ಬೆಂಗ್ಳೂರಲ್ಲಿ ರಂಗೇರಿದ 2014 ಆಡಿ ಸ್ಪೋರ್ಟ್ಸ್ ಕಾರು ಅನುಭವ
ಕರ್ನಾಟಕ ರಾಜಧಾನಿ ಬೆಂಗಳೂರಿನಲ್ಲಿ ನಡೆದ 2014 ಆಡಿ ಸ್ಪೋರ್ಟ್ಸ್ ಕಾರು ಅನುಭವ ಆದ್ಧೂರಿಯಾಗಿ ಸಂಪನ್ನಗೊಂಡಿದೆ. ಈ ಮೂಲಕ ಜನವರಿ 25 ಹಾಗೂ 26ರಂದು (ಶನಿವಾರ ಹಾಗೂ ಭಾನುವಾರ) ನೈಸ್ ರಸ್ತೆಯಲ್ಲಿ ನಡೆದ ಕಾರ್ಯಕ್ರಮದಲ್ಲಿ 100ಕ್ಕೂ ಹೆಚ್ಚು ಮಂದಿ ಆಡಿ ಸ್ಪೋರ್ಟ್ಸ್ ಕಾರು ಅನುಭವ (ಎಎಸ್‌ಇ) ಗಿಟ್ಟಿಸಿಕೊಳ್ಳುವಲ್ಲಿ ಯಶಸ್ವಿಯಾಗಿದ್ದಾರೆ.
ದೇಶದ ಐಷಾರಾಮಿ ಕಾರು ಸಂಸ್ಥೆಗಳಲ್ಲಿ ಒಂದಾಗಿರುವ ಆಡಿ ಉತ್ಸಾಹಿ ಗ್ರಾಹಕರು ಆಡಿ ಟಿಟಿ, ಆಡಿ ಆರ್‌ಎಸ್5 ಮತ್ತು ಆಡಿ ಎಸ್4 ಸ್ಪೋರ್ಟ್ಸ್ ಕಾರನ್ನು ಚಾಲನಾ ಅನುಭವ ಗಿಟ್ಟಿಸಿಕೊಳ್ಳುವ ಸುವರ್ಣಾವಕಾಶವನ್ನು ತಮ್ಮದಾಗಿಸಿಕೊಂಡರು. ಆಡಿ ಕ್ಯೂ5 ಎಸ್‌ಯುವಿ ಸಹ ಕಾರ್ಯಕ್ರಮದ ಭಾಗವಾಗಿತ್ತು.

ಈ ಎಲ್ಲದರ ನಡುವೆ ಆಡಿ ಆರ್8 ವಿ10 ಕಾರು ಜತೆಗೂ ಫೋಟೊ ಕ್ಲಿಕ್ಕಿಸುವ ಅವಕಾಶವನ್ನು ಗ್ರಾಹಕರು ಪಡೆದುಕೊಂಡರು. ಈ ದುಬಾರಿ ಕಾರು ಪ್ರದರ್ಶನಕ್ಕಷ್ಟೇ ಸೀಮಿತವಾಗಿತ್ತು.

ಇದು ಕೇವಲ ಗರಿಷ್ಠ ನಿರ್ವಹಣಾ ಕಾರಿನ ಚಾಲನಾ ಅನುಭವ ಮಾತ್ರವಾಗಿರಿರಲಿಲ್ಲ. ಬದಲಾಗಿ ನುರಿತ ರೇಸಿಂಗ್ ಚಾಲಕರಿಂದ ಕಾರು ಹ್ಯಾಂಡ್ಲಿಂಗ್ ಮಾಡುವ ವಿಧ ಮತ್ತು ಸುರಕ್ಷತೆಯ ಬಗ್ಗೆಯೂ ಹಲವಾರು ವಿಚಾರಗಳನ್ನು ತಿಳಿದುಕೊಳ್ಳುವಲ್ಲಿಯೂ ನೆರವಾಗಿತ್ತು.

ಬುದ್ಧ ಅಂತರಾಷ್ಟ್ರೀಯ ಸರ್ಕ್ಯೂಟ್ ಸೇರಿದಂತೆ ದೇಶದ 14 ನಗರಗಳಲ್ಲಿ ಆಡಿ ಸ್ಪೋರ್ಟ್ಸ್ ಕಾರು ಡೈವಿಂಗ್ ಅನುಭವ ಆಯೋಜಿಸಲಾಗಿತ್ತು. ಈ ಮೂಲಕ ಕಾರು ಪ್ರೇಮಿಗಳು ಜೀವಮಾನ ಅನುಭವ ಪಡೆಯುವಲ್ಲಿ ಯಶಸ್ವಿಯಾಗಿದ್ದಾರೆ.

ಈ ಅತಿ ವಿಶೇಷ ಸಮಾರಂಭದಲ್ಲಿ ಭಾಗವಹಿಸಲು ನಮ್ಮ ಡ್ರೈವ್ ಸ್ಪಾರ್ಕ್ ತಂಡವು ಸಹ ಅವಕಾಶ ಗಿಟ್ಟಿಸಿಕೊಂಡಿತ್ತಲ್ಲದೆ ರಾಷ್ಟ್ರೀಯ ಚಾಂಪಿಯನ್ ದೀಪಕ್ ಪಾಲ್ ಚಿನ್ನಪ್ಪ ಅವರ ಜತೆಗೂ ಡ್ರೈವಿಂಗ್ ಸೀಟು ಹಂಚಿಕೊಳ್ಳಲು ಅವಕಾಶವನ್ನು ಪಡೆದಿತ್ತು.

ಬೆಳೆದು ಬರುತ್ತಿರುವ ಭಾರತ ಮಾರುಕಟ್ಟೆಯಲ್ಲಿ ಐಷಾರಾಮಿ ಕಾರುಗಳ ಜತೆಗೂ ಕ್ರೀಡಾ ಕಾರುಗಳ ಬಗ್ಗೆಯೂ ಕ್ರೇಜ್ ಹೆಚ್ಚುತ್ತಿದೆ. ಪ್ರಮುಖವಾಗಿಯೂ ದೇಶದ ಯುವ ಗ್ರಾಹಕರು ನಿರ್ವಹಣಾ ಕಾರುಗಳನ್ನು ಹೆಚ್ಚು ಇಷ್ಟಪಡುವುದು ಇದಕ್ಕೆ ಕಾರಣವಾಗಿದೆ.

ನಿಮ್ಮ ಮಾಹಿತಿಗಾಗಿ, ಆಡಿ ಟಿಟಿ ಸ್ಪೋರ್ಟ್ಸ್ ಕಾರಿನ ಬೆಂಗಳೂರು ಎಕ್ಸ್ ಶೋ ರೂಂ ದರ 53.19 ಲಕ್ಷ ರು.ಗಳಾಗಿವೆ. ಇದರಲ್ಲಿ 2.0 ಟಿಎಫ್‌ಎಸ್‌ಐ ಎಂಜಿನ್ ಆಳವಡಿಸಲಾಗಿದೆ.

ಇನ್ನೊಂದೆಡೆ ಜರ್ಮನಿಯ ಐಷಾರಾಮಿ ಕಾರು ತಯಾರಕ ಸಂಸ್ಥೆಯಾಗಿರುವ ಆಡಿಯ ಅತ್ಯಂತ ದುಬಾರಿ ಕಾರುಗಳಲ್ಲಿ ಒಂದಾಗಿರುವ ಆಡಿ ಆರ್‌ಎಸ್5 ಬೆಂಗಳೂರು ಎಕ್ಸ್ ಶೋ ರೂಂ ದರ 96.84 ಲಕ್ಷ ರು.ಗಳಾಗಿವೆ.

4.2 ಲೀಟರ್ ವಿ8 ಎಂಜಿನ್‌ನಿಂದ ನಿಯಂತ್ರಿಸಲ್ಪಡುವ ಆಡಿ ಆರ್‌ಎಸ್5 ಕೇವಲ 4.5 ಸೆಕೆಂಡುಗಳಲ್ಲಿ 0-100 ಕೀ.ಮೀ. ಅಂತೆಯೇ ಗಂಟೆಗೆ ಗರಿಷ್ಠ 280 ಕೀ.ಮೀ. ವೇಗವರ್ಧಿಸುವ ಸಾಮರ್ಥ್ಯ ಹೊಂದಿದೆ. ವಿಶ್ವದರ್ಜೆಯ ವಿನ್ಯಾಸ, ಎಲ್‌ಇಡಿ ಟೈಲ್ ಲೈಟ್, 19 ಇಂಚು ಅಲಾಯ್ ವೀಲ್‌ಗಳು ಆಡಿ ಆರ್‌ಎಸ್5 ಕಾರನ್ನು ವಿಭಿನ್ನವಾಗಿಸುತ್ತದೆ.

ಇನ್ನುಳಿದಂತೆ ಬೆಂಗಳೂರು ಎಕ್ಸ್ ಶೋ ರೂಂ 51.22 ಲಕ್ಷ ರು.ಗಳಲ್ಲಿ ಆಗಮನವಾಗಿರುವ ಆಡಿ ಎಸ್4ನಲ್ಲಿ ವಿ6 3.0 ಟಿಎಫ್‌ಎಸ್‌ಐ ಎಂಜಿನ್ ಆಳವಡಿಸಲಾಗಿದೆ.


Click it and Unblock the Notifications








