ಬಂಡೆಯಿಂದ ಉರುಳಿ ಬಿದ್ದ ಟಾಟಾ ಪಂಚ್: ಚಾಲಕ ಸ್ವಲ್ಪದರಲ್ಲೇ ಪಾರು! ಭಯಾನಕ ವಿಡಿಯೋ...
ಟಾಟಾ ಪಂಚ್ ಕಾರೊಂದು ಕಡಿದಾದ ಇಳಿಜಾರನ್ನು ಏರಲು ಪ್ರಯತ್ನಿಸುವಾಗ ನಿಯಂತ್ರಣ ಕಳೆದುಕೊಂಡು ಬಂಡೆಯಿಂದ ಕೆಳಕ್ಕೆ ಬೀಳುವ ವೀಡಿಯೊವೊಂದು ವೈರಲ್ ಆಗಿದೆ. ಅಪಘಾತದ ನಿಖರವಾದ ವಿವರಗಳು ಲಭ್ಯವಾಗಿಲ್ಲವಾದರೂ, ಈ ಘಟನೆ ಜಮ್ಮು ಮತ್ತು ಕಾಶ್ಮೀರದಲ್ಲಿ ಎಲ್ಲೋ ಸಂಭವಿಸಿದೆ ಎಂದು ತೋರುತ್ತದೆ. JK ಎಂಬ ನಂಬರ್ ಪ್ಲೇಟ್ ಹೊಂದಿರುವ ಟಾಟಾ ಪಂಚ್ ಕಾರನ್ನು ಒಂದಿಬ್ಬರು ತಳ್ಳುತ್ತಿರುವುದನ್ನು ವಿಡಿಯೋದಲ್ಲಿ ನೋಡಬಹುದು. ಫ್ರಂಟ್ - ವ್ಹೀಲ್ - ಡ್ರೈವ್‌ನ ಪಂಚ್ ಕಾರು ಇಳಿಜಾರಿನ ಸಡಿಲವಾದ ಜಲ್ಲಿಕಲ್ಲಿನ ಮೇಲೆ ಗ್ರಿಪ್ ಕಳೆದುಕೊಂಡು, ಮೇಲಕ್ಕೆ ಹತ್ತಲು ವಿಫಲವಾಗಿ ಹಳ್ಳಕ್ಕೆ ಬಿದ್ದಿದೆ. ಅದೃಷ್ಟವಶಾತ್ ಚಾಲಕ ಪ್ರಾಣಪಾಯದಿಂದ ಪಾರಾಗಿದ್ದಾನೆ.
ಆಫ್ - ರೋಡಿಂಗ್ ಎಷ್ಟು ಅಪಾಯಕಾರಿ ಎಂಬುದನ್ನು ಜನ ಅರಿತುಕೊಳ್ಳುವುದಿಲ್ಲ. ಅದರಲ್ಲೂ 2WD ವಾಹನವನ್ನು ಆಫ್-ರೋಡ್‌ನಲ್ಲಿ ಓಡಿಸುವುದು ಇನ್ನೂ ಅಪಾಯಕಾರಿ ಎಂಬುದಕ್ಕೆ ಈ ಘಟನೆಯೇ ಸಾಕ್ಷಿ. ಟಾಟಾ ಮೋಟಾರ್ಸ್‌ನ ಎಂಟ್ರಿ ಲೆವೆಲ್ ಎಸ್‌ಯುವಿ ಅಥವಾ ಮೈಕ್ರೋ ಎಸ್‌ಯುವಿ ಆದ ಟಾಟಾ ಪಂಚ್ ರಸ್ತೆಯಿಂದ ಜಾರಿ ಇಳಿಜಾರಿನಲ್ಲಿ ಸಿಲುಕಿಕೊಂಡಿತ್ತು.

ವಿಡಿಯೋದಲ್ಲಿ ಕಾಣುವಂತೆ ಕಾರಿನ ಸುತ್ತಲೂ ನಿಂತಿದ್ದವರು ಅದೇ ಕಾರಿನಲ್ಲಿ ಪ್ರಯಾಣಿಸುತ್ತಿದ್ದರೇ ಅಥವಾ ಚಾಲಕನಿಗೆ ಸಹಾಯ ಮಾಡಲು ಅಲ್ಲಿದ್ದರೇ ಎಂಬುದು ಸ್ಪಷ್ಟವಾಗಿಲ್ಲ. ಪಂಚ್ ಇಳಿಜಾರಿನಲ್ಲಿ ಹಿಂದಕ್ಕೆ ಉರುಳಲು ಪ್ರಾರಂಭಿಸುತ್ತಿದ್ದಂತೆ ಹಿಂದಿನಿಂದ ಕಾರನ್ನು ತಳ್ಳುತ್ತಿದ್ದವರು ವಾಹನದಿಂದ ದೂರ ಸರಿದಿದ್ದು, ಕಾರಿನೊಳಗಿದ್ದ ಚಾಲಕನಿಗೆ ಏನೂ ಮಾಡಲು ಸಾಧ್ಯವಾಗದೆ ಹೊರಗೆ ಜಿಗಿದಿದ್ದಾನೆ.
ಇಳಿಜಾರಿನಲ್ಲಿ ಹೋಗುವಾಗ ಕಾರು ಹಲವಾರು ಬಾರಿ ಉರುಳಿದೆ. ಚಾಲಕ ಸಮಯಕ್ಕೆ ಸರಿಯಾಗಿ ತಪ್ಪಿಸಿಕೊಳ್ಳುವಲ್ಲಿ ಯಶಸ್ವಿಯಾಗಿ, ಜೀವ ಉಳಿಸಿಕೊಂಡಿದ್ದಾನೆ. ಸ್ಥಳದಲ್ಲಿದ್ದ ವ್ಯಕ್ತಿಯೊಬ್ಬರು ಈ ವಿಡಿಯೋವನ್ನು ರೆಕಾರ್ಡ್ ಮಾಡಿದ್ದಾರೆ. ಉದ್ದೇಶಪೂರ್ವಕವಾಗಿ ಕಾರನ್ನು ಆಫ್‌ರೋಡ್‌ನಲ್ಲಿ ಓಡಿಸಲಾಗಿದೆಯೇ ಅಥವಾ ಮಾಲೀಕ ರಸ್ತೆಯಿಂದ ಜಾರಿದ ನಂತರ ಕಾರನ್ನು ಉಳಿಸಲು ಪ್ರಯತ್ನಿಸುತ್ತಿದ್ದನೇ ಎಂಬುದು ಸ್ಪಷ್ಟವಾಗಿಲ್ಲ.

ಫ್ರಂಟ್ ವೀಲ್ ಡ್ರೈವ್ ಕಾರುಗಳನ್ನು ಇಂತಹ ಭೂಪ್ರದೇಶಗಳಲ್ಲಿ ಚಾಲನೆ ಮಾಡುವುದು ತುಂಬಾ ಕಷ್ಟ. ಎಡಬ್ಲ್ಯುಡಿ ಅಥವಾ 4×4 ವ್ಯವಸ್ಥೆಯು ಎಲ್ಲಾ ನಾಲ್ಕು ವೀಲ್‌ಗಳಿಗೆ ಪವರ್ ನೀಡುವುದರಿಂದ ಅವುಗಳು ಮಾತ್ರ ಆಫ್ - ರೋಡ್‌ಗಳಿಗೆ ಸೂಕ್ತವಾಗಿರುತ್ತವೆ. ಯಾವುದೇ ಅಡೆತಡೆಗಳನ್ನು ನಿವಾರಿಸಲು ಸಹಾಯ ಮಾಡುತ್ತವೆ ಎಂಬುದನ್ನು ಎಲ್ಲಾ ಕಾರು ಮಾಲೀಕರು ತಿಳಿಯಬೇಕಾದ ಸಂಗತಿಯಾಗಿದೆ.
ಈ ಘಟನೆಯಲ್ಲಿ ಟಾಟಾ ಪಂಚ್ ಕಾರು ಒಂದು ಸಣ್ಣ ಎಸ್‌ಯುವಿ ಆಗಿದ್ದು, ಕೇವಲ ಮುಂಭಾಗದ ಚಕ್ರಗಳು ಮಾತ್ರ ಪವರ್ ಹೊಂದಿರುತ್ತವೆ. ಹಾಗಾಗಿ ಈ ವಾಹನ ತೀವ್ರ ಆಫ್‌ರೋಡ್ ಪರಿಸ್ಥಿತಿಗಳಿಗೆ ಹೊಂದಿಕೊಳ್ಳುವುದಿಲ್ಲ. ಆದರೆ ಟಾಟಾ ಪಂಚ್ ಎಂಟ್ರಿ ಲೆವೆಲ್ ಹ್ಯಾಚ್ ಬ್ಯಾಕ್ ಆಗಿದ್ದರೂ, ಗ್ಲೋಬಲ್ ಎನ್‌ಸಿಎಪಿ ಕ್ರ್ಯಾಶ್ ಟೆಸ್ಟ್‌ನಲ್ಲಿ 5-ಸ್ಟಾರ್ ರೇಟಿಂಗ್ ಅನ್ನು ಗಳಿಸಿದೆ.

ಉತ್ತಮ ಸುರಕ್ಷತಾ ರೇಟಿಂಗ್ ಇದೆಯೆಂದು ಕಾರನ್ನು ಇಂತಹ ಭೂ-ಪ್ರದೇಶಗಳಲ್ಲಿ ಓಡಿಸುವುದು ಸೂಕ್ತವಲ್ಲ. ಮೊದಲೇ ಹೇಳಿದಂತೆ ಇಂತಹ ಭೂ-ಪ್ರದೇಶಗಳಲ್ಲಿ ಓಡಿಸಲೆಂದೇ ಪ್ರತ್ಯೇಕ ವಿಭಾಗದ ಕಾರುಗಳಿವೆ. ಅಲ್ಲದೇ ಆಫ್‌ರೋಡ್ ಪ್ರಯಾಣ ಕೈಗೊಳ್ಳುವವರು ಅನುಭವಿಗಳಾಗಿರಬೇಕು ಹಾಗೂ ಅನೀರಿಕ್ಷಿತ ಪರಿಸ್ಥಿತಿಗಳಲ್ಲಿ ಒಬ್ಬರೇ ಸಿಲುಕಿದರೆ ಸಹಾಯಕ್ಕೆ ಪರದಾಡುವಂತಾಗುವುದರಿಂದ ಡ್ರೈವರ್ ಜೊತೆಗೆ ಒಂದಿಬ್ಬರು ಇರಬೇಕು.
ಡ್ರೈವ್‌ಸ್ಪಾರ್ಕ್ ಕನ್ನಡ ವೆಬ್‌ಸೈಟ್ ತ್ವರಿತವಾಗಿ ಆಟೋಮೊಬೈಲ್ ಸಂಬಂಧಿಸಿದ ಸುದ್ದಿಗಳನ್ನು ನೀಡುತ್ತದೆ. ಜೊತೆಗೆ ಸೋಷಿಯಲ್ ಮೀಡಿಯಾಗಳ ಮೂಲಕ ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಶೇರ್ ಮಾಡುತ್ತೇವೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊಗಳನ್ನು ಪಡೆಯಲು ನಮ್ಮ ಫೇಸ್‌ಬುಕ್, ಇನ್‌ಸ್ಟಾಗ್ರಾಮ್, ಯೂಟ್ಯೂಬ್ ಪೇಜ್‌ಗಳೊಂದಿಗೆ ಫಾಲೋ ಮಾಡಿ. ನಿಮಗೆ ನಮ್ಮ ಯಾವುದೇ ಸುದ್ದಿ ಇಷ್ಟವಾದರೆ ಲೈಕ್, ಕಾಮೆಂಟ್ ಮಾಡುವುದನ್ನು ಮರೆಯದಿರಿ.


Click it and Unblock the Notifications








