ಆಡಿ ಅಗ್ಗದ ಕ್ಯೂ3 ಎಸ್ ಐಷಾರಾಮಿ ಕಾರು ಲಾಂಚ್
ಜರ್ಮನಿಯ ಐಷಾರಾಮಿ ಕಾರು ತಯಾರಕ ಸಂಸ್ಥೆಯಾಗಿರುವ ಆಡಿ, ವಿಶೇಷವಾಗಿಯೂ ಭಾರತ ಮಾರುಕಟ್ಟೆಗಾಗಿ ಅಗ್ಗದ ಐಷಾರಾಮಿ ಕ್ಯೂ3 ಸ್ಪೋರ್ಟ್ ಕಾರನ್ನು ಬಿಡುಗಡೆಗೊಳಿಸಿದೆ. ಆಡಿ ಕ್ಯೂ3 ಎಸ್ ದೆಹಲಿ ಎಕ್ಸ್ ಶೋ ರೂಂ ದರ 24.99 ಲಕ್ಷ ರು.ಗಳಾಗಿವೆ.
ಇದು ಪ್ರಮುಖವಾಗಿಯೂ ತನ್ನ ನಿಕಟ ಎದುರಾಳಿಗಳಾದ ಮರ್ಸಿಡಿಸ್ ಬೆಂಝ್ ಎ ಮತ್ತು ಬಿ ಕ್ಲಾಸ್ ಹಾಗೂ ಬಿಎಂಡಬ್ಲ್ಯು 1 ಸಿರೀಸ್ ಕಾರುಗಳಿಗೆ ಪ್ರತಿಸ್ಪರ್ಧಿಯೆನಿಸಲಿದೆ. ಈ ಪೈಕಿ ಬಿಎಂಡಬ್ಲ್ಯು 1 ಸಿರೀಸ್ ಇನ್ನಷ್ಟೇ ಬಿಡುಗಡೆಯಾಗಬೇಕಿದೆ.
ವಿದೇಶಿ ವಿನಿಮಯ ಕೇಂದ್ರ ಫಾರೆಕ್ಸ್‌ನಲ್ಲಿ ಡಾಲರ್ ಎದುರಿಗೆ ರುಪಾಯಿ ದರ ಗಣನೀಯ ಕುಸಿತ ಕಂಡಿರುವ ನಡುವೆಯೂ ಸ್ಮರ್ಧಾತ್ಮಕ ದರಗಳಲ್ಲಿ ಆಡಿ ಕ್ಯೂ3 ಎಸ್ ಕಾರನ್ನು ಪರಿಚಯಿಸುವಲ್ಲಿ ಆಡಿ ಯಶಸ್ಸನ್ನು ಕಂಡಿದೆ.

ಎಂಜಿನ್ ಮಾಹಿತಿ
ನೂತನ ಆಡಿ ಕ್ಯೂ3 ಎಸ್ ಆವೃತ್ತಿಯು 2.0 ಲೀಟರ್ ಡೀಸೆಲ್ ಎಂಜಿನ್ ಪಡೆದುಕೊಳ್ಳಲಿದ್ದು, ಇದು 140 ಬಿಎಚ್‌ಪಿ ಉತ್ಪಾದಿಸುವ ಸಾಮರ್ಥ್ಯ ಹೊಂದಿರಲಿದೆ. ಹಾಗೆಯೇ ಆರು ಸ್ಪೀಡ್ ಮ್ಯಾನುವಲ್ ಗೇರ್ ಬಾಕ್ಸ್ ಹೊಂದಿದೆ.

ವೈಶಿಷ್ಟ್ಯ
ಲೆಥರ್ ಸೀಟ್, ಕ್ರೂಸ್ ಕಂಟ್ರೋಲ್, ವಾಯ್ಸ್ ಡೈಲಾಗ್ ಸಿಸ್ಟಂ, ಕ್ಲೈಮೇಟ್ ಕಂಟ್ರೋಲ್, ಎಂಎಂಐ ಜತೆಗೆ ಬ್ಲೂಟೂತ್ ಕನೆಕ್ಟಿವಿಟಿ ಹಾಗೆಯೇ 18 ಇಂಚು ಅಲಾಯ್ ವೀಲ್‌ಗಳಂತಹ ಫೀಚರ್ಸ್ ಹೊಂದಿದೆ. ಹಾಗಿದ್ದರೂ ಡೇಟೈಮ್ ರನ್ನಿಂಗ್ ಎಲ್‌ಇಡಿ ಲ್ಯಾಂಪ್‌ಗಳನ್ನು ಮಿಸ್ ಮಾಡಿಕೊಳ್ಳುತ್ತಿದೆ.

ಸೇಫ್ಟಿ ಫೀಚರ್ಸ್
ಇನ್ನು ಸುರಕ್ಷತೆಗೂ ಹೆಚ್ಚಿನ ಆದ್ಯತೆ ಕೊಡಲಾಗಿದ್ದು, ಆರು ಏರ್ ಬ್ಯಾಗ್, ಎಬಿಎಸ್, ಇಎಸ್‌ಪಿ, ಕ್ರೂಸ್ ಕಂಟ್ರೋಲ್, ರಿಯರ್ ಪಾರ್ಕಿಂಗ್ ಅಸಿಸ್ಟಂಟ್‌ಗಳಂತಹ ಫೀಚರ್‌ಗಳನ್ನು ಹೊಂದಿದೆ.

ಕಂಪ್ಲೀಟ್ ನಾಕ್ಡ್ ಡೌನ್ (ಸಿಕೆಡಿ) ಮುಖಾಂತರ ಕ್ಯೂ3 ಎಸ್ ಹೊರತಂದಿರುವುದು ಸ್ಮರ್ಧಾತ್ಮಕ ದರಗಳಲ್ಲಿ ಮಾರುಕಟ್ಟೆಗೆ ಪರಿಚಯಿಸಲು ಆಡಿಗೆ ನೆರವಾಗಿದೆ. ಇದು ತನ್ನ ಔರಂಗಾಬಾದ್ ಘಟಕದಲ್ಲಿ ಕ್ಯೂ3 ಎಸ್ ಕಾರನ್ನು ತಯಾರಿಸಲಿದೆ.

ತ್ವರೆ ಮಾಡಿರಿ
ಈ ನಡುವೆ ಆನ್‌ಲೈನ್ ಮುಖಾಂತರ ಆಡಿ ಕ್ಯೂ3 ಎಸ್ ಬುಕ್ಕಿಂಗ್ ಮಾಡುವ ಮೊದಲ ಹತ್ತು ಗ್ರಾಹಕರಿಗೆ ಆಫ್ ರೋಡ್ ಪ್ಯಾಕೇಜ್ ನೀಡುವುದಾಗಿ ಆಡಿ ಘೋಷಿಸಿದೆ.


Click it and Unblock the Notifications