ಇನ್ನೆರಡೇ ವರ್ಷ... ಮೊದಲ ಬುಲೆಟ್ ರೈಲು ಕಾರ್ಯಾಚರಣೆ... 508 ಕಿ.ಮೀ, 2 ಗಂಟೆ ಪ್ರಯಾಣ
ಭಾರತದ ಮೊದಲ ಬುಲೆಟ್ ರೈಲು (Bullet Train) ಕಾಮಗಾರಿಯು ವೇಗಗೊಂಡಿದೆ. ಎಲ್ಲವೂ ಅಂದುಕೊಂಡಂತೆ ನಡೆಯುತ್ತಿದ್ದು, ಮುಂಬರುವ ದಿನಗಳಲ್ಲಿ ಯಾವುದೇ ಅಡೆತಡೆಗಳಿಲ್ಲದೇ ಕಾಮಗಾರಿ ಮುಂದುವರಿದರೆ, 2026ರ ಜೂನ್ ಅಥವ ಜುಲೈನಲ್ಲಿ ಗುಜರಾತ್‌ನಲ್ಲಿ ಮೊದಲ ಬುಲೆಟ್ ರೈಲು ಕಾರ್ಯಾಚರಣೆಯನ್ನು ಪ್ರಾರಂಭಿಸಲಿದೆ ಎಂದು ಭಾರತೀಯ ರೈಲ್ವೆ ವಿಶ್ವಾಸ ವ್ಯಕ್ತಪಡಿಸಿದೆ.
ಇತ್ತೀಚೆಗೆ ಹೊರಡಿಸಿದ ಟೈಮ್ಸ್ ಆಫ್ ಇಂಡಿಯಾ ವರದಿಯಲ್ಲಿ, ಇದೇ ತಿಂಗಳ ಕೊನೆಯಲ್ಲಿ ಜಪಾನ್‌ನಿಂದ ಬರಬೇಕಿರುವ ಮೊದಲ 6 ಶಿಂಕಾನ್ಸೆನ್ (ಬುಲೆಟ್) ರೈಲುಗಳನ್ನು ಖರೀದಿಸುವ ಒಪ್ಪಂದಕ್ಕೆ ಭಾರತ ಸರ್ಕಾರ ಸಹಿ ಹಾಕಲಿದೆ. ಈ ವರ್ಷದ ಆಗಸ್ಟ್ 15ರೊಳಗೆ ರೈಲುಗಳ ಖರೀದಿ ಮತ್ತು ಆಪರೇಟಿಂಗ್ ಸಿಸ್ಟಮ್ ಸೇರಿದಂತೆ ಎಲ್ಲಾ ಒಪ್ಪಂದಗಳನ್ನು ರಾಷ್ಟ್ರೀಯ ಹೈಸ್ಪೀಡ್ ರೈಲು ಕಾರ್ಪೊರೇಷನ್ ಲಿಮಿಟೆಡ್ (NHSRCL) ಬಿಡ್ ಮಾಡಲಿದೆ ಎಂದು ವರದಿಯಾಗಿದೆ.

ಮೊದಲ ಬುಲೆಟ್ ರೈಲು ಎಲ್ಲಿಂದ ಎಲ್ಲಿಗೆ: ಮುಂಬೈ (Mumbai) - ಅಹಮದಾಬಾದ್ (Ahmedabad) ನಗರಗಳನ್ನು ಸಂಪರ್ಕಿಸುವ ಮೂಲಕ ಮಹಾರಾಷ್ಟ್ರ ಹಾಗೂ ಗುಜರಾತ್ ರಾಜ್ಯಗಳು ದೇಶದ ಮೊದಲ ಬುಲೆಟ್ ರೈಲನ್ನು ಪಡೆಯಲಿವೆ. ಪ್ರಸ್ತುತ ನಿರ್ಮಾಣ ಕಾರ್ಯಗಳು ವೇಗಗೊಂಡಿದ್ದು, 2024 ಜನವರಿ ವೇಳೆಗೆ ಒಟ್ಟಾರೆ ಶೇ40 ರಷ್ಟು ಕಾಮಗಾರಿ ಪೂರ್ಣಗೊಂಡಿದೆ. ರಾಜ್ಯಗಳವಾರು ನೋಡುವುದಾದ್ರೆ, ಮಹಾರಾಷ್ಟ್ರದಲ್ಲಿ ಶೇ22.5 ರಷ್ಟು ಹಾಗೂ ಗುಜರಾತ್‌ನಲ್ಲಿ ಶೇ48.3 ರಷ್ಟು ಕಾಮಗಾರಿ ಪೂರ್ಣಗೊಂಡಿದೆ.
ಈ ಅಂಕಿ ಅಂಶಗಳನ್ನು ನೋಡಿದ್ರೆ ಗುಜರಾತ್‌ನಲ್ಲಿ ಕಾಮಗಾರಿಯು ಶರವೇಗದಲ್ಲಿ ನಡೆಯುತ್ತಿದೆ. ಇತ್ತ ಮಹರಾಷ್ಟ್ರ ರಾಜ್ಯ ಸರ್ಕಾರ ಕೂಡ ಕಾಮಗಾರಿ ವೇಗವನ್ನು ಹೆಚ್ಚಿಸಲು ಇದೇ ತಿಂಗಳಾಂತ್ಯದ ವೇಳೆಗೆ ಭೂಸ್ವಾಧೀನ ಪ್ರಕ್ರಿಯೆಯನ್ನು ಪೂರ್ಣಗೊಳಿಸಲು ಜಿಲ್ಲಾಧಿಕಾರಿಗಳಿಗೆ ನಿರ್ದೇಶಿಸಿದೆ. ಹಿಂದಿನ ಮಹಾರಾಷ್ಟ್ರ ಸರ್ಕಾರದ ವಿಳಂಭದಿಂದಾಗಿ ಹಿಂದುಳಿದಿದ್ದ ಕಾರ್ಯಗಳನ್ನು ಈಗ ಸರಿದೂಗಿಸಲು ಶ್ರಮಿಸುತ್ತಿರುವುದಾಗಿ ರೈಲ್ವೆ ಇಲಾಖೆಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಬುಲೆಟ್ ರೈಲಿನ ವಿಶೇಷತೆಗಳು: ಮುಂಬೈ - ಅಹಮದಾಬಾದ್ ಬುಲೆಟ್ ರೈಲು ಕಾರಿಡಾರ್ 508 ಕಿ.ಮೀ ಇದ್ದು, ಸೀಮಿತ ಸಂಖ್ಯೆಯ ನಿಲ್ದಾಣಗಳಲ್ಲಿ ಮಾತ್ರ ನಿಲ್ಲುತ್ತದೆ. ಸೀಮಿತ ಪ್ರದೇಶಗಳಲ್ಲಿ ನಿಲುಗಡೆ ಮೂಲಕ ಕೇವಲ ಎರಡು ಗಂಟೆಗಳಲ್ಲಿ ಪ್ರಯಾಣವನ್ನು ಪೂರ್ಣಗೊಳಿಸುತ್ತದೆ. ಇನ್ನು ಎಲ್ಲಾ ನಿಲ್ದಾಣಗಳಲ್ಲಿ ನಿಲುಗಡೆ ನೀಡುವ ಬುಲೆಟ್ ರೈಲು 45 ನಿಮಿಷ ಹೆಚ್ಚುವರಿ ನಿಮಿಷಗಳನ್ನು ತೆಗೆದುಕೊಳ್ಳುತ್ತದೆ.
ಮೊದಲೇ ಹೇಳಿದಂತೆ ಇವೆರಡು ನಗರಗಳ ನಡುವೆ 508 ಕಿ.ಮೀ ದೂರವನ್ನು ಬುಲೆಟ್ ರೈಲು ಕೇವಲ 2 ಗಂಟೆಗಳಲ್ಲಿ ಕ್ರಮಿಸಲಿದ್ದು, ಗಂಟೆಗೆ ಗರಿಷ್ಠ 320 ಕಿ.ಮೀ ವೇಗದಲ್ಲಿ ಸಂಚರಿಸಲಿದೆ. ಮುಂಬೈ ಮತ್ತು ಅಹಮದಾಬಾದ್ ಬುಲೆಟ್ ರೈಲು ಮಾರ್ಗವನ್ನು ನವೀನ ತಂತ್ರಜ್ಞಾನವನ್ನು ಬಳಸಿ ಸಿದ್ದಪಡಿಸಲಾಗಿದೆ. ಭಾರತದಲ್ಲಿ ಮೊದಲ ಬಾರಿಗೆ ಚಪ್ಪಡಿ ಹಳಿ ವ್ಯವಸ್ಥೆ (Slab Track System)ಯನ್ನು ಉಪಯೋಗ ಮಾಡಲಾಗಿದೆ.

ಜೊತೆಗೆ ಆರಂಭಿಕ ಭೂಕಂಪ ಪತ್ತೆ ವ್ಯವಸ್ಥೆ (Early Earthquake Detection System)ಯನ್ನು ಅಳವಡಿಸಲಾಗಿದೆ. ಈ ಬುಲೆಟ್ ರೈಲು ಮಾರ್ಗವು 24 ನದಿ ಸೇತುವೆ, 28 ಉಕ್ಕಿನ ಸೇತುವೆ (Steel Bridges), 7 ಪರ್ವತ ಸೇತುವೆ (Mountain tunnels), 7 ಕಿ.ಮೀ ಆಳ ಸಮುದ್ರ ಸುರಂಗ (Long Undersea Tunnels), 12 ರೈಲು ನಿಲ್ದಾಣಗಳನ್ನು ಒಳಗೊಂಡಿದೆ.
ಮುಂಬೈ ಹಾಗೂ ಅಹಮದಾಬಾದ್ ಕಾರಿಡಾರ್ ಕಾಮಗಾರಿಯು ನವೆಂಬರ್ 2021ರಲ್ಲಿ ಆರಂಭವಾಗಿತ್ತು. ಅಂದಿನಿಂದ ಈವರೆಗೆ ಸ್ಥಿರ ಪ್ರಗತಿಯನ್ನು ಕಾಣುತ್ತಿದೆ. ರೈಲ್ವೆ ಇಲಾಖೆಯು ಈ ರೈಲುಗಳ ಕಾರ್ಯಾಚರಣೆಯನ್ನು ಆರಂಭಿಸಿದ ಮೇಲೆ ಪ್ರತಿದಿನ 70 ಟ್ರಿಪ್‌ಗಳೊಂದಿಗೆ 35 ಬುಲೆಟ್ ರೈಲುಗಳನ್ನು ಓಡಿಸಲಿದೆ. ಪ್ರತಿ ವರ್ಷ ಸುಮಾರು 1.6 ಕೋಟಿ ಜನರು ಪ್ರಯಾಣಿಸುವ ನಿರೀಕ್ಷೆಯಿದೆ. ಯೋಜನೆ ಪೂರ್ಣಗೊಳ್ಳುವ ವೇಳೆಗೆ ರೂ.1.08 ಲಕ್ಷ ಕೋಟಿ ವೆಚ್ಚವಾಗಲಿದೆ ಎಂದು ಅಂದಾಜಿಸಲಾಗಿದೆ.


Click it and Unblock the Notifications








