ಮಹೀಂದ್ರ ಸ್ಕಾರ್ಪಿಯೊ ಹೈಬ್ರಿಡ್ ಕಾರು ಬರುತ್ತಂತೆ!
ದೇಶದ ಅತಿದೊಡ್ಡ ವಿದ್ಯುತ್ ಚಾಲಿತ ವಾಹನ ತಯಾರಕ ಸಂಸ್ಥೆಯಾಗಿರುವ ಮಹೀಂದ್ರ, ತನ್ನ ಎಲೆಕ್ಟ್ರಿಕ್ ವಾಹನಗಳನ್ನು ಇತರ ಸೆಗ್ಮೆಂಟ್‌ಗಳಿಗೂ ವಿಸ್ತರಿಸುವ ಬೃಹತ್ ಯೋಜನೆ ಹೊಂದಿದೆ.
ವಾಹನೋದ್ಯಮದ ಕ್ಷಣ ಕ್ಷಣ ಸುದ್ದಿಗಳಿಗಾಗಿ ಇಲ್ಲಿ ಭೇಟಿ ಕೊಡುತ್ತಿರಿ
ಇತ್ತೀಚೆಗಷ್ಟೇ ಮಹೀಂದ್ರ ವೆರಿಟೊ ಎಲೆಕ್ಟ್ರಿಕ್ ಗಾಡಿ ಮುಂದಿನ ಕೆಲವು ತಿಂಗಳುಗಳಲ್ಲೆ ರಸ್ತೆ ಪ್ರವೇಶಿಸುವುದಾಗಿ ಮಾಹಿತಿ ನೀಡಿದ್ದೆವು. ಈ ನಡುವೆ ಇದಕ್ಕೂ ಸಿಹಿಯಾದ ಇನ್ನೊಂದು ಸುದ್ದಿ ಬಂದಿದ್ದು, ದೇಶದ ಎಸ್‌ಯುವಿ ದೈತ್ಯ ಮಹೀಂದ್ರ, ತನ್ನ ಜನಪ್ರಿಯ ಕ್ರೀಡಾ ಉತ್ಪಾದಕ ವಾಹನಗಳಲ್ಲಿ ಒಂದಾಗಿರುವ ಸ್ಕಾರ್ಪಿಯೊಗೆ ಹೈಬ್ರಿಡ್ ಟಚ್ ನೀಡಲಿದೆ. ನಿಜಕ್ಕೂ ಇದು ದೇಶದ ವಾಹನೋದ್ಯಮದಲ್ಲಿ ಕ್ರಾಂತಿಕಾರಿ ಬದಲಾವಣೆಯಾಗಿರಲಿದೆ. ಈ ಮಹತ್ತರ ಯೋಜನೆಗೆ ಮಹೀಂದ್ರದ ಎಲೆಕ್ಟ್ರಿಕ್ ವಿಭಾಗವಾದ ರೇವಾ ಚುಕ್ಕಾಣಿ ಹಿಡಿಯಲಿದೆ.
ಸಬ್ಸಿಡಿ ದೊರಕದ ಹಿನ್ನಲೆಯಲ್ಲಿ ಒಂದು ಹಂತದಲ್ಲಿ ಎಲೆಕ್ಟ್ರಿಕ್ ಕಾರಿನ ಯೋಜನೆಯನ್ನು ಕೈಬಿಡುವುದಾಗಿ ಎಚ್ಚರಿಸಿದ್ದ ಮಹೀಂದ್ರ ಇತ್ತೀಚೆಗಿನ ಬೆಳವಣಿಗೆಯಿಂದ ಮತ್ತೆ ಚೇತರಿಸಿಕೊಂಡಿದೆ. ಕೆಲವು ದಿನಗಳ ಹಿಂದೆಯಷ್ಟೇ ಸರಕಾರದಿಂದ ಪೂರಕ ನಿಲುವು ಬಂದಿತ್ತಲ್ಲದೆ 2020ರ ವರೆಗೆ ಬರೋಬ್ಬರಿ 2000 ಕೋಟಿ ಹೂಡಿಕೆ ಹೂಡುವ ಯೋಜನೆಯಿರುವುದಾಗಿ ಘೋಷಿಸಿತ್ತು.

ಸದ್ಯ ಬಂದಿರುವ ಮಾಹಿತಿಗಳ ಪ್ರಕಾರ, ವಿಶ್ವದಲ್ಲೇ ಅತ್ಯಂತ ಕಡಿಮೆ ವೆಚ್ಚದಲ್ಲಿ ಎಲೆಕ್ಟ್ರಿಕ್ ವಾಹನ ಸಿದ್ಧಪಡಿಸಿರುವ (ಇ2ಒ) ಖ್ಯಾತಿಗೆ ಪಾತ್ರವಾಗಿರುವ ಮಹೀಂದ್ರ, ಮುಂಬರುವ ದೆಹಲಿ ಆಟೋ ಎಕ್ಸ್ ಪೋದಲ್ಲಿ ಹೈಬ್ರಿಡ್ ಎಸ್‌ಯುವಿ ಕಾರಿನ ಕಾನ್ಸೆಪ್ಟ್ ಪ್ರದರ್ಶಿಸಲು ಸಿದ್ಧವಾಗುತ್ತಿದೆ.

ಮ್ಯಾನುವಲ್ ಟ್ರಾನ್ಸ್‌ಮಿಷನ್ ವಾಹನಗಳಿಗೂ ಆಳವಡಿಕೆಯಾಗುವಂತಹ ಹೈಬ್ರಿಡ್ ತಂತ್ರಜ್ಞಾನ ಅಭಿವೃದ್ಧಿಯಲ್ಲಿ ಮಹೀಂದ್ರ ತೊಡಗಿದೆ. ಅಂದ ಹಾಗೆ ನಾವು ಇದುವರೆಗೆ ನೋಡಿರುವಂತೆಯೇ ಎಲೆಕ್ಟ್ರಿಕ್ ಗಾಡಿಗಳು ಆಟೋಮ್ಯಾಟಿಕ್ ಅಥವಾ ಸೆಮಿ ಆಟೋಮ್ಯಾಟಿಕ್ ಟ್ರಾನ್ಸ್‌ಮಿಷನ್‌ಗಳನ್ನು ಹೊಂದಿರುತ್ತದೆ.

ಹಾಗಾಗಿ ಮಹೀಂದ್ರ ನೂತನ ತಂತ್ರಜ್ಞಾನ ಹೇಗಿರುತ್ತೆ ಎಂಬುದು ಕುತೂಹಲವೆನಿಸಿದೆ. ವರದಿಗಳ ಪ್ರಕಾರ ಮಹೀಂದ್ರ ಹೈಬ್ರಿಡ್ ತಂತ್ರಗಾರಿಕೆಯು ಶೇಕಡಾ 20ರಷ್ಟು ಅಧಿಕ ಇಂಧನ ಕ್ಷಮತೆ ನೀಡಲಿದೆ.

ನಿಮ್ಮ ಮಾಹಿತಿಗಾಗಿ, ಮಹೀಂದ್ರ ಈಗಾಗಲೇ ಸ್ಕಾರ್ಪಿಯೊ ಹಾಗೂ ಎಕ್ಸ್‌ಯುವಿ500ನಲ್ಲಿ ಮೈಕ್ರೋ ಹೈಬ್ರಿಡ್ ತಂತ್ರಜ್ಞಾನ ಆವಿಷ್ಕರಿಸಿದೆ. ಇದು ನಿಜವಾಗಿಯೂ ಹೈಬ್ರಿಡ್ ತಂತ್ರಜ್ಞಾನವಲ್ಲ. ಬದಲಾಗಿ ಸ್ಟಾಟ್/ಸ್ಟಾಪ್ ಸಿದ್ಧಾಂತವಾಗಿದ್ದು, ಬ್ರೇಕ್ ಅದುಮಿದಾಗ ಸ್ವಯಂ ಚಾಲಿತವಾಗಿ ಎಂಜಿನ್‌ಗೆ ಹಾದು ಹೋಗಲಿರುವ ಪವರ್ ಕಡಿತಗೊಳ್ಳಲಿದೆ. ಅದೇ ರೀತಿ ಬ್ರೇಕ್ ಮೇಲಿಂದ ಕಾಲು ತೆಗೆದಾಗ ರಿಸ್ಟಾರ್ಟ್ ಆಗಲಿದೆ. ಈ ಮೂಲಕ ಶೇಕಡಾ 5ರಷ್ಟು ಇಂಧನ ಉಳಿತಾಯ ಮಾಡಬಹುದಾಗಿದೆ.

ಇನ್ನೊಂದೆಡೆ ಹೊಸ ಸಿದ್ಧಾಂತವು ಸಂಪೂರ್ಣ ಹೈಬ್ರಿಡ್ ತಂತ್ರಜ್ಞಾನವಾಗಿರಲಿದ್ದು, ಟೊಯೊಟಾ ಪ್ರಯಸ್‌ಗಳಲ್ಲಿ ಕಂಡುಬರುವುದಕ್ಕೆ ಸಮಾನವಾಗಿರಲಿದೆ.

ಈಗಾಗಲೇ ತಾಂತ್ರಿಕ ಜತೆಗಾರರೊಂದಿಗೆ ಕೈಜೋಡಿಸಿಕೊಂಡಿರುವ ಮಹೀಂದ್ರ, ನೂತನ ತಂತ್ರಜ್ಞಾನ ಅಭಿವೃದ್ಧಿಯಲ್ಲಿ ತೊಡಗಿದೆ. ಇದರಲ್ಲಿ ಲಿಥಿಯಂ ಇಯಾನ್ ಬ್ಯಾಟರಿ ವಿತರಿಸಲು ಸ್ಯಾಮ್‌ಸ್ಯಾಂಗ್ ಎಸ್‌ಡಿಐ ಹಾಗೂ ಜರ್ಮನಿಯ ಆಟೋ ಘಟಕ ತಯಾರಕ ಝಡ್‌ಎಫ್ ಮತ್ತು ಟೈರ್ ಉತ್ಪಾದಕ ಕಾಂಟಿನೆಂಟಲ್ ಸೇರಿಕೊಂಡಿದೆ.

ಒಟ್ಟಿನಲ್ಲಿ ಪರಿಸರ ಸ್ನೇಹಿ ವಿದ್ಯುತ್ ಚಾಲಿತ ವಾಹನಗಳ ಉತ್ಪಾದನೆಗೆ ಮಹೀಂದ್ರ ದಿಟ್ಟ ಹೆಜ್ಜೆಯನ್ನಿಟ್ಟಿದೆ. ಇದಕ್ಕ ಸರಕಾರದಿಂದ ಪೂರಕ ನೆರವು ದೊರೆತ್ತಲ್ಲಿ ಮುಂದಿನ ದಿನಗಳಲ್ಲಿ ದೇಶದ ರಸ್ತೆಗಳಲ್ಲಿ ಹೆಚ್ಚೆಚ್ಚು ಮಾಲಿನ್ಯ ಹಾಗೂ ಶಬ್ದ ರಹಿತ ವಿದ್ಯುತ್ ಚಾಲಿತ ವಾಹನಗಳು ಓಡಾಡುವುದನ್ನು ಕಾಣಬಹುದಾಗಿದೆ.


Click it and Unblock the Notifications








