Tata: ರೆಡಿಯಾಗಿ.. 3 ಹೊಸ ಟಾಟಾ ಕಾರುಗಳು ಬರಲಿವೆ, ಯಾವುವು.. ಬೆಲೆ ಇಷ್ಟೇನಾ.. ವಿಶೇಷತೆಗಳೇನು?
ಟಾಟಾ ಮೋಟಾರ್ಸ್ (Tata Motors) ಎಲೆಕ್ಟ್ರಿಕ್ ಕಾರು ಮಾರುಕಟ್ಟೆಯಲ್ಲಿ ಅಗ್ರ ಸ್ಥಾನದಲ್ಲಿದೆ. ಕಂಪನಿಯ ಇವಿಗಳನ್ನು ಗ್ರಾಹಕರು ಕೂಡ ನಾ ಮುಂದು - ತಾ ಮುಂದು ಎಂಬಂತೆ ಇಷ್ಟಪಟ್ಟು ಖರೀದಿಸುತ್ತಿದ್ದಾರೆ. ಈ 2026 ಟಾಟಾಗೆ ತುಂಬಾ ಮಹತ್ವದ ವರ್ಷವಾಗಿದೆ. ಟಿಯಾಗೊ ಇವಿ ಫೇಸ್‌ಲಿಫ್ಟ್, ಸಿಯೆರಾ ಇವಿ ಹಾಗೂ ಅವಿನ್ಯಾ ಇವಿಗಳು ಮಾರಾಟಕ್ಕೆ ಬರಲಿವೆ ಎಂದು ವರದಿಯಾಗಿದೆ. ಬನ್ನಿ, ಈ ಕಾರುಗಳ ನಿರೀಕ್ಷಿತ ಬೆಲೆ ಎಷ್ಟು.. ವಿಶೇಷತೆಗಳೇನು ಎಂಬುದರ ಕುರಿತಂತೆ ಸಂಕ್ಷಿಪ್ತವಾದ ವಿವರಗಳನ್ನು ತಿಳಿಯೋಣ.
ಟಾಟಾ ಟಿಯಾಗೊ ಇವಿ ಫೇಸ್‌ಲಿಫ್ಟ್ (Tata Tiago EV Facelift):
ಇದೊಂದು ಪ್ರಮುಖ ಎಲೆಕ್ಟ್ರಿಕ್ ಹ್ಯಾಚ್‌ಬ್ಯಾಕ್ ಆಗಿದೆ. ಈ ವರ್ಷದ ದ್ವಿತೀಯಾರ್ಧದಲ್ಲಿ ನವೀಕರಣಕ್ಕೆ ಒಳಪಟ್ಟ 'ಫೇಸ್‌ಲಿಫ್ಟ್' ಮಾಡೆಲ್ ಸಹ ಬಿಡುಗಡೆಯಾಗಲಿದೆ ಎಂಬ ಮಾಹಿತಿಯೂ ಲಭ್ಯವಾಗಿದೆ. ಈಚೆಗೆ ಪ್ರಾಯೋಗಿಕ ಸಂಚಾರವನ್ನು ನಡೆಸುವಾಗಲು ಕಾಣಿಸಿಕೊಂಡಿದೆ. ಆ ಸ್ಪೈ ಫೋಟೋಗಳು ಆನ್‌ಲೈನ್‌ನಲ್ಲೂ ಸೋರಿಕೆಯಾಗಿವೆ. ಕಪ್ಪು ಬಣ್ಣದ ಕವರ್‌ನಿಂದ ಮುಚ್ಚಿದ್ದರಿಂದ ವಿನ್ಯಾಸದ ಕುರಿತಂತೆ ಅಷ್ಟಾಗಿ ಯಾವುದೇ ವಿವರಗಳು ಬಹಿರಂಗಗೊಂಡಿಲ್ಲ.

ಈ ಕಾರು ನವೀನವಾದ ವಿನ್ಯಾಸವನ್ನು ಹೊಂದಿರಲಿದೆ. ಅತ್ಯುತ್ತಮವಾದ ಬಂಪರ್‌ಗಳು, ಎಲ್ಇಡಿ ಹೆಡ್‌ಲ್ಯಾಂಪ್‌ಗಳು, ಎಲ್ಇಡಿ ಡಿಆರ್‌ಎಲ್‌ಗಳು ಹಾಗೂ ಎಲ್ಇಡಿ ಟೈಲ್‌ಲ್ಯಾಂಪ್‌ಗಳನ್ನು ಪಡೆದುಕೊಂಡಿರುವ ನಿರೀಕ್ಷೆಯಿದೆ. 5 ಆಸನ ಆಯ್ಕೆ ವ್ಯವಸ್ಥೆಯನ್ನು ಒಳಗೊಂಡಿರಲಿದೆ. ಪ್ರಯಾಣಿಕರು ಆರಾಮದಾಯಕವಾಗಿ ಕುಳಿತುಕೊಂಡು ಸಂಚಾರ ಮಾಡಬಹುದು. 19.2 ಮತ್ತು 24 ಕಿಲೋ ವ್ಯಾಟ್ (ಕೆಡಬ್ಲ್ಯೂಹೆಚ್) ಬ್ಯಾಟರಿ ಪ್ಯಾಕ್‌ನ್ನು ಪಡೆದಿರಲಿದೆ. ಸಂಪೂರ್ಣ ಚಾರ್ಜ್‌ನಲ್ಲಿ 293 ಕಿ.ಮೀ ವರೆಗೆ ರೇಂಜ್ (ಮೈಲೇಜ್) ಕೊಡಬಹುದು ಎನ್ನಲಾಗಿದೆ.
ನೂತನ 'ಟಿಯಾಗೊ ಇವಿ ಫೇಸ್‌ಲಿಫ್ಟ್' ಕ್ಯಾಬಿನ್ ವಿನ್ಯಾಸವು ಉತ್ತಮವಾಗಿರಲಿದೆ. ದೊಡ್ಡದಾದ 10.25-ಇಂಚಿನ ಟಚ್‌ಸ್ಕ್ರೀನ್ ಇನ್ಫೋಟೈನ್‌ಮೆಂಟ್ ಸಿಸ್ಟಮ್, ಕನೆಕ್ಟ್ಡ್ ಕಾರ್ ಟೆಕ್, ಆಟೋಮೆಟಿಕ್ ಕ್ಲೇಮೇಟ್ ಕಂಟ್ರೋಲ್ ಮತ್ತು ಪುಶ್-ಬಟನ್ ಸ್ಟಾರ್ಟ್ ಸೇರಿದಂತೆ ಹಲವು ವೈಶಿಷ್ಟ್ಯಗಳನ್ನು ಪಡೆದಿರಲಿದೆ. ಪ್ರಯಾಣಿಕರ ರಕ್ಷಣೆಗಾಗಿ 6-ಏರ್‌ಬ್ಯಾಗ್‌ಗಳನ್ನು ಹೊಂದಿರಲಿದೆ ಎಂದು ಹೇಳಲಾಗಿದೆ. ರೂ.8.10 ಲಕ್ಷದಿಂದ ರೂ.12 ಲಕ್ಷ (ಎಕ್ಸ್-ಶೋರೂಂ) ಬೆಲೆಯನ್ನು ಹೊಂದಿರಬಹುದು ಎಂದು ಅಂದಾಜಿಸಲಾಗಿದೆ.

ಟಾಟಾ ಸಿಯೆರಾ ಇವಿ (Tata Sierra EV):
ಇದು ಬಹುನೀರಿಕ್ಷಿತ ಎಲೆಕ್ಟ್ರಿಕ್ ಎಸ್‌ಯುವಿಯಾಗಿದೆ. ಈ ವರ್ಷವೇ ಮಾರಾಟಕ್ಕೆ ಬರಲಿದೆ. ವಿನ್ಯಾಸದಲ್ಲಿ ಸ್ಟ್ಯಾಂಡರ್ಡ್ ಸಿಯೆರಾಗೆ ಹೋಲಿಕೆಯಾಗಲಿದೆ. ಬೃಹದಾಕಾರದ 65 ಹಾಗೂ 75 ಕಿಲೋ ವ್ಯಾಟ್ (ಕೆಡಬ್ಲ್ಯೂಹೆಚ್) ಬ್ಯಾಟರಿ ಪ್ಯಾಕ್‌ನ್ನು ಪಡೆದಿರಲಿದೆ. ಭರ್ತಿ ಚಾರ್ಜ್‌ನಲ್ಲಿ 627 ಕಿ.ಮೀ ವರೆಗೆ ರೇಂಜ್ (ಮೈಲೇಜ್) ನೀಡಬಹುದು ಎಂದು ಅಂದಾಜಿಸಲಾಗಿದೆ.
ಹೊಸ 'ಸಿಯೆರಾ ಇವಿ' 5 ಆಸನಗಳನ್ನು ಒಳಗೊಂಡಿರಲಿದೆ. ಟ್ರಿಪಲ್ ಸ್ಕ್ರೀನ್ ಸೆಟಪ್, ಡುಯಲ್-ಝೋನ್ ಕ್ಲೇಮೇಟ್ ಕಂಟ್ರೋಲ್ ಸಿಸ್ಟಮ್, 12-ಸ್ಪೀಕರ್ ಬಿಜಿಎಲ್ ಸೌಂಡ್ ಸಿಸ್ಟಮ್, ಸನ್‌ರೂಫ್ ಹಾಗೂ ಪುಶ್ ಬಟನ್ ಸ್ಟಾರ್ಟ್/ಸ್ಟಾಪ್ ಸೇರಿದಂತೆ ವಿವಿಧ ವೈಶಿಷ್ಟ್ಯಗಳನ್ನು ಒಳಗೊಂಡಿರಲಿದೆ. ಸುರಕ್ಷತೆಗಾಗಿ 6-ಏರ್‌ಬ್ಯಾಗ್‌ಗಳನ್ನು ಪಡೆದಿರಲಿದೆ. ರೂ.15 ಲಕ್ಷದಿಂದ ರೂ.25 ಲಕ್ಷ (ಎಕ್ಸ್-ಶೋರೂಂ) ದರವನ್ನು ಹೊಂದಿರಬಹುದು ಎಂದು ಹೇಳಲಾಗಿದೆ.

ಟಾಟಾ ಅವಿನ್ಯಾ ಇವಿ (Tata Avinya EV):
ಈ ಎಲೆಕ್ಟ್ರಿಕ್ ಎಸ್‌ಯುವಿಯು ಇದೇ ವರ್ಷ ಮಾರಾಟಕ್ಕೆ ಬರಲಿದೆ ಎನ್ನಲಾಗಿದೆ. ತುಂಬಾ ಚೆನ್ನಾಗಿರುವ ವಿನ್ಯಾಸವನ್ನು ಹೊಂದಿರಲಿದೆ. ಜೊತೆಗೆ ನಾನಾ ಬಣ್ಣಗಳ ಆಯ್ಕೆಯಲ್ಲಿಯೂ ಲಭ್ಯವಾಗುವ ನಿರೀಕ್ಷೆಯಿದೆ. ರೂ.30 ಲಕ್ಷದಿಂದ ರೂ.40 ಲಕ್ಷ (ಎಕ್ಸ್-ಶೋರೂಂ) ಬೆಲೆಯನ್ನು ಒಳಗೊಂಡಿರುವ ನಿರೀಕ್ಷೆಯಿದೆ.
ಇದು 65 ಹಾಗೂ 75 ಕಿಲೋ ವ್ಯಾಟ್ (ಕೆಡಬ್ಲ್ಯೂಹೆಚ್) ಬ್ಯಾಟರಿ ಪ್ಯಾಕ್‌ನ್ನು ಒಳಗೊಂಡಿರಲಿದೆ. ಪೂರ್ತಿ ಚಾರ್ಜ್‌ನಲ್ಲಿ 500 ಕಿ.ಮೀ ವರೆಗೆ ರೇಂಜ್ (ಮೈಲೇಜ್) ಕೊಡಬಹುದು ಎಂದು ಹೇಲಾಗಿದೆ. 14.5-ಇಂಚಿನ ಟಚ್‌ಸ್ಕ್ರೀನ್ ಇನ್ಫೋಟೈನ್‌ಮೆಂಟ್ ಸಿಸ್ಟಮ್, ಪನೊರೊಮಿಕ್ ಸನ್‌ರೂಫ್ ಸೇರಿದಂತೆ ವಿವಿಧ ವೈಶಿಷ್ಟ್ಯಗಳನ್ನು ಒಳಗೊಂಡಿರುವ ಸಾಧ್ಯತೆಯಿದೆ. ಪ್ರಯಾಣಿಕರ ರಕ್ಷಣೆಗಾಗಿ 7-ಏರ್‌ಬ್ಯಾಗ್‌ಗಳನ್ನು ಪಡೆದಿರಲಿದೆ ಎಂದು ಹೇಳಲಾಗಿದೆ.


Click it and Unblock the Notifications








