Vinfast: ಸದ್ದಿಲ್ಲದೇ ಮತ್ತೊಂದು ಕಾರಿನ ಬಿಡುಗಡೆಗೆ ಹೊಸ ಬ್ರ್ಯಾಂಡ್ ತಯಾರಿ, 326 Km ರೇಂಜ್.. ಬೆಲೆಯೂ ಅಗ್ಗ?
ವಿಯೆಟ್ನಾಂಗೆ ಸೇರಿರುವ ವಿನ್‌ಫಾಸ್ಟ್ (VinFast), ಅಂತರರಾಷ್ಟ್ರೀಯ ಮಟ್ಟದಲ್ಲಿ ಪ್ರಮುಖ ವಾಹನ ತಯಾರಕ ಕಂಪನಿಯಾಗಿ ಹೊರಹೊಮ್ಮಿದೆ. 2025ರ ಸೆಪ್ಟೆಂಬರ್‌ನಲ್ಲಿ ದೇಶೀಯವಾಗಿ ಹೊಚ್ಚ ಹೊಸ ವಿಎಫ್6 (VF6) ಹಾಗೂ ವಿಎಫ್7 (VF7) ಎಂಬ 2 ಎಲೆಕ್ಟ್ರಿಕ್ ಎಸ್‌ಯುವಿಯನ್ನು ಬಿಡುಗಡೆಗೊಳಿಸಿತ್ತು. ಸದ್ಯ, ಕಂಪನಿಯು ತನ್ನ ಲೈನ್ಅಪ್‌ನ್ನು ವಿಸ್ತರಿಸಲು ಮುಂದಾಗಿದೆ. ಶೀಘ್ರದಲ್ಲೇ ಲಿಮೋ ಗ್ರೀನ್ (Limo Green) ಎಂಪಿವಿಯನ್ನು ಮಾರಾಟಕ್ಕೆ ತರಲಿದೆ. ಅದಕ್ಕಾಗಿ ಸಕಲ ಸಿದ್ಧತೆಗಳನ್ನು ಮಾಡಿಕೊಳ್ಳುತ್ತಿದೆ. ಈ ನಡುವೆ 'ಟಾಟಾ ಪಂಚ್ ಇವಿ'ಗೆ ಪ್ರಬಲವಾದ ಸ್ಪರ್ಧೆಯೊಡ್ಡಲು ಮತ್ತೊಂದು ಕಾರನ್ನು ಸಹ ಪರಿಚಯಿಸಲಿದೆ ಎಂದು ವರದಿಯಾಗಿದೆ.
ಎಲ್ಲವು ಅಂದುಕೊಂಡಂತೆ ನಡೆದರೆ, ಇದೇ ವರ್ಷದ 'ಮೇ' ತಿಂಗಳಲ್ಲಿ ನೂತನ ವಿನ್‌ಫಾಸ್ಟ್ ವಿಎಫ್5 (Vinfast VF5) ಎಲೆಕ್ಟ್ರಿಕ್ ಕಾರು ಬಿಡುಗಡೆಯಾಗಲಿದೆ. ಇದೊಂದು ದೊಡ್ಡ ಗಾತ್ರದ ಹ್ಯಾಚ್‌ಬ್ಯಾಕ್ ಆಗಿದ್ದು, ಕೈಗೆಟುಕುವ ಬೆಲೆಯಲ್ಲಿಯೂ ಗ್ರಾಹಕರ ಖರೀದಿಗೆ ದೊರೆಯುವ ನಿರೀಕ್ಷೆಯಿದೆ. ರೂ.10 ಲಕ್ಷದಿಂದ ರೂ.12 ಲಕ್ಷ (ಎಕ್ಸ್-ಶೋರೂಂ) ದರವನ್ನು ಪಡೆದಿರಬಹುದು ಎಂದು ಅಂದಾಜಿಸಲಾಗಿದೆ.

ಈ 'ವಿನ್‌ಫಾಸ್ಟ್ ವಿಎಫ್5 ಇವಿ' ಜಾಗತಿಕ ಮಾರುಕಟ್ಟೆಯಲ್ಲಿ ಖರೀದಿಗೆ ಲಭ್ಯವಿದ್ದು, ತುಂಬಾ ಅಚ್ಚುಕಟ್ಟಾದ ವಿನ್ಯಾಸವನ್ನು ಹೊಂದಿದೆ. ಹ್ಯಾಚ್‌ಬ್ಯಾಕ್ ಆಗಿದ್ದರೂ ನೋಡಲು ಎಸ್‌ಯುವಿಯಂತೆ ಕಾಣುತ್ತದೆ. ಉತ್ತಮವಾದ ಎಲ್ಇಡಿ ಹೆಡ್‌ಲೈಟ್‌ಗಳು, ಎಲ್ಇಡಿ ಟೈಲ್ ಲ್ಯಾಂಪ್‌ಗಳು ಹಾಗೂ 17-ಇಂಚಿನ ಅಲಾಯ್ ವೀಲ್‌ಗಳನ್ನು ಪಡೆದಿದೆ. ಬ್ರಾಹಿಮ್ನಿ ವೈಟ್, ಕ್ರಿಮ್ಸನ್ ರೆಡ್, ನೆಪ್ಚೂನ್ ಗ್ರೇ ಮತ್ತು ವಿನ್‌ಫಾಸ್ಟ್ ಬ್ಲೂ ಎಂಬ ಬಣ್ಣಗಳೊಂದಿಗೂ ಸಿಗುತ್ತದೆ.
ಇದು ಸಾಕಷ್ಟು ವಿಶಾಲವಾಗಿದೆ. 3,967 ಮಿ.ಮೀ ಉದ್ದ, 1,723 ಮಿ.ಮೀ ಅಗಲ ಮತ್ತು 1,579 ಮಿ.ಮೀ ಎತ್ತರವಿದೆ. ಜೊತೆಗೆ 169 ಮಿ.ಮೀ ಗ್ರೌಂಡ್ ಕ್ಲಿಯರೆನ್ಸ್ ಹಾಗೂ 2,514 ಮಿ.ಮೀ ವೀಲ್‌ಬೇಸ್‌ನ್ನು ಒಳಗೊಂಡಿದೆ. ಸರಿ ಸುಮಾರು 1,285 ಕೆಜಿ ತೂಕವಿದೆ.
ಹೊಸ 'ವಿನ್‌ಫಾಸ್ಟ್ ವಿಎಫ್5' ಎಲೆಕ್ಟ್ರಿಕ್ ಹ್ಯಾಚ್‌ಬ್ಯಾಕ್ 5 ಆಸನ ಆಯ್ಕೆ ವ್ಯವಸ್ಥೆಯನ್ನು ಹೊಂದಿದ್ದು, ಪ್ರಯಾಣಿಕರು ಆರಾಮದಾಯಕವಾಗಿ ಕುಳಿತುಕೊಂಡು ಸಂಚಾರ ಮಾಡಬಹುದು. ವಾರಾಂತ್ಯ ಹಾಗೂ ರಜಾ ದಿನಗಳಲ್ಲಿ ದೂರದ ಊರುಗಳಿಗೆ ಪ್ರವಾಸಕ್ಕೆ ಹೋಗುವಾಗ ಹೆಚ್ಚಿನ ಲಗೇಜ್ ತೆಗೆದುಕೊಂಡು ಹೋಗಲು ಸಾಧ್ಯವಾಗುವಂತೆ 260 ಲೀಟರ್‌ನಷ್ಟು ಬೂಟ್ ಸ್ಪೇಸ್‌ನ್ನು ಹೊಂದಿದೆ.
ಈ ಕಾರು 2 ಶಕ್ತಿಶಾಲಿಯಾದ ಪವರ್‌ಟ್ರೇನ್‌ನ್ನು ಪಡೆದಿದೆ. ಇದರ 29.6 ಬ್ಯಾಟರಿ ಪ್ಯಾಕ್ ಒಳಗೊಂಡಿರುವ ಮಾಡೆಲ್, ಸಂಪೂರ್ಣ ಚಾರ್ಜ್‌ನಲ್ಲಿ 269 ಕಿಲೋಮೀಟರ್‌ವರೆಗೆ ರೇಂಜ್ (ಮೈಲೇಜ್) ನೀಡುತ್ತದೆ. ಫ್ರಂಟ್-ಮೌಂಟೆಡ್ ಎಲೆಕ್ಟ್ರಿಕ್ ಮೋಟಾರ್‌ನ್ನು ಬಳಕೆ ಮಾಡಲಾಗಿದ್ದು, 95 ಪಿಎಸ್ ಅಶ್ವ ಶಕ್ತಿ (ಹಾರ್ಸ್ ಪವರ್) ಹಾಗೂ 135 ಎನ್ಎಂ (ನ್ಯೂಟನ್ ಮೀಟರ್) ಪೀಕ್ ಟಾರ್ಕ್ ಉತ್ಪಾದಿಸುತ್ತದೆ.
ಮತ್ತೊಂದು ಬೃಹದಾಕಾರದ 37.23 ಬ್ಯಾಟರಿ ಪ್ಯಾಕ್ ಹೊಂದಿರುವ ಮಾಡೆಲ್, ಭರ್ತಿ ಚಾರ್ಜ್‌ನಲ್ಲಿ 326 ಕಿಲೋಮೀಟರ್‌ವರೆಗೆ ರೇಂಜ್ (ಮೈಲೇಜ್) ಕೊಡುತ್ತದೆ. ಇದರಲ್ಲಿ ಉಪಯೋಗಿಸಿರುವ ಎಲೆಕ್ಟ್ರಿಕ್ ಮೋಟಾರ್, 136 ಪಿಎಸ್ ಅಶ್ವ ಶಕ್ತಿ (ಹಾರ್ಸ್ ಪವರ್) ಮತ್ತು 135 ಎನ್ಎಂ (ನ್ಯೂಟನ್ ಮೀಟರ್) ಪೀಕ್ ಟಾರ್ಕ್ ಹೊರಹಾಕುತ್ತದೆ.
ನೂತನ 'ವಿನ್‌ಫಾಸ್ಟ್ ವಿಎಫ್5' ಎಲೆಕ್ಟ್ರಿಕ್ ಹ್ಯಾಚ್‌ಬ್ಯಾಕ್ ಕ್ಯಾಬಿನ್ ವಿನ್ಯಾಸವು ಅದ್ಭುತವಾಗಿದೆ. 8-ಇಂಚಿನ ಟಚ್‌ಸ್ಕ್ರೀನ್ ಇನ್ಫೋಟೈನ್‌ಮೆಂಟ್ ಸಿಸ್ಟಮ್, 7-ಇಂಚಿನ ಡಿಜಿಟಲ್ ಇನ್ಸ್ಟ್ರುಮೆಂಟ್ ಕ್ಲಸ್ಟರ್, ಆಂಡ್ರಾಯ್ಡ್ ಆಟೋ, ಆಪಲ್ ಕಾರ್‌ಪ್ಲೇ, 4-ಸ್ಪೀಕರ್ ಸೌಂಡ್ ಸಿಸ್ಟಮ್, ಏರ್ ಫಿಲ್ಟರ್, ಲೆದರ್ ಸೀಟ್ ಕವರ್‌ಗಳು, ಕೀಲೆಸ್ ಎಂಟ್ರಿ, ರೇಡಿಯೋ & ಬ್ಲೂಟೂತ್ ಕನೆಕ್ಟಿವಿಟಿ ಸೇರಿದಂತೆ ವಿವಿಧ ವೈಶಿಷ್ಟ್ಯಗಳನ್ನು ಒಳಗೊಂಡಿದೆ.
ಈ ಕಾರು ಸುರಕ್ಷತೆಗೂ ಹೆಸರುವಾಸಿಯಾಗಿದೆ. ಪ್ರಯಾಣಿಕರಿಗೆ ಗರಿಷ್ಠ ಮಟ್ಟದಲ್ಲಿ ರಕ್ಷಣೆಯನ್ನು ಒದಗಿಸುತ್ತದೆ. 4-ಏರ್‌ಬ್ಯಾಗ್‌ಗಳು, ಎಬಿಎಸ್ (ಆಂಟಿಲಾಕ್ ಬ್ರೆಕಿಂಗ್ ಸಿಸ್ಟಮ್), ಇಬಿಡಿ (ಎಲೆಕ್ಟ್ರಾನಿಕ್ ಬ್ರೇಕ್‌ಫೋರ್ಸ್ ಡಿಸ್ಟ್ರಿಬ್ಯೂಷನ್), ಇಎಸ್‌ಸಿ (ಎಲೆಕ್ಟ್ರಾನಿಕ್ ಸ್ಟೆಬಿಲಿಟಿ ಕಂಟ್ರೋಲ್), ಟಿಸಿಎಸ್ (ಟ್ರಾಕ್ಷನ್ ಕಂಟ್ರೋಲ್ ಸಿಸ್ಟಮ್) ಹಾಗೂ ಹಿಲ್ ಸ್ಟಾರ್ಟ್ ಅಸಿಸ್ಟ್ ಕಂಟ್ರೋಲ್‌ನ್ನು ಹೊಂದಿದೆ.
Source Link: Autocar


Click it and Unblock the Notifications








