Toyota: ಈ ಟೊಯೊಟಾ ಎಂಪಿವಿಗೆ ಫುಲ್ ಡಿಮ್ಯಾಂಡ್.. ಮುಗಿಬಿದ್ದ ಜನ.. 10 ಲಕ್ಷ ರೂಪಾಯಿ.. 7-ಸೀಟರ್!
ಟೊಯೊಟಾ ರೂಮಿಯನ್ (Toyota Rumion) ಪ್ರಖ್ಯಾತ ಎಂಪಿವಿಯಾಗಿ ಹೊರಹೊಮ್ಮಿದೆ. ಈ ಕಾರಿಗೆ ದಿನದಿಂದ ದಿನಕ್ಕೆ ಬೇಡಿಕೆಯೂ ಹೆಚ್ಚಾಗುತ್ತಿದೆ. ಗ್ರಾಹಕರು ಕೂಡ ನಾ ಮುಂದು ತಾ ಮುಂದು ಎಂಬಂತೆ ಕೊಂಡುಕೊಳ್ಳುತ್ತಿದ್ದಾರೆ. ಕಳೆದು ತಿಂಗಳು (ಜನವರಿ - 2026) ಭಾರೀ ಸಂಖ್ಯೆಯಲ್ಲಿಯೇ ಮಾರಾಟಗೊಂಡಿದೆ. ಒಟ್ಟು 2,829 ಯುನಿಟ್‌ಗಳನ್ನು ಖರೀದಿದಾರರಿಗೆ ವಿತರಿಸಲಾಗಿದೆ. 2025ರ ಇದೇ ಅವಧಿಯಲ್ಲಿ 1,944 ಯುನಿಟ್‌ಗಳನ್ನು ಮಾರಲಾಗಿತ್ತು. ಈ ಅಂಕಿ - ಅಂಶವನ್ನು ಲೆಕ್ಕ ಹಾಕಿದಾಗ ಮಾರಾಟ ಪ್ರಮಾಣವು ವರ್ಷದಿಂದ ವರ್ಷಕ್ಕೆ ಶೇಕಡ 46% ಬೆಳವಣಿಗೆಯಾಗಿದೆ.
'ಟೊಯೊಟಾ ರೂಮಿಯನ್' ವಿಶೇಷತೆಗಳೇನು:
ಇದು ಸ್ಪರ್ಧಾತ್ಮಕ ಬೆಲೆಯಲ್ಲಿಯೂ ದೊರೆಯುತ್ತದೆ. ಕನಿಷ್ಠ ರೂ.10.51 ಲಕ್ಷ ಮತ್ತು ಗರಿಷ್ಠ ರೂ.13.86 ಲಕ್ಷ (ಎಕ್ಸ್-ಶೋರೂಂ) ದರವನ್ನು ಪಡೆದಿದೆ. ಎಲ್ಲ ವರ್ಗದವರು ಸುಲಭವಾಗಿ ಕೊಂಡುಕೊಳ್ಳಬಹುದು. ಎಸ್, ಜಿ ಮತ್ತು ವಿ ಎಂಬ ರೂಪಾಂತರಗಳ (ವೇರಿಯೆಂಟ್) ಆಯ್ಕೆಯಲ್ಲಿಯೂ ಲಭ್ಯವಿದೆ.

ಈ ಕಾರು ಹೆಚ್ಚು ಅತ್ಯಾಕರ್ಷಕವಾದ ವಿನ್ಯಾಸವನ್ನು ಹೊಂದಿದೆ. 'ಮಾರುತಿ ಎರ್ಟಿಗಾ'ದ ರೀ-ಬ್ಯಾಡ್ಜ್ ಮಾಡೆಲ್ ಸಹ ಆಗಿದೆ. ಪ್ರೊಜೆಕ್ಟರ್ ಹೆಡ್‌ಲೈಟ್‌ಗಳು, ಎಲ್ಇಡಿ ಟೈಲ್ ಲ್ಯಾಂಪ್‌ಗಳು ಮತ್ತು 15-ಇಂಚಿನ ಅಲಾಯ್ ವೀಲ್‌ಗಳನ್ನು ಒಳಗೊಂಡಿದೆ. ಎಂಟೈಸಿಂಗ್ ಸಿಲ್ವರ್, ಐಕಾನಿಕ್ ಗ್ರೇ, ರಸ್ಟಿಕ್ ಬ್ರೌನ್, ಸ್ಪಂಕಿ ಬ್ಲೂ ಮತ್ತು ಕೆಫೆ ವೈಟ್ ಎಂಬ ಬಣ್ಣಗಳೊಂದಿಗೂ ಸಿಗುತ್ತದೆ.
ಹೊಸ 'ರೂಮಿಯನ್' ಸಾಕಷ್ಟು ವಿಶಾಲವಾಗಿದೆ. 4,420 ಎಂಎಂ ಉದ್ದ, 1,735 ಎಂಎಂ ಅಗಲ ಮತ್ತು 1,690 ಎಂಎಂ ಎತ್ತರವಿದೆ. ಜೊತೆಗೆ 209 ಎಂಎಂ ಗ್ರೌಂಡ್ ಕ್ಲಿಯರೆನ್ಸ್ ಹಾಗೂ 2,740 ಎಂಎಂ ವೀಲ್‌ಬೇಸ್‌ನ್ನು ಪಡೆದಿದೆ. ಬರೋಬ್ಬರಿ 1,185 ಕೆಜಿ ತೂಕವಿದೆ.

ಇದು ಬೆಲೆಗೆ ತಕ್ಕಂತೆ ಶಕ್ತಿಶಾಲಿಯಾದ ಎರಡು ಪವರ್‌ಟ್ರೇನ್‌ನ್ನು ಒಳಗೊಂಡಿದೆ. ಇದರ 1.5-ಲೀ. ಪೆಟ್ರೋಲ್ ಎಂಜಿನ್, 102 ಪಿಎಸ್ ಅಶ್ವ ಶಕ್ತಿ (ಹಾರ್ಸ್ ಪವರ್) ಹಾಗೂ 137 ಎನ್ಎಂ (ನ್ಯೂಟನ್ ಮೀಟರ್) ಪೀಕ್ ಟಾರ್ಕ್ ಉತ್ಪಾದಿಸುತ್ತದೆ. ಮತ್ತೊಂದು 1.5-ಲೀ. ಸಿಎನ್‌ಜಿ ಎಂಜಿನ್, 86 ಪಿಎಸ್ ಅಶ್ವ ಶಕ್ತಿ (ಹಾರ್ಸ್ ಪವರ್) ಮತ್ತು 121.5 ಎನ್ಎಂ (ನ್ಯೂಟನ್ ಮೀಟರ್) ಪೀಕ್ ಟಾರ್ಕ್ ಹೊರಹಾಕುತ್ತದೆ.
ಈ ಕಾರು ರೂಪಾಂತರಗಳಿಗೆ ಅನುಗುಣವಾಗಿ 5-ಸ್ಪೀಡ್ ಮ್ಯಾನುವಲ್ & 6-ಸ್ಪೀಡ್ ಆಟೋಮೆಟಿಕ್ ಗೇರ್‌ಬಾಕ್ಸ್‌ನ್ನು ಪಡೆದಿದೆ. 20.51 ರಿಂದ 26 ಕಿಲೋಮೀಟರ್‌ವರೆಗೆ ಮೈಲೇಜ್ ಕೊಡುತ್ತದೆ. 170 ಕೆಎಂಪಿಹೆಚ್ ಟಾಪ್ ಸ್ಪೀಡ್‌ನ್ನು ಒಳಗೊಂಡಿದೆ. ಬರೀ 15.5 ಸೆಕೆಂಡುಗಳಲ್ಲಿ 0 ರಿಂದ 100 ಕೆಎಂಪಿಹೆಚ್ ವೇಗವನ್ನು ಪಡೆಯಲಿದೆ.

ನೂತನ 'ಟೊಯೊಟಾ ರೂಮಿಯನ್' 7 ಆಸನಗಳನ್ನು ಹೊಂದಿದ್ದು, ಪ್ರಯಾಣಿಕರು ಆರಾಮದಾಯಕವಾಗಿ ಕುಳಿತುಕೊಂಡು ಸಂಚಾರ ಮಾಡಬಹುದು. ವಾರಾಂತ್ಯ & ರಜಾ ದಿನಗಳಲ್ಲಿ ದೂರದ ಊರುಗಳಿಗೆ ಪ್ರವಾಸಕ್ಕೆ ತೆರಳುವಾಗ ಹೆಚ್ಚಿನ ಲಗೇಜ್ ಕೊಂಡೊಯ್ಯಲು 209 ಲೀಟರ್‌ನಷ್ಟು ಬೂಟ್ ಸ್ಪೇಸ್‌ನ್ನು ಪಡೆದಿದೆ. 7-ಇಂಚಿನ ಟಚ್‌ಸ್ಕ್ರೀನ್ ಇನ್ಫೋಟೈನ್ಮೆಂಟ್ ಸಿಸ್ಟಮ್, ಆಂಡ್ರಾಯ್ಡ್ ಆಟೋ, ಆಪಲ್ ಕಾರ್‌ಪ್ಲೇ, 6-ಸ್ಪೀಕರ್ ಸೌಂಡ್ ಸಿಸ್ಟಮ್, ಆಟೋಮೆಟಿಕ್ ಎಸಿ ಹಾಗೂ ಕೀಲೆಸ್ ಎಂಟ್ರಿಯಂತಹ ವೈಶಿಷ್ಟ್ಯಗಳನ್ನು ಒಳಗೊಂಡಿದೆ.
ಇದು ಸುರಕ್ಷತೆಗೂ ಹೆಸರುವಾಸಿಯಾಗಿದೆ. ಪ್ರಯಾಣಿಕರಿಗೆ ಗರಿಷ್ಠ ಮಟ್ಟದಲ್ಲಿ ರಕ್ಷಣೆಯನ್ನು ಒದಗಿಸಬಲ್ಲದು. ಅದಕ್ಕಾಗಿ 6 ಏರ್‌ಬ್ಯಾಗ್, ಎಬಿಎಸ್ (ಆಂಟಿಲಾಕ್ ಬ್ರೇಕಿಂಗ್ ಸಿಸ್ಟಮ್), ಇಬಿಡಿ (ಎಲೆಕ್ಟ್ರಾನಿಕ್ ಬ್ರೇಕ್‌ಫೋರ್ಸ್ ಡಿಸ್ಟ್ರಿಬ್ಯೂಷನ್), ಇಎಸ್‌ಸಿ (ಎಲೆಕ್ಟ್ರಾನಿಕ್ ಸ್ಟೆಬಿಲಿಟಿ ಕಂಟ್ರೋಲ್) ಹಿಲ್-ಹೋಲ್ಡ್ ಅಸಿಸ್ಟ್, ಕ್ರೂಸ್ ಕಂಟ್ರೋಲ್ ಹಾಗೂ ರೇರ್-ಪಾರ್ಕಿಂಗ್ ಕ್ಯಾಮೆರಾವನ್ನು ಪಡೆದಿದೆ.
ಈ ಕಾರಿಗೆ ಸಾಲು - ಸಾಲು ಎದುರಾಳಿಗಳಿವೆ. ಮಾರುತಿ ಸುಜುಕಿ ಎರ್ಟಿಗಾ (Maruti Suzuki Ertiga), ಕಿಯಾ ಕ್ಯಾರೆನ್ಸ್ (Kia Carens), ಮಾರುತಿ ಸುಜುಕಿ ಎಕ್ಸ್ಎಲ್6 (Maruti Suzuki XL6), ರೆನಾಲ್ಟ್ ಟ್ರೈಬರ್ (Renault Triber) ಹಾಗೂ ನಿಸ್ಸಾನ್ ಗ್ರಾವೈಟ್ (Nissan Gravite) ಮಾಡೆಲ್‌ಗಳು ಪ್ರಬಲವಾದ ಪ್ರತಿಸ್ಪರ್ಧಿಯಾಗಿವೆ.


Click it and Unblock the Notifications








