ಚಾಲಕರೇ ರಿಲಾಕ್ಸ್ ಮಾಡಿ - ಬಂದಿದೆ ಆಡಿ ಪೈಲಟಡ್ ಕಾರು
ಪ್ರಖ್ಯಾತ ಪ್ರದರ್ಶನ ಮೇಳಗಳಲ್ಲಿ ನಾವು ಇದುವರೆಗೆ ವಿಶ್ವದ ಮುಂಚೂಣಿಯ ವಾಹನ ತಯಾರಿಕ ಸಂಸ್ಥೆಗಳು ಹೊಸ ಹೊಸ ಪರಿಕಲ್ಪನೆಗಳೊಂದಿಗೆ ಮುಂದೆ ಬಂದಿರುವುದನ್ನು ನೋಡಿರುತ್ತೇವೆ. ಆದರೆ ಇದೀಗ ಇನ್ನು ಒಂದು ಹೆಜ್ಜೆ ಮುಂದಿಟ್ಟಿರುವ ಜರ್ಮನಿಯ ಐಷಾರಾಮಿ ವಾಹನ ತಯಾರಿಕ ಸಂಸ್ಥೆಯಾಗಿರುವ ಆಡಿ, ಕೇವಲ ಕಾನ್ಸೆಫ್ಟ್ ಪ್ರದರ್ಶಿಸುವುದಷ್ಟೇ ಅಲ್ಲದೆ ಇದನ್ನು ನೈಜ ರಸ್ತೆ ಪರಿಸ್ಥಿತಿಯಲ್ಲಿ ತೋರಿಸುವ ಮಹತ್ತರ ಪ್ರಯತ್ನವನ್ನು ಮಾಡಿದೆ.
ಹೌದು, ಆಡಿಯ ಹೊಸತಾದ ಎ7 ಸ್ಪೋರ್ಟ್ಸ್ ಬ್ಯಾಕ್ ಪೈಲಟಡ್ ಕಾರು (ಮಾರ್ಗದರ್ಶಕ) ಕ್ಯಾಲಿಫೋರ್ನಿಯಾದ ಸಿಲಿಕಾನ್ ವ್ಯಾಲಿಯಿಂದ ಲಾಸ್ ವೇಗಾಸ್‌ನಲ್ಲಿ ನಡೆಯುತ್ತಿರುವ 2015 ಅಂತರಾಷ್ಟ್ರೀಯ ಗ್ರಾಹಕ ಎಲೆಕ್ಟ್ರಾನಿಕ್ ಶೋಗೆ ಯಶಸ್ವಿ ಪ್ರಯಾಣವನ್ನು ಬೆಳೆಸಿಕೊಂಡಿದೆ.

ಅಂದ ಹಾಗೆ ಆಡಿಯ ಪೈಲಟಡ್ ಕಾರು ಎಷ್ಟು ದೂರವನ್ನು ಕ್ರಮಿಸಿದೆ ಅಂತೀರಾ? ಹೌದು, ನೈಜ ರಸ್ತೆ ಪರಿಸ್ಥಿತಿಯಲ್ಲಿ ಬರೋಬ್ಬರಿ 901 (560 ಮೈಲ್) ಕೀ.ಮೀ.ಗಳ ಪಯಣವನ್ನು ಆಡಿ ಬೆಳೆಸಿದೆ. ಅಲ್ಲದೆ ಪೈಲಟಡ್ ತಂತ್ರಗಾರಿಕೆಯಲ್ಲಿ ಗಂಟೆಗೆ ಗರಿಷ್ಠ 0-100 ಕೀ.ಮೀ. ವೇಗದಲ್ಲಿ ಸಂಚರಿಸುವ ಸಾಮರ್ಥ್ಯ ಹೊಂದಿರುತ್ತದೆ.

2015 ಅಂತರಾಷ್ಟ್ರೀಯ ಗ್ರಾಹಕ ಎಲೆಕ್ಟ್ರಾನಿಕ್ಸ್ ಶೋ ಕೇವಲ ಗಾಡ್ಜೆಟ್‌ಗೆ ಮಾತ್ರ ಸೀಮಿತವಾಗಿಲ್ಲ. ಭವಿಷ್ಯದ ವಾಹನಗಳಲ್ಲಿ ಆಳವಡಿಕೆಯಾಗುವ ಅನೇಕ ತಂತ್ರಜ್ಞಾನಗಳು ಈಗಾಗಲೇ ಅವಿಷ್ಕಾರವಾಗಿದೆ. ಈ ನಿಟ್ಟಿನಲ್ಲಿ ಆಡಿ ನೂತನ ತಂತ್ರಗಾರಿಕೆಯು ಹೊಸ ನಿರೀಕ್ಷೆಗೆ ಕಾರಣವಾಗಿದೆ.

ಪೈಲಟಡ್ ಅಥವಾ ಮಾರ್ಗದರ್ಶಕ ಡ್ರೈವಿಂಗ್ ಸಿದ್ಧಾಂತವು ಹೊಸ ಆಡಿ ಎ7 ಸ್ಪೋರ್ಟ್ಸ್ ಬ್ಯಾಕ್ ಕಾರಿನಲ್ಲಿ ಕಾಣಿಸಿಕೊಳ್ಳಲಿದೆ. ಅಂದ ಹಾಗೆ ಇದರಲ್ಲಿ 3.0 ಲೀಟರ್ ಟಿಎಫ್‌ಎಸ್‌ಐ ಕ್ವಾಟ್ರೊ ಎಂಜಿನ್ ಆಳವಡಿಸಲಾಗಿದೆ.

ವಿಶೇಷವೆಂದರೆ ಆಡಿ ಪೈಲಟಡ್ ಕಾರು ಸರಾಗವಾಗಿ ಲೇನ್ ಬದಲಾಯಿಸುತ್ತದೆಯಲ್ಲದೆ ಇತರ ವಾಹನಗಳನ್ನು ಸುಲಲಿತವಾಗಿ ಓವರ್ ಟೇಕ್ ಮಾಡುವಲ್ಲಿ ಯಶಸ್ವಿಯಾಗಿದೆ.

ಇನ್ನು ಸುತ್ತು ಮುತ್ತಲಿರುವ ವಾಹನಗಳನ್ನು ಗ್ರಹಿಸಲು ಆಡಿ ಪೈಲಟಡ್ ವಾಹನಗಳು ಯಶ ಸಾಧಿಸಿದ್ದು, ತದಾ ಚಿತ್ತವಾಗಿ ವೇಗವರ್ಧಿಸಲು ಹಾಗೂ ಬ್ರೇಕ್ ಹಾಕುವಲ್ಲಿ ಯಶಸ್ವಿಯಾಗಿದೆ.

ಅಷ್ಟಕ್ಕೂ ಜರ್ಮನಿಯ ಎಂಜಿನಿಯರ್‌ಗಳು ಈ ಹೊಸ ತಂತ್ರಗಾರಿಕೆಗೆ 'ಜ್ಯಾಕ್' ಎಂಬ ಹೆಸರನ್ನಿಟ್ಟಿದೆ. ಇದರಲ್ಲಿ ಅನೇಕ ಸೆನ್ಸಾರ್ ಹಾಗೂ ಕ್ಯಾಮೆರಾಗಳನ್ನು ಬಳಕೆ ಮಾಡಲಾಗಿದೆ. ಇನ್ನು ಅಡಾಪ್ಟಿವ್ ಕ್ರೂಸ್ ಕಂಟ್ರೋಲ್, ಆಡಿ ಸೈಡ್ ಅಸಿಸ್ಟ್, ರಾಡಾರ್, ಲೇಸರ್ ಜೊತೆಗೆ 3 ಡಿ ವೀಡಿಯೋ ಕ್ಯಾಮೆರಾ ತಂತ್ರಗಾರಿಕೆಯು ಇದರಲ್ಲಿರಲಿದೆ.


Click it and Unblock the Notifications








