ಟೊಯೊಟಾ ಕ್ಯಾಮ್ರಿ ಹೈಬ್ರಿಡ್ ಕಾರಿನ ಮೈಲೇಜ್ 19.16 kmpl
ನಿಮಗೆಲ್ಲರಿಗೂ ಜಾಗತಿಕವಾಗಿ ಭಾರಿ ಪರಿಣಾಮ ಬೀರುರುವ ಟೊಯೊಟಾ ಕ್ಯಾಮ್ರಿ ಹೈಬ್ರಿಡ್
ಕಾರು ಸದ್ಯದಲ್ಲೇ ಭಾರತಕ್ಕೆ ಎಂಟ್ರಿ ಕೊಡಲಿರುವ ವಿಚಾರ ತಿಳಿದಿದೆ. ಇದಕ್ಕೆ ಪೂರಕವೆಂಬಂತೆ ಭಾರತದ ವಾಹನ ಅಧ್ಯಯನ ಸಂಸ್ಥೆಯು (ಎಆರ್‌ಎಐ) ಟೊಯೊಟಾ ಕ್ಯಾಮ್ರಿ ಹೈಬ್ರಿಡ್ ಕಾರಿಗೆ ಅಧಿಕೃತ ಮಾನ್ಯತೆ ನೀಡಿದೆ.
ಇದರಂತೆ ಬಹುನಿರೀಕ್ಷಿತ ಟೊಯೊಟಾ ಕ್ಯಾಮ್ರಿ ಹೈಬ್ರಿಡ್ ಕಾರು ಪ್ರತಿ ಲೀಟರ್‌ಗೆ 19.16 ಕೀ.ಮೀ. ಮೈಲೇಜ್ ನೀಡುವ ಸಾಮರ್ಥ್ಯ ಹೊಂದಿರಲಿದೆ ಎಂದು ಎಆರ್‌ಎಐ ಘೋಷಿಸಿದೆ. ಜಾಗತಿಕವಾಗಿ ಭಾರಿ ಯಶಸ್ಸು ಸಾಧಿಸಿರುವ ಟೊಯೊಟಾ ಕ್ಯಾಮ್ರಿ ಹೈಬ್ರಿಡ್ ಕಾರು ಈಗಾಗಲೇ 5 ದಶಲಕ್ಷಗಳಿಗಿಂತಲೂ ಹೆಚ್ಚು ಯುನಿಟ್‌ಗಳ ಮಾರಾಟವನ್ನು ಕಂಡಿದೆ.
ನಿಮ್ಮ ಮಾಹಿತಿಗಾಗಿ ಹೆಸರಲ್ಲೇ ಸೂಚಿಸಿರುವಂತೆಯೇ ಹೈಬ್ರಿಡ್ ಎಂದರೆ ಒಂಥರ ಮಿಶ್ರತಳಿ ಇದ್ದ ಹಾಗೆ...ಅಂದರೆ ಈ ನೂತನ ಕಾರಿನಲ್ಲಿ ಪೆಟ್ರೋಲ್ ಜತೆಗೆ ಎಲೆಕ್ಟ್ರಿಕ್ ಎಂಜಿನ್ ಕೂಡಾ ಇರಲಿದೆ. ಇದು ಕಾರಿಗೆ ಗರಿಷ್ಠ ನಿರ್ವಹಣೆ ನೀಡಲು ಸಹಕಾರಿಯಾಗಲಿದೆ.

ನೂತನ ಟೊಯೊಟಾ ಕ್ಯಾಮ್ರಿ ಹೈಬ್ರಿಡ್ ಕಾರು ಒಂದು ವಿದ್ಯುನ್ಮಾನ ನಿಯಂತ್ರಿತ ಮೂಲಕ ಚಾಲಿತ 2.5 ಲೀಟರ್ ಪೆಟ್ರೋಲ್ ಎಂಜಿನ್ ಹೊಂದಿರಲಿದ್ದು ಇದು 158 ಅಶ್ವಶಕ್ತಿ ಉತ್ಪಾದಿಸುವ ಸಾಮರ್ಥ್ಯ ಹೊಂದಿದೆ. ಹಾಗೆಯೇ 44 ಅಶ್ವಶಕ್ತಿ ಉತ್ಪಾದಿಸುವ ಎಲೆಕ್ಟ್ರಿಕ್ ಮೋಟಾರ್ ಕೂಡಾ ಲಗತ್ತಿಸಲಾಗಿದೆ.

ಪರಿಸರ ಸ್ನೇಹಿ
ಹೆಚ್ಚು ಪರಿಸರ ಸ್ನೇಹಿ ಕಾರು ಎಂಬ ಬಿರುದಿಗೂ ಟೊಯೊಟಾ ಕ್ಯಾಮ್ರಿ ಹೈಬ್ರಿಡ್ ಕಾರು ಪಾತ್ರವಾಗಿದೆ. ಇದು ಪ್ರತಿ ಕೀ.ಮೀ.ಗೆ ಕೇವಲ 122.8 ಗ್ರಾಂ ಮಾತ್ರ ಕಾರ್ಬನ್ ಡೈಓಕ್ಸೆಡ್ ಹೊರಸೂಸಲಿದೆ.

ಆಕರ್ಷಕ ವಿನ್ಯಾಸ
ವಿನ್ಯಾಸವನ್ನು ಗಮನಿಸಿದಾಗಲೂ ಟೊಯೊಟಾದ ಇನ್ನಿತರ ಆವೃತ್ತಿಗಿಂತಲೂ ನೂತನ ಕ್ಯಾಮ್ರಿ ಹೈಬ್ರಿಡ್ ಕಾರು ಹೆಚ್ಚು ಆಕರ್ಷಕವಾಗಿ ಗೋಚರಿಸುತ್ತಿದೆ.

ವೈಶಿಷ್ಟ್ಯ
ಸಾಮಾನ್ಯ ಪೆಟ್ರೋಲ್ ಆವೃತ್ತಿಗಳಲ್ಲಿರುವುದಕ್ಕಿಂತಲೂ ಹೆಚ್ಚಿನ ಫೀಚರ್‌ಗಳನ್ನು ನೀವಿಲ್ಲಿ ಗಮನಿಸಬಹುದು. ಇದರಲ್ಲಿ ಹಿಲ್ ಸ್ಟಾರ್ಟ್ ಅಸಿಸ್ಟ್, 3 ಜೋನ್ ಆಟೋಮ್ಯಾಟಿಕ್ ಎಸಿ, ರಿಯರ್ ಸೀಟ್ ಆರ್ಮ್ ರೆಸ್ಟ್ ಜತೆಗೆ ರಿಯರ್ ವಿಂಡ್ ಶೀಲ್ಡ್ ಸೌಲಭ್ಯವಿರಲಿದೆ.

ಕಂಪ್ಲೀಟ್ ನಾಕ್ಡ್ ಡೌನ್
ಇನ್ನು ಸಂಪೂರ್ಣವಾಗಿಯೂ ದೇಶಿಯವಾಗಿ ಜೋಡಣೆ ಮಾಡಲಿರುವುದರಿಂದ ಸ್ಮರ್ಧಾತ್ಮಕ ದರಗಳಲ್ಲಿ ಆಗಮನವಾಗಲು ಟೊಯೊಟಾಗೆ ನೆರವಾಗಲಿದೆ. ಅಂದರೆ ಕಂಪ್ಲೀಟ್ ನಾಕ್ಡ್ ಡೌನ್ (ಸಿಕೆಯು) ಮುಖಾಂತರ ದೇಶದಲ್ಲಿ ವಿತರಣೆಯಾಗಲಿದೆ.

ದರ ಮಾಹಿತಿ
ದರದ ಬಗ್ಗೆ ಯಾವುದೇ ಅಧಿಕೃತ ಮಾಹಿತಿಯನ್ನು ಕಂಪನಿ ಹೊರಗೆಡವಿಲ್ಲ. ಒಟ್ಟಿನಲ್ಲಿ ಟೊಯೊಟಾ ಕ್ಯಾಮ್ರಿ ಹೈಬ್ರಿಡ್ ಕಾರು ದೇಶದಲ್ಲಿ ಎಷ್ಟರ ಮಟ್ಟದಲ್ಲಿ ಯಶ ಸಾಧಿಸಲಿದೆ ಎಂಬುದಕ್ಕೆ ಮುಂದಿನ ದಿನಗಳಲ್ಲಿ ಉತ್ತರ ಲಭಿಸಲಿದೆ.


Click it and Unblock the Notifications








