ವಿಶೇಷ ಕಾರ್ಯಾಚರಣೆಯಲ್ಲಿ ಸಿಕ್ಕಿ ಬಿದ್ದ 2000ಕ್ಕೂ ಹೆಚ್ಚು ವಾಹನ ಸವಾರರು
ವಾಹನ ಸವಾರರ ಸುರಕ್ಷತೆಗಾಗಿ ಹಾಗೂ ರಸ್ತೆ ಅಪಘಾತಗಳಾಗುವುದನ್ನು ತಡೆಗಟ್ಟಲು ಕೇಂದ್ರ ಸರ್ಕಾರ ಹಾಗೂ ರಾಜ್ಯ ಸರ್ಕಾರಗಳು ಹೊಸ ಹೊಸ ನಿಯಮಗಳನ್ನು ಜಾರಿಗೊಳಿಸುತ್ತಿವೆ. ಅದರಲ್ಲೂ ದ್ವಿಚಕ್ರ ವಾಹನಗಳ ಬಗ್ಗೆ ಸರ್ಕಾರಗಳು ಹೆಚ್ಚು ನಿಯಮಗಳನ್ನು ರೂಪಿಸುತ್ತವೆ. ಅಪಘಾತದಿಂದ ಪ್ರಯಾಣಿಕರನ್ನು ಸಂಪೂರ್ಣವಾಗಿ ರಕ್ಷಿಸುವ ಯಾವುದೇ ದ್ವಿಚಕ್ರ ವಾಹನಗಳು ಸದ್ಯಕ್ಕೆ ಮಾರಾಟವಾಗುತ್ತಿಲ್ಲ.

ನಾಲ್ಕು ಚಕ್ರದ ವಾಹನಗಳಿಗಿಂತ ದ್ವಿಚಕ್ರ ವಾಹನಗಳು ಹೆಚ್ಚು ಕಳ್ಳತನವಾಗುತ್ತವೆ. ಕಳ್ಳತನವಾಗಿರುವ ದ್ವಿಚಕ್ರ ವಾಹನಗಳನ್ನು ಹೆಚ್ಚಾಗಿ ಅಪರಾಧ ಕೃತ್ಯಗಳಿಗೆಬಳಸಲಾಗುತ್ತದೆ. ಪ್ರತಿಯೊಂದು ವಾಹನವನ್ನು ಅದರ ಮಾಲೀಕರೊಂದಿಗೆ ಗುರುತಿಸುವುದು ಮುಖ್ಯವಾಗಿದೆ. ವಾಹನದ ಮುಂಭಾಗ ಹಾಗೂ ಹಿಂಭಾಗದಲ್ಲಿ ಅಳವಡಿಸಿರುವ ನಂಬರ್ ಪ್ಲೇಟ್‌ಗಳು ಈ ನಿಟ್ಟಿನಲ್ಲಿ ಪ್ರಮುಖ ಪಾತ್ರವಹಿಸುತ್ತವೆ.

ನಂಬರ್ ಪ್ಲೇಟ್‌ಗಳು ವಾಹನದ ಮಾಲೀಕರನ್ನು ಹೊರತುಪಡಿಸಿ ಬೇರೆ ಯಾರಾದರೂ ಅಪರಾಧದಲ್ಲಿ ಭಾಗಿಯಾಗಿದ್ದರೆ ಅಂತಹವರನ್ನು ಪತ್ತೆ ಹಚ್ಚಲು ನೆರವಾಗುತ್ತವೆ. ಆದರೆ ಬಹುತೇಕ ವಾಹನ ಸವಾರರು ತಮ್ಮ ವಾಹನಗಳಲ್ಲಿ ಸರಿಯಾಗಿ ನಂಬರ್ ಪ್ಲೇಟ್‌ಗಳನ್ನು ಅಳವಡಿಸಿಕೊಳ್ಳುವುದಿಲ್ಲ. ಸರಿಯಾಗಿ ನಂಬರ್ ಪ್ಲೇಟ್ ಅಳವಡಿಸಿಕೊಳ್ಳದೇ ಇರುವುದನ್ನು ಸಹ ಸಂಚಾರಿ ನಿಯಮ ಉಲ್ಲಂಘನೆ ಎಂದು ಪರಿಗಣಿಸಲಾಗುತ್ತದೆ.

ಈ ನಿಯಮವನ್ನು ಸರಿಯಾಗಿ ಪಾಲಿಸದವರ ವಿರುದ್ಧ ಪೊಲೀಸರು ಕಾರ್ಯಾಚರಣೆ ನಡೆಸುತ್ತಲೇ ಇರುತ್ತಾರೆ. ಇತ್ತೀಚಿಗೆ ತಮಿಳುನಾಡಿನ ರಾಜಧಾನಿ ಚೆನ್ನೈನಲ್ಲಿ ವಾಹನಗಳಲ್ಲಿ ಸರಿಯಾದ ನಂಬರ್ ಪ್ಲೇಟ್ ಹೊಂದಿಲ್ಲದ ಸುಮಾರು 2,343 ಜನರ ವಿರುದ್ಧ ಪ್ರಕರಣ ದಾಖಲಿಸಲಾಗಿದೆ. ಈ 2,343 ಮಂದಿಯಲ್ಲಿ ಹಲವರು ಮೋಟಾರು ವಾಹನ ಕಾಯ್ದೆಯಡಿ ಸರಿಯಾದ ನಂಬರ್ ಪ್ಲೇಟ್ ಹೊಂದಿರಲಿಲ್ಲ.

ಇನ್ನೂ ಕೆಲವರು ನಂಬರ್ ಪ್ಲೇಟ್ ಗಳ ಮೇಲೆ ಸ್ಟಿಕ್ಕರ್ ಹಾಗೂ ಅನಧಿಕೃತ ಚಿಹ್ನೆಗಳನ್ನು ಅಂಟಿಸಿದ್ದರು. ಚೆನ್ನೈ ಪೊಲೀಸರು ವಿವಿಧ ವಾಹನಗಳು ಹಾಗೂ ಅವುಗಳ ಸವಾರರ ವಿರುದ್ಧ ಕಾರ್ಯಾಚರಣೆಯನ್ನು ಮುಂದುವರೆಸಿದ್ದಾರೆ. ಈ ವಿಶೇಷ ಕಾರ್ಯಾಚರಣೆಯನ್ನು ಮೂರು ದಿನಗಳವರೆಗೆ ಹಮ್ಮಿ ಕೊಳ್ಳಲಾಗಿತ್ತು. ಈ ಕಾರ್ಯಾಚರಣೆ ಅಕ್ಟೋಬರ್ 28ಕ್ಕೆ ಮುಕ್ತಾಯವಾಗಲಿದೆ.

ಕೇಂದ್ರ ಸಾರಿಗೆ ಇಲಾಖೆಯು ದ್ವಿಚಕ್ರ ವಾಹನಗಳಲ್ಲಿ ಪ್ರಯಾಣಿಸುವ ಮಕ್ಕಳ ಸುರಕ್ಷತೆಗಾಗಿ ಹೊಸ ಪ್ರಸ್ತಾವನೆಯನ್ನು ಮುಂದಿಟ್ಟಿದೆ. 4 ವರ್ಷಕ್ಕಿಂತ ಕಡಿಮೆ ವಯಸ್ಸಿನ ಮಗು ದ್ವಿಚಕ್ರ ವಾಹನಗಳಲ್ಲಿ ಕುಳಿತಿದ್ದರೆ ಅಂತಹ ವಾಹನಗಳ ಗರಿಷ್ಠ ವೇಗ ಗಂಟೆಗೆ 40 ಕಿ.ಮೀ ಮೀರಬಾರದು ಎಂದು ಈ ಪ್ರಸ್ತಾವನೆಯಲ್ಲಿ ಹೇಳಲಾಗಿದೆ. ದ್ವಿಚಕ್ರ ವಾಹನಗಳಲ್ಲಿ ಪ್ರಯಾಣಿಸುವ ಮಕ್ಕಳ ಸುರಕ್ಷತೆಗಾಗಿ ಈ ನಿರ್ಧಾರ ಕೈಗೊಳ್ಳಲಾಗಿದೆ.

ಮಗು ಹೆಲ್ಮೆಟ್ ಧರಿಸಿರುವುದನ್ನು ದ್ವಿಚಕ್ರ ವಾಹನ ಸವಾರ ಖಚಿತಪಡಿಸಿಕೊಳ್ಳಬೇಕು ಎಂದು ಇಲಾಖೆಯ ಅಧಿಸೂಚನೆಯಲ್ಲಿ ತಿಳಿಸಲಾಗಿದೆ. ಈ ಅಧಿಸೂಚನೆಯಲ್ಲಿ ಉಲ್ಲೇಖಿಸಲಾದ ಇನ್ನೊಂದು ಮಾರ್ಗಸೂಚಿಯ ಅನ್ವಯ ದ್ವಿಚಕ್ರ ವಾಹನ ಸವಾರ ಮಗುವಿನ ಸುರಕ್ಷತೆಯನ್ನು ಖಚಿತಪಡಿಸಿಕೊಳ್ಳಲು ನಾಲ್ಕು ವರ್ಷಕ್ಕಿಂತ ಕಡಿಮೆ ವಯಸ್ಸಿನ ಮಕ್ಕಳು ಸಾಕಷ್ಟು ರಕ್ಷಣಾತ್ಮಕ ಗೇರ್‌ಗಳನ್ನು ಧರಿಸಿರುವುದನ್ನು ಖಚಿತಪಡಿಸಿಕೊಳ್ಳಬೇಕು.

ಮಕ್ಕಳಿಗೆ ಸುರಕ್ಷತಾ ಕವರ್ ವೆಸ್ಟ್‌ನಂತಿದ್ದು, ಅದನ್ನು ದ್ವಿಚಕ್ರ ಸವಾರರು ಪಟ್ಟಿಗಳ ಸಹಾಯದಿಂದ ಸೊಂಟಕ್ಕೆ ಕಟ್ಟಿ ಕೊಳ್ಳಬಹುದು. ಈ ಸುರಕ್ಷತಾ ಕವರ್ ಅಪಘಾತದ ಸಮಯದಲ್ಲಿ ಮಗುವನ್ನು ದ್ವಿಚಕ್ರ ವಾಹನದಿಂದ ಕೆಳಗೆ ಬೀಳದಂತೆ ರಕ್ಷಿಸುತ್ತದೆ. ಸುರಕ್ಷತಾ ಸರಂಜಾಮು ಕುರಿತು ವಿವರಿಸಿರುವ ಸಾರಿಗೆ ಇಲಾಖೆಯು ಈ ಸರಂಜಾಮು ದ್ವಿಚಕ್ರ ವಾಹನದಲ್ಲಿರುವ ಮಗು ಸವಾರನಿಗೆ ಸುರಕ್ಷಿತವಾಗಿ ಜೋಡಿಸಲ್ಪಟ್ಟಿರುವುದನ್ನು ಖಚಿತಪಡಿಸುತ್ತದೆ ಎಂದು ಹೇಳಿದೆ.

ರಸ್ತೆ ಸಾರಿಗೆ ಇಲಾಖೆಯು ತನ್ನ ಪ್ರಸ್ತಾವನೆಗೆ ಸಾರ್ವಜನಿಕರಿಂದ ಆಕ್ಷೇಪಣೆಗಳು ಆಹ್ವಾನಿಸಿ, ಸಲಹೆಗಳನ್ನು ಕೇಳಿದೆ. ಮೋಟಾರು ವಾಹನ ಕಾಯಿದೆ 1989 ರ ಅಡಿಯಲ್ಲಿ, ಬೈಕ್ ಸವಾರ ಹಾಗೂ ಹಿಂಬದಿ ಸವಾರರಿಗೆ ಹೆಲ್ಮೆಟ್ ಬಳಕೆ ಕಡ್ಡಾಯವಾಗಿದೆ. ಇದು ಮಾತ್ರವಲ್ಲದೇ ಐಎಸ್‌ಐ ಮಾರ್ಕ್ ಇಲ್ಲದ ಹೆಲ್ಮೆಟ್‌ಗಳನ್ನು ಮಾರಾಟ ಮಾಡುವುದನ್ನು ಅಪರಾಧವೆಂದು ಪರಿಗಣಿಸಲಾಗುತ್ತದೆ.

ವಿಶ್ವ ಆರೋಗ್ಯ ಸಂಸ್ಥೆ (WHO) ಪ್ರಕಾರ, 2016 ರಲ್ಲಿ ಭಾರತದಲ್ಲಿ 3,00,000 ಜನರು ರಸ್ತೆ ಅಪಘಾತಗಳಲ್ಲಿ ಸಾವನ್ನಪ್ಪಿದ್ದಾರೆ. ಅದರಲ್ಲಿ 40% ನಷ್ಟು ಜನರು ಹೆಲ್ಮೆಟ್ ಧರಿಸದ ದ್ವಿಚಕ್ರ ವಾಹನ ಚಾಲಕರು. ಅದೇ ರೀತಿ 2018 ರಲ್ಲಿ ಹೆಲ್ಮೆಟ್ ಧರಿಸದೇ ವಾಹನ ಚಲಾಯಿಸಿದ್ದ 43,614 ಮಂದಿ ಸಾವನ್ನಪ್ಪಿದ್ದಾರೆ. ಇತ್ತೀಚೆಗಷ್ಟೇ ಕೇರಳ ಸರ್ಕಾರವು ದ್ವಿಚಕ್ರ ವಾಹನಗಳಲ್ಲಿ ಪ್ರಯಾಣಿಸುವಾಗ ಕೊಡೆಗಳನ್ನು ಬಳಸದಂತೆ ಹೊಸ ನಿಯಮವನ್ನು ಜಾರಿಗೊಳಿಸಿದೆ.

ದ್ವಿಚಕ್ರ ವಾಹನ ಚಾಲನೆ ವೇಳೆಯಲ್ಲಿ ಕೊಡೆಗಳನ್ನು ಬಳಸುವುದರಿಂದ ಗಾಳಿಯ ವೇಗ ಹಾಗೂ ಮಳೆಯ ಪ್ರಮಾಣವನ್ನು ಅವಲಂಬಿಸಿ ಕೆಲವೊಮ್ಮೆ ಅಪಘಾತಗಳಾಗುವ ಸಾಧ್ಯತೆಗಳಿರುತ್ತವೆ. ಇದನ್ನು ಗಮನದಲ್ಲಿಟ್ಟುಕೊಂಡು ಕೇರಳ ಸರ್ಕಾರವು ಈ ನಿಯಮವನ್ನು ಜಾರಿಗೆ ತಂದಿದೆ. ಈ ಹೊಸ ನಿಯಮವನ್ನು ದ್ವಿಚಕ್ರ ವಾಹನ ಸವಾರರು ಹೇಗೆ ಸ್ವೀಕರಿಸಲಿದ್ದಾರೆ ಎಂಬುದನ್ನು ಕಾದು ನೋಡಬೇಕಿದೆ.

ಇದರ ಜೊತೆಗೆ ಹೆದ್ದಾರಿ ಹಾಗೂ ಎಕ್ಸ್‌ಪ್ರೆಸ್‌ವೇಗಳಲ್ಲಿ ವಾಹನಗಳ ವೇಗದ ಮಿತಿಯನ್ನು ಹೆಚ್ಚಿಸುವ ಬಗ್ಗೆಯೂ ಕೇಂದ್ರ ಸರ್ಕಾರ ಪರಿಗಣಿಸುತ್ತಿದೆ.ಈ ಬಗ್ಗೆ ಮಾತನಾಡಿರುವ ಕೇಂದ್ರ ರಸ್ತೆ ಸಾರಿಗೆ ಹಾಗೂ ಹೆದ್ದಾರಿ ಸಚಿವರಾದ ನಿತಿನ್ ಗಡ್ಕರಿರವರು ಶೀಘ್ರದಲ್ಲೇ ಹೆದ್ದಾರಿ ಹಾಗೂ ಎಕ್ಸ್‌ಪ್ರೆಸ್‌ವೇಗಳಲ್ಲಿ ಚಲಿಸುವ ವಾಹನಗಳ ವೇಗವನ್ನು ಹೆಚ್ಚಿಸುವ ತಿದ್ದುಪಡಿ ಮಸೂದೆಯನ್ನು ಸಂಸತ್ತಿನಲ್ಲಿ ಮಂಡಿಸಲಾಗುವುದು ಎಂದು ಹೇಳಿದ್ದಾರೆ.
ಗಮನಿಸಿ: ಈ ಲೇಖನದಲ್ಲಿರುವ ಚಿತ್ರಗಳನ್ನು ರೆಫರೆನ್ಸ್'ಗಾಗಿ ಬಳಸಲಾಗಿದೆ.


Click it and Unblock the Notifications








