ಟೊಯೊಟಾ ಕಿರ್ಲೊಸ್ಕರ್ ಮೋಟಾರು ಕಂಪನಿಯಿಂದ ಭಾರತದಲ್ಲಿ ಲಭ್ಯವಿರುವ ಏಕಮಾತ್ರ ಹ್ಯಾಚ್‌ಬ್ಯಾಕ್ ಕಾರೆಂದರೆ ಟೊಯೊಟಾ ಎಟಿಯೋಸ್ ಲಿವಾ. ಆದರೆ ಜಪಾನ್ ಮೂಲದ ಈ ದೈತ್ಯ ವಾಹನ ತಯಾರಿಕ ಸಂಸ್ಥೆಯು ಸದ್ಯದಲ್ಲೇ ನೂತನ ಅವತರಣಿಕೆಯೊಂದನ್ನು ಪರಿಚಯಿಸಲಿದೆ.
ಅದುವೇ ಕ್ರಾಸೋವರ್; ಬರೆ ಕ್ರಾಸೋವರ್ ಅಲ್ಲ ರಿ, 'ಟೊಯೊಟಾ ಎಟಿಯೋಸ್ ಕ್ರಾಸ್'. ಈ ಬಹುನಿರೀಕ್ಷಿತ ಕಾರು ಮುಂದಿನ ತಿಂಗಳಲ್ಲಿ ನಡೆಯಲಿರುವ ಪ್ರತಿಷ್ಠಿತ 2014 ದೆಹಲಿ ಆಟೋ ಎಕ್ಸ್ ಪೋದಲ್ಲಿ ಲಾಂಚ್ ಆಗಲಿದೆ.
ದೆಹಲಿ ಆಟೋ ಎಕ್ಸ್ ಪೋದಲ್ಲಿ ಲಾಂಚ್
ಬ್ರೆಜಿಲ್ ಹಾಗೂ ಅರ್ಜೈಂಟೀನಾದಲ್ಲಿ ಕಳೆದ ವರ್ಷದ ನವೆಂಬರ್ ತಿಂಗಳಲ್ಲೇ ಲಾಂಚ್ ಆಗಿರುವ ಎಟಿಯೋಸ್ ಕ್ರಾಸ್ ಕಳೆದ ಕೆಲವು ತಿಂಗಳುಗಳಿಂದ ಭಾರತದಲ್ಲಿ ರಸ್ತೆ ಪರೀಕ್ಷೆ ವೇಳೆ ಕ್ಯಾಮೆರಾ ರಹಸ್ಯ ಕಣ್ಣುಗಳಿಗೆ ಸೆರೆ ಸಿಕ್ಕಿದ್ದವು.
ಆಕರ್ಷಕ ವಿನ್ಯಾಸ
ಎಟಿಯೋಸ್ ಕ್ರಾಸ್ ದೇಶದಲ್ಲಿ ಕಳೆದ ವರ್ಷ ಲಾಂಚ್ ಆಗಿರುವ ಫೋಕ್ಸ್‌ವ್ಯಾಗನ್ ಕ್ರಾಸ್ ಪೊಲೊಗೆ ಸಮಾನವಾದ ಕಾರಾಗಿದೆ. ಅಂದರೆ ಸಾಮಾನ್ಯ ಎಟಿಯೋಸ್‌ಗಿಂತಲೂ ಹಲವಾರು ನೂತನ ವೈಶಿಷ್ಟ್ಯಗಳನ್ನು ಈ ಕಾರಿನಲ್ಲಿ ನಿರೀಕ್ಷಿಸಬಹುದಾಗಿದೆ.
ವೈಶಿಷ್ಟ್ಯ
ಅವುಗಳೆಂದರೆ ಮುಂದುಗಡೆ ದೊಡ್ಡದಾದ ಫ್ರಂಟ್ ಬಂಪರ್, ಹೊಸತಾದ ಅಲಾಯ್ ವೀಲ್ (ದಕ್ಷಿಣ ಅಮೆರಿಕ ವರ್ಷನ್ 10 ಸ್ಪೋಕ್ ಅಲಾಯ್ಸ್), ಫಾಕ್ಸ್ ಸಿಲ್ವರ್ ಸ್ಕಿಡ್ ಪ್ಲೇಟ್, ಪ್ಲಾಸ್ಟಿಕ್ ಸೈಡ್ ಮೌಲ್ಡಿಂಗ್, ವೀಲ್ ಆರ್ಚ್ ಪ್ಯಾಡಿಂಗ್ ಮತ್ತು ಸಿಲ್ವರ್ ರೂಫ್ ರೈಲ್.
ಆಫ್ ರೋಡ್ ?
ಇವೆಲ್ಲದರ ಫಲವಾಗಿ ಟೊಯೊಟಾ ಎಟಿಯೋಸ್ ಲಿವಾ ಹ್ಯಾಚ್‌ಬ್ಯಾಕ್ ಆಕ್ರಮಣಕಾರಿ ವಿನ್ಯಾಸ ಪಡೆದುಕೊಳ್ಳುವಲ್ಲಿ ಯಶಸ್ವಿಯಾಗಿದ್ದು, ಪಕ್ಕಾ ಆಫ್ ರೋಡ್ ಕಾರು ಎನಿಸಿಕೊಂಡಿದೆ. ಹಾಗಿದ್ದರೂ ಆಫ್ ರೋಡಿಂಗ್ ನಿರ್ವಹಣೆ ಹೆಚ್ಚಿಸಲು ಹೆಚ್ಚಿನ ಫೀಚರ್ಸ್ ಲಗತ್ತಿಸಲಾಗಿದೆಯೇ ಎಂಬುದರ ಕುರಿತಾಗಿ ಹೆಚ್ಚಿನ ವಿವರಗಳು ಲಭ್ಯವಾಗಿಲ್ಲ.
ಎಂಜಿನ್
ಇನ್ನು ಸಾಮಾನ್ಯ ಹ್ಯಾಚ್‌ಬ್ಯಾಕ್ ಆವೃತ್ತಿಯಲ್ಲಿರುವುದಕ್ಕೆ ಸಮಾನವಾದ ಎಂಜಿನ್ ಎಟಿಯೋಸ್ ಕ್ರಾಸ್‌ನಲ್ಲಿ ನಿರೀಕ್ಷಿಸಬಹುದಾಗಿದೆ. ಅಂದರೆ ಇದು 1.4 ಲೀಟರ್ ಡೀಸೆಲ್ (68 ಅಶ್ವಶಕ್ತಿ) ಮತ್ತು 1.5 ಲೀಟರ್ ಪೆಟ್ರೋಲ್ (89 ಅಶ್ವಶಕ್ತಿ) ಉತ್ಪಾದಿಸಲಿದೆ.
ಪ್ರತಿಸ್ಫರ್ಧಿ
ಅಂದ ಹಾಗೆ ಟೊಯೊಟಾ ಎಟಿಯೋಸ್ ಕ್ರಾಸ್ ರಸ್ತೆಗಿಳಿದ ತಕ್ಷಣ ಫೋಕ್ಸ್‌ವ್ಯಾಗನ್ ಕ್ರಾಸ್ ಪೊಲೊ ಮತ್ತು ಇನ್ನಷ್ಟೇ ಆಗಮನವಾಗಬೇಕಾಗಿರುವ ಫಿಯೆಟ್ ಪುಂಟೊ ಅಡ್ವೆಂಚರ್ ಕಾರಿಗೆ ನೇರ ಪ್ರತಿಸ್ಫರ್ಧಿ ಎನಿಸಿಕೊಳ್ಳಲಿದೆ.


Click it and Unblock the Notifications