ಶೀಘ್ರದಲ್ಲೇ ಬುಲೆಟ್ ರೈಲು: 190 ಕಿ.ಮೀ ವಯಾಡಕ್ಟ್, 321 ಕಿ.ಮೀ ಪಿಯರ್ ಕೆಲಸ ಪೂರ್ಣ!
ರಾಷ್ಟ್ರೀಯ ಹೈಸ್ಪೀಡ್ ರೈಲು ಕಾರ್ಪೊರೇಷನ್ ಲಿಮಿಟೆಡ್ (NHSRCL) ಅಹಮದಾಬಾದ್ - ಮುಂಬೈ ಬುಲೆಟ್ ರೈಲು ಯೋಜನೆಯಲ್ಲಿ 190 ಕಿ.ಮೀ ವಯಾಡಕ್ಟ್ ಮತ್ತು 321 ಕಿ.ಮೀ ಪಿಯರ್ ಕೆಲಸವನ್ನು ಪೂರ್ಣಗೊಳಿಸಿದೆ. ಹೆಚ್ಚುವರಿಯಾಗಿ, ಒಟ್ಟು 24 ನದಿ ಸೇತುವೆಗಳಲ್ಲಿ ಎಂಟು ಸೇತುವೆಗಳ ಕಾಮಗಾರಿ ಪೂರ್ಣಗೊಂಡಿದೆ. ಯೋಜನೆಯ ಎಲ್ಲಾ ನಾಗರಿಕ ಗುತ್ತಿಗೆಗಳನ್ನು ಮಹಾರಾಷ್ಟ್ರ ಮತ್ತು ಗುಜರಾತ್ ಎರಡೂ ರಾಜ್ಯಗಳಲ್ಲಿ ನೀಡಲಾಗಿದೆ. ಗುಜರಾತ್, ದಾದ್ರಾ ಮತ್ತು ನಗರ್ ಹವೇಲಿ (ಡಿಎನ್ಎಚ್) ಮತ್ತು ಮಹಾರಾಷ್ಟ್ರದಲ್ಲಿ ಶೇ100 ಭೂಸ್ವಾಧೀನ ಕೆಲಸ ಕೂಡ ಪೂರ್ಣಗೊಂಡಿದೆ ಎಂದು NHSRCL ಅಧಿಕಾರಿಗಳು ದೃಢಪಡಿಸಿದ್ದಾರೆ.
ಬುಲೆಟ್ ರೈಲು ಕಾರಿಡಾರ್ನ ಪಾರ್, ಅಂಬಿಕಾ, ಔರಂಗ, ವೆಂಗನಿಯಾ, ಪೂರ್ಣಾ, ಮಿಂಧೋಲಾ, ಮೊಹರ್ ಮತ್ತು ಧಧಾರ್ ನದಿಗಳು ಸೇರಿದಂತೆ ಒಟ್ಟು 24 ನದಿ ಸೇತುವೆಗಳಲ್ಲಿ ಎಂಟು ಸೇತುವೆಗಳ ನಿರ್ಮಾಣ ಕಾರ್ಯಗಳು ಪೂರ್ಣಗೊಂಡಿವೆ. ಇತರ ಪ್ರಮುಖ ನದಿಗಳಾದ ನರ್ಮದಾ, ತಪತಿ, ಮಹಿ ಮತ್ತು ಸಬರಮತಿ ನದಿ ಸೇತುವೆಗಳ ಕಾಮಗಾರಿ ಪ್ರಗತಿಯಲ್ಲಿದೆ.

ಸೂರತ್, ಆನಂದ್ ಮತ್ತು ವಡೋದರಾದಲ್ಲಿ ಕ್ರಮವಾಗಿ 70 ಮೀಟರ್, 100 ಮೀಟರ್ ಮತ್ತು 130 ಮೀಟರ್ ಅಳತೆಯ ಮೂರು ಉಕ್ಕಿನ ಸೇತುವೆಗಳು ಪೂರ್ಣಗೊಂಡಿವೆ. ಸಿವಿಲ್ ಕಾಮಗಾರಿಗಳು ಮಾತ್ರವಲ್ಲದೆ, ಎಲ್ಲಾ ಡಿಪೋ ಮತ್ತು ಎಲೆಕ್ಟ್ರಿಕಲ್ ಗುತ್ತಿಗೆಗಳನ್ನು ಸಹ ನೀಡಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಗುಜರಾತ್ನಲ್ಲಿ ಒಟ್ಟು 352 ಕಿ.ಮೀ ವಯಾಡಕ್ಟ್ನಲ್ಲಿ, 338 ಕಿ.ಮೀ.ಗೆ ಅಡಿಪಾಯ ಕೆಲಸ ಪೂರ್ಣಗೊಂಡಿದೆ. ಜೊತೆಗೆ 5,549 ಗರ್ಡರ್ಗಳನ್ನು 222 ಕಿ.ಮೀ ಕ್ರಮಿಸಲಾಗಿದೆ. ವಾಪಿ, ಬಿಲಿಮೋರಾ, ಸೂರತ್, ಭರೂಚ್, ಆನಂದ್, ವಡೋದರಾ, ಅಹಮದಾಬಾದ್ ಮತ್ತು ಸಬರಮತಿ ಸೇರಿದಂತೆ ಎಲ್ಲಾ ಎಂಟು ಬುಲೆಟ್ ರೈಲು ನಿಲ್ದಾಣಗಳಿಗೆ ಅಡಿಪಾಯ ಕೆಲಸ ಪೂರ್ಣಗೊಂಡಿದೆ.

ಟ್ರ್ಯಾಕ್ ವ್ಯವಸ್ಥೆಯನ್ನು ಬೆಂಬಲಿಸಲು ಸೂರತ್ ಮತ್ತು ಆನಂದ್ನಲ್ಲಿ ಎರಡು ಅತ್ಯಾಧುನಿಕ ಟ್ರ್ಯಾಕ್ ಸ್ಲ್ಯಾಬ್ ಉತ್ಪಾದನಾ ಸೌಲಭ್ಯಗಳು ಸಂಪೂರ್ಣವಾಗಿ ಕಾರ್ಯನಿರ್ವಹಿಸುತ್ತಿವೆ. ವಲ್ಸಾದ್ನ ಜರೋಲಿ ಗ್ರಾಮದ ಬಳಿ 350 ಮೀಟರ್ ಉದ್ದದ ಮೊದಲ ಪರ್ವತ ಸುರಂಗದ ಪೂರ್ಣಗೊಳಿಸುವಿಕೆಯ ಬಗ್ಗೆ ಈ ಹಿಂದೆಯೇ ಘೋಷಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಮಹಾರಾಷ್ಟ್ರದಲ್ಲಿ, ಬಿಕೆಸಿ ಮತ್ತು ಶಿಲ್ಫಾಟಾ ನಡುವಿನ 21 ಕಿ.ಮೀ ಉದ್ದದ ಸುರಂಗದ ಭಾಗವಾಗಿರುವ 7 ಕಿ.ಮೀ ಸಮುದ್ರದಾಳದ ರೈಲು ಸುರಂಗದ ಕೆಲಸ ಪ್ರಾರಂಭವಾಗಿದೆ. ಸಬರಮತಿ ಡಿಪೋದಲ್ಲಿ, ಮಣ್ಣಿನ ಕೆಲಸ ಮುಗಿದಿದ್ದು, ಆಡಳಿತಾತ್ಮಕ ಕಟ್ಟಡ ಮತ್ತು ವಿವಿಧ ಶೆಡ್ಗಳು ಮತ್ತು ಕಾರ್ಯಾಗಾರಗಳ ನಿರ್ಮಾಣದ ಜೊತೆಗೆ ಓವರ್ಹೆಡ್ ಉಪಕರಣಗಳ ಅಡಿಪಾಯ ಕೆಲಸ ಪ್ರಗತಿಯಲ್ಲಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ರೈಲ್ವೆ ಇಲಾಖೆಯು ಈ ರೈಲುಗಳ ಕಾರ್ಯಾಚರಣೆಯನ್ನು ಆರಂಭಿಸಿದ ಮೇಲೆ ಪ್ರತಿದಿನ 70 ಟ್ರಿಪ್ಗಳೊಂದಿಗೆ 35 ಬುಲೆಟ್ ರೈಲುಗಳನ್ನು ಓಡಿಸಲಿದೆ. ಈ ಬುಲೆಟ್ ರೈಲುಗಳ ಸಂಖ್ಯೆಯನ್ನು 2050ರ ವೇಳೆಗೆ 105ಕ್ಕೆ ಹೆಚ್ಚಿಸಲು ಯೋಜಿಸಲಾಗಿದೆ. ಇವು ಸಂಚಾರ ಆರಂಭಿಸಿದ ಬಳಿಕ, ಪ್ರತಿ ವರ್ಷ ಸುಮಾರು 1.6 ಕೋಟಿ ಜನರು ಪ್ರಯಾಣಿಸುವ ನಿರೀಕ್ಷೆಯಿದೆ.
ಡ್ರೈವ್ಸ್ಪಾರ್ಕ್ ಕನ್ನಡ ವೆಬ್ಸೈಟ್ ತ್ವರಿತ ಆಟೋಮೊಬೈಲ್ ಸುದ್ದಿಗಳನ್ನು ಒದಗಿಸುತ್ತದೆ, ಎಲ್ಲಾ ಸಾಮಾಜಿಕ ಮಾಧ್ಯಮಗಳ ಮೂಲಕ ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಹಂಚಿಕೊಳ್ಳುತ್ತದೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊಗಳನ್ನು ಪಡೆಯಲು ನಮ್ಮ ಫೇಸ್ಬುಕ್, ಇನ್ಸ್ಟಾಗ್ರಾಮ್ ಮತ್ತು ಯೂಟ್ಯೂಬ್ ಪೇಜ್ಗಳೊಂದಿಗೆ ಸಂಪರ್ಕದಲ್ಲಿರಿ. ನಿಮಗೆ ಯಾವುದೇ ಸುದ್ದಿ ಇಷ್ಟವಾದರೆ ಲೈಕ್, ಕಾಮೆಂಟ್ ಮಾಡುವುದನ್ನು ಮರೆಯದಿರಿ. ಜೊತೆಗೆ ನಿಮ್ಮ ಸ್ನೇಹಿತರಿಗೂ ತಪ್ಪದೆ ಶೇರ್ ಮಾಡಿ.


Click it and Unblock the Notifications








