ಪವರ್‌ಫುಲ್ ಎಲೆಕ್ಟ್ರಿಕ್ ಎಸ್‌ಯುವಿಗಳು ಬಿಡುಗಡೆಗೆ ಸಜ್ಜು: ಭಾರತವನ್ನು ವಿಶ್ವ ತಿರುಗಿ ನೋಡಲಿದೆ!
ಭಾರತದಲ್ಲಿ ಎಲೆಕ್ಟ್ರಿಕ್ ವಾಹನಗಳು ಮೊದಲಿನಂತಲ್ಲದೆ ಈಗ ಜನರಲ್ಲಿ ವಿಶ್ವಾಸ ಗಳಿಸಿವೆ. ಕಡಿಮೆ ಮೇಂಟನೆನ್ಸ್ ಹಾಗೂ ಚಾಲನಾ ವೆಚ್ಚವಿಲ್ಲದೆ ಪ್ರಯಾಣ ಮಾಡುವ ಕಾರಣದಿಂದ ಭಾರತದಲ್ಲಿ ಇವಿಗಳ ಮಾರಾಟ ಹೆಚ್ಚಾಗಿದೆ. ಜೊತೆಗೆ ಪ್ರಮುಖ ಬ್ರಾಂಡ್‌ಗಳು ಈಗ ಹೊಸ ಎಲೆಕ್ಟ್ರಿಕ್ ಕಾರುಗಳನ್ನು ಪರಿಚಯಿಸಲು ಮುಂದಾಗುತ್ತಿದ್ದಾರೆ. ಈಗ 2026 ರಲ್ಲಿ ಭಾರತೀಯ ಎಲೆಕ್ಟ್ರಿಕ್ ವಾಹನ ಮಾರುಕಟ್ಟೆ ಗಮನಾರ್ಹ ಬೆಳವಣಿಗೆಯನ್ನು ಕಾಣುವ ನಿರೀಕ್ಷೆಯಿದೆ. ಟಾಟಾ, ಮಾರುತಿ ಸುಜುಕಿ, ಟೊಯೋಟಾದಂತಹ ಪ್ರಮುಖ ಬ್ರ್ಯಾಂಡ್‌ಗಳು ಹೊಸ ಎಲೆಕ್ಟ್ರಿಕ್ ಕಾರುಗಳು ಮತ್ತು SUV ಗಳನ್ನು ಬಿಡುಗಡೆ ಮಾಡಲು ತಯಾರಿ ನಡೆಸುತ್ತಿವೆ.
ಮಾರುತಿ ಸುಜುಕಿ ಇ-ವಿಟಾರಾ: ಮಾರುತಿ ಇ-ವಿಟಾರಾ (Maruti Suzuki e-vitara) 2026ರ ಅತ್ಯಂತ ನಿರೀಕ್ಷಿತ ಎಲೆಕ್ಟ್ರಿಕ್ ಎಸ್‌ಯುವಿಗಳಲ್ಲಿ ಒಂದಾಗಿದೆ. ಇದೇ ಜನವರಿ ಅಂತ್ಯದ ವೇಳೆಗೆ ಕಾರು ಬಿಡುಗಡೆಯಾಗಿವ ಸಾಧ್ಯತೆ ಇದೆ. ರೂ.20 ಲಕ್ಷದಿಂದ ರೂ.25 ಲಕ್ಷದವರೆಗೆ (ಎಕ್ಸ್-ಶೋರೂಂ) ಬೆಲೆ ಇರಬಹುದು ಎಂದು ಅಂದಾಜಿಸಲಾಗಿದೆ. ಇದು 49kWh ಮತ್ತು 61kWh ಬ್ಯಾಟರಿ ಆಯ್ಕೆಗಳಲ್ಲಿ ಲಭ್ಯವಿರಲಿದ್ದು, ಒಮ್ಮೆ ಚಾರ್ಜ್ ಮಾಡಿದರೆ 344 ಕಿ.ಮೀನಿಂದ 543 ಕಿ.ಮೀವರೆಗೆ ಓಡಿಸಬಹುದು ಎಂದು ಹೇಳಲಾಗುತ್ತಿದೆ.

ವಿನ್‌ಫಾಸ್ಟ್ ಲಿಮೋ ಗ್ರೀನ್: ವಿಯೆಟ್ನಾಂ ಮೂಲದ ಎಲೆಕ್ಟ್ರಿಕ್ ವಾಹನ ತಯಾರಕ ಕಂಪನಿಯಾದ ವಿನ್‌ಫಾಸ್ಟ್ ತನ್ನ ಮೂರನೇ ಕಾರು ಲಿಮೋ ಗ್ರೀನ್ (VinFast Limo Green) ಅನ್ನು ಫೆಬ್ರವರಿ 2026 ರಲ್ಲಿ ಭಾರತದಲ್ಲಿ ಬಿಡುಗಡೆ ಮಾಡಲಿದೆ. 60.13 ಕಿಲೋವ್ಯಾಟ್ ಬ್ಯಾಟರಿ ಪ್ಯಾಕ್ ಹೊಂದಿರಲಿದ್ದು, ಒಮ್ಮೆ ಚಾರ್ಜ್ ಮಾಡಿದರೆ 450 ಕಿ.ಮೀವರೆಗೆ ರೇಂಜ್ ನೀಡಬಹುದು. ಈ ಕಾರು ಭಾರತದಲ್ಲಿ ಎಲೆಕ್ಟ್ರಿಕ್ ಎಂಪಿವಿ ವಿಭಾಗದಲ್ಲಿ ಹೊಸ ಆಯ್ಕೆಯಾಗಲಿದೆ.
ಟಾಟಾ ಪಂಚ್ ಇವಿ ಫೇಸ್‌ಲಿಫ್ಟ್: ಟಾಟಾ ಪಂಚ್ ಇವಿಯ ಫೇಸ್‌ಲಿಫ್ಟ್(Tata Punch EV Facelift) ಮಾಡಲ್ 2026ರ ಮೊದಲಾರ್ಧದಲ್ಲಿ ಬಿಡುಗಡೆಯಾಗುವ ನಿರೀಕ್ಷೆಯಿದೆ. ಟಾಟಾ ಪಂಚ್ ಇವಿ ಒಂದು ಸಣ್ಣ ಎಲೆಕ್ಟ್ರಿಕ್ ಕಾರಾಗಿದ್ದು, ಮಧ್ಯಮ ವರ್ಗದವರಿಗಾಗಿ ಟಾಟಾ ಮೋಟಾರ್ಸ್ ಈ ಪುಟ್ಟ ಕಾರನ್ನು ನೀಡುತ್ತಿದೆ. ಹೊಸ ಬಾಹ್ಯ ವಿನ್ಯಾಸ, ಹೊಸ ಫೀಚರ್ಸ್ ಮತ್ತು ಹೊಸ ಬಣ್ಣ ಆಯ್ಕೆಗಳನ್ನು ಒಳಗೊಂಡರಲಿದೆ. ಸುಧಾರಿತ ಫೀಚರ್ಸ್ ಹಾಗೂ ಬ್ಯಾಟರಿಯಿಂದಾಗಿ ಬೆಲೆ ರೂ.10 ಲಕ್ಷ (ಎಕ್ಸ್-ಶೋರೂಂ)ದಾಟಬಹುದು.

ಟಾಟಾ ಸಿಯೆರಾ ಇವಿ: ಟಾಟಾ ಮೋಟಾರ್ಸ್ ಸಿಯೆರಾ ಇವಿ (Tata Sierra EV) ಬಿಡುಗಡೆಯನ್ನು ದೃಢಪಡಿಸಿದೆ. ಅಂದಾಜು ಬೆಲೆಗಳು ರೂ.20 ಲಕ್ಷದಿಂದ ಪ್ರಾರಂಭವಾಗಬಹುದು. ಕುತೂಹಲಕಾರಿಯಾಗಿ, ಇವಿ ಆವೃತ್ತಿಯನ್ನು ಶೀಘ್ರದಲ್ಲೆ (ಮಾರ್ಚ್ ಮುನ್ನ) ಬಿಡುಗಡೆ ಮಾಡಲಾಗುವುದು ಎನ್ನಲಾಗಿದೆ. 55 ಕಿಲೋವ್ಯಾಟ್ ಮತ್ತು 65 ಕಿಲೋವ್ಯಾಟ್ ಬ್ಯಾಟರಿ ಪ್ಯಾಕ್‌ಗಳನ್ನು ಒಳಗೊಂಡಿರಲಿದ್ದು, ಒಮ್ಮೆ ಚಾರ್ಜ್ ಮಾಡಿದರೆ ಸುಮಾರು 500 ಕಿ.ಮೀ ರೇಂಜ್ ನೀಡುತ್ತದೆ.
ಟಾಟಾ ಅವಿನ್ಯಾ: ಟಾಟಾ ಅವಿನ್ಯಾ(Tata Avinya) ವನ್ನು 2026 ರ ಅಂತ್ಯದ ವೇಳೆಗೆ ಬಿಡುಗಡೆ ಮಾಡುವ ನಿರೀಕ್ಷೆಯಿದೆ. ಇದನ್ನು ಒಮ್ಮೆ ಚಾರ್ಜ್ ಮಾಡಿದರೆ 500+ ಕಿ.ಮೀ ಓಡಬಲ್ಲದು, ವೇಗದ ಚಾರ್ಜಿಂಗ್, V2L ಮತ್ತು V2V ತಂತ್ರಜ್ಞಾನ, ಪ್ರೀಮಿಯಂ ವಿನ್ಯಾಸ ಮತ್ತು ಸುಧಾರಿತ ವೈಶಿಷ್ಟ್ಯಗಳು ಸೇರಿವೆ. ಇದು ಕೇವಲ ಕಾರು ಅಲ್ಲ, ಹೊಸ ಪ್ರೀಮಿಯಂ ಇವಿ ಬ್ರ್ಯಾಂಡ್ ಆಗಿರುತ್ತದೆ. ಇದು ಪ್ರತ್ಯೇಕ ಶೋ ರೂಂಗಳು ಮತ್ತು ವಿಶಿಷ್ಟ ಗುರುತನ್ನು ಹೊಂದಿರುತ್ತದೆ.

ಟೊಯೋಟಾ ಅರ್ಬನ್ ಕ್ರೂಸರ್ EV: ಟೊಯೋಟಾ ಅರ್ಬನ್ ಕ್ರೂಸರ್ EV (Toyota Urban Cruiser EV) ಮೂಲಭೂತವಾಗಿ ಮಾರುತಿ ಇ-ವಿಟಾರಾದ ಟೊಯೋಟಾ - ರೀ - ಬ್ಯಾಡ್ಜ್ಡ್ ಆವೃತ್ತಿಯಾಗಿರುತ್ತದೆ. ವರದಿಗಳ ಪ್ರಕಾರ ಇದರ ಭಾರತದ ಬಿಡುಗಡೆಯು 2026 ರ ಆರಂಭದಲ್ಲಿ ಅಥವಾ ಮಧ್ಯದಲ್ಲಿ ನಡೆಯಬಹುದು. ನಂತರ ಇತರ ಮಾರುಕಟ್ಟೆಗಳಲ್ಲಿಯೂ ಪರಿಚಯಿಸುವ ಬಗ್ಗೆ ಮಾತುಗಳು ಕೇಳಿಬಂದಿವೆ.
ಹೊಸ ಟೊಯೋಟಾ ಅರ್ಬನ್ ಕ್ರೂಸರ್ EV ಹಾರ್ಟೆಕ್ಟ್ - E ಪ್ಲಾಟ್‌ಫಾರ್ಮ್‌ನಲ್ಲಿ ನಿರ್ಮಾಣವಾಗಿದೆ. ಪ್ರಮುಖ ವೈಶಿಷ್ಟ್ಯಗಳಲ್ಲಿ ಇದು 49 kWh ಮತ್ತು 61 kWh ಬ್ಯಾಟರಿ ಆಯ್ಕೆಗಳಲ್ಲಿ ಲಭ್ಯವಿರಲಿದೆ. ಇದು AWD ನೊಂದಿಗೆ ಬರಲಿದೆ. ಇದನ್ನು ಒಮ್ಮೆ ಚಾರ್ಜ್ ಮಾಡಿದರೆ ಬರೋಬ್ಬರಿ 550 ಕಿ.ಮೀ ಓಡಿಸಬಹುದು ಎಂದು ಮೂಲಗಳು ತಿಳಿಸಿವೆ.


Click it and Unblock the Notifications








