ಟೊಯೊಟಾ ಫ್ಲೂಯಲ್ ಸೆಲ್ ಸೆಡಾನ್, ಸಿ-ಎಚ್ಆರ್ ಕಾನ್ಸೆಪ್ಟ್ ಪ್ರದರ್ಶನ
ಜಪಾನ್ ಮೂಲದ ದೈತ್ಯ ವಾಹನ ತಯಾರಿಕ ಸಂಸ್ಥೆಯಾಗಿರುವ ಟೊಯೊಟಾ, 2014 ಪ್ಯಾರಿಸ್ ಮೋಟಾರು ಶೋದಲ್ಲಿ ಭವಿಷ್ಯದ ಐ-ರೋಡ್ ಕಾನ್ಸೆಪ್ಟ್ ಹೊರತಾಗಿ ಅತಿ ನೂತನ ಹೈಡ್ರೋಜನ್ ಫ್ಲೂಯಲ್ ಸೆಲ್ ಸೆಡಾನ್ ಹಾಗೂ ಸಿ-ಎಚ್ಆರ್ ಕಾನ್ಸೆಪ್ಟ್ ಕಾರನ್ನು ಸಹ ಪ್ರದರ್ಶಿಸಿದೆ.
ಇಲ್ಲಿ ಗಮನಾರ್ಹ ವಿಷಯ ಏನೆಂದರೆ 20 ವರ್ಷಗಳ ನಿರಂತರ ಅಧ್ಯಯನದ ಬಳಿಕ ಭವಿಷ್ಯದ ವಾಹನ ಅಭಿವೃದ್ಧಿಪಡಿಸುವಲ್ಲಿ ಟೊಯೊಟಾ ಯಶ ಕಂಡಿದೆ. ಇದರೊಂದಿಗೆ ಭವಿಷ್ಯದ ಸಂಚಾರ ವಾಹಕ ರೂಪಿಸುವುದಲ್ಲಿ ಟೊಯೊಟಾ ತನ್ನ ಬದ್ಧತೆಯನ್ನು ಪ್ರದರ್ಶಿಸಿದೆ.

ಇದೇ ಮೊದಲ ಬಾರಿಗೆ ಪ್ಯಾರಿಸ್ ಮೋಟಾರು ಶೋದಲ್ಲಿ ಪ್ರದರ್ಶನ ಕಂಡಿರುವ ಟೊಯೊಟಾ ಫ್ಲೂಯಲ್ ಸೆಲ್ ಸೆಡಾನ್ ಕಾರಿನಲ್ಲಿ ನಾಲ್ಕು ಮಂದಿ ಪ್ರಯಾಣಿಕರಿಗೆ ಆರಾಮದಾಯಕವಾಗಿ ಪಯಣಿಸಬಹುದಾಗಿದೆ.

ಟೊಯೊಟಾ ಎಫ್‌ಸಿವಿ ಎಂದೇ ಖ್ಯಾತಿ ಪಡೆದಿರುವ ಈ ಹೈಡ್ರೋಜನ್ ನಿಯಂತ್ರಿತ ಸೆಡಾನ್ ಕಾರು ಮೊದಲ ಬಾರಿಗೆ 2013 ಟೊಕಿಯೊ ಮೋಟಾರು ಶೋದಲ್ಲಿ ಪ್ರದರ್ಶನ ಕಂಡಿತ್ತು. ಇದು ಹೈಡ್ರೋಜನ್ ಫ್ಲೂಯಲ್ ಸೆಲ್ ಮೂಲಕ ಕಾರು ಚಲಿಸಲು ತಕ್ಕುದಾದ ವಿದ್ಯುತ್ ಉತ್ಪಾದಿಸುತ್ತದೆ.

ಅಂದ ಹಾಗೆ 2015ರಲ್ಲಿ ಜಪಾನ್‌ನಲ್ಲಿ ಟೊಯೊಟಾ ಹೈಡ್ರೋಜನ್ ಫ್ಲೂಯಲ್ ಸೆಲ್ ಕಾರುಗಳು ಮಾರಾಟಕ್ಕೆ ಲಭ್ಯವಾಗಲಿದೆ. ಇದು ಫ್ರಂಟ್ ವೀಲ್ ಡ್ರೈವ್ ಜೊತೆಗೆ ನಾಲ್ಕು ಬಾಗಿಲುಗಳನ್ನು ಪಡೆದುಕೊಳ್ಳಲಿದ್ದು, ಗರಿಷ್ಠ ನಿರ್ವಹಣೆ ನೀಡಲಿದೆ.

ಇನ್ನು ವಿಶೇಷವೆಂದರೆ ಪೆಟ್ರೋಲ್ ಅಥವಾ ಡೀಸೆಲ್ ಎಂಜಿನ್‌ಗೆ ಸಮಾನವಾಗಿ ಕೇವಲ ಮೂರರಿಂದ ಐದು ನಿಮಷಗಳಲ್ಲೇ ಹೈಡ್ರಜನ್ ಮರು ತುಂಬಿಸಬಹುದಾಗಿದೆ. ಇದು ಕ್ಷಣಾರ್ಧದಲ್ಲಿ ವೇಗವರ್ಧಿಸಿಕೊಳ್ಳಲಿದ್ದು, ಅಂತೆಯೇ ರಿ ಜನರೇಟಿವ್ ಬ್ರೇಕಿಂಗ್ ಸಿಸ್ಟಂ ಮುಖಾಂತರ ನೀವು ಪ್ರತಿ ಬಾರಿಯೂ ಗಾಡಿ ನಿಧಾನ ಮಾಡಿದಾಗ ಚೈತನ್ಯ ಮರು ಉತ್ಪಾದನೆಯಾಗಲಿದೆ.

ಇದೇ ಸಂದರ್ಭದಲ್ಲಿ ಟೊಯೊಟಾ ಸಂಸ್ಥೆಯು ಮಗದೊಂದು ನೂತನ ಸಿ-ಎಚ್ಆರ್ ಕಾನ್ಸೆಪ್ಟ್ ಸಹ ಪ್ರದರ್ಶಿಸಿದೆ. ಈ ಮೂಲಕ ಟೊಯೊಟಾ ಮಾರುಕಟ್ಟೆಗೆ ತರಲು ಇಚ್ಛಿಸುತ್ತಿರುವ ನಾವೀನ್ಯತೆಯ ಕ್ರಾಸೋವರ್ ಮಾದರಿಯನ್ನು ಪ್ರದರ್ಶಿಸಿದೆ.

ಟೊಯೊಟಾ ಸಿಎಚ್‌ಆರ್ ಕಾನ್ಸೆಪ್ಟ್ ಸಹ ಹೈಬ್ರಿಡ್ ತಂತ್ರಜ್ಞಾನವನ್ನು ಹೊಂದಿರಲಿದೆ. ಅಲ್ಲದೆ ಅದ್ಭುತ ಹ್ಯಾಂಡ್ಲಿಂಗ್ ಮೂಲಕ ಹೆಚ್ಚೆಚ್ಚು ಗ್ರಾಹಕರನ್ನು ಗುರಿಯಿರಿಸಿಕೊಂಡಿದೆ.

ಹೊಸ ತಲಹದಿಯಲ್ಲಿ ನಿರ್ಮಾಣವಾಗಿರುವ ಸಿ-ಎಚ್ಆರ್ ಕಾನ್ಸೆಪ್ಟ್, 4,350 ಎಂಎಂ ಉದ್ದ, 1,850 ಎಂಎಂ ಅಗಲ ಮತ್ತು 1,500 ಎಂಎಂ ಎತ್ತರವನ್ನು ಹೊಂದಿರಲಿದೆ. ಇದರಲ್ಲಿ ಆಳವಡಿಸಲಾಗಿರುವ ಹೈಬ್ರಿಡ್ ತಂತ್ರಗಾರಿಕೆಯ ಮೂಲಕ ಹೆಚ್ಚಿನ ಇಂಧನ ಕ್ಷಮತೆ ಲಭ್ಯವಾಗಲು ನೆರವಾಗಲಿದೆ.

ಟೊಯೊಟಾದ 'ಗ್ಲೋಬಲ್ ವಿಷನ್' ಭಾಗವಾಗಿ ಸಿ-ಎಚ್‌ಆರ್ ಪ್ರವೇಶವಾಗಲಿದೆ. ಇದು ಪ್ರಯಾಸ್ ಹೈಬ್ರಿಡ್ ಕಾರಿನ ಪರಂಪರೆಯನ್ನು ಎತ್ತಿ ಹಿಡಿಯಲಿದೆ.


Click it and Unblock the Notifications








