ಸೆಪ್ಟೆಂಬರ್ ನಲ್ಲಿ ಹೊಸ ಕಾರು, ಬೈಕ್ ಗಳ ಸುರಿಮಳೆ
ಹಬ್ಬದ ಆವೃತ್ತಿಗೆ ಮುನ್ನುಡಿ ಬರೆಯುತ್ತಿರುವ ದೇಶದ ಮುಂಚೂಣಿಯ ವಾಹನ ತಯಾರಿಕ ಸಂಸ್ಥೆಗಳು 2016 ಸೆಪ್ಟೆಂಬರ್ ತಿಂಗಳಲ್ಲಿ ಅತ್ಯಾಕರ್ಷಕ ಅತಿ ನೂತನ ಕಾರು ಹಾಗೂ ಬೈಕ್ ಗಳನ್ನು ಬಿಡುಗಡೆ ಮಾಡಲು ಸಜ್ಜಾಗಿ ನಿಂತಿವೆ. ಬೆಳೆದು ಬರುತ್ತಿರುವ ಭಾರತೀಯ ಮಾರುಕಟ್ಟೆಯನ್ನು ಗುರಿ ಮಾಡಿರುವ ವಾಹನ ಸಂಸ್ಥೆಗಳು ದೇಶದ ಗ್ರಾಹಕರಿಗಾಗಿ ವಿನೂತನ ಕೊಡುಗೆ ನೀಡುವ ಇರಾದೆಯಲ್ಲಿದೆ.
ಹಬ್ಬದ ಸಂಭ್ರಮದ ವೇಳೆಯಲ್ಲಿ ವಾಹನಗಳ ಮಾರಾಟ ಗಣನೀಯವಾಗಿ ಹೆಚ್ಚುವ ನಿರೀಕ್ಷೆಯಿದ್ದು, ವಾಹನ ಸಂಸ್ಥೆಗಳು ಗರಿಷ್ಠ ಮಾರಾಟವನ್ನು ಗುರಿ ಮಾಡಿದೆ. ಪ್ರಸ್ತುತ ಈ ತಿಂಗಳಲ್ಲಿ ಬಿಡುಗಡೆಯಾಗಲಿರುವ ಹೊಸ ಕಾರು ಹಾಗೂ ಬೈಕ್ ಗಳ ಬಗ್ಗೆ ಮಾಹಿತಿಯನ್ನು ಕೊಡುವ ಪ್ರಯತ್ನವನ್ನು ಮಾಡಲಿದ್ದೇವೆ.

ಬಜಾಜ್ ಪಲ್ಸರ್ ವಿಎಸ್400
2014 ಆಟೋ ಎಕ್ಸ್ ಪೋದಲ್ಲಿ ಪ್ರದರ್ಶನ ಕಂಡಿರುವ ಬಜಾಜ್ ಪಲ್ಸರ್ ವಿಎಸ್400 ಆವೃತ್ತಿಯು ಪ್ರಸಕ್ತ ತಿಂಗಳಲ್ಲೇ ಮಾರುಕಟ್ಟೆ ಪ್ರವೇಶಿಸಲಿದೆ. ಬೈಕ್ ಪ್ರೇಮಿಗಳು ಕಾತರದಿಂದ ಕಾದು ಕುಳಿತಿರುವ ನೂತನ ಪಲ್ಸರ್ ವಿಎಸ್ ಎಂದು ಗುರುತಿಸಿಕೊಳ್ಳಲಿದೆ. ಇದರಲ್ಲಿರುವ 373.27 ಸಿಸಿ ಲಿಕ್ವಿಡ್ ಕೂಲ್ಡ್ 4 ವಾಲ್ವ್ ಟ್ರಿಪಲ್ ಸ್ಪಾರ್ಕ್ ಎಂಜಿನ್ 34.5 ಅಶ್ವಶಕ್ತಿಯನ್ನು ಉತ್ಪಾದಿಸಲಿದೆ. ಇದು 1.7 ಲಕ್ಷ ರು.ಗಳಿದ 1.8 ಲಕ್ಷ ರು.ಗಳ ವರೆಗೆ ಬೆಲೆ ಬಾಳಲಿದೆ.

ಮೊಟೊ ಗುಝಿ ವಿ9 ರೋಮರ್ ಮತ್ತು ಬಾಬರ್
ಇಟಲಿಯ ಐಕಾನಿಕ್ ಪಿಯಾಜಿಯೊ ಸಂಸ್ಥೆಯು ಪ್ರಸಕ್ತ ಸಾಲಿನ ವರ್ಷಾರಂಭದಲ್ಲಿ ನಡೆದ ವಾಹನ ಮೇಳದಲ್ಲಿ ಮೊಟೊ ಗುಝಿ ವಿ9 ರೋಮರ್ ಮತ್ತು ವಿ9 ಬಾಬರ್ ಆವೃತ್ತಿಗಳನ್ನು ಪ್ರದರ್ಶನಗೊಳಿಸಿತ್ತು. ಇವೆರಡು ಆವೃತ್ತಿಗಳು ಸಿಬಿಯು ಮುಖಾಂತರ ದೇಶವನ್ನು ತಲುಪಲಿದೆ. ಅಂತೆಯೇ ಶಕ್ತಿಶಾಲಿ 850 ಸಿಸಿ ವಿ ಟ್ವಿನ್ ಎಂಜಿನ್ 54 ಅಶ್ವಶಕ್ತಿಯನ್ನು ಉತ್ಪಾದಿಸಲಿದೆ.

ಹೋಂಡಾ ಬ್ರಿಯೊ ಫೇಸ್ ಲಿಫ್ಟ್
ಸಣ್ಣ ಕಾರು ವಿಭಾಗದಲ್ಲಿ ತನ್ನ ಸಾನಿಧ್ಯವನ್ನು ಗಟ್ಟಿ ಪಡಿಸಲು ಹೊರಟಿರುವ ಜಪಾನ್ ಮೂಲದ ಹೋಂಡಾ ಕಾರ್ ಇಂಡಿಯಾ ಸಂಸ್ಥೆಯೀಗ ಪರಿಷ್ಕೃತ ಬ್ರಿಯೊ ಕಾರನ್ನು ಬಿಡುಗಡೆ ಮಾಡಲು ಸಜ್ಜಾಗಿದೆ. ಇದು ಹೊರಮೈಯಲ್ಲಿ ಪರಿಷ್ಕೃತ ಬಂಪರ್ ಹಾಗೂ ಗ್ರಿಲ್ ಜೊತೆಗೆ ಒಳಮೈಯಲ್ಲಿ ಹೊಸ ಡ್ಯಾಶ್ ಬೋರ್ಡ್ ವಿನ್ಯಾಸ, ಆಡಿಯೋ ಸಿಸ್ಟಂ, ಸ್ಟೀರಿಂಗ್ ವೀಲ್, ಪ್ರೊಜೆಕ್ಟರ್ ಹೆಡ್ ಲ್ಯಾಂಪ್, ಎಬಿಎಸ್ ಮುಂತಾದ ವೈಶಿಷ್ಟ್ಯಗಳನ್ನು ಪಡೆಯಲಿದೆ.

ಹ್ಯುಂಡೈ ಎಲೈಟ್ ಐ20 ಆಟೋಮ್ಯಾಟಿಕ್
ಬಲೆನೊ ಪೈಪೋಟಿಯನ್ನು ಮನಗಂಡಿರುವ ಹ್ಯುಂಡೈ ತನ್ನ ಜನಪ್ರಿಯ ಎಲೈಟ್ ಐ20 ಆಟೋಮ್ಯಾಟಿಕ್ ಆವೃತ್ತಿಯನ್ನು ಬಿಡುಗಡೆ ಮಾಡಲು ಹೊರಟಿದೆ. ವಿನ್ಯಾಸ ಹಾಗೂ ತಂತ್ರಗಾರಿಕೆಯಲ್ಲಿ ಹೆಚ್ಚಿನ ಬದಲಾವಣೆಗಳು ಕಂಡಬರದಿದ್ದರೂ ಆಟೋಮ್ಯಾಟಿಕ್ ಗೇರ್ ಬಾಕ್ಸ್ ಪ್ರಮುಖ ಆಕರ್ಷಣೆಯಾಗಲಿದೆ. ಇದರಲ್ಲಿರುವ 1.4 ಲೀಟರ್ ಫೋರ್ ಸಿಲಿಂಡರ್ ವಿಟಿವಿಟಿ ಪೆಟ್ರೋಲ್ ಎಂಜಿನ್ 132.5 ಎನ್ ಎಂ ತಿರುಗುಬಲದಲ್ಲಿ 99 ಅಶ್ವಶಕ್ತಿಯನ್ನು ಉತ್ಪಾದಿಸಲಿದೆ.

ಫಿಯೆಟ್ ಅರ್ಬನ್ ಕ್ರಾಸ್
ಕಳೆದ ಕೆಲವು ಸಮಯಗಳಿಂದ ಫಿಯೆಟ್ ಅರ್ಬನ್ ಕ್ರಾಸ್ ಭಾರತ ಪ್ರವೇಶಕ್ಕೆ ಸಂಬಂಧಿಸಿದಂತೆ ಮಾಹಿತಿಗಳಿವೆ. 2016 ಆಟೋ ಎಕ್ಸ್ ಪೋದಲ್ಲಿ ಪ್ರದರ್ಶನ ಕಂಡಿರುವ ಅರ್ಬನ್ ಕ್ರಾಸ್ ನಲ್ಲಿರುವ 1.4 ಟಿಜೆಟ್ ಪೆಟ್ರೋಲ್ ಎಂಜಿನ್ 210 ಎನ್ ಎಂ ತಿರುಗುಬಲದಲ್ಲಿ 140 ಅಶ್ವಶಕ್ತಿಯನ್ನು ಉತ್ಪಾದಿಸಲಿದೆ. ಹೊಸ ಫ್ರಂಟ್ ಗ್ರಿಲ್, ಎಲ್ ಇಡಿ ಬೆಳಕಿನ ಸೇವೆ, 17 ಇಂಚುಗಳ ಅಲಾಯ್ ವೀಲ್, ಐದು ಇಂಚುಗಳ ಟಚ್ ಸ್ಕ್ರೀನ್, ಆಡಿಯೋ ನೇವಿಗೇಷನ್, ಡ್ಯುಯಲ್ ಟೋನ್ ಡ್ಯಾಶಬೋರ್ಡ್ ಹಾಗೂ ಪವರ್ ಫುಲ್ ಎಂಜಿನ್ ಪ್ರಮುಖ ಆಕರ್ಷಣೆಯಾಗಿದೆ.

ಟೊಯೊಟಾ ಎಟಿಯೋಸ್, ಲಿವಾ ಫೇಸ್ ಲಿಫ್ಟ್
ನಾವು ಈಗಾಗಲೇ ವರದಿ ಮಾಡಿರುವಂತೆಯೇ ಟೊಯೊಟಾ ಎಟಿಯೋಸ್ ಮತ್ತು ಲಿವಾ ಪರಿಷ್ಕೃತ ಆವೃತ್ತಿಗಳು ಇದೇ ತಿಂಗಳಲ್ಲಿ ಬಿಡುಗಡೆಯಾಗಲಿದೆ. ವಿ ಆಕಾರದ ಗ್ರಿಲ್, ಪಿಯಾನೊ ಬ್ಲ್ಯಾಕ್ ಫಿನಿಶ್, ಡಿಜಿಟಲ್ ಡಿಸ್ ಪ್ಲೇ ಮುಂತಾದ ಸೌಲಭ್ಯಗಳು ನಿಮಗೆ ಸಿಗಲಿದೆ.

ಆಡಿ ಎ4
2016 ಆಟೋ ಎಕ್ಸ್ ಪೋದಲ್ಲೇ ಎ4 ಸೆಡಾನ್ ಕಾರು ಅನಾವರಣಗೊಂಡಿತ್ತು. ಈಗ ಬಿಡುಗಡೆಗೆ ಸಜ್ಜಾಗಿರುವ ಆಡಿ ಎ4 ಪ್ರೀಮಿಯಂ ಕಾರು, 1.4 ಲೀಟರ್ ಟರ್ಬೊಚಾರ್ಜ್ಡ್ ಪೆಟ್ರೋಲ್ ಎಂಜಿನ್ ಪಡೆಯಲಿದೆ. ಬಳಿಕ ಹೆಚ್ಚು ಶಕ್ತಿಶಾಲಿ ಎರಡು ಲೀಟರ್ ಡೀಸಲ್ ಎಂಜಿನ್ ಸಹ ಲಭ್ಯವಾಗಲಿದೆ.

ಜಾಗ್ವಾರ್ ಎಕ್ಸ್ ಎಫ್
ಬ್ರಿಟನ್ ಪ್ರೀಮಿಂಯ ಕಾರು ಸಂಸ್ಥೆ ಜಾಗ್ವಾರ್ ಎರಡನೇ ತಲೆಮಾರಿನ ಎಕ್ಸ್ ಎಫ್ ಕಾರನ್ನು ದೇಶದಲ್ಲಿ ಬಿಡುಗಡೆ ಮಾಡಲು ಸಜ್ಜಾಗುತ್ತಿದೆ. ಮುಂಭಾಗದಲ್ಲಿ ಆಕರ್ಷಕ ಗ್ರಿಲ್, ಎಲ್ ಇಡಿ ಹೆಡ್ ಲ್ಯಾಂಪ್ ವ್ಯವಸ್ಥೆಯನ್ನು ಹೊಂದಿದ್ದು, ಪ್ಯೂರ್, ಪ್ರೆಸ್ಟೀಜ್ ಹಾಗೂ ಪೋರ್ಟ್ ಪೊಲಿಯೊ ವೆರಿಯಂಟ್ ಗಳಲ್ಲಿ ಲಭ್ಯವಾಗಲಿದೆ.ಇದರಲ್ಲಿರುವ 2 ಲೀಟರ್ ಫೋರ್ ಸಿಲಿಂಡರ್ ಡೀಸೆಲ್ ಎಂಜಿನ್ 430 ಎನ್ ಎಂ ತಿರುಗುಬಲದಲ್ಲಿ 177 ಅಶ್ವಶಕ್ತಿಯನ್ನು ಉತ್ಪಾದಿಸಲಿದೆ. ಅಂತೆಯೇ ಎಂಟು ಸ್ಪೀಡ್ ಆಟೋ ಮ್ಯಾಟಿಕ್ ಗೇರ್ ಬಾಕ್ಸ್ ಇದರಲ್ಲಿರಲಿದೆ.


Click it and Unblock the Notifications








