ಮೋದಿ ಸರ್ಕಾರದಿಂದ ಗುಡ್‌ನ್ಯೂಸ್: ಎಲೆಕ್ಟ್ರಿಕ್ ದ್ವಿಚಕ್ರ ವಾಹನ ತೆಗೆದುಕೊಳ್ಳುವವರಿಗೆ ಲಾಭವೋ ಲಾಭ!
ಇಂಗಾಲ ಹೊರಸೂಸುವ ವಾಹನಗಳು ನಮ್ಮ ಸುತ್ತಲಿನ ವಾತಾವರಣಕ್ಕೆ ಹೆಚ್ಚಿನ ಪ್ರಮಾಣದಲ್ಲಿ ಹಾನಿಯುಂಟು ಮಾಡುತ್ತವೆ. ಆದರೆ, ಎಲೆಕ್ಟ್ರಿಕ್ ವಾಹನಗಳು ಪರಿಸರ ಸ್ನೇಹಿಯಾಗಿವೆ. ಈ ಹಿನ್ನೆಲೆ, ದೇಶದಲ್ಲಿ ಎಲೆಕ್ಟ್ರಿಕ್ ವಾಹನ (ವಿದ್ಯುತ್ ಚಾಲಿತ ವಾಹನ) ಬಳಕೆಯನ್ನು ಉತ್ತೇಜಿಸಲು ಪ್ರಧಾನಿ ನರೇಂದ್ರ ಮೋದಿ (Pm Narendra Modi) ನೇತೃತ್ವದಲ್ಲಿ ನಡೆದ ಕೇಂದ್ರ ಸಚಿವ ಸಂಪುಟ ಸಭೆಯಲ್ಲಿ ಹೊಸ ಯೋಜನೆಗೆ ಬುಧವಾರ ಅನುಮೋದನೆ ನೀಡಲಾಗಿದೆ. ಇದರಿಂದ ಎಲೆಕ್ಟ್ರಿಕ್ ದ್ವಿಚಕ್ರ ಹಾಗೂ ತ್ರಿಚಕ್ರ ವಾಹನ ಖರೀದಿಸುವವರಿಗೆ ಹೆಚ್ಚಿನ ಅನುಕೂಲವಾಗಲಿದೆ. ಆ ಬಗ್ಗೆ ಹೆಚ್ಚಿನ ಮಾಹಿತಿ ಇಲ್ಲಿದೆ.
ಪಿಎಂ ಇ-ಡ್ರೈವ್ (ಪಿಎಂ ಎಲೆಕ್ಟ್ರಿಕ್ ಡ್ರೈವ್ ರೆವಲ್ಯೂಷನ್ ಇನ್ನೋವೇಟಿವ್ ವೆಹಿಕಲ್ ಎನ್‌ಹಾನ್ಸ್‌ಮೆಂಟ್) ಹೆಸರಿನ ಯೋಜನೆ ಅನುಷ್ಠಾನವಾಗಲಿದೆ. ಈ ಯೋಜನೆ ಕಳೆದ 9 ವರ್ಷಗಳಿಂದ ಈ ವರ್ಷದ ಮಾರ್ಚ್‌ವರೆಗೆ ಚಾಲ್ತಿಯಲ್ಲಿದ್ದ ಫೇಮ್ (ಫಾಸ್ಟರ್ ಅಡಾಪ್ಷನ್ & ಮ್ಯಾನುಫ್ಯಾಕ್ಚರಿಂಗ್ ಎಲೆಕ್ಟ್ರಿಕ್ ಅಂಡ್ ಹೈಬ್ರಿಡ್ ವೆಹಿಕಲ್) ಯೋಜನೆಗೆ ಪರ್ಯಾಯವಾಗಲಿದೆ.

ಎರಡು ವರ್ಷಗಳ ಅವಧಿಗೆ ಹೊಸ ಪಿಎಂ ಇ-ಡ್ರೈವ್ (PM E-DRIVE) ಯೋಜನೆ ಜಾರಿಗೆ ಕೇಂದ್ರ ಸರ್ಕಾರ, ಒಟ್ಟು ರೂ.10,900 ಕೋಟಿ ಅನುದಾನ ಮೀಸಲಿಟ್ಟಿದೆ. ಹೊಸ ಯೋಜನೆಯಿಂದ 24.79 ಲಕ್ಷ ಎಲೆಕ್ಟ್ರಿಕ್ ದ್ವಿಚಕ್ರ ವಾಹನಗಳು, 3.16 ಲಕ್ಷ ಎಲೆಕ್ಟ್ರಿಕ್ ತ್ರಿಚಕ್ರ ವಾಹನಗಳು, 14,028 ಎಲೆಕ್ಟ್ರಿಕ್ ಬಸ್‌ಗಳು ಮತ್ತು 88,500 ಚಾರ್ಜಿಂಗ್ ಸ್ಟೇಷನ್‌ಗಳಿಗೆ ನೆರವು ಲಭ್ಯವಾಗಲಿದೆ.
ಈ ಯೋಜನೆಯಡಿ ಕೇಂದ್ರ ಸರ್ಕಾರ, ಸಾರ್ವಜನಿಕರು ಎಲೆಕ್ಟ್ರಿಕ್ ದ್ವಿಚಕ್ರ ವಾಹನ (Two-Wheelers) ಹಾಗೂ ತ್ರಿಚಕ್ರ ವಾಹನಗಳನ್ನು (Three-Wheelers) ಖರೀದಿಸುವಂತೆ ಉತ್ತೇಜಿಸಲು ಸಬ್ಸಿಡಿಗಾಗಿ ರೂ.2,679 ಕೋಟಿ ಮೀಸಲಿಟ್ಟಿದೆ. ಹೆಚ್ಚುವರಿಯಾಗಿ ಎಲೆಕ್ಟ್ರಿಕ್ ಟ್ರಕ್ (Electric Trucks) ಮತ್ತು ಆಂಬ್ಯುಲೆನ್ಸ್ಗಳ (Ambulances) ಖರೀದಿಗಾಗಿ ತಲಾ ರೂ.500 ಕೋಟಿಯನ್ನು ಸಬ್ಸಿಡಿ ರೂಪದಲ್ಲಿ ನೀಡಲಿದೆ.
ಸರಿ ಸುಮಾರು 40 ಲಕ್ಷಕ್ಕೂ ಹೆಚ್ಚು ಜನಸಂಖ್ಯೆ ಹೊಂದಿರುವ ದೇಶದ 9 ನಗರಗಳಲ್ಲಿ (ದೆಹಲಿ, ಮುಂಬೈ, ಕೋಲ್ಕತ್ತಾ, ಚೆನ್ನೈ, ಅಹಮದಾಬಾದ್, ಸೂರತ್, ಬೆಂಗಳೂರು, ಪುಣೆ ಮತ್ತು ಹೈದರಾಬಾದ್) ಸಾರ್ವಜನಿಕ ಸಾರಿಗೆ ವ್ಯವಸ್ಥೆ ಬಲಪಡಿಸಲು 14,028 ಎಲೆಕ್ಟ್ರಿಕ್ ಬಸ್‌ಗಳ ಖರೀದಿಗೆ ರೂ.4,391 ಕೋಟಿಗಳನ್ನು ಕೇಂದ್ರ ಸರ್ಕಾರ ಮೀಸಲಿಟ್ಟಿದೆ.
ಈ ಪಿಎಂ ಇ-ಡ್ರೈವ್ (PM E-Drive) ಯೋಜನೆಯಡಿ ಎಲೆಕ್ಟ್ರಿಕ್ ಕಾರುಗಳಿಗಾಗಿ 22,100 ಚಾರ್ಜಿಂಗ್ ಸ್ಟೇಷನ್, ಎಲೆಕ್ಟ್ರಿಕ್ ಬಸ್‌ಗಳಿಗಾಗಿ 1,800 ಚಾರ್ಜಿಂಗ್ ಸ್ಟೇಷನ್ ಮತ್ತು ಎಲೆಕ್ಟ್ರಿಕ್ ದ್ವಿಚಕ್ರ & ತ್ರಿಚಕ್ರ ವಾಹನಗಳಿಗಾಗಿ 48,400 ಚಾರ್ಜಿಂಗ್ ಸ್ಟೇಷನ್‌ಗಳನ್ನು ಸ್ಥಾಪಿಸಲು ಸರ್ಕಾರ ಯೋಜಿಸಿದೆ. ಆದಾಗ್ಯೂ, ಈ ಯೋಜನೆಯಿಂದ ಎಲೆಕ್ಟ್ರಿಕ್ ಹಾಗೂ ಹೈಬ್ರಿಡ್ ಕಾರುಗಳನ್ನು ಹೊರಗಿಡಲಾಗಿದೆ.
ಕೇಂದ್ರ ಸರ್ಕಾರವು 2015ರ ಏಪ್ರಿಲ್ 1ರಂದು ರೂ.895 ಕೋಟಿ ಅನುದಾನದೊಂದಿಗೆ 5 ವರ್ಷಗಳ ಅವಧಿಗೆ ಫೇಮ್-1 ಸಬ್ಸಿಡಿ ಯೋಜನೆ ಅನುಷ್ಠಾನಗೊಳಿಸಿತ್ತು. 2019ರ ಏಪ್ರಿಲ್ 1ರಿಂದ 2024ರ ಮಾರ್ಚ್ 31ರವರೆಗೆ ಫೇಮ್-2 ಯೋಜನೆ ಜಾರಿಗೊಳಿಸಿತ್ತು. ಇದಕ್ಕಾಗಿ ರೂ.10,000 ಕೋಟಿ ಅನುದಾನ ಮೀಸಲಿಟ್ಟಿತ್ತು. 2024ರ ಹಣಕಾಸು ವರ್ಷದಲ್ಲಿ ಎಲೆಕ್ಟ್ರಿಕ್ ಪ್ರಯಾಣಿಕ ವಾಹನಗಳ ಮಾರಾಟ ಪ್ರಮಾಣ ವರ್ಷದಿಂದ ವರ್ಷಕ್ಕೆ (YoY) ಶೇಕಡ 91% (90,996 ಯುನಿಟ್) ಹೆಚ್ಚಳಗೊಂಡಿದೆ.
ಡ್ರೈವ್‌ಸ್ಪಾರ್ಕ್ ಕನ್ನಡ ವೆಬ್‌ಸೈಟ್ ತ್ವರಿತವಾಗಿ ಆಟೋಮೊಬೈಲ್ ಸಂಬಂಧಿಸಿದ ಸುದ್ದಿಗಳನ್ನು ನೀಡುತ್ತದೆ. ಜೊತೆಗೆ ಸೋಷಿಯಲ್ ಮೀಡಿಯಾಗಳ ಮೂಲಕ ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಶೇರ್ ಮಾಡುತ್ತೇವೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊಗಳನ್ನು ಪಡೆಯಲು ನಮ್ಮ ಫೇಸ್‌ಬುಕ್, ಇನ್‌ಸ್ಟಾಗ್ರಾಮ್, ಯೂಟ್ಯೂಬ್ ಪೇಜ್‌ಗಳೊಂದಿಗೆ ಫಾಲೋ ಮಾಡಿ. ನಿಮಗೆ ನಮ್ಮ ಯಾವುದೇ ಸುದ್ದಿ ಇಷ್ಟವಾದರೆ ಲೈಕ್, ಕಾಮೆಂಟ್ ಮಾಡುವುದನ್ನು ಮರೆಯದಿರಿ.


Click it and Unblock the Notifications