ದೇಶದ ಯುವ ಮನಸ್ಕರ ಅಚ್ಚುಮೆಚ್ಚಿನ ಕಾರುಗಳಿವು!
ಪ್ರತಿಯೊಂದು ದೇಶದ ಪ್ರಗತಿಯಲ್ಲಿ ಅಲ್ಲಿನ ಯುವ ಜನಾಂಗದ ಪಾತ್ರ ಪ್ರಮುಖವಾಗಿರುತ್ತದೆ. ಹಾಗೆಯೇ ಭಾರತದಂತಹ ಕೋಟ್ಯಂತರ ಜನಸಂಖ್ಯೆ ಹೊಂದಿರುವ ದೇಶದ ಪ್ರಗತಿಯಲ್ಲೂ ಯುವ ಪೀಳಿಗೆಯು ನಿರ್ಣಾಯಕವೆನಿಸಿದೆ.
ಇಂದಿನ ಯುವ ಪೀಳಿಗೆ, ಹಿಂದೆಂದಿಗಿಂತಲೂ ಚುರುಕುಮತಿಗಳೂ, ಸೂಕ್ಷ್ಮಗ್ರಾಹಿಗಳೂ, ಮತ್ತು ಸಂವೇದನಾಶೀಲರೂ ಆಗಿರುವುದನ್ನು ನಾವು ಕಂಡಿರುತ್ತೇವೆ. ಯುವ ಜನಾಂಗವೇ ಇಂದಿನ ಹಾಗೂ ಮುಂದಿನ ರಾಷ್ಟ್ರವನ್ನು ರಕ್ಷಿಸುವವರಾಗಿದ್ದು, ಅವರು ಸದಾ ಜಾಗೃತರಾಗಿರಬೇಕಾಗುತ್ತದೆ.
ಆಟೋಮೊಬೈಲ್ ಜಗತ್ತಿನಲ್ಲೂ ಯುವ ಜನಾಂಗದ ಪಾತ್ರ ಮಹತ್ವದ್ದಾಗಿದೆ. ಹಿಂದೆಲ್ಲ ಒಂದು ಕಾರು ರಸ್ತೆಗಳಿದರೆ ಅದರ ಅಪ್‌ಗ್ರೇಡ್ ವರ್ಷನ್ ಮಾರುಕಟ್ಟೆಗೆ ಬರಬೇಕಾದರೆ ನಾಲ್ಕೈದು ವರ್ಷ ಕಾಯಬೇಕಾಗಿತ್ತು. ಆದರೆ ಇಂದಿನ ಯಾಂತ್ರಿಕ ಯುಗದಲ್ಲಿ ಯುವ ಜನಾಂಗದ ಟ್ರೆಂಡ್ ಬದಲಾಗುತ್ತಿರುವಂತೆಯೇ ಕಾರುಗಳ ಅವಿಷ್ಕಾರದಲ್ಲೂ ಬದಲಾವಣೆ ಕಂಡುಬರುತ್ತಿದೆ.
ಇದೇ ಕಾರಣಕ್ಕಾಗಿ ದೇಶದ ಆಟೋಮೊಬೈಲ್ ಜಗತ್ತಿನಲ್ಲಿ ವಾಹನ ತಯಾರಕ ಕಂಪನಿಗಳ ನಡುವೆ ನಿಕಟ ಪೈಪೋಟಿ ಏರ್ಪಟ್ಟಿದೆ. ದೇಶದಲ್ಲಿ ಕಂಡುಬಂದಿರುವ ಈ ಕ್ರಾಂತಿಕಾರಿ ಬದಲಾವಣೆಯಲ್ಲಿ ಯುವ ಪೀಳಿಗೆಯ ಪಾತ್ರ ದೊಡ್ಡದಾಗಿದೆ. ಇದರಿಂದಲೇ ಪ್ರತಿಯೊಂದು ವಾಹನ ತಯಾರಕ ಕಂಪನಿಗಳು ಯುವ ಜನಾಂಗವನ್ನು ಗುರಿಯಾರಿಸಿಕೊಂಡು ಅತ್ಯಾಧುನಿಕ ಸೌಲಭ್ಯಗಳುಳ್ಳ ಕಾರುಗಳನ್ನು ಮಾರುಕಟ್ಟೆಗೆ ಪರಿಚಯಿಸುತ್ತಿವೆ.
ಇಂದಿನ ಈ ಲೇಖನದಲ್ಲಿ ದೇಶದ ಯುವ ಜನಾಂಗದ ಅಚ್ಚುಮೆಚ್ಚಿನ ಕಾರುಗಳ ಬಗ್ಗೆ ಮಾಹಿತಿ ಕೊಡಲಿದ್ದೇವೆ. ಖಂಡಿತವಾಗಿಯೂ ಈ ಎಲ್ಲ ಕಾರುಗಳು ಯುವ ಮನಸ್ಕರ ಫೇವರಿಟ್ ಎನಿಸಿಕೊಳ್ಳಲಿದೆ.

ದೇಶದ ಯುವ ಮನಸ್ಕರು ಬಯಸುವ ಕಾರುಗಳಿವು!
ದೇಶದ ಆಟೋ ಜಗತ್ತಿನಲ್ಲಿ ಕಂಡುಬಂದಿರುವ ಕ್ಷಿಪ್ರ ಬದಲಾವಣೆಯಲ್ಲಿ ಯುವ ಜನಾಂಗದ ಪಾತ್ರ ದೊಡ್ಡದಾಗಿದೆ. ಡ್ರೈವ್ ಸ್ಪಾರ್ಕ್ ಇಂದಿನ ಈ ಲೇಖನದಲ್ಲಿ ದೇಶದ ಯುವ ಪೀಳಿಗೆಯ ಫೇವರಿಟ್ ಕಾರುಗಳನ್ನು ಪರಿಚಯಿಸಲಿದೆ.

ಷೆವರ್ಲೆ ಬೀಟ್
ವಿಶ್ವದ ಅತಿ ದೊಡ್ಡ ವಾಹನ ತಯಾರಕ ಕಂಪನಿಯಾದ ಜನರಲ್ ಮೋಟಾರ್ಸ್‌ನ ಷೆವರ್ಲೆ ಬ್ರಾಂಡ್‌ನ ಈ ಅತ್ಯಾಕರ್ಷಕ ಬೀಟ್ ಕಾರು ದೇಶದ ಯುವ ಜನಾಂಗದ ಫೇವರಿಟ್ ಕಾರುಗಳಲ್ಲಿ ಒಂದೆನಿಸಿದೆ. ಈ ಹ್ಯಾಚ್‌ಬ್ಯಾಕ್ ಕಾರು ಆಕರ್ಷಕ ಸ್ಪೋರ್ಟಿ ಲುಕ್ ಹೊಂದಿದ್ದು, ಉತ್ತಮ ಇಂಧನ ದಕ್ಷತೆ ನೀಡುವ ಸಾಮರ್ಥ್ಯ ಹೊಂದಿದೆ. ಈ ಕಾರು 3.8 ಲಕ್ಷ ರು.ಗಳಿಂದ 5.84 ಲಕ್ಷ ರು.ಗಳ ಅಸುಪಾಸಿನಲ್ಲಿದೆ.

ಮಾರುತಿ ಸುಜುಕಿ ಸ್ವಿಫ್ಟ್
ದೇಶದ ಅತಿ ದೊಡ್ಡ ವಾಹನ ತಯಾರಕ ಕಂಪನಿಯಾದ ಮಾರುತಿ ಸುಜುಕಿಯ ಸ್ವಿಫ್ಟ್ ಕಾರು ಯುವ ಮನಸ್ಕರ ಜನಪ್ರಿಯ ಕಾರೆನಿಸಿದೆ. ಎರಡು ವರ್ಷಗಳ ಹಿಂದೆಯಷ್ಟೇ ಕಂಪನಿಯು ಸ್ವಿಫ್ಟ್ ಡೀಸೆಲ್ ಆವೃತ್ತಿಯನ್ನು ಮಾರುಕಟ್ಟೆಗೆ ಪರಿಚಯಿಸಿತ್ತು. ಈ ಕಾರಿನ ದರ 4.48 ಲಕ್ಷ ರು.ಗಳಿಂದ ಆರಂಭವಾಗಿ 6.8 ಲಕ್ಷ ರು.ಗಳ ವರೆಗಿದೆ.

ನಿಸ್ಸಾನ್ ಸನ್ನಿ
ಜಪಾನ್ ಕಾರು ತಯಾರಕ ಸಂಸ್ಥೆಯಾದನ ನಿಸ್ಸಾನ್ ಕಳೆದ ವರ್ಷ ಆಕರ್ಷಕ ಮಿಡ್ ಲೆವೆಲ್ ಸೆಡಾನ್ ಕಾರನ್ನು ಪರಿಚಯಿಸಿತ್ತು. ಈ ಕಾರು ತನ್ನದೇ ಆದ ಐಷಾರಾಮಿ ಲುಕ್, ಉತ್ತಮ ಸ್ಥಳಾವಕಾಶ ಹಾಗೂ ಸ್ಪರ್ದಾತ್ಮಕ ದರಗಳಲ್ಲಿ ದೊರಕುತ್ತಿವೆ. ಇದರ ದರ 5.93 ಲಕ್ಷ ರು.ಗಳಿಂದ 8.93 ಲಕ್ಷ ರು.ಗಳ ವರೆಗಿದೆ.

ಟೊಯೊಟಾ ಫೋರ್ಚುನರ್
ಟೊಯೊಟಾದ ಬ್ರಾಂಡ್ ಕಾರುಗಳು ದೇಶದ ಯುವ ಪೀಳಿಗೆಯಲ್ಲಿ ರೋಚಕತೆ ಸೃಷ್ಟಿಸುವಲ್ಲಿ ಯಶಸ್ವಿಯಾಗಿದೆ. ಇದೇ ಕಾರಣಕ್ಕಾಗಿ ಆಕರ್ಷಕ ಎಸ್‌ಯುವಿ ಲುಕ್ ಹೊಂದಿರುವ ಟೊಯೊಟಾ ಫೋರ್ಚುನರ್ ಯುವ ಮನಸ್ಕರ ಫೇವರಿಟ್ ಎನಿಸಿಕೊಂಡಿದೆ. ಸಮೀಕ್ಷೆ ಪ್ರಕಾರ ದೇಶದ ಮಾರುಕಟ್ಟೆಯಲ್ಲಿ ಎಸ್‌ಯುವಿ ಕಾರುಗಳಿಗೆ ಭಾರಿ ಬೇಡಿಕೆಯಿದೆ. ಅಂತೆಯೇ ಟೊಯೊಟಾ ಫೋರ್ಚುನರ್ 20.79 ಲಕ್ಷ ರು.ಗಳಿಂದ 21.93 ಲಕ್ಷ ರು.ಗಳ ವರೆಗಿದೆ.

ಮಹೀಂದ್ರ ಎಸ್‌ಯುವಿ 500
ಕಳೆದ ವರ್ಷವಷ್ಟೇ ಎಸ್‌ಯುವಿ ದೈತ್ಯ ಮಹೀಂದ್ರ ಕಂಪನಿಯು ಪವರ್‌ಫುಲ್ ಎಸ್‌ಯುವಿ 500 ಕಾರನ್ನು ಪರಿಚಯಿಸಿತ್ತು. ಮಹೀಂದ್ರ ಎಸ್‌ಯುವಿ ತನ್ನದೇ ಆದ ವಿಭಿನ್ನ ಲುಕ್ ಹಾಗೂ ನಿರ್ವಹಣೆ ಮೂಲಕ ದೇಶದ ಗ್ರಾಹಕರ ನಂಬಿಕೆ ಉಳಿಸಿಕೊಂಡಿದೆ. ಈ ಎಸ್‌ಯುವಿ ಕಾರು 11.71 ಲಕ್ಷ ರು.ಗಳಿಂದ 14.28 ಲಕ್ಷ ರು.ಗಳ ಅಸುಪಾಸಿನಲ್ಲಿದೆ.

ಹ್ಯುಂಡೈ ಎಲಂಟ್ರಾ
ದೇಶದ ನಂ.1 ಕಾರು ತಯಾರಕ ಕಂಪನಿಯಾದ ಮಾರುತಿ ಸುಜುಕಿಗೆ ಪ್ರಬಲ ಪ್ರತಿಸ್ಪರ್ಧಿಯಾಗಿರುವ ಹ್ಯುಂಡೈ ಆಗಾಗಲೇ ಅನೇಕ ವೈವಿಧ್ಯಮಯ ಕಾರುಗಳನ್ನು ಪರಿಚಯಿಸಿದೆ. ಈ ಬಾರಿ ಎಲಂಟ್ರಾ ಮೂಲಕ ಆಧುನಿಕ ಫ್ಲೂಡಿಕ್ ವಿನ್ಯಾಸದ ಪ್ರಯೋಗ ಮಾಡಿದೆ. ಲಗ್ಷುರಿ ಕಾರು ಸೆಗ್ಮೆಂಟ್‌ನ ಈ ಕಾರು ಆಕರ್ಷಕವೆನಿಸುತ್ತಿದೆ. ದೇಶದ ಮಾರುಕಟ್ಟೆಯಲ್ಲಿ ಇದರ ದರ 12.52 ಲಕ್ಷ ರು.ಗಳಿಂದ 15.86 ಲಕ್ಷ ರು.ಗಳ ವರೆಗಿದೆ.

ಹೊಂಡಾ ಜಾಝ್
ದೇಶದ ಯುವ ಪೀಳಿಗೆಯಲ್ಲಿ ಉತ್ತಮ ಮೈಲೇಜ್ ಹಾಗೂ ಹ್ಯಾಚ್‌ಬ್ಯಾಕ್ ಕಾರುಗಳ ಜತೆಗೆ ಪ್ರೀಮಿಯಂ ಕಾರುಗಳಲ್ಲಿಯೂ ಆಕರ್ಷಣೆ ಹೆಚ್ಚಿದೆ. ಅಂತೆಯೇ ಜಪಾನ್ ವಾಹನ ತಯಾರಕ ಕಂಪನಿಯಾದ ಹೊಂಡಾ ಜಾಝ್ ಕೂಡಾ ಯುವ ಜನಾಂಗದ ನೆಚ್ಚಿನ ಕಾರು ಎನಿಸಿಕೊಂಡಿದೆ. ಈ ಕಾರು 6 ಲಕ್ಷ ರು.ಗಳಿಂದ ಹಿಡಿದು 6.6 ಲಕ್ಷ ರು.ಗಳ ವರೆಗಿದೆ.

ರೆನೊ ಡಸ್ಟರ್
ಪ್ರಸ್ತುತ ರೆನೊ ಡಸ್ಟರ್ ಭಾರತೀಯ ರಸ್ತೆಗಳಲ್ಲಿ ಧೂಳೆಬ್ಬಿಸುತ್ತಿದೆ. ಫ್ರಾನ್ಸ್‌ನ ಈ ವಾಹನ ತಯಾರಕ ಕಂಪನಿಯು ಈ ಎಸ್‌ಯುವಿ ಮೂಲಕ ದೇಶದಲ್ಲಿ ಭಾರಿ ಜನಪ್ರಿಯತೆ ಗಿಟ್ಟಿಸಿಕೊಂಡಿದೆ. ಇದರ ಆಕರ್ಷಕ ವಿನ್ಯಾಸ ಹಾಗೂ ಕಲರ್ ವೆರಿಯಂಟ್‌ಗೆ ದೇಶದ ಯುವ ಜನಾಂಗವು ಮನ ಸೋತಿದ್ದಾರೆ. ಇದರ ದರ 7.19 ಲಕ್ಷ ರು.ಗಳಿಂದ 11.29 ಲಕ್ಷ ರು.ಗಳ ವರೆಗಿದೆ.

ಹೊಂಡಾ ಸಿಟಿ
ಒಂದು ಸಮಯದಲ್ಲಿ ದೇಶದ ರಸ್ತೆಗಳಲ್ಲಿ ಹೊಂಡಾ ಸಿಟಿ ಭಾರಿ ಸದ್ದು ಮಾಡಿತ್ತು. ಅನೇಕ ಬಾರಿ ಮಿಡ್ ಲೆವೆಲ್ ಸೆಡಾನ್ ಕಾರುಗಳ ಪೈಕಿ ಅತ್ಯುತ್ತಮ ಮಾರಾಟವಾಗುತ್ತಿರುವ ಕಾರೆಂಬ ಹೆಗ್ಗಳಿಕೆಗೆ ಪಾತ್ರವಾಗಿರುವ ಹೊಂಡಾ ಸಿಟಿ ಈಗಲೂ ಉತ್ತಮ ಪ್ರತಿಕ್ರಿಯೆ ಗಿಟ್ಟಿಸಿಕೊಳ್ಳುತ್ತಿದೆ. ದೇಶದಲ್ಲಿ ಡೀಸೆಲ್ ಆವೃತ್ತಿಯ ನಿರೀಕ್ಷೆಯಲ್ಲಿರುವ ಹೊಂಡಾ ಸಿಟಿ ಸ್ಪರ್ಧಾತ್ಮಕ 7.26 ಲಕ್ಷ ರು.ಗಳಿಂದ 10.52 ಲಕ್ಷ ರು.ಗಳ ವರೆಗೆ ಲಭ್ಯವಿದೆ.

ಹ್ಯುಂಡೈ ವರ್ನಾ
ಹ್ಯುಂಡೈ ವರ್ನಾ ತನ್ನದೇ ಆದ ಆಕರ್ಷಕ ವಿನ್ಯಾಸಕ್ಕೆ ಜನಪ್ರಿಯವಾಗಿದೆ. ಇದರ ಕ್ಲಾಸ್ ಫ್ಲೂಡಿಕ್ ಡಿಸೈನ್ ಹಾಗೂ ಉತ್ತಮ ಇಂಧನ ದಕ್ಷತೆ ಮಿಡೆ ಲೆವೆಲ್ ಸೆಡಾನ್ ಕಾರುಗಳಲ್ಲಿ ಯುವ ಮನಸ್ಕರ ಅಚ್ಚುಮೆಚ್ಚಿನ ಕಾರೆನಿಸಿದೆ. ದೇಶದ ಮಾರುಕಟ್ಟೆಯಲ್ಲಿ ಈ ಕಾರಿನ ದರ 7.12 ಲಕ್ಷ ರು.ಗಳಿಂದ 11.27 ಲಕ್ಷ ರು.ಗಳ ವರೆಗಿದೆ.


Click it and Unblock the Notifications








