ಅಬ್ಬಾ ಸಾಕಾಯ್ತು; ಸೆಲೆರಿಯೊ ವೇಟಿಂಗ್, ವೇಟಿಂಗ್
ದೇಶದ ನಂ.1 ಪ್ರಯಾಣಿಕ ಕಾರು ಸಂಸ್ಥೆ, ಮಾರುತಿ ಸುಜುಕಿಯಿಂದ ಇತ್ತೀಚೆಗಷ್ಟೇ ಲಾಂಚ್ ಆಗಿದ್ದ ಸೆಲೆರಿಯೊಗೆ ದಿನದಿಂದ ದಿನದಿಂದ ಬೇಡಿಕೆ ಹೆಚ್ಚುತ್ತಲೇ ಇದೆ. ಇದಕ್ಕೆ ಪೂರಕವೆಂಬಂತೆ ಕಾಯುವಿಕೆ ಅವಧಿಯಲ್ಲೂ ಹೆಚ್ಚಳ ಕಂಡುಬಂದಿದೆ.
ಸದ್ಯ ಬಂದಿರುವ ಮಾಹಿತಿಗಳ ಪ್ರಕಾರ ಮಾರುತಿ ಸೆಲೆರಿಯೊದ ಬಹುಬೇಡಿಕೆಯ ಆಟೋಮ್ಯಾಟಿಕ್ ಮ್ಯಾನುವಲ್ ಟ್ರಾನ್ಸ್‌ಮಿಷನ್ (ಎಎಂಟಿ) ವರ್ಷನ್‌ಗಾಗಿ ಬುಕ್ ಮಾಡಿದ ಗ್ರಾಹಕರೊಬ್ಬರು ತಮ್ಮ ಕನಸಿನ ಕಾರು ಪಡೆಯುವುದಕ್ಕಾಗಿ ಆರು ತಿಂಗಳುಗಿಂತಲೂ ಹೆಚ್ಚು ಅವಧಿಗಳ ವರೆಗೂ ಕಾಯಬೇಕಾಗಿದೆ.

ಸೆಲೆರಿಯೊಗೆ ನಿರೀಕ್ಷೆಗೂ ಮೀರಿ ಪ್ರತಿಕ್ರಿಯೆ ಗಿಟ್ಟಿಸಿಕೊಳ್ಳುವಲ್ಲಿ ಮಾರುತಿ ಯಶಸ್ವಿಯಾಗಿತ್ತು. ಕೇವಲ ಆಟೋಮ್ಯಾಟಿಕ್ ಮಾತ್ರವಲ್ಲ, ಇದರ ಮ್ಯಾನುವಲ್ ವರ್ಷನ್‌ಗೂ ಉತ್ತಮ ಬೇಡಿಕೆ ವ್ಯಕ್ತವಾಗಿದೆ.

ವರದಿಗಳ ಪ್ರಕಾರ ಮಾರುತಿ ಸೆಲೆರಿಗೊ ಬುಕ್ಕಿಂಗ್ ಮಾಡಿಸಿಕೊಂಡವರು ಎಂಟು ತಿಂಗಳ ವರೆಗೆ ಕಾಯಬೇಕಾದ ಪರಿಸ್ಥಿತಿ ಎದುರಾಗಿದೆ. ಅದೇ ಹೊತ್ತಿಗೆ ಏರ್‌ಬ್ಯಾಗ್ ಸೌಲಭ್ಯವಿರುವ ಝಡ್‌ಎಕ್ಸ್‌ಐ ಮ್ಯಾನುವಲ್ ಟ್ರಾನ್ಸ್‌ಮಿಷನ್ ವೇಟಿಂಗ್ ಪಿರೀಡ್ ನಾಲ್ಕರಿಂದ ಐದು ತಿಂಗಳ ವರೆಗಿದೆ.

ಕೇವಲ ಮ್ಯಾನುವಲ್ ಟ್ರಾನ್ಸ್‌ಮಿಷನ್‌ಗಳನ್ನು ಹೊಂದಿರುವ ಬೇಸ್ ಹಾಗೂ ಮಿಡ್ ವೆರಿಯಂಟ್ ಸೆಲೆರಿಯೊ ಮಾತ್ರ ಒಂದು ತಿಂಗಳ ಅವಧಿಯಲ್ಲಿ ಗ್ರಾಹಕರನ್ನು ತಲುಪುತ್ತಿದೆ ಎಂಬುದು ಸತ್ಯ.

ಕ್ಲಚ್ ರಹಿತ ಚಾಲನೆ ಎಂದೇ ಪ್ರಖ್ಯಾತಿ ಗಿಟ್ಟಿಸಿಕೊಂಡಿರುವ ಮಾರುತಿಯ ಸೆಲೆರಿಯೊ ಆಟೋಮ್ಯಾಟಿಕ್ ಮ್ಯಾನುವಲ್ ಟ್ರಾನ್ಸ್‌ಮಿಷನ್, ಸ್ಮರ್ಧಾತ್ಮಕ ದರಗಳಲ್ಲಿ ಬಿಡುಗಡೆಯಾಗಿರುವುದೇ ಇಷ್ಟೊಂದು ಬೇಡಿಕೆ ವ್ಯಕ್ತವಾಗಲು ಕಾರಣವಾಗಿದೆ.

ವಾಹನೋದ್ಯಮ ಮೂಲಗಳ ಪ್ರಕಾರ, ಸೆಲೆರಿಯೊದಿಂದ ಮಾರಾಟವಾಗುತ್ತಿರುವ ಒಟ್ಟು ಕಾರುಗಳ ಶೇಕಡಾ ಅರ್ಧದಷ್ಟು ಮಾರಾಟವನ್ನು ಆಟೋಮ್ಯಾಟಿಕ್ ಮ್ಯಾನುವಲ್ ಟ್ರಾನ್ಸ್‌ಮಿಷನ್ ವಶಪಡಿಸಿಕೊಂಡಿದೆ.

ಆಟೋಮ್ಯಾಟಿಕ್ ಮ್ಯಾನುವಲ್ ಟ್ರಾನ್ಸ್‌ಮಿಷನ್ ಇಟಲಿಯಿಂದ ಆಮದು ಮಾಡುತ್ತಿರುವುದೇ ವಿತರಣೆ ವಿಳಂಬವಾಗುತ್ತಿರುವ ಪ್ರಮುಖ ಕಾರಣವಾಗಿದೆ. ಇದನ್ನು ಮ್ಯಾಗ್ನೆಟಿ ಮರೆಲ್ಲಿ ಸಂಸ್ಥೆ ತಯಾರಿಸುತ್ತಿದೆ. ಬೇಡಿಕೆಗಳಿನುಸಾರವಾಗಿ ನಿರ್ಮಾಣ ಹೆಚ್ಚಿಸಲು ಕಂಪನಿ ಎದುರಿಸುತ್ತಿರುವ ತೊಂದರೆಯೇ ಕಾಯುವಿಕೆ ಅವಧಿ ಹೆಚ್ಚಲು ಕಾರಣವಾಗಿದೆ.

ಈ ನಡುವೆ ಶುಭ ಸುದ್ದಿಯೊಂದು ಬಂದಿದ್ದು, ಮ್ಯಾಗ್ನೆಟಿ ಮರೆಲ್ಲಿ ದೇಶದಲ್ಲೇ ಸ್ಥಳೀಯವಾಗಿ ಕ್ಲಚ್ ರಹಿತ ಗೇರ್ ಬಾಕ್ಸ್ (ಎಎಂಟಿ) ನಿರ್ಮಾಣವನ್ನು ಆರಂಭಿಸಲಿದೆ. ಅಷ್ಟೇ ಅಲ್ಲದೆ ಮಾರುತಿಯ ಸ್ವಿಫ್ಟ್, ರಿಟ್ಜ್ ಹಾಗೂ ಡಿಜೈರ್ ಆವೃತ್ತಿಗಳಲ್ಲೂ ಎಎಂಟಿ ಪರಿಚಯವಾಗಲಿದೆ.


Click it and Unblock the Notifications








