ಬಸ್ಸಿಗೆ ಢಿಕ್ಕಿ ಹೊಡೆದ ಲಂಬೋ; ಚಾಲಕ ಅದೃಷ್ಟವಶಾತ್ ಪಾರು
ನೆರೆಯ ಚೀನಾ ರಾಷ್ಟ್ರದಲ್ಲಿ ನಡೆದ ಅಪಘಾತವೊಂದರಲ್ಲಿ ಜಗತ್ತಿನ ಅತಿ ಜನಪ್ರಿಯ ಸೂಪರ್ ಕಾರುಗಳಲ್ಲಿ ಒಂದಾಗಿರುವ ಲಂಬೊರ್ಗಿನಿ ಅವೆಂಟಡೊರ್, ಬಸ್ಸಿಗೆ ಮುಖಾಮುಖಿ ಢಿಕ್ಕಿಯಾದ ಘಟನೆಯೊಂದು ವರದಿಯಾಗಿದೆ.
ಆದರೆ ಈ ದುರ್ಘಟನೆಯಿಂದ ಚಾಲಕ ಅದೃಷ್ಟವಶಾತ್ ಪಾರಾಗುವಲ್ಲಿ ಯಶಸ್ವಿಯಾಗಿದ್ದಾರೆ. ಆದರೆ ಇಲ್ಲಿ ಗಮನಿಸಬೇಕಾದ ಅಂಶವೆಂದರೆ ಗಂಟೆಗೆ 80 ಕೀ.ಮೀ. ವೇಗದಲ್ಲಿ ಸಂಚರಿಸುವಾಗ ಅಪಘಾತ ಸಂಭವಿಸಿದೆ. ಹಾಗಿದ್ದರೂ ವಿಶ್ವದರ್ಜೆಯ ಬಿಡಿಭಾಗಗಳಿಂದ ನಿರ್ಮಿಸಲಾಗಿರುವ ಲಂಬೊರ್ಗಿನಿ ಸಂಪೂರ್ಣ ನಜ್ಜುಗುಜ್ಜಾಗಿರುವುದು ಅನುಮಾನಕ್ಕೆ ಎಡೆಮಾಡಿಕೊಟ್ಟಿದೆ.

ವರದಿಗಳ ಪ್ರಕಾರ ಚೀನಾದ ಅನ್‌ಹುಯಿ ಪ್ರಾಂತ್ಯದ ಹೆಫೈ ನಗರದಲ್ಲಿ ದುರಂತ ಸಂಭವಿಸಿದೆ. ಕಾರನ್ನು ಓವರ್‌ಟೇಕ್ ಮಾಡುವ ಗೋಜಿಗೆ ಹೋಗಿರುವ ಲಂಬೊರ್ಗಿನಿ ಅವೆಂಟಡೊರ್ ಎದುರುಗಡೆಯಿಂದ ಬರುತ್ತಿದ್ದ ಬಸ್ಸಿಗೆ ಢಿಕ್ಕಿಯಾಗಿದೆ.

ಪ್ರಾಥಮಿಕ ವರದಿಗಳ ಪ್ರಕಾರ ಗಂಟೆಗೆ 80 ಕೀ.ಮೀ. ವೇಗದಲ್ಲಿ ಲಂಬೊರ್ಗಿನಿ ಅವೆಂಟಡೊರ್ ಸಂಚರಿಸುತ್ತಿತ್ತು. ಆದರೆ ಕಾರು ಸಂಪೂರ್ಣ ನಜ್ಜುಗುಜ್ಜಾಗಿರುವುದು ಅನುಮಾನಕ್ಕೆ ಕಾರಣವಾಗಿದೆ.

ಗರಿಷ್ಠ ಸುರಕ್ಷಾ ಮಾನದಂಡಗಳನ್ನು ಹೊಂದಿರುವ ಲಂಬೊರ್ಗಿನಿ ಅವೆಂಟಡೊರ್ ಎಲ್‌ಪಿ700-4 ಮುಂಭಾಗವು ಸಂಪೂರ್ಣ ಚೂರು ಚೂರಾಗಿದೆ.

ಆದರೆ ಗಂಟೆಗೆ 300 ಕೀ.ಮೀ.ಗಳಷ್ಟು ವೇಗತೆಯಲ್ಲಿ ಸಂಚರಿಸಲು ಸಾಮರ್ಥ್ಯವುಳ್ಳ ಲಂಬೊರ್ಗಿನಿ ಇಷ್ಟು ಕಡಿಮೆ ವೇಗದಲ್ಲಿ ಸಂಚರಿಸಿರುವ ಹೊರತಾಗಿಯೂ ಸಂಪೂರ್ಣವಾಗಿ ಹೊಡೆದು ಹೋಗಿರುವುದು ಸಂದೇಹಕ್ಕೆ ಕಾರಣವಾಗಿದೆ.

ಹಾಗಿದ್ದರೂ ನಿಖರ ಸುರಕ್ಷತಾ ಮಾನದಂಡಗಳಿಂದಾಗಿ ಲಂಬೊರ್ಗಿನಿ ಕಾರು ಚಾಲಕ ಪಾರಾಗುವಲ್ಲಿ ಯಶಸ್ವಿಯಾಗಿದ್ದಾರೆ. ಇನ್ನೊಂದೆಡೆ ಬಸ್ ಚಾಲಕರಿಗೆ ಸಣ್ಣ ಪುಟ್ಟ ಗಾಯಗಳಾಗಿವೆ.

ಮಗದೊಂದು ಕುತೂಹಲಕಾರಿ ಅಂಶವೆಂದರೆ ಲಂಬೊರ್ಗಿನಿ ಅವೆಂಟಡೊರ್ ಸೂಪರ್ ಕಾರಿನಲ್ಲಿ ಲೈಸನ್ಸ್ ಪ್ಲೇಟ್ ಹಾಕಿಸದೆಯೇ ಚಲಾಯಿಸಲಾಗಿತ್ತು. ಇದು ಕಾನೂನು ಪ್ರಕಾರ ಅಪರಾಧವಾಗಿದ್ದು ಪೊಲೀಸರು ದೂರು ದಾಖಲಿಸಿಕೊಂಡಿದ್ದಾರೆ.

ಒಟ್ಟಿನಲ್ಲಿ ಸಂಪೂರ್ಣವಾಗಿ ಒಡೆದು ಹೋಗಿರುವ ಲಂಬೊರ್ಗಿನಿ ಅವೆಂಟಡೊರ್ ಕಾರನ್ನು ಗ್ಯಾರೇಜ್‌ಗೆ ರವಾನಿಸಲಾಗಿದ್ದು, ರಿಪೇರಿ ಮಾಡುವ ಪ್ರಯತ್ನದಲ್ಲಿ ತೊಡಗಿದ್ದಾರೆ.


Click it and Unblock the Notifications








