ಮುಂಬೈ ಕೋಸ್ಟಲ್ ರೋಡ್, ಸೀ ಲಿಂಕ್‌ನಲ್ಲಿ ಹೊಸ ನಿಯಮ: ಇನ್ಮುಂದೆ ರೀಲ್ಸ್ ಮಾಡಿದ್ರೆ ಬೀಳುತ್ತೆ ಭಾರಿ ದಂಡ!
ಮುಂಬೈನ ಕರಾವಳಿ ರಸ್ತೆ (ಕೋಸ್ಟಲ್ ರೋಡ್) ಮತ್ತು ಬಾಂದ್ರಾ-ವರ್ಲಿ ಸೀ ಲಿಂಕ್‌ನಲ್ಲಿ ಸಂಚಾರಕ್ಕೆ ಸಂಬಂಧಿಸಿದಂತೆ ಹೊಸ ಶಾಶ್ವತ ಕಟ್ಟುಪಾಡುಗಳು ಇಂದು, ಅಂದರೆ 2026ರ ಆಗಸ್ಟ್ 26ರಿಂದ ಜಾರಿಗೆ ಬಂದಿವೆ. ಈ ಹಿಂದೆ ಹೊರಡಿಸಲಾಗಿದ್ದ ತಾತ್ಕಾಲಿಕ ಆದೇಶಗಳನ್ನೇ ಒಟ್ಟುಗೂಡಿಸಿ ಮುಂಬೈ ಸಂಚಾರ ಪೊಲೀಸರು ಈಗ ಶಾಶ್ವತ ಅಧಿಸೂಚನೆ ಹೊರಡಿಸಿದ್ದಾರೆ. ನೂತನ ನಿಯಮಗಳನ್ನು ಉಲ್ಲಂಘಿಸುವ ಐಷಾರಾಮಿ ಹಾಗೂ ಸೂಪರ್‌ಕಾರ್ ಮಾಲೀಕರಿಗೆ ಭಾರಿ ದಂಡ ಬೀಳುವುದು ಖಚಿತ. ಇದರ ಜೊತೆಗೆ, ಈ ಎರಡೂ ಕಾರಿಡಾರ್‌ಗಳಲ್ಲಿ ಯಾವುದೇ ರೀತಿಯ ಫೋಟೋ ಶೂಟ್ ಹಾಗೂ ವಿಡಿಯೋ ಚಿತ್ರೀಕರಣವನ್ನು ಸಂಪೂರ್ಣವಾಗಿ ನಿಷೇಧಿಸಲಾಗಿದೆ.
ದ್ವಿಚಕ್ರ, ತ್ರಿಚಕ್ರ ವಾಹನಗಳು, ಸರಕು ಸಾಗಣೆ ವಾಹನಗಳು, ಟ್ರಕ್, ಟ್ರೇಲರ್, ಮಿಕ್ಸರ್, ಟ್ರ್ಯಾಕ್ಟರ್ ಸೇರಿದಂತೆ ಯಾವುದೇ ಭಾರೀ ವಾಹನಗಳ ಪ್ರವೇಶವನ್ನು ಸಂಪೂರ್ಣವಾಗಿ ನಿರ್ಬಂಧಿಸಲಾಗಿದೆ. ಪಾದಚಾರಿಗಳು ಹಾಗೂ ಎತ್ತಿನಗಾಡಿಯಂತಹ ಪ್ರಾಣಿ ಚಾಲಿತ ಗಾಡಿಗಳಿಗೂ ಪ್ರವೇಶವಿಲ್ಲ. ಆದರೆ, ಪ್ರಯಾಣಿಕರ ಬಸ್‌ಗಳ ಸಂಚಾರಕ್ಕೆ ಅವಕಾಶ ಕಲ್ಪಿಸಲಾಗಿದೆ. ಇನ್ನು ವೇಗದ ಮಿತಿಗೆ ಬಂದರೆ, ನೇರ ರಸ್ತೆಯಲ್ಲಿ ಗರಿಷ್ಠ 80 ಕಿ.ಮೀ/ಗಂಟೆ, ಸುರಂಗ ಮಾರ್ಗದಲ್ಲಿ 60 ಕಿ.ಮೀ/ಗಂಟೆ ಹಾಗೂ ರಸ್ತೆಗಳು ಸೇರುವ ಜಂಕ್ಷನ್‌ಗಳಲ್ಲಿ 40 ಕಿ.ಮೀ/ಗಂಟೆ ವೇಗ ನಿಗದಿಪಡಿಸಲಾಗಿದೆ. ಈ ಆದೇಶಕ್ಕೆ ಸಂಚಾರ ವಿಭಾಗದ ಮೊಕ್ಷದಾ ಪಾಟೀಲ್ ಅವರು ಆಗಸ್ಟ್ 25 ರಂದು ಸಹಿ ಹಾಕಿದ್ದಾರೆ.

ಮುಂಬೈ ಕೋಸ್ಟಲ್ ರೋಡ್, ಸೀ ಲಿಂಕ್‌ನಲ್ಲಿ ವಾಹನ ಸಂಚಾರಕ್ಕೆ ಶಾಶ್ವತ ನಿಯಮ
ಸೀ ಲಿಂಕ್‌ನಲ್ಲಿ ವಾಹನಗಳ ಗರಿಷ್ಠ ವೇಗದ ಮಿತಿ 80 ಕಿ.ಮೀ/ಗಂಟೆ ಮುಂದುವರಿಯಲಿದೆ. ಬಿಇಎಸ್‌ಟಿ (BEST) ಬಸ್‌ಗಳನ್ನು ಹೊರತುಪಡಿಸಿ, ಇತರ ಯಾವುದೇ ವಾಹನಗಳು ದಾರಿಯಲ್ಲಿ ನಿಲ್ಲುವುದು, ಪ್ರಯಾಣಿಕರನ್ನು ಹತ್ತಿಸುವುದು ಅಥವಾ ಇಳಿಸುವುದನ್ನು ನಿಷೇಧಿಸಲಾಗಿದೆ. ಕಾರುಗಳ ಕಾನ್ವಾಯ್ ನಡೆಸುವುದು, ಚಲಿಸುವ ವಾಹನಗಳ ವಿಡಿಯೋ (ರೋಲಿಂಗ್ ಶಾಟ್ಸ್) ತೆಗೆಯುವುದು ಮತ್ತು ಇನ್‌ಫ್ಲುಯೆನ್ಸರ್‌ಗಳ ರೀಲ್ಸ್/ವಿಡಿಯೋ ಶೂಟಿಂಗ್‌ಗೆ ಸಂಪೂರ್ಣ ಬ್ರೇಕ್ ಹಾಕಲಾಗಿದೆ. ಕೋಸ್ಟಲ್ ರೋಡ್ ಮತ್ತು ಸೀ ಲಿಂಕ್ ಪರಸ್ಪರ ಸಂಪರ್ಕ ಹೊಂದಿರುವುದರಿಂದ, ಈ ಎಲ್ಲಾ ನಿಯಮಗಳು ಆರಂಭದಿಂದ ಕೊನೆಯವರೆಗೂ ಅನ್ವಯವಾಗಲಿವೆ.
ವೇಗದ ಮಿತಿ, ಭಾರಿ ದಂಡ: ಸೂಪರ್‌ಕಾರ್ ಚಾಲಕರು ನೆನಪಿಡಬೇಕಾದ ವಿಷಯಗಳು
ನಿಗದಿತ ವೇಗದ ಮಿತಿ ಮೀರಿದರೆ ಸೆಕ್ಷನ್ 183 ರ ಅಡಿಯಲ್ಲಿ ಕಾರುಗಳಿಗೆ 1,000 ರೂ.ನಿಂದ 2,000 ರೂ.ವರೆಗೆ ದಂಡ ವಿಧಿಸಲಾಗುತ್ತದೆ. ರೇಸಿಂಗ್ ಅಥವಾ ಸ್ಟಂಟ್ ಡ್ರೈವಿಂಗ್ ಮಾಡಿದರೆ ಸೆಕ್ಷನ್ 189 ರ ಅಡಿಯಲ್ಲಿ ಮೊದಲ ಬಾರಿಗೆ 5,000 ರೂ. ಹಾಗೂ ಮರುತಪ್ಪಿಗೆ 10,000 ರೂ. ದಂಡ ತೆರಬೇಕಾಗುತ್ತದೆ. ಅಕ್ರಮ ಅಥವಾ ಸ್ಪಷ್ಟವಾಗಿ ಕಾಣಿಸದ ನಂಬರ್ ಪ್ಲೇಟ್‌ಗಳಿಗೆ ಮೊದಲ ಬಾರಿಗೆ 500 ರೂ. ಮತ್ತು ಆನಂತರ 1,500 ರೂ. ದಂಡ ವಿಧಿಸಲಾಗುತ್ತದೆ. ಕಣ್ಣು ಕೋರೈಸುವ ಲೈಟ್‌ಗಳು ಅಥವಾ ಹೆಚ್ಚುವರಿ ಲ್ಯಾಂಪ್‌ಗಳನ್ನು ಅಳವಡಿಸಿದರೆ 500 ರೂ. ಹಾಗೂ ಮರುತಪ್ಪಿಗೆ 1,500 ರೂ. ದಂಡ ಬೀಳಲಿದೆ. ಇನ್ನು ಶಬ್ದ ಮತ್ತು ಹೊಗೆ ಹೊರಸೂಸುವಿಕೆ ನಿಯಮ ಉಲ್ಲಂಘನೆ ಅಥವಾ ಪಿಯುಸಿ (PUC) ಇಲ್ಲದಿದ್ದರೆ ಗರಿಷ್ಠ 10,000 ರೂ.ವರೆಗೆ ದಂಡ ನೀಡಬೇಕಾಗುತ್ತದೆ.
ಆದ್ದರಿಂದ ಚಾಲನೆಗೆ ಹೊರಡುವ ಮುನ್ನ ವಾಹನದಲ್ಲಿ ಕಂಪನಿ ನೀಡಿದ ಸೈಲೆನ್ಸರ್ (ಸ್ಟಾಕ್ ಎಕ್ಸಾಸ್ಟ್) ಮತ್ತು ಒರಿಜಿನಲ್ ಲೈಟ್‌ಗಳಿವೆಯೇ ಎಂದು ಪರಿಶೀಲಿಸಿಕೊಳ್ಳಿ. ನಿಯಮಾನುಸಾರ ಹೈ ಸೆಕ್ಯೂರಿಟಿ ನಂಬರ್ ಪ್ಲೇಟ್ (HSRP) ಅಳವಡಿಸಿ ಹಾಗೂ ಸಿಂಧುತ್ವ ಇರುವ ಪಿಯುಸಿ ಪ್ರಮಾಣಪತ್ರ ಜೊತೆಯಲ್ಲಿರಲಿ. ಕಾನ್ವಾಯ್ ಚಾಲನೆ, ಸುರಂಗಗಳಲ್ಲಿ ಎಂಜಿನ್ ಅತಿಯಾಗಿ ಸೌಂಡ್ ಮಾಡುವುದು ಮತ್ತು ಶೂಟಿಂಗ್ ಮಾಡುವುದನ್ನು ತಪ್ಪಿಸಿ. ಸಂಚಾರ ಪೊಲೀಸರು ಆಟೋಮ್ಯಾಟಿಕ್ ನಂಬರ್ ಪ್ಲೇಟ್ ಗುರುತಿಸುವ ಕ್ಯಾಮೆರಾಗಳು ಮತ್ತು ಇಂಟರ್‌ಸೆಪ್ಟರ್ ಪೆಟ್ರೋಲಿಂಗ್ ಮೂಲಕ ಕಣ್ಣಿಟ್ಟಿರುತ್ತಾರೆ. ರಸ್ತೆಗೆ ಪ್ರವೇಶಿಸುವ ಮತ್ತು ನಿರ್ಗಮಿಸುವ ದಾರಿಯನ್ನು ಮೊದಲೇ ಪ್ಲಾನ್ ಮಾಡಿ, ಮಾರ್ಗಮಧ್ಯೆ ಎಲ್ಲೂ ವಾಹನ ನಿಲ್ಲಿಸಬೇಡಿ. ಸೋಶಿಯಲ್ ಮೀಡಿಯಾ ಕಂಟೆಂಟ್ ಶೂಟಿಂಗ್‌ಗಾಗಿ ಖಾಸಗಿ ಟ್ರ್ಯಾಕ್ ಅಥವಾ ಅನುಮತಿ ಇರುವ ಸ್ಥಳಗಳನ್ನು ಬಳಸಿಕೊಳ್ಳುವುದು ಸೂಕ್ತ.


Click it and Unblock the Notifications