ಮಾರುತಿ ಆಲ್ಟೊ 25 ಲಕ್ಷ ಮಾರಾಟ; ಯಾಕೆ ಇಷ್ಟು ಫೇಮಸ್ಸು?
ದೇಶದ ಅತ್ಯಂತ ಯಶಸ್ವಿ ಕಾರೆಂಬ ಪಟ್ಟ ಗಿಟ್ಟಿಸಿಕೊಂಡಿರುವ ಮಾರುತಿ ಸುಜುಕಿ ಆಲ್ಟೊ ಇದೀಗ ಮತ್ತೊಂದು ಮೈಲುಗಲ್ಲು ಸ್ಥಾಪಿಸಿದೆ. ಹೌದು, ಈ ಸಣ್ಣ ಹ್ಯಾಚ್‌ಬ್ಯಾಕ್ ಕಾರು 25 ಲಕ್ಷ ಯುನಿಟ್‌ಗಳ ಮೈಲುಗಲ್ಲನ್ನು ಸ್ಥಾಪಿಸಿದೆ.
ಕೈಗೆಟಕುವ ದರ, ನಿರ್ವಹಣೆ, ಮೈಲೇಜ್ ಹೀಗೆ ಹತ್ತು ಹಲವಾರು ವಿಚಾರಗಳಲ್ಲಿ ಮಾರುತಿ ಸುಜುಕಿ ಆಲ್ಟೊ ಎಂಟ್ರಿ ಲೆವೆಲ್ ಕಾರು ತನ್ನ ಇತರ ಪ್ರತಿಸ್ಪರ್ಧಿಗಳನ್ನು ಹಿಂದಿಕ್ಕುವಲ್ಲಿ ಯಶಸ್ವಿಯಾಗಿತ್ತು. ದಶಕಗಳೇ ಕಳೆದರೂ ಈಗಲೂ ಮಾರಾಟದ ವಿಚಾರದಲ್ಲಿ ನಂ.1 ಪಟ್ಟ ಕಾಯ್ದುಕೊಂಡಿರುವುದು ಆಲ್ಟೊ ಯಶಸ್ಸಿಗೆ ಕೈಗನ್ನಡಿಯಾಗಿದೆ.

ನಿಮ್ಮ ಮಾಹಿತಿಗಾಗಿ, 2000ನೇ ಇಸವಿಯಲ್ಲಿ ಲಾಂಚ್ ಆಗಿದ್ದ ಮಾರುತಿ ಆಲ್ಟೊ 14 ವರ್ಷಗಳೇ ಕಳೆದರೂ ಅದೇ ಆವೇಗವನ್ನು ಕಾಪಾಡಿಕೊಂಡು ಬಂದಿದೆ. ಗ್ರಾಹಕರು ಮಾರುತಿ ಬ್ರಾಂಡ್ ಮೇಲೆ ಇಟ್ಟಿರುವ ನಿಷ್ಠೆಯೇ ಇದಕ್ಕೆ ಕಾರಣವಾಗಿದೆ.

ಮಾರುತಿ ಆಲ್ಟೊ, 800 ಸಿಸಿ 3 ಸಿಲಿಂಡರ್ ಪೆಟ್ರೋಲ್ ಎಂಜಿನ್‌ನಿಂದ ನಿಯಂತ್ರಿಸಲ್ಪಡುತ್ತಿದ್ದು, 47 ಬಿಎಚ್‌ಪಿ ಪವರ್ ಉತ್ಪಾದಿಸುತ್ತಿದೆ. ಸಂಸ್ಥೆಯು ಮೊದಲ ನಾಲ್ಕು ವರ್ಷಗಳಲ್ಲಿ ಒಂದು ಲಕ್ಷ ಯುನಿಟ್‌ಗಳ ಮಾರಾಟವನ್ನು ತಲುಪಿತ್ತು.

ಇದಕ್ಕೂ ಮೊದಲು 2001ನೇ ಇಸವಿಯಲ್ಲಿ ಲಾಂಚ್ ಆಗಿದ್ದ 1.1 ಲೀಟರ್, 4 ಸಿಲಿಂಡರ್ (67 ಬಿಎಚ್‌ಪಿ) ವರ್ಷನ್ ಮಾರಾಟವನ್ನು 2004ನೇ ನಿಲುಗಗಡೆಗೊಳಿಸಲಾಗಿತ್ತು.

ಬಳಿಕ 2010ರಲ್ಲಿ ಆಲ್ಟೊ ಕೆ10 ಮೂಲಕ 1.0 ಲೀಟರ್ 3 ಸಿಲಿಂಡರ್ ಎಂಜಿನ್ (67 ಬಿಎಚ್‌ಪಿ) ಮರು ಪರಿಚಯಿಸಲಾಗಿತ್ತು. ಇದು ಕೇವಲ ನಾಲ್ಕು ವರ್ಷಗಳಲ್ಲೇ 4 ಲಕ್ಷ ಮಾರಾಟವನ್ನು ತಲುಪುವಲ್ಲಿ ಯಶಸ್ವಿಯಾಗಿತ್ತು.

ಆಲ್ಟೊದ ಮಗದೊಂದು 800 ವೆರಿಯಂಟ್ 2012ನೇ ಸಾಲಿನಲ್ಲಿ ಪರಿಚಯವಾಗಿತ್ತು. ಇದು ಪರಿಷ್ಕೃತ ಎಕ್ಸ್‌ಟೀರಿಯರ್ ಜತೆಗೆ ಇಂಟಿಯರ್ ಭಾಗಗಳನ್ನು ಪಡೆದಿತ್ತು. ಹಾಗೆಯೇ ಸುಧಾರಿತ ಹೆಚ್ಚು ಇಂಧನ ಕ್ಷಮತೆಯ 800 ಸಿಸಿ ಎಂಜಿನ್ ಆಳವಡಿಸಲಾಗಿತ್ತು.

ಮಾರುತಿಯ ಪ್ರಕಾರ ಬಿಡುಗಡೆಗೊಂಡ ನಾಲ್ಕು ತಿಂಗಳಲ್ಲೇ ಆಲ್ಟೊ 800 ಒಂದು ಲಕ್ಷ ಯುನಿಟ್ ಮಾರಾಟವನ್ನು ತಲುಪಿತ್ತು. ಸಿಎನ್‌ಜಿ ವೆರಿಯಂಟ್ ಸಹ ಆಲ್ಟೊ ಮಾರಾಟಕ್ಕೆ ಉತ್ತೇಜನ ತುಂಬಿತ್ತು.

ಈ ನಡುವೆ ತನ್ನ 14 ವರ್ಷಗಳ ಪಯಣದಲ್ಲಿ ಮಾರುತಿ ಆಲ್ಟೊ, ಮೂರು ಬಾರಿ ಅಂದರೆ 2011, 2012 ಹಾಗೂ 2013ನೇ ಸಾಲಿನಲ್ಲಿ ಜಗತ್ತಿನ ಅತಿ ಹೆಚ್ಚು ಮಾರಾಟದ ಕಾರೆಂಬ ಗೌರವಕ್ಕೆ ಪಾತ್ರವಾಗಿತ್ತು.

ಅಂದ ಹಾಗೆ ಆಲ್ಟೊ ಪಯಣ ಇಲ್ಲಿಗೆ ಕೊನೆಗೊಳ್ಳುವುದಿಲ್ಲ. ಯಾಕೆಂದರೆ ಸದ್ಯದಲ್ಲೇ ಸೆಲೆರಿಯೊದಿಂದ ಕೆ10 ಬಿ ಎಂಜಿನ್ ಪಡೆದುಕೊಳ್ಳಲಿದೆ. ಇವೆಲ್ಲದಕ್ಕಿಂತಲೂ ಮಿಗಿಲಾಗಿ 2015 ವರ್ಷಾರಂಭದಲ್ಲಿ ಆಟೋಮ್ಯಾಟಿಕ್ ಆಲ್ಟೊ (ಎಎಂಟಿ) ಬಿಡುಗಡೆಯಾಗುತ್ತಿರುವುದು ವಿಶೇಷ.


Click it and Unblock the Notifications








