ಸೆಕೆಂಡ್ ಹ್ಯಾಂಡ್ ಕಾರು ಖರೀದಿಸುವಾಗ ಈ ವಿಚಾರಗಳನ್ನ ತಪ್ಪದೇ ತಿಳಿಯಲೇಬೇಕು!
ಕೆಲವು ವರ್ಷಗಳ ಹಿಂದೆ ಸೆಕೆಂಡ್ ಹ್ಯಾಂಡ್ ಕಾರುಗಳನ್ನು ಖರೀದಿಸುವವರ ಸಂಖ್ಯೆ ಕಡಿಮೆ ಇತ್ತು. ಆದರೆ ಈಗ ಕಾಲ ಬದಲಾಗಿದ್ದು, ಬಹಳಷ್ಟು ಜನರು ಸೆಕೆಂಡ್ ಹ್ಯಾಂಡ್ ಕಾರುಗಳನ್ನು ಖರೀದಿಸುತ್ತಿದ್ದಾರೆ.

ಆದರೆ ಸೆಕೆಂಡ್ ಹ್ಯಾಂಡ್ ಕಾರುಗಳನ್ನು ಖರೀದಿಸುವಾಗ ಕೆಲವು ಜನರಲ್ಲಿ ತಪ್ಪು ಕಲ್ಪನೆ ಮೂಡುತ್ತದೆ. ಈ ಲೇಖನದಲ್ಲಿ ಸೆಕೆಂಡ್ ಹ್ಯಾಂಡ್ ಕಾರುಗಳ ಬಗ್ಗೆ ಇರುವ ಮಿಥ್ಯಗಳು ಯಾವುವು, ಸತ್ಯಾಸತ್ಯತೆಗಳು ಯಾವುವು ಎಂಬುದನ್ನು ಈ ಲೇಖನದಲ್ಲಿ ನೋಡೋಣ.

1. ಬಳಸಿದ ಕಾರಿಗಿಂತ ಹೊಸ ಕಾರು ಖರೀದಿಸುವುದು ಹೆಚ್ಚು ಲಾಭದಾಯಕ
ಬಳಸಿದ ಕಾರು ಖರೀದಿಸುವುದಕ್ಕಿಂತ ಹೊಸ ಕಾರು ಖರೀದಿಸುವುದು ಹೆಚ್ಚು ಲಾಭದಾಯಕ ಎಂಬುದು ದೊಡ್ಡ ತಪ್ಪು ಕಲ್ಪನೆ. ಉಪಯೋಗಿಸಿದ ಕಾರುಗಳು ಕಡಿಮೆ ಬೆಲೆಗೆ ದೊರೆಯುತ್ತವೆ.

ಬಳಸಿದ ಕಾರುಗಳನ್ನು ಖರೀದಿಸುವುದರಿಂದ ರೋಡ್ ಟ್ಯಾಕ್ಸ್, ರಿಜಿಸ್ಟ್ರೇಷನ್ ಶುಲ್ಕಗಳನ್ನು ಪಾವತಿಸುವಂತಿಲ್ಲ. ಹೊಸ ಕಾರು ಖರೀದಿಸಿದಾಗ ಕಾರಿನ ಮೊದಲ ಮಾಲೀಕರು ಇವುಗಳನ್ನು ಪಾವತಿಸಿರುತ್ತಾರೆ.

2. ಬಳಸಿದ ಕಾರುಗಳಲ್ಲಿ ಸಮಸ್ಯೆಗಳಿರುತ್ತವೆ
ರಿಪೇರಿಗೆ ಬರುತ್ತವೆ ಎಂಬ ಕಾರಣಕ್ಕಾಗಿಯೇ ಜನರು ತಮ್ಮ ಕಾರುಗಳನ್ನು ಮಾರಾಟ ಮಾಡುವುದಿಲ್ಲ. ಅವರು ಕಾರನ್ನು ವಿವಿಧ ಕಾರಣಗಳಿಗಾಗಿ ಮಾರಾಟ ಮಾಡುತ್ತಾರೆ. ಉದಾಹರಣೆಗೆ ಯಾರಾದರೂ ಹೊಸ ಕಾರು ಖರೀದಿಸಿದರೆ ಅವರು ತಮ್ಮ ಹಳೆಯ ಕಾರನ್ನು ಮಾರಾಟ ಮಾಡುತ್ತಾರೆ.

ಅಂತಹ ಕಾರುಗಳಲ್ಲಿ ಯಾವುದೇ ತೊಂದರೆ ಇರುವುದಿಲ್ಲ. ಸದ್ಯಕ್ಕೆ ಬಹುತೇಕ ಸೆಕೆಂಡ್ ಹ್ಯಾಂಡ್ ಕಾರುಗಳನ್ನು ಸೇವಾ ದಾಖಲೆಗಳೊಂದಿಗೆ ಮಾರಾಟ ಮಾಡಲಾಗುತ್ತದೆ. ಈ ದಾಖಲೆಗಳು ಬಳಸಿದ ಕಾರು ಖರೀದಿಸುವವರಿಗೆ ನೆರವಾಗುತ್ತವೆ.

ಯಾವ ಬಿಡಿ ಭಾಗಗಳನ್ನು ಬದಲಿಸಲಾಗಿದೆ, ಯಾವ ರೀತಿಯ ಸರ್ವೀಸ್ ಮಾಡಿಸಲಾಗಿದೆ, ಕಾರು ಅಪಘಾತಕ್ಕೆ ಸಿಲುಕಿತ್ತೇ, ಬೇರೆ ಯಾವ ತೊಂದರೆಗಳಿದ್ದವು ಎಂಬುದು ಈ ದಾಖಲೆಗಳಿಂದ ತಿಳಿಯುತ್ತದೆ.

3. ಯಾವುದೇ ಆಧುನಿಕ ಫೀಚರ್'ಗಳು ಇರುವುದಿಲ್ಲ
ಕೆಲವರು ಕ್ಲಾಸಿಕ್ ಹಾಗೂ ವಿಂಟೇಜ್ ಕಾರುಗಳನ್ನು ಸಂಗ್ರಹಿಸುತ್ತಾರೆ. ಈ ರೀತಿಯ ಕಾರುಗಳಲ್ಲಿ ಮಾತ್ರ ಆಧುನಿಕ ಫೀಚರ್'ಗಳಿರುವುದಿಲ್ಲ. ಆದರೆ ಕಳೆದ ಕೆಲವು ವರ್ಷಗಳಿಂದ ಮಾರಾಟವಾಗುತ್ತಿರುವ ಬಹುತೇಕ ಕಾರುಗಳಲ್ಲಿ ಎಸಿ ಸೇರಿದಂತೆ ಹಲವು ಫೀಚರ್'ಗಳನ್ನು ಸ್ಟಾಂಡರ್ಡ್ ಆಗಿ ನೀಡಲಾಗುತ್ತದೆ.

ಇದೇ ವೇಳೆ ಮ್ಯೂಸಿಕ್ ಹಾಗೂ ಇನ್ಫೋಟೇನ್‌ಮೆಂಟ್ ಸಿಸ್ಟಂಗಳು ಮಾದರಿಗಳ ಮೇಲೆ ಬದಲಾಗಬಹುದು. ಬಹುತೇಕ ಬಳಸಿದ ಕಾರುಗಳು ಯುಎಸ್‌ಬಿ ಪೋರ್ಟ್,ಬ್ಲೂಟೂತ್ ಕನೆಕ್ಟಿವಿಟಿ, ಸ್ಮಾರ್ಟ್‌ಫೋನ್ ಕನೆಕ್ಟಿವಿಟಿ, ಆಪಲ್ ಕಾರ್ ಪ್ಲೇ ಹಾಗೂ ಆಂಡ್ರಾಯ್ಡ್ ಆಟೋ ಫೀಚರ್'ಗಳನ್ನು ಹೊಂದಿರುತ್ತವೆ.

ಬಳಸಿದ ಎಲ್ಲಾ ಕಾರುಗಳು ಆಧುನಿಕ ಫೀಚರ್'ಗಳನ್ನು ಹೊಂದಿರುವುದಿಲ್ಲ ಎಂಬುದು ನಿಜವಲ್ಲ. ಮಾರುತಿ ಸುಜುಕಿ ಆಗಿರಲಿ, ಮಾಸೆರಾಟಿ ಆಗಿರಲಿ ಎಲ್ಲವೂ ಖರೀದಿಸುವ ಕಾರಿನ ಮೇಲೆ ಅವಲಂಬಿತವಾಗಿರುತ್ತವೆ.

ರಿವರ್ಸ್ ಪಾರ್ಕಿಂಗ್ ಸೆನ್ಸಾರ್ ಹಾಗೂ ಕ್ಯಾಮೆರಾದಂತಹ ಫೀಚರ್'ಗಳನ್ನು ಈಗ ಸೆಕೆಂಡ್ ಹ್ಯಾಂಡ್ ಕಾರುಗಳಲ್ಲಿಯೂ ಕಾಣಬಹುದು. ಇವುಗಳು ಖರೀದಿಸುವ ಕಾರಿನ ಮೇಲೆ ಅವಲಂಬಿತವಾಗಿರುತ್ತವೆ.

ಇನ್ನು ಬಳಸಿದ ಕಾರನ್ನು ಖರೀದಿಸುವುದು ಸೂಕ್ತವೆಂದು ಬಯಸುವವರು, ಸೆಕೆಂಡ್ ಹ್ಯಾಂಡ್ ಕಾರು ಖರೀದಿಸಿದ ನಂತರ ಪಾಲಿಸಬೇಕಾದ ಸಂಗತಿಗಳೇನು ಎಂಬುದನ್ನು ಈ ಲೇಖನದಲ್ಲಿ ನೋಡೋಣ.

1. ಸರ್ವಿಸ್ ಮಾಡಿಸಿ
ಸಾಮಾನ್ಯವಾಗಿ ಜನರು ಬಳಸಿದ ಕಾರುಗಳನ್ನು ತರಾತುರಿಯಲ್ಲಿ ಖರೀದಿಸುತ್ತಾರೆ. ಕಾರು ಖರೀದಿಸಿದ ನಂತರ ಆ ಕಾರನ್ನು ವಿಶ್ವಾಸಾರ್ಹ ಮೆಕ್ಯಾನಿಕ್ ಬಳಿ ಕೊಂಡೊಯ್ದು ಅದರ ಎಂಜಿನ್ ಆಯಿಲ್ ಹಾಗೂ ಫಿಲ್ಟರ್ ಬದಲಿಸುವುದು ಒಳ್ಳೆಯದು.

2. ಸ್ವಚ್ಛಗೊಳಿಸಿ
ಬಳಸಿದ ಕಾರಿನ ಮೇಲ್ಮೈ ಎಷ್ಟು ಚೆನ್ನಾಗಿ ಕಾಣಿಸಿದರೂ, ಅದನ್ನು ಒಳಗಿನಿಂದ ಸ್ವಚ್ಛಗೊಳಿಸುವುದು ಬಹಳ ಮುಖ್ಯ. ಕಾರಿನ ಇಂಟಿರಿಯರ್ ಸ್ವಚ್ಛಗೊಳಿಸಲು ಮಾರುಕಟ್ಟೆಯಲ್ಲಿ ಹಲವಾರು ಸಾಧನಗಳು ದೊರೆಯುತ್ತವೆ.

3 ಎಂ, ಆಟೋ ಐ ಕೇರ್, ಪಿಟ್‌ಸ್ಟಾಪ್ ಹಾಗೂ ಗೋ ಮೆಕ್ಯಾನಿಕ್‌ನಂತಹ ಹಲವು ಕಂಪನಿಗಳು ಕಾರನ್ನು ಸ್ವಚ್ಛಗೊಳಿಸುವ ಹಾಗೂ ಸ್ಯಾನಿಟೈಜ್ ಮಾಡುವ ಪ್ಯಾಕೇಜ್‌ಗಳನ್ನು ನೀಡುತ್ತವೆ.

3. ಮಾಲೀಕತ್ವ ವರ್ಗಾವಣೆ
ಮಹೀಂದ್ರಾ ಫಸ್ಟ್ ಚಾಯ್ಸ್ ಅಥವಾ ಮಾರುತಿ ಸುಜುಕಿ ಟ್ರೂ-ವ್ಯಾಲ್ಯೂನಂತಹ ಕಂಪನಿಗಳ ಮೂಲಕ ಬಳಸಿದ ಕಾರನ್ನು ಖರೀದಿಸಿದರೆ, ಆ ಕಂಪನಿಗಳೇ ಕಾರುಗಳಮಾಲೀಕತ್ವ ವರ್ಗಾವಣೆಯನ್ನು ನೋಡಿಕೊಳ್ಳುತ್ತವೆ.

ಆದರೆ ಖಾಸಗಿ ಡೀಲರ್'ಗಳ ಮೂಲಕ ಅಥವಾ ಸ್ನೇಹಿತರಿಂದ ಅಥವಾ ಪರಿಚಯಸ್ಥರಿಂದ ಬಳಸಿದ ಕಾರುಗಳನ್ನು ಖರೀದಿಸಿದಾಗ ಮಾಲೀಕತ್ವದ ವರ್ಗಾವಣೆಯನ್ನು ನಿರ್ಲಕ್ಷಿಸಲಾಗುತ್ತದೆ.

ಇದರಿಂದ ಭವಿಷ್ಯದಲ್ಲಿ ಇನ್ಶ್ಯೂರೆನ್ಸ್ ಕ್ಲೈಮ್ ಮಾಡುವಾಗ ಅಥವಾ ಕಾರನ್ನು ಮಾರಾಟ ಮಾಡಲು ಮುಂದಾದಾಗ ಕಾರಿನ ಮಾಲೀಕತ್ವವು ಹಲವಾರು ಸಮಸ್ಯೆಗಳನ್ನು ಉಂಟುಮಾಡಬಹುದು.

ಬಳಸಿದ ಕಾರನ್ನು ಖರೀದಿಸಿದ ತಕ್ಷಣವೇ ಕಾರು ಮಾರಾಟ ಮಾಡುತ್ತಿರುವವರಿಂದ ಆರ್‌ಸಿ ಬುಕ್ ಸೇರಿದಂತೆ ಇನ್ನಿತರ ದಾಖಲೆಗಳನ್ನು ಪಡೆದು ಸಂಬಂಧ ಪಟ್ಟ ಆರ್‌ಟಿಓದಲ್ಲಿ ಅರ್ಜಿ ಸಲ್ಲಿಸಿ ಕಾರಿನ ಮಾಲೀಕತ್ವವನ್ನು ನಿಮ್ಮ ಹೆಸರಿಗೆ ವರ್ಗಾಯಿಸಿಕೊಳ್ಳಿ.


Click it and Unblock the Notifications








