ದಾವೂದ್ ಕಾರು ಖರೀದಿಸಿದ ಹಿಂದೂ ಸ್ವಾಮಿ ಬೆಂಕಿ ಹಚ್ಚಿ ಸುಡುವುದಾಗಿ ಎಚ್ಚರಿಕೆ!
ಕುಖ್ಯಾತ ಭೂಗತ ಪಾತಕಿ ದಾವೂದ್ ಇಬ್ರಾಹಿಂ ಸೇರಿದ ಹೋಟೆಲ್, ಆಸ್ತಿ ಹಾಗೂ ಕಾರುಗಳನ್ನು ಹರಾಜು ಮಾಡಲಾಗಿದೆ. ಇಲ್ಲಿ ಕಂಡುಬಂದಿರುವ ಗಮನಾರ್ಹ ಅಂಶವೆಂದರೆ ದಾವೂದ್ ಅವರ ಹ್ಯುಂಡೈ ಅಸೆಂಟ್ ಕಾರನ್ನು ಹಿಂದೂ ಮಹಾಸಭಾ ಅಧ್ಯಕ್ಷ ಸ್ವಾಮಿ ಚಕ್ರಪಾಣಿ ಖರೀದಿಸಿರುವುದು ಅತ್ಯಂತ ಕುತೂಹಲ ಕೆರಳಿಸಿದೆ.
ಬರೋಬ್ಬರಿ 3.2 ಲಕ್ಷ ರುಪಾಯಿಗಳನ್ನು ಪಾವತಿಸಿ ಹಿಂದೂ ಸ್ವಾಮಿ ಚಕ್ರಪಾಣಿ ದಾವೂದ್ ಕಾರು ಖರೀದಿಸಿದ್ದರಲ್ಲದೆ ಬಳಿಕ ಹೇಳಿಕೆ ಕೊಟ್ಟಿರುವ ಅವರು, ಮುಂಬೈ ಜೊತೆಗೆ ಇಡೀ ದೇಶವನ್ನೇ ಬೆಚ್ಚಿ ಬೀಳಿಸಿರುವ ಅಂಡರ್ ವರ್ಲ್ಡ್ ಡಾನ್ ಅವರ ಕಾರನ್ನು ಸುಡುವುದಾಗಿ ಎಚ್ಚರಿಸಿದ್ದಾರೆ.

ಮುಂಬೈ ಸೇರಿದಂತೆ ಹಲವಾರು ಸ್ಪೋಟದಲ್ಲಿ ಆರೋಪಿಯಾಗಿರುವ ದಾವೂದ್ ತಲೆಮರಿಸಿ ಎರಡು ದಶಕಗಳೇ ಕಳೆದಿದೆ. ತದಾ ಬಳಿಕ ಜಾರಿ ನಿರ್ದೇಶನಲಯವು ದಾವೂದ್ ಆಸ್ತಿಯನ್ನು ಮುಟ್ಟಗೋಲುಗೊಳಿಸಿತ್ತು.

ದಾವೂದ್ ಅವರ ನೀಲಿ ಬಣ್ಣದ ಹ್ಯುಂಡೈ ಆಸೆಂಟ್ ಕಾರು MH04-AX3676 ಎಂಬ ನಂಬರ್ ಪ್ಲೇಟ್ ಹೊಂದಿದ್ದು, ಮುಂಬೈನ ಪೊಲೀಸ್ ಠಾಣೆಯ ಹೊರಗಡೆ ಶಿಥಿಲಾವಸ್ಥೆಯಲ್ಲಿತ್ತು.

ಹ್ಯುಂಡೈ ಆಸೆಂಟ್ ಹರಾಜು ಮೊತ್ತವನ್ನು 4,000 ರು.ಗಳಿಂದ ಆರಂಭಿಸಲಾಗಿತ್ತು. ಈಗ ಹಿಂದೂ ಮಹಾಸಭಾ ಅಧ್ಯಕ್ಷರು 3.2 ಲಕ್ಷ ರು.ಗಳಷ್ಟು ಪಾವತಿಸಿ ಕಾರನ್ನು ತಮ್ಮದಾಸಿಕೊಂಡಿದ್ದಾರೆ.

ಹರಾಜಿನಲ್ಲಿ ದಾವೂದ್ ಕಾರು ಖರೀದಿಸಿದ ಬಳಿಕ ಪ್ರತಿಕ್ರಿಯಿಸಿರುವ ಚಕ್ರಪಾಣಿ, ಸಾಧ್ಯವಾದ್ದಲ್ಲಿ ಹ್ಯುಂಡೈ ಕಾರನ್ನು ಆ್ಯಂಬುಲೆನ್ಸ್ ಮಾಡುತ್ತೇನೆ. ಇಲ್ಲವಾದ್ದಲ್ಲಿ ಕಾರಿನ ಮೇಲೆ ದಾವೂದ್ ಫೋಟೋ ಇಟ್ಟು ಸುಡುವುದಾಗಿ ಎಚ್ಚರಿಸಿದ್ದಾರೆ.

15 ವರ್ಷಗಳ ಹಿಂದೆ ಬಿಡುಗಡೆಗೊಂಡಿರುವ ಹ್ಯುಂಡೈ ಆಸೆಂಟ್ ಕಾರನ್ನು 1980ರ ದಶಕದಲ್ಲೇ ದೇಶ ಬಿಟ್ಟು ಪಾಲಾಯನಗೈದಿರುವ ದಾವೂದ್ ಬಳಕೆ ಮಾಡಿರುವ ಸಾಧ್ಯತೆ ಕಡಿಮೆಯಾಗಿದೆ. ಆದರೆ ನಿಕಟ ಮೂಲಗಳ ಪ್ರಕಾರ ದಾವೂದ್ ಸಹಚರರು ಇದರ ಬಳಕೆ ಮಾಡಿರುತ್ತಾರೆ ಎಂಬುದು ತಿಳಿದು ಬಂದಿದೆ.


Click it and Unblock the Notifications








