ 27 ಕಿಲೋಮೀಟರ್‌ವರೆಗೆ ಮೈಲೇಜ್‌ನ್ನು ಕೊಡಬಲ್ಲದು.
ಅದೇ ರೀತಿಯಲ್ಲಿ 'ಹ್ಯುಂಡೈ ಎಕ್ಸ್‌ಟರ್' ಸಹ 1.2-ಲೀ. ಪೆಟ್ರೋಲ್ ಮತ್ತು 1.2-ಲೀ. ಸಿಎನ್‌ಜಿ ಎಂಜಿನ್‌ನ್ನು ಒಳಗೊಂಡಿದೆ. 5-ಸ್ಪೀಡ್ ಮ್ಯಾನುವಲ್ ಹಾಗೂ 5-ಸ್ಪೀಡ್ ಆಟೋಮೆಟಿಕ್ ಗೇರ್‌ಬಾಕ್ಸ್‌ನ್ನು ಹೊಂದಿದೆ. 19 ರಿಂದ 27 ಕಿಲೋಮೀಟರ್‌ವರೆಗೆ ಮೈಲೇಜ್‌ನ್ನು ನೀಡುತ್ತದೆ.
ವೈಶಿಷ್ಟ್ಯಗಳು (Features):
ಇವೆರೆಡು ಕಾರುಗಳು ನಾನಾ ಬಗೆಯ ಅತ್ಯಾಧುನಿಕ ವೈಶಿಷ್ಟ್ಯಗಳನ್ನು ಒಳಗೊಂಡಿವೆ. 'ಟಾಟಾ ಪಂಚ್ ಫೇಸ್‌ಲಿಫ್ಟ್' 8 ಅಥವಾ 10.2-ಇಂಚಿನ ಟಚ್‌ಸ್ಕ್ರೀನ್ ಇನ್ಫೋಟೈನ್‌ಮೆಂಟ್ ಸಿಸ್ಟಮ್, 7-ಇಂಚಿನ ಇನ್ಸ್ಟ್ರುಮೆಂಟ್ ಕ್ಲಸ್ಟರ್, ಪುಶ್ ಬಟನ್ ಸ್ಟಾರ್ಟ್, ಟೈಪ್-ಸಿ ಫಾಸ್ಟ್ ಚಾರ್ಜರ್ ಹಾಗೂ ಆಟೋಮೆಟಿಕ್ ಕ್ಲೇಮೇಟ್ ಕಂಟ್ರೋಲ್ ಸೇರಿದಂತೆ ವಿವಿಧ ವೈಶಿಷ್ಟ್ಯಗಳನ್ನು ಹೊಂದಿದೆ. ಸುರಕ್ಷತೆಗಾಗಿ 6-ಏರ್‌ಬ್ಯಾಗ್‌ಗಳು, ಇಎಸ್‌ಪಿ (ಎಲೆಕ್ಟ್ರಾನಿಕ್ ಸ್ಟೆಬಿಲಿಟಿ ಪ್ರೋಗ್ರಾಂ) ಮತ್ತು ರೇರ್ ಪಾರ್ಕಿಂಗ್ ಸೆನ್ಸರ್‌ಗಳನ್ನು ಪಡೆದಿದೆ.
'ಹ್ಯುಂಡೈ ಎಕ್ಸ್‌ಟರ್' 8-ಇಂಚಿನ ಟಚ್‌ಸ್ಕ್ರೀನ್ ಇನ್ಫೋಟೈನ್‌ಮೆಂಟ್ ಸಿಸ್ಟಮ್, ಡಿಜಿಟಲ್ ಡ್ರೈವರ್ ಡಿಸ್‌ಪ್ಲೇ, ವೈರ್‌ಲೆಸ್ ಫೋನ್ ಚಾರ್ಜಿಂಗ್, ಸನ್‌ರೂಫ್, ಪುಶ್ ಬಟನ್ ಸ್ಟಾರ್ಟ್/ಸ್ಟಾಪ್, ಮಲ್ಟಿ ಫಂಕ್ಷನ್ ಸ್ಟೀರಿಂಗ್ ವೀಲ್ ಮತ್ತು ರೇರ್ ಎಸಿ ವೆಂಟ್‌ನಂತಹ ಹತ್ತಾರು ವೈಶಿಷ್ಟ್ಯಗಳನ್ನು ಒಳಗೊಂಡಿದೆ. ಪ್ರಯಾಣಿಕರ ರಕ್ಷಣೆಗಾಗಿ 6-ಏರ್‌ಬ್ಯಾಗ್‌ಗಳು, ಇಎಸ್‌ಸಿ (ಎಲೆಕ್ಟ್ರಾನಿಕ್ ಸ್ಟೆಬಿಲಿಟಿ ಕಂಟ್ರೋಲ್), ಟಿಪಿಎಂಎಸ್ (ಟೈರ್ ಪ್ರೆಶರ್ ಮಾನಿಟರಿಂಗ್ ಸಿಸ್ಟಮ್) ಹಾಗೂ ಹಿಲ್-ಅಸಿಸ್ಟ್ ಕಂಟ್ರೋಲ್‌ನ್ನು ಒಳಗೊಂಡಿದೆ.


Click it and Unblock the Notifications








