Toyota: ಪ್ರತಿದಿನ 310 ಕಾರುಗಳು ಸೇಲ್ಸ್, ಈ ಜನಪ್ರಿಯ ಟೊಯೊಟಾ MPVಗೆ ಮನಸೋತ ಜನ.. 8-ಸೀಟರ್, 23 Km ಮೈಲೇಜ್!
ಟೊಯೊಟಾ ಇನ್ನೋವಾ ಹೈಕ್ರಾಸ್ (Toyota Innova Hycross) ಪ್ರಖ್ಯಾತ ಎಂಪಿವಿಯಾಗಿದೆ. ಈ ಕಾರಿಗೆ ದಿನದಿಂದ ದಿನಕ್ಕೆ ಬೇಡಿಕೆಯೂ ಹೆಚ್ಚಾಗುತ್ತಿದೆ. ಗ್ರಾಹಕರು ಸಹ ನಾ ಮುಂದು - ತಾ ಮುಂದು ಎಂಬಂತೆ ಇಷ್ಟಪಟ್ಟು ಕೊಂಡುಕೊಳ್ಳುತ್ತಿದ್ದಾರೆ. ಕಳೆದ ತಿಂಗಳು (ಫೆಬ್ರವರಿ - 2026) ಭಾರೀ ಸಂಖ್ಯೆಯಲ್ಲಿಯೇ ಮಾರಾಟಗೊಂಡಿದೆ. ಸರಿ ಸುಮಾರು 8,703 ಯುನಿಟ್‌ಗಳನ್ನು ಖರೀದಿದಾರರಿಗೆ ವಿತರಿಸಲಾಗಿದೆ. ಅಂದರೆ ಪ್ರತಿದಿನ 310 ಕಾರುಗಳನ್ನು ಮಾರಲಾಗಿದೆ. 2025ರ ಇದೇ ಅವಧಿಯಲ್ಲಿ 8,449 ಯುನಿಟ್‌ಗಳನ್ನು ಮಾರಾಟ ಮಾಡಲಾಗಿತ್ತು. ಈ ಅಂಕಿ-ಅಂಶವನ್ನು ಲೆಕ್ಕ ಹಾಕಿದಾಗ ಮಾರಾಟ ಪ್ರಮಾಣವು ವರ್ಷದಿಂದ ವರ್ಷಕ್ಕೆ ಶೇಕಡ 3% ಬೆಳವಣಿಗೆಯಾಗಿದೆ.
'ಟೊಯೊಟಾ ಇನ್ನೋವಾ ಹೈಕ್ರಾಸ್' ವಿಶೇಷತೆಗಳೇನು:
ಇದು ಸ್ವಲ್ಪ ಮಟ್ಟಿಗೆ ದುಬಾರಿ ಬೆಲೆಯನ್ನು ಹೊಂದಿದೆ. ರೂ.18.48 ಲಕ್ಷದಿಂದ ರೂ.31.30 ಲಕ್ಷ (ಎಕ್ಸ್-ಶೋರೂಂ) ದರವನ್ನು ಪಡೆದಿದೆ. ಮೇಲ್ಮಧ್ಯಮ ಹಾಗೂ ಶ್ರೀಮಂತ ವರ್ಗದ ಜನರು ಸುಲಭವಾಗಿ ಕೊಂಡುಕೊಳ್ಳಬಹುದು. ಜಿ, ಜಿಎಕ್ಸ್, ವಿಎಕ್ಸ್, ಝಡ್ಎಕ್ಸ್ (ಒ) ಮತ್ತು ವಿಎಕ್ಸ್ (ಒ) ಎಂಬ ರೂಪಾಂತರಗಳೊಂದಿಗೂ ದೊರೆಯುತ್ತದೆ.

ಈ ಕಾರು ಅತ್ಯಾಕರ್ಷಕವಾದ ವಿನ್ಯಾಸವನ್ನು ಒಳಗೊಂಡಿದೆ. ತುಂಬಾ ಚೆನ್ನಾಗಿರುವ ಎಲ್ಇಡಿ ಹೆಡ್‌ಲ್ಯಾಂಪ್‌ಗಳು, ಎಲ್ಇಡಿ ಡಿಆರ್‌ಎಲ್‌ಗಳು ಮತ್ತು ಎಲ್ಇಡಿ ಟೈಲ್ ಲ್ಯಾಂಪ್‌ಗಳನ್ನು ಪಡೆದಿದೆ. ರಸ್ತೆಯ ಮೇಲೆ ಬಿಗಿಯಾದ ಹಿಡಿತ ಸಾಧಿಸಲು ನೆರವಾಗುವಂತೆ 18-ಇಂಚಿನ ಡುಯಲ್ ಟೋನ್ ಅಲಾಯ್ ವೀಲ್‌ಗಳನ್ನು ಹೊಂದಿದ್ದು, 225/50 ಆರ್1 ಅಳತೆಯ ಟೈರ್‌ಗಳನ್ನು ಹೊಂದಿದೆ.
ನೂತನ 'ಇನ್ನೋವಾ ಹೈಕ್ರಾಸ್' ಹೆಚ್ಚು ವಿಶಾಲವಾಗಿದೆ. 4,755 ಎಂಎಂ ಉದ್ದ, 1845 ಎಂಎಂ ಅಗಲ ಮತ್ತು 1795 ಎಂಎಂ ಎತ್ತರವಿದೆ. 185 ಎಂಎಂ ಗ್ರೌಂಡ್ ಕ್ಲಿಯರೆನ್ಸ್ ಹಾಗೂ 2850 ಎಂಎಂ ವೀಲ್‌ಬೇಸ್‌ನ್ನು ಒಳಗೊಂಡಿದೆ. ಸರಿ ಸುಮಾರು 1,730 ಕೆಜಿ ತೂಗುತ್ತದೆ. ಪ್ಲಾಟಿನಂ ವೈಟ್ ಪರ್ಲ್, ಆಟಿಟ್ಯೂಡ್ ಬ್ಲ್ಯಾಕ್ ಮೈಕಾ, ಸಿಲ್ವರ್ ಮೆಟಾಲಿಕ್ ಹಾಗೂ ಸೂಪರ್ ವೈಟ್ ಎಂಬ ಬಣ್ಣಗಳೊಂದಿಗೂ ಲಭ್ಯವಿದೆ.

ಇದು ಶಕ್ತಿಶಾಲಿಯಾದ ಎರಡು ಪವರ್‌ಟ್ರೇನ್‌ನ್ನು ಪಡೆದಿದೆ. ಇದರ 2-ಲೀಟರ್ ಪೆಟ್ರೋಲ್ ಎಂಜಿನ್, 173 ಬಿಹೆಚ್‍ಪಿ ಅಶ್ವ ಶಕ್ತಿ (ಹಾರ್ಸ್ ಪವರ್) ಮತ್ತು 204 ಎನ್ಎಂ (ನ್ಯೂಟನ್ ಮೀಟರ್) ಪೀಕ್ ಟಾರ್ಕ್ ಉತ್ಪಾದಿಸುತ್ತದೆ. ಮತ್ತೊಂದು 2-ಲೀಟರ್ ಸ್ಟ್ರಾಂಗ್ ಹೈಬ್ರಿಡ್ (ಪೆಟ್ರೋಲ್+ಎಲೆಕ್ಟ್ರಿಕ್) ಎಂಜಿನ್, 188.9 ಬಿಹೆಚ್‍ಪಿ ಅಶ್ವ ಶಕ್ತಿ (ಹಾರ್ಸ್ ಪವರ್) ಹಾಗೂ 206 ಎನ್ಎಂ (ನ್ಯೂಟನ್ ಮೀಟರ್) ಪೀಕ್ ಟಾರ್ಕ್ ಹೊರಹಾಕುತ್ತದೆ.
ಈ ಕಾರು ರೂಪಾಂತರಗಳಿಗೆ ತಕ್ಕಂತೆ ಸಿವಿಟಿ ಮತ್ತು ಇ-ಸಿವಿಟಿ ಗೇರ್‌ಬಾಕ್ಸ್‌ನ್ನು ಹೊಂದಿದೆ. 16.13 ರಿಂದ 23.24 ಕಿ.ಮೀ ವರೆಗೆ ಮೈಲೇಜ್ ನೀಡುತ್ತದೆ. 170 ಕೆಎಂಪಿಹೆಚ್ ಟಾಪ್ ಸ್ಪೀಡ್‌ನ್ನು ಒಳಗೊಂಡಿದೆ. ಕೇವಲ 10.69 ಸೆಕೆಂಡುಗಳಲ್ಲಿ 0 ರಿಂದ 100 ಕೆಎಂಪಿಹೆಚ್ ವೇಗವನ್ನು ಪಡೆಯಲಿದೆ.

ಹೊಸ 'ಇನ್ನೋವಾ ಹೈಕ್ರಾಸ್' ಎಂಪಿವಿಯು 7/ 8 ಆಸನ ಆಯ್ಕೆ ವ್ಯವಸ್ಥೆಯನ್ನು ಹೊಂದಿದೆ. ಪ್ರಯಾಣಿಕರು ಆರಾಮದಾಯಕವಾಗಿ ಕುಳಿತುಕೊಂಡು ಸಂಚಾರ ಮಾಡಬಹುದು. ದೂರದ ಊರುಗಳಿಗೆ ಪ್ರವಾಸಕ್ಕೆ ತೆರಳುವಾಗ ಹೆಚ್ಚಿನ ಲಗೇಜ್ ಕೊಂಡೊಯ್ಯಲು ಸಾಧ್ಯವಾಗುವಂತೆ 300 ಲೀಟರ್‌ನಷ್ಟು ಬೂಟ್ ಸ್ಪೇಸ್‌ನ್ನು ಪಡೆದಿದೆ. 10.1-ಇಂಚಿನ ಟಚ್‌ಸ್ಕ್ರೀನ್ ಇನ್ಫೋಟೈನ್‌ಮೆಂಟ್ ಸಿಸ್ಟಮ್, ಡಿಜಿಟಲ್ ಡ್ರೈವರ್ ಡಿಸ್‌ಪ್ಲೇ, 4-ಪವರ್ ವಿಂಡೋಗಳು, 4-ಸ್ಪೀಕರ್ ಮ್ಯೂಸಿಕ್ ಸಿಸ್ಟಮ್, ಸನ್‌ರೂಫ್, ವೆಂಟಿಲೇಟೆಡ್ ಫ್ರಂಟ್ ಸೀಟ್‌ಗಳು, ರೇರ್ ಎಸಿ ವೆಂಟ್‌ಗಳು ಹಾಗೂ ಆಟೋ ಎಸಿಯಂತಹ ವೈಶಿಷ್ಟ್ಯಗಳನ್ನು ಒಳಗೊಂಡಿದೆ.
ಇದು ಸುರಕ್ಷತೆಯಿಂದಲೂ ಮನೆ ಮಾತಾಗಿದೆ. ಪ್ರಯಾಣಿಕರ ರಕ್ಷಣೆಯ ಸಲುವಾಗಿ 6-ಏರ್‌ಬ್ಯಾಗ್‌ಗಳು, ಎಬಿಎಸ್ (ಆಂಟಿಲಾಕ್ ಬ್ರೇಕಿಂಗ್ ಸಿಸ್ಟಮ್), ಇಬಿಡಿ (ಎಲೆಕ್ಟ್ರಾನಿಕ್ ಬ್ರೇಕ್‌ಫೋರ್ಸ್ ಡಿಸ್ಟ್ರಿಬ್ಯೂಷನ್) ಇಎಸ್‌ಸಿ (ಎಲೆಕ್ಟ್ರಾನಿಕ್ ಸ್ಟೆಬಿಲಿಟಿ ಕಂಟ್ರೋಲ್), ಎಡಿಎಎಸ್ (ಅಡ್ವಾನ್ಸ್ಡ್ ಡ್ರೈವರ್ ಅಸಿಸ್ಟೆನ್ಸ್ ಸಿಸ್ಟಮ್ಸ್), ಟಿಪಿಎಂಎಸ್ (ಟೈರ್ ಪ್ರೆಶರ್ ಮಾನಿಟರಿಂಗ್ ಸಿಸ್ಟಮ್), ಹಿಲ್ ಸ್ಟಾರ್ಟ್ ಅಸಿಸ್ಟ್ ಮತ್ತು 360-ಡಿಗ್ರಿ ಕ್ಯಾಮೆರಾವನ್ನು ಹೊಂದಿದೆ.


Click it and Unblock the Notifications








