ಕಾರಿನ ಮೇಲೆ ಅಶ್ಲೀಲ LED ಡಿಸ್‌ಪ್ಲೇ: ಬೆಂಗಳೂರಿನಲ್ಲಿ ದಂಡದ ಬಿಸಿ, ಕಾನೂನು ಏನು ಹೇಳುತ್ತೆ?
ಬೆಂಗಳೂರಿನ ಟ್ರಾಫಿಕ್ ಜಾಮ್‌ನಲ್ಲಿ ಸೆಪ್ಟೆಂಬರ್ 3ರ ಸಂಜೆ ರೆನಾಲ್ಟ್ ಕ್ವಿಡ್ ಕಾರೊಂದರ ಹಿಂಭಾಗದಲ್ಲಿ ಡಿಸ್‌ಪ್ಲೇ ಆಗುತ್ತಿದ್ದ ಅಶ್ಲೀಲ LED ಮೆಸೇಜ್‌ನ ವಿಡಿಯೋ ಭಾರಿ ವೈರಲ್ ಆಗಿತ್ತು. ವಾಹನ ಸವಾರರೊಬ್ಬರು ಈ ವಿಡಿಯೋವನ್ನು 'X'ನಲ್ಲಿ ಹಂಚಿಕೊಂಡು ಬೆಂಗಳೂರು ಪೊಲೀಸರಿಗೆ ಟ್ಯಾಗ್ ಮಾಡಿದ್ದರು. ಈ ಬಗ್ಗೆ ಸೆಪ್ಟೆಂಬರ್ 4ರಂದು ಏಷ್ಯಾನೆಟ್ ನ್ಯೂಸೇಬಲ್ ವರದಿ ಮಾಡಿತ್ತು. ಆದರೆ, ಸೆಪ್ಟೆಂಬರ್ 5ರವರೆಗೆ ಪೊಲೀಸರ ಅಧಿಕೃತ ಖಾತೆಗಳಲ್ಲಿ ಈ ಕುರಿತು ಯಾವುದೇ ಸಾರ್ವಜನಿಕ ಅಪ್‌ಡೇಟ್ ಬಂದಿರಲಿಲ್ಲ.
ಹಾಗಾದರೆ, ಭಾರತದ ರಸ್ತೆಗಳಲ್ಲಿ ಕಾರುಗಳ ಮೇಲೆ ಇಂತಹ ಸ್ಕ್ರೋಲಿಂಗ್ ಎಲ್‌ಇಡಿ ಡಿಸ್‌ಪ್ಲೇಗಳನ್ನು ಹಾಕುವುದು ಕಾನೂನುಬದ್ಧವೇ? ವಾಹನಗಳ ಮಾರ್ಪಾಡು ಮತ್ತು ಲೈಟ್‌ಗಳ ಬಳಕೆಯ ಬಗ್ಗೆ ನಮ್ಮಲ್ಲಿ ಸ್ಪಷ್ಟ ನಿಯಮಗಳಿವೆ. ಮೋಟಾರು ವಾಹನ ಕಾಯ್ದೆಯ ಸೆಕ್ಷನ್ 182A(4) ಪ್ರಕಾರ, ಅನಧಿಕೃತವಾಗಿ ವಾಹನ ಮಾರ್ಪಾಡು ಮಾಡಿದರೆ ಪ್ರತಿ ಡಿವೈಸ್‌ಗೆ ₹5,000 ದಂಡ ವಿಧಿಸಬಹುದು. ಅಪಾಯಕಾರಿ ಅಥವಾ ಗಮನ ಭಂಗಗೊಳಿಸುವ ಸಾಧನಗಳನ್ನು ಅಳವಡಿಸಿದರೆ ಸೆಕ್ಷನ್ 190(2) ಅಡಿಯಲ್ಲಿ ₹10,000 ವರೆಗೆ ದಂಡ ಮತ್ತು ಚಾಲನಾ ಪರವಾನಗಿ ರದ್ದುಗೊಳಿಸಲು ಅವಕಾಶವಿದೆ. ಜೊತೆಗೆ ಸಿಎಂವಿಆರ್ ನಿಯಮ 108 ಕಲರ್ ಫ್ಲಾಷಿಂಗ್ ಲೈಟ್‌ಗಳನ್ನು ನಿಷೇಧಿಸಿದರೆ, AIS-008 ನಿಯಮಗಳು ಲೈಟಿಂಗ್ ಮಾನದಂಡಗಳನ್ನು ನಿಗದಿಪಡಿಸುತ್ತವೆ. ಇಂತಹ ಟೆಕ್ಸ್ಟ್ ಬೋರ್ಡ್‌ಗಳು ಈ ಯಾವ ಮಾನದಂಡಗಳಿಗೂ ಹೊಂದುವುದಿಲ್ಲ.

ಭಾರತದಲ್ಲಿ ಸ್ಕ್ರೋಲಿಂಗ್ LED ಡಿಸ್‌ಪ್ಲೇ ಬಳಸುವುದು ಕಾನೂನುಬದ್ಧವೇ?
ವಾಹನಗಳ ಹಿಂಭಾಗದಲ್ಲಿ ಇಡುವ ಇಂತಹ ಟೆಕ್ಸ್ಟ್ ಬೋರ್ಡ್‌ಗಳನ್ನು ಆಫ್ಟರ್‌ಮಾರ್ಕೆಟ್ ಲೈಟ್‌ಗಳೆಂದು ಪರಿಗಣಿಸುವ ಸಂಚಾರ ಪೊಲೀಸರು, ಇವು ಇತರ ಚಾಲಕರ ಗಮನ ಭಂಗಗೊಳಿಸುತ್ತವೆ ಮತ್ತು ರಸ್ತೆ ಸುರಕ್ಷತೆಗೆ ಧಕ್ಕೆ ತರುತ್ತವೆ ಎಂದು ಸ್ಪಷ್ಟಪಡಿಸಿದ್ದಾರೆ. ಅನಧಿಕೃತ ಮಲ್ಟಿ-ಕಲರ್ ಎಲ್‌ಇಡಿ ನೇಮ್ ಬೋರ್ಡ್‌ಗಳು ಹಾಗೂ ಸ್ಟ್ರೋಬ್ ಲೈಟ್‌ಗಳನ್ನು ತಕ್ಷಣ ತೆರವುಗೊಳಿಸುವಂತೆ ಕೇರಳ ಹೈಕೋರ್ಟ್ ಮತ್ತು ಸುಪ್ರೀಂ ಕೋರ್ಟ್ ಈಗಾಗಲೇ ರಾಜ್ಯ ಸರ್ಕಾರಗಳಿಗೆ ನಿರ್ದೇಶನ ನೀಡಿವೆ. ಹೀಗಾಗಿ, ಯಾವುದೇ ಅಪಘಾತ ಸಂಭವಿಸದಿದ್ದರೂ ಸಹ, ಪರಿಶೀಲನೆ ವೇಳೆ ಸೆಕ್ಷನ್ 182A(4) ಮತ್ತು ಸೆಕ್ಷನ್ 190(2) ಅಡಿಯಲ್ಲಿ ಪ್ರಕರಣ ದಾಖಲಿಸಿ ದಂಡ ವಿಧಿಸಲಾಗುತ್ತಿದೆ.
ಕರ್ನಾಟಕದಲ್ಲಿ ದಂಡದ ವಿವರ: LED ಡಿಸ್‌ಪ್ಲೇಗೆ ಬೀಳುತ್ತೆ ಭಾರೀ ಚಲನ್!
| ಉಲ್ಲಂಘನೆ / ಅಪರಾಧ | ಸಂಭವನೀಯ ಸೆಕ್ಷನ್ | ದಂಡದ ವಿವರ |
|---|---|---|
| ಅನಧಿಕೃತ ವಾಹನ ಮಾರ್ಪಾಡು (LED ಬೋರ್ಡ್) | ಎಂವಿ ಕಾಯ್ದೆ 182A(4) | ಪ್ರತಿ ಮಾರ್ಪಾಡಿಗೆ ₹5,000 |
| ಗಮನ ಭಂಗಗೊಳಿಸುವ ಅಪಾಯಕಾರಿ ಸಾಧನ ಬಳಕೆ | ಎಂವಿ ಕಾಯ್ದೆ 190(2) | ₹10,000 ವರೆಗೆ ದಂಡ; 3 ತಿಂಗಳು ಲೈಸೆನ್ಸ್ ರದ್ದು |
| ನಿಷೇಧಿತ ಕೆಂಪು/ನೀಲಿ ಫ್ಲಾಷಿಂಗ್ ಲೈಟ್‌ಗಳ ಬಳಕೆ | ಸಿಎಂವಿಆರ್ 108 + 177/182A(4) | ₹500 ರಿಂದ ₹5,000 ವರೆಗೆ |
ಬೆಂಗಳೂರಿನಲ್ಲಿ ಸಂಚಾರ ಪೊಲೀಸರು ಇ-ಚಲನ್ ನೀಡುತ್ತಿದ್ದು, ವಿಶೇಷ ಕಾರ್ಯಾಚರಣೆಗಳ ಸಂದರ್ಭದಲ್ಲಿ ವಾಹನ ತಪಾಸಣೆ ನಡೆಸಿ ಇಂತಹ ಅಕ್ರಮ ಕಿಟ್‌ಗಳನ್ನು ಸ್ಥಳದಲ್ಲೇ ತೆರವುಗೊಳಿಸುತ್ತಿದ್ದಾರೆ. ಅಲ್ಲದೆ, ಕಂಪನಿ ಅನುಮೋದಿಸದ (non-homologated) ಎಲೆಕ್ಟ್ರಿಕಲ್ ಸಾಧನಗಳನ್ನು ಬಳಸಿದಾಗ ಇನ್ಶೂರೆನ್ಸ್ ಕ್ಲೇಮ್ ವಿಷಯದಲ್ಲೂ ಗೊಂದಲ ಉಂಟಾಗಬಹುದು. ಅಪಘಾತಕ್ಕೆ ಈ ಸಾಧನವೇ ಕಾರಣ ಎಂದು ಸಾಬೀತಾದರೆ ಕ್ಲೇಮ್ ರದ್ದಾಗುವ ಸಾಧ್ಯತೆಯೂ ಇರುತ್ತದೆ. ಆದ್ದರಿಂದ ವಾಹನದಲ್ಲಿ ಯಾವುದೇ ಬದಲಾವಣೆ ಮಾಡುವ ಮುನ್ನ ಇನ್ಶೂರೆನ್ಸ್ ಕಂಪನಿಗೆ ಮಾಹಿತಿ ನೀಡುವುದು ಮತ್ತು ಅನುಮೋದಿತ ಆಕ್ಸೆಸರಿಗಳನ್ನಷ್ಟೇ ಬಳಸುವುದು ಸೂಕ್ತ.
ಕಾನೂನುಬದ್ಧ ಆಕ್ಸೆಸರಿಗಳು vs ಅಕ್ರಮ ಲೈಟಿಂಗ್: ಕಡ್ಡಾಯವಾಗಿ ತಿಳಿಯಬೇಕಾದ ವಿಷಯಗಳು
ಮಾಡಿ: ಕಂಪನಿ ಅನುಮೋದಿಸಿದ ಆಕ್ಸೆಸರಿಗಳು; ARAI ಮಾನದಂಡದ ದೀಪಗಳು; ಅನುಮತಿ ಇರುವ ಆಂಬರ್ ಟಾಪ್ ಲೈಟ್ ಮಾತ್ರ; ನಿಯಮಬದ್ಧ ಪ್ಯಾನಿಕ್ ಬಟನ್ ಮತ್ತು ಟ್ರ್ಯಾಕರ್ ಬಳಸುವುದು. ಮಾಡಬೇಡಿ: ಸ್ಕ್ರೋಲಿಂಗ್ LED ಟೆಕ್ಸ್ಟ್ ಬೋರ್ಡ್; ಕೆಂಪು ಅಥವಾ ನೀಲಿ ಸ್ಟ್ರೋಬ್ ಲೈಟ್; ಅತಿಯಾದ ಶಬ್ದದ ಹಾರ್ನ್; ವಿಂಡೋ ಗ್ಲಾಸ್‌ಗಳ ಮೇಲೆ ಸನ್‌ಫಿಲ್ಮ್; ವಿಂಡ್‌ಶೀಲ್ಡ್ ಮುಂಭಾಗದಲ್ಲಿ ಅಲಂಕಾರಿಕ ವಸ್ತುಗಳು; ಅನುಮೋದನೆ ಇಲ್ಲದ ಹೆಡ್‌ಲೈಟ್ ಬಲ್ಬ್‌ಗಳ ಬಳಕೆ.
ನಗರದಲ್ಲಿ ವಾಹನ ಚಲಾಯಿಸುವ ಸವಾರರಿಗೆ ಸಿಗುವ ಸ್ಪಷ್ಟ ಸಂದೇಶವೇನೆಂದರೆ - ಇಂತಹ ಸ್ಕ್ರೋಲಿಂಗ್ ಬೋರ್ಡ್‌ಗಳು ಮತ್ತು ಕಲರ್ ಫ್ಲಾಷರ್‌ಗಳನ್ನು ತಕ್ಷಣ ತೆರವುಗೊಳಿಸಿ, ಡ್ಯಾಶ್‌ಬೋರ್ಡ್‌ಗಳನ್ನು ಕ್ಲಿಯರ್ ಆಗಿ ಇಟ್ಟುಕೊಳ್ಳಿ. ಡೀಲರ್‌ಗಳು ಅನುಮೋದಿಸಿದ, AIS ಮಾನದಂಡಗಳಿಗೆ ಒಳಪಡುವ ಬಿಡಿಭಾಗಗಳನ್ನಷ್ಟೇ ಆಯ್ಕೆ ಮಾಡಿ ಹಾಗೂ ಈ ಬಗ್ಗೆ ಇನ್ಶೂರೆನ್ಸ್ ಕಂಪನಿಗೆ ಮಾಹಿತಿ ನೀಡಿ. ಸೋಶಿಯಲ್ ಮೀಡಿಯಾದಲ್ಲಿ ದೂರುಗಳು ವೈರಲ್ ಆದ ತಕ್ಷಣವೇ ಬೆಂಗಳೂರು ಪೊಲೀಸರು ಕಾರ್ಯಾಚರಣೆ ನಡೆಸಿ ಇಂತಹ LED ಡಿಸ್‌ಪ್ಲೇಗಳನ್ನು ವಶಪಡಿಸಿಕೊಂಡ ಉದಾಹರಣೆಗಳಿವೆ. ಸ್ವಲ್ಪ ಸಮಯದ ಮೋಜಿಗೆ ಹೋಗಿ ಕಾನೂನು ತೊಡಕು ಹಾಗೂ ರಸ್ತೆ ಸುರಕ್ಷತೆಯ ಅಪಾಯವನ್ನು ಮೈಮೇಲೆ ಎಳೆದುಕೊಳ್ಳುವುದು ಖಂಡಿತ ಜಾಣತನವಲ್ಲ.


Click it and Unblock the Notifications
