ಬಾಂಬ್, ಬುಲೆಟ್ ಪ್ರೂಫ್ ಬೆಂಝ್ ಕಾರು ಖರೀದಿಸಿದ ಅಮೀರ್ ಖಾನ್
ಹೌದು, 'ಸತ್ಯಮೇವ ಜಯತೇ' ರಿಯಾಲಿಟಿ ಟಿ.ವಿ ಕಾರ್ಯಕ್ರಮ ಮೂಲಕ ಜನಮನ್ನಣೆಗೆ ಪಾತ್ರವಾಗಿರುವ 'ಮಿಸ್ಟರ್ ಪರ್ಫೆಕ್ಟ್' ಖ್ಯಾತಿಯ ಬಾಲಿವುಡ್ ಸೂಪರ್ ಸ್ಟಾರ್ ಅಮೀರ್ ಖಾನ್ ಅವರಿಗೆ ಜೀವ ಬೆದರಿಕೆಯಿದೆಯೇ ಎಂಬುದು ಸಹಜವಾಗಿಯೇ ಮೂಡಿಬರುತ್ತಿರುವ ಪ್ರಶ್ನೆ.
ಇದಕ್ಕೆ ಪೂರಕವೆಂಬಂತೆ ಅಮೀರ್ ಖಾನ್ ಬುಲೆಟ್ ಪ್ರೂಫ್ ದುಬಾರಿ ಕಾರೊಂದನ್ನು ಖರೀದಿಸಿರುವುದು ಇನ್ನಷ್ಟು ಅನುಮಾನ ಮೂಡಲು ಕಾರಣವಾಗಿದೆ. ಬಲ್ಲ ಮೂಲಗಳ ಪ್ರಕಾರ ಅಮೀರ್ ಖಾನ್ ಅವರಿಗೆ ಜೀವ ಬೆದರಿಕೆಯಿದ್ದು, ಇದರಿಂದಾಗಿ 'ವಿಶೇಷ ಭದ್ರತೆ'ಯ ಮರ್ಸಿಡಿಸ್ ಬೆಂಝ್ ಕಾರನ್ನು ಖರೀದಿಸಿದ್ದಾರೆ.

ಅಮೀರ್ ಖಾನ್ ಅವರ ಬಳಿಯಿರುವ ನೂತನ ಬೆಂಝ್ ಕಾರು ಬುಲೆಟ್ ಪ್ರೂಫ್ ಮಾತ್ರವಷ್ಟೇ ಅಲ್ಲ, ಅತಿ ಶಕ್ತಿಶಾಲಿ ಬಾಂಬ್ ಸ್ಫೋಟವನ್ನು ತಡೆಯುವ ಸಾಮರ್ಥ್ಯವನ್ನು ಹೊಂದಿರುವುದಾಗಿ ವರದಿಗಳು ತಿಳಿಸಿವೆ. ನಮಗೆ ಲಭಿಸಿರುವ ಮಾಹಿತಿಯು ನೈಜವಾದ್ಧಲ್ಲಿ, ಸದ್ಯ ಬಾಲಿವುಡ್ ತಾರೆಗಳ ಪೈಕಿ ಅಮೀರ್ ಅತಿ ದುಬಾರಿ ಕಾರನ್ನು ಹೊಂದಿದ್ದಾರೆ.

ಅಷ್ಟಕ್ಕೂ ಈ ಕಾರು ಯಾವುದು ಅಂತೀರಾ? ಅದುವೇ ಮರ್ಸಿಡಿಸ್ ಬೆಂಜ್ ಎಸ್600. ಸದ್ಯ ಇದೇ ಕಾರಲ್ಲಿ ಅಮೀರ್ ತಮ್ಮ ಪ್ರವಾಸವನ್ನು ಕೈಗೊಳ್ಳುತ್ತಿರುವ ಬಗ್ಗೆಯೂ ಮಾಹಿತಿ ಲಭಿಸಿದೆ.

ಅಷ್ಟೇ ಯಾಕೆ, ಅಮೀರ್ ಅವರು ಸದ್ಯ ದೇಶದಲ್ಲಿ ಬೆಂಝ್‌ನ ಈ ದುಬಾರಿ ಕಾರನ್ನು ಹೊಂದಿರುವ ಮೂರನೇ ವ್ಯಕ್ತಿ ಎಂದೆನಿಸಿಕೊಂಡಿದ್ದಾರೆ. ದೇಶದ ಗೌರವಾನ್ವಿತ ಪ್ರಧಾನ ಮಂತ್ರಿ ಮನಮೋಹನ್ ಸಿಂಗ್ ಹಾಗೂ ಉದ್ಯಮಿ ಮುಖೇಶ್ ಅಂಬಾನಿ ಬಳಿಯೂ ಬೆಂಝ್ ಎಸ್600 ಕಾರಿದೆ. ಪ್ರಮುಖವಾಗಿಯೂ ಸುರಕ್ಷಾ ದೃಷ್ಟಿಕೋನದ ಹಿನ್ನಲೆಯಲ್ಲಿ ಬೆಂಝ್‌ನ ದುಬಾರಿ ಕಾರನ್ನು ಅಮೀರ್ ತಮ್ಮದಾಗಿಸಿಕೊಂಡಿದ್ದಾರೆ.

ವರದಿಗಳ ಪ್ರಕಾರ 'ಸತ್ಯಮೇವ ಜಯತೇ' ಮೊದಲ ಆವೃತ್ತಿಯನ್ನು ಯಶಸ್ವಿಯಾಗಿ ನಡೆಸಿಕೊಟ್ಟಿರುವ ಅಮೀರ್ ಅವರಿಗೆ ಜೀವ ಬೆದರಿಕೆ ಕರೆಗಳು ಬಂದಿವೆ. ತಮ್ಮ ಈ ರಿಯಾಲಿಟಿ ಶೋದಲ್ಲಿ ಅಮೀರ್ ಅವರು ಹೆಣ್ಣು ಭ್ರೂಣಹತ್ಯೆ, ವೈದ್ಯಕೀಯ ದುರಾಚಾರ ಮತ್ತು ಗೌರವ ಹತ್ಯೆಗಳ ವಿರುದ್ಧ ಬಹಿರಂಗವಾಗಿ ಮಾತನಾಡಿದ್ದರು.

ನಿಮ್ಮ ಮಾಹಿತಿಗಾಗಿ, ಬೆಂಝ್ ಎಸ್600 ಕಸ್ಟಮೈಸ್ಡ್ ಕಾರಾಗಿದ್ದು, ವಿಶೇಷವಾಗಿಯೂ ವಿವಿಐಪಿಗಳಿಗಾಗಿ ಸಿದ್ಧಪಡಿಸಲಾಗುತ್ತದೆ. ಅಷ್ಟಕ್ಕೂ ಗರಿಷ್ಠ ಸುರಕ್ಷತೆಗಳನ್ನು ಹೊಂದಿರುವ ಈ ದುಬಾರಿ ದರ ಎಷ್ಟು ಗೊತ್ತೇ? ಗಾಬರಿಯಾಗದಿರಿ, ಇದರ ಬೆಲೆ ಜಸ್ಟ್ 10 ಕೋಟಿ ರುಪಾಯಿಗಳು.

ತಮಗೆ ಜೀವ ಬೆದರಿಕೆಯಿರುವ ಬಗ್ಗೆ ಈಗಾಗಲೇ ಪೊಲೀಸ್ ದೂರು ದಾಖಲಿಸಿಕೊಂಡಿರುವ ಹೊರತಾಗಿಯೂ ಅಮೀರ್ ಅವರಿಗೆ ಕುಟಂಬ ಹಾಗೂ ಆಪ್ತ ಸ್ನೇಹಿತರಿಂದಲೂ ಸಂಪೂರ್ಣ ರಕ್ಷಣೆಯ ಬುಲೆಟ್ ಪ್ರೂಫ್ ಕಾರು ಖರೀದಿಸುವಂತೆ ಒತ್ತಡ ಹೇರಿಬಂದಿತ್ತು. ಇದರಿಂದಾಗಿ ಅಮೀರ್ ಇಂತಹದೊಂದು ನಿರ್ಧಾರಕ್ಕೆ ಬಂದಿದ್ದಾರೆ.

ಈ ನಡುವೆ ಅಮೀರ್ ಖಾನ್ ಅವರ ಸತ್ಯಮೇವ ಜಯತೇ ಎರಡನೇ ಆವೃತ್ತಿಯು ಮಾರ್ಚ್ 2ರಂದು ಆರಂಭವಾಗಿದ್ದು, ಆಡಳಿತ, ಭ್ರಷ್ಟಾಚಾರ ಮತ್ತು ಲೋಕಸಭಾ ಚುನಾವಣೆಯಲ್ಲಿ ಎದುರಾಗಲಿರುವ ಸಮಸ್ಯೆಗಳ ಬಗ್ಗೆ ಚರ್ಚಿಸಲಿದ್ದಾರೆ. ಹಾಗಿರುವಾಗ ಈ ಪರಿಪೂರ್ಣ ನಟ ಯಾವುದೇ ಅಪಾಯ ಆಹ್ವಾನಿಸುವ ಇರಾದೆಯಲ್ಲಿಲ್ಲ.

ಇನ್ನೊಂದೆಡೆ ಅಮೀರ್ ಖಾನ್ ಅವರು ನಡೆಸಿಕೊಡುತ್ತಿರುವ 'ಸತ್ಯಮೇವ ಜಯತೇ' ಕಾರ್ಯಕ್ರಮದ ಮೂಲಕ ಸಂಗ್ರಹಿಸಲಾಗುವ ದೇಣಿಗೆಯನ್ನು ಮುಸ್ಲಿಂ ಧರ್ಮದ ಅಭಿವೃದ್ಧಿಗಾಗಿ ಬಳಸಲಾಗುತ್ತಿದೆ ಎಂಬ ಅಪವಾದವೂ ಕೇಳಿ ಬರುತ್ತಿದೆ. ಈ ಬಗ್ಗೆ ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಾಕ ಟೀಕೆಗಳು ವ್ಯಕ್ತವಾಗುತ್ತಿದೆ. ಅಷ್ಟಕ್ಕೂ ಸತ್ಯಮೇವ ಜಯತೇ ಕಾರ್ಯಕ್ರಮ ಪರಿಪೂರ್ಣವಾಗಿದೆಯೇ ನಿಮ್ಮ ಅಭಿಪ್ರಾಯ, ಅನಿಸಿಕೆಗಳನ್ನು ನಮ್ಮ ಜತೆ ಹಂಚಿಕೊಳ್ಳಿರಿ...


Click it and Unblock the Notifications








