ಬೆಂಗಳೂರಿನಲ್ಲಿ ಹೊಯ್ಸಳ ಪೊಲೀಸ್ ಎರ್ಟಿಗಾ ಕಾರುಗಳ ಅಬ್ಬರ
ಅತ್ಯಾಧುನಿಕ ವ್ಯವಸ್ಥೆಗಳಿಂದ ಕೂಡಿರುವ 222 ಹೈಟೆಕ್ ಎರ್ಟಿಗಾ ಕಾರುಗಳು ಬೆಂಗಳೂರಿನ ಹೊಯ್ಸಳ ಪೊಲೀಸ್ ನೇತೃತ್ವದಲ್ಲಿ ಕಾರ್ಯಾರಣೆಯನ್ನು ಆರಂಭಿಸಿದೆ. ವಿಧಾನಸೌಧದಲ್ಲಿ ನಡೆದ ಕಾರ್ಯಕ್ರಮದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಚಾಲನೆ ನೀಡಿದರು. ಈ ವೇಳೆಯಲ್ಲಿ ಗೃಹ ಸಚಿವ ಜಿ. ಪರಮೇಶ್ವರ್, ಡಿಜಿಟಿ ಓಂಪ್ರಕಾಶ್ ಮತ್ತಿತರ ಅಧಿಕಾರಿಗಳು ಉಪಸ್ಥಿತರಿದ್ದರು.
ಅಧಿಕೃತವಾಗಿ ಹೊಯ್ಸಳ ಪೊಲೀಸ್ ವಿಭಾಗವನ್ನು ಸೇರಿರುವ ಎರ್ಟಿಗಾ ಕಾರುಗಳನ್ನು ಠಾಣೆಗಳಿಗೆ ಹಸ್ತಾಂತರಿಸಲಾಗುವುದು. ಈ ಎಲ್ಲದರ ಮುಖಾಂತರ ಬೆಂಗಳೂರು ಹೃದಯ ಭಾಗದಲ್ಲಿ ಕಾರ್ಯಾಚರಣೆಗೆ ಚುರುಕು ಮುಟ್ಟಲಿದೆ.

ಹಳೆಯ ಬೊಲೆರೊ ಮಾದರಿಗಳಿಗೆ ಬದಲಿಯಾಗಿ ತಲುಪಿರುವ ಎರ್ಟಿಗಾ ಕಾರುಗಳಲ್ಲಿ ದಿಕ್ಸೂಚಿ ವ್ಯವಸ್ಥೆ ಜಿಪಿಆರ್ ಎಸ್, ಇಂಟರ್ ನೆಟ್, ಸಿಸಿ ಕ್ಯಾಮೆರಾ ಮತ್ತು ಕಂಟ್ರೋಲ್ ರೂಂ ಜೊತೆ ಮಾತುಕತೆ ನಡೆಸಿಕೊಳ್ಳಲು ವ್ಯವಸ್ಥೆಗಳನ್ನು ಒದಗಿಸಿಕೊಡಲಾಗಿದೆ.

ಬೆಂಗಳೂರು ನಗರ ಪೊಲೀಸ್ ವ್ಯವಸ್ಥೆಯನ್ನು ಆಧುನಿಕರಿಸುವುದರ ಭಾಗವಾಗಿ ಹೊಸ ಎರ್ಟಿಗಾ ಕಾರುಗಳ ಪ್ರವೇಶವಾಗಿದೆ. ಇದರಲ್ಲಿ ಏಳು ಇಂಚುಗಳ ಟ್ಯಾಬ್ಲೆಟ್ ಲಗತ್ತಿಸಲಾಗಿದೆ.

ಎಲ್ಲ ವಾತಾವರಣದಲ್ಲೂ ನಿರ್ವಹಿಸಬಲ್ಲ ಪ್ಯಾನಸೋನಿಕ್ ಟಚ್ ಪ್ಯಾಡ್ ಎಫ್ ಝಡ್-ಬಿ2 ಟ್ಯಾಬ್ ಗಳು ವಾಟರ್ ಪ್ರೂಫ್ ಆಗಿದ್ದು, ಧೂಳಿನ ಕಣಗಳಿಂದಲೂ ರಕ್ಷಣೆ ಪಡೆಯಲಿದೆ.

ನೇರವಾಗಿ ಹೊಯ್ಸಳ ಕಮಿಷನರ್ ಕಚೇರಿ ರೂಂನಲ್ಲಿರುವ ಕಂಟ್ರೋಲ್ ರೂಂಗೆ ಸಂಪರ್ಕ ಕಲ್ಪಿಸಿಕೊಂಡು ಕಾರ್ಯ ನಿರ್ವಹಿಸಲಿದೆ.

ನೂತನ ಎರ್ಟಿಗಾ ಕಾರುಗಳನ್ನು ಪೊಲೀಸ್ ನಿಗದಿಪಡಿಸಿರುವ ಕೇಂದ್ರಗಳಲ್ಲಿ ನಿಯೋಜಿಸಲಾಗುವುದು. ಅಲ್ಲಿಂದ ತ್ವರಿತ ಕಾರ್ಯಾಚರಣೆಗೆ ಮುಂದಾಗಲಿದೆ.

ಸಾರ್ವಜನಿಕರ ದೂರುಗಳನ್ನು ಆಲಿಸಲು ಕಂಟ್ರೋಲ್ ರೂಂನಲ್ಲಿ ವಿಶೇಷ ವ್ಯವಸ್ಥೆ ಮಾಡಲಾಗಿದ್ದು, ಅಲ್ಲಿಂದ ಹೊಯ್ಸಳ ಪೊಲೀಸರಿಗೆ ಸಂದೇಶ ರವಾನಿಸಲಾಗುತ್ತದೆ.

ಟ್ಯಾಕ್ಸಿ ಸರ್ವೀಸ್ ನಿರ್ವಹಿಸುವ ತರಹನೇ ಕಂಟ್ರೋಲ್ ರೂಂನಿಂದ ಟ್ಯಾಬ್ಲೆಟ್ ಗೆ ಸಂದೇಶ ರವಾನಿಸಲಾಗುವುದು. ಅಲ್ಲಿಂದ ಕರ್ತವ್ಯ ನಿರತರಾಗಿರುವ ಪೊಲೀಸ್ ಅಧಿಕಾರಿಗಳು ಕರೆ ಸ್ವೀಕರಿಸಲಿದ್ದಾರೆ. ತನ್ಮೂಲಕ ತ್ವರಿತ ಗತಿಯಲ್ಲಿ ಕಾರ್ಯಾಚರಣೆ ಮಾಡಲು ಸಾಧ್ಯವಾಗಲಿದೆ.

ಆರೋಪಿಯ ಚಿತ್ರ ಸೇರಿದಂತೆ ದೂರಿನ ಬಗ್ಗೆ ಸಮಗ್ರ ವಿವರವನ್ನು ರವಾನಿಸಲಾಗುವುದು. ಇವೆಲ್ಲವೂ ತಪ್ಪಿತ್ತಸ್ಥರು ಬಹುಬೇಗನೇ ಸರೆ ಹಿಡಿಯಲು ನೆರವಾಗಲಿದೆ.

ಒಟ್ಟು 14.65 ಕೋಟಿ ರುಪಾಯಿ ವೆಚ್ಚದಲ್ಲಿ ನೂತನ ಮಾರುತಿ ಎರ್ಟಿಗಾ ಬಹು ಬಳಕೆಯ ವಾಹನವನ್ನು ಖರೀದಿಸಲಾಗಿದೆ. ಇದು ಅತ್ಯುತ್ತಮ ನಿರ್ವಹಣೆ ಜೊತೆಗೆ ಇಂಧನ ಕ್ಷಮತೆಯನ್ನು ಕಾಪಾಡಿಕೊಂಡಿದೆ.

ಅಂದ ಹಾಗೆ ಮಾರುತಿ ಎರ್ಟಿಗಾ 1.3 ಲೀಟರ್ ಪೆಟ್ರೋಲ್ ಮತ್ತು 1.2 ಲೀಟರ್ ಡೀಸೆಲ್ ಎಂಜಿನ್ ಗಳಿಂದ ನಿಯಂತ್ರಿಸಲ್ಪಡುತ್ತದೆ. ಡೀಸೆಲ್ ಆವೃತ್ತಿಯು ಹೈಬ್ರಿಡ್ ಆಯ್ಕೆಗಳಲ್ಲೂ ಮಾರಾಟದಲ್ಲಿದೆ.


Click it and Unblock the Notifications








