ನಿರ್ವಹಣೆ ದುಬಾರಿ; ಬಿಎಂಡಬ್ಲ್ಯು ಕಾರನ್ನು ಮರಳಿಸಲಿರುವ ದೀಪಾ ಕರ್ಮಾಕರ್
ಬ್ರೆಜಿಲ್ ನಲ್ಲಿ ನಡೆದ 2016 ರಿಯೊ ಒಲಿಂಪಿಕ್ಸ್‌ನ ಜಿಮ್ನಾಸ್ಟಿಕ್ಸ್ ವಿಭಾಗದಲ್ಲಿ ಗಮನಾರ್ಹ ಸಾಧನೆ ಮಾಡಿರುವ ಭಾರತದ ದೀಪಾ ಕರ್ಮಾರಕ್ ಅವರಿಗೆ ಬಿಎಂಡಬ್ಲ್ಯು ಸಂಸ್ಥೆಯ ಮುಖ್ಯ ರಾಯಭಾರಿ ಕೂಡಾ ಆಗಿರುವ ಸಚಿನ್ ತೆಂಡೂಲ್ಕರ್ ಸಾನಿಧ್ಯದಲ್ಲಿ ಹೊಚ್ಚ ಹೊಸ ಬಿಎಂಡಬ್ಲ್ಯು ಕಾರನ್ನು ನೀಡಲಾಗಿತ್ತು. ಆದರೆ ಇದೀಗ ಬಿಎಂಡಬ್ಲ್ಯು ಕಾರಿನ ನಿರ್ವಹಣೆ ದುಬಾರಿಯಾಗಿರುವ ಹಿನ್ನಲೆಯಲ್ಲಿ ಕಾರನ್ನು ಮರಳಿಸಲು ದೀಪಾ ನಿರ್ಧರಿಸಿದ್ದಾರೆ.

ರಿಯೊ ಸಾಧನೆಯ ಬಳಿಕ ದೇಶಕ್ಕೆ ಮರಳಿದ್ದ ದೇಶದ ಒಲಿಂಪಿಕ್ ಸಾಧಕರಿಗೆ ಕಳೆದ ಸೆಪ್ಟೆಂಬರ್ ತಿಂಗಳಲ್ಲಿ ಆಯೋಜಿಸಲಾಗಿದ್ದ ಭವ್ಯ ಸಮಾರಂಭದಲ್ಲಿ ಬಿಎಂಡಬ್ಲ್ಯು ಕಾರುಗಳನ್ನು ಉಡುಗೊರೆಯಾಗಿ ನೀಡಲಾಗಿತ್ತು.

ಈ ಸಂದರ್ಭದಲ್ಲಿ ಬ್ಯಾಡ್ಮಿಂಟನ್ ಮಹಿಳಾ ಸಿಂಗಲ್ಸ್ ವಿಭಾಗದಲ್ಲಿ ಬೆಳ್ಳಿ ಪದಕ ವಿಜೇತೆ ಪಿವಿ ಸಿಂಧು ಆಕೆಯ ಕೋಚ್ ಪುಲ್ಲೇಲಾ ಗೋಪಿಚಂದ್ ಮತ್ತು ಕುಸ್ತಿ ವಿಭಾಗದಲ್ಲಿ ಕಂಚಿನ ಪದಕ ಗೆದ್ದಿರುವ ಸಾಕ್ಷಿ ಮಲಿಕ್ ಅವರಿಗೆ ಬಿಎಂಡಬ್ಲ್ಯು ಕಾರುಗಳನ್ನು ನೀಡಲಾಗಿತ್ತು.

ಹೈದರಾಬಾದ್ ಬ್ಯಾಡ್ಮಿಂಟನ್ ಸಂಸ್ಥೆಯ ಅಧ್ಯಕ್ಷ ವಿ ಚಾಮುಂಡೇಶ್ವರನಾಥ್ ಬಿಎಂಡಬ್ಲ್ಯು ಕಾರುಗಳನ್ನು ಉಡುಗೊರೆಯಾಗಿ ನೀಡಿದ್ದರು. ಆದರೆ ನಿರ್ವಹಣೆ ಕಷ್ಟದ ಹಿನ್ನಲೆಯಲ್ಲಿ ಕಾರನ್ನು ನೈಜ ಮಾಲಿಕರಿಗೆ ಮರಳಿಸಲು ದೀಪಾ ನಿರ್ಧರಿಸಿದ್ದಾರೆ.

ಅಗರ್ತಲಾದಂತಹ ಚಿಕ್ಕ ನಗರದಲ್ಲಿ ಐಷಾರಾಮಿ ಆಡಿ ಕಾರಿನ ನಿರ್ವಹಣೆಯನ್ನು ಮಾಡುವುದು ದೀಪಾ ಮತ್ತು ಆಕೆಯ ಕುಟುಂಬಕ್ಕೆ ಕಷ್ಟವೆನಿಸಿದೆ. ಅಲ್ಲಿನ ರಸ್ತೆಗಳು ಕಿರಿದಾಗಿದ್ದು, ರಸ್ತೆಯ ಪರಿಸ್ಥಿತಿ ಸಹ ಶೋಚನೀಯವಾಗಿದೆ.

ಇವೆಲ್ಲದಕ್ಕೂ ಮಿಗಿಲಾಗಿ ದೀಪಾ ಅವರು ಮುಂದಿನ ತಿಂಗಳು ಜರ್ಮನಿಯಲ್ಲಿ ನಡೆಯಲಿರುವ ಚಾಲೆಂಜರ್ ಕಪ್ ಎದುರು ನೋಡುತ್ತಿದ್ದಾರೆ. ಆಕೆ ಕಾರಿನ ನಿರ್ವಹಣಾ ವೆಚ್ಚ ಭರಿಸುವ ಬದಲಾಗಿ ತರಹಬೇತಿಯತ್ತ ಹೆಚ್ಚಿನ ಗಮನ ಕೇಂದ್ರಿಕರಿಸುವ ಅಗತ್ಯವಿದೆ.

ಈ ಸಂಬಂಧ ಸ್ಪಷ್ಟನೆ ನೀಡಿರುವ ದೀಪಾ ತರಬೇತುದಾರ ಬಿಶ್ವೇಶರ್ ನಂದಿ, "ಈ ನಿರ್ಧಾರ ಆಕೆಯದ್ದಲ್ಲ. ಬದಲಾಗಿ ಆಕೆಯ ಕುಟುಂಬ ಮತ್ತು ನಾನು ಜಂಟಿಯಾಗಿ ನಿರ್ಧಾರ ಕೈಗೊಂಡಿದ್ದೇನೆ" ಎಂದಿದ್ದಾರೆ.

"ಕಾರನ್ನು ಮರಳಿಸಲು ಎರಡು ಪ್ರಮುಖ ಕಾರಣಗಳಿವೆ. ಒಂದನೆಯದಾಗಿ ಅಗರ್ತಲಾದಲ್ಲಿ ಬಿಎಂಡಬ್ಲ್ಯು ಸರ್ವೀಸ್ ಸೆಂಟರ್ ಇಲ್ಲ. ಎರಡನೇಯದಾಗಿ ಐಷಾರಾಮಿ ಕಾರನ್ನು ಓಡಿಸಲು ಇಲ್ಲಿನ ರಸ್ತೆಯು ಯೋಗ್ಯವಲ್ಲ" ಎಂದು ಕೋಚ್ ಬಿಶ್ವೇಶರ್ ನಂದಿ ಸೇರಿಸಿದ್ದಾರೆ.

ಇವನ್ನೂ ಓದಿ:
01. ಒಲಿಂಪಿಕ್ ಸಾಧಕರಿಗೆ ಸಚಿನ್ ಬಿಎಂಡಬ್ಲ್ಯು ಕಾರು ಉಡುಗೊರೆ
02. ಸಚಿನ್ ಅಭಿರುಚಿಗೆ ಬಗ್ಗಿದ ಬಿಎಂಡಬ್ಲ್ಯು
03. ತೆಲುಗು ಸ್ಟಾರ್ ನಾಗಾರ್ಜುನ ಕುಟುಂಬಕ್ಕೆ ಬಂದ ಹೊಸ ಅತಿಥಿ!


Click it and Unblock the Notifications








