ತಾಯಿಗಾಗಿ 25 ವರ್ಷ ಹಳೆಯ ಕಾರಿನಲ್ಲಿ 16 ದೇಶಗಳನ್ನು ದಾಟಿ ಭಾರತ ತಲುಪಿದ ಮಗ
ಭಾರತೀಯ ಮೂಲದ ಬ್ರಿಟಿಷ್ ಪ್ರಜೆಯೊಬ್ಬರು ತಮ್ಮ 25 ವರ್ಷ ಹಳೆಯ ಕಾರಿನಲ್ಲಿ 16 ದೇಶಗಳನ್ನು ದಾಟಿ 18,300 ಕಿ.ಮೀ ಪ್ರಯಾಣಿಸಿ ಭಾರತದ ಥಾಣೆಗೆ ತಲುಪಿದ್ದಾರೆ. ಈ ಪ್ರಯಾಣದಲ್ಲಿ ಫ್ರಾನ್ಸ್, ಜರ್ಮನಿ, ಪೋಲೆಂಡ್, ಬೆಲ್ಜಿಯಂ, ಲಿಥುವೇನಿಯಾ, ಎಸ್ಟೋನಿಯಾ, ಲಾಟ್ವಿಯಾ, ಉಜ್ಬೇಕಿಸ್ತಾನ್, ರಷ್ಯಾ, ಕಿರ್ಗಿಸ್ತಾನ್, ಚೀನಾ, ಟಿಬೆಟ್ ಮತ್ತು ನೇಪಾಳ ಸೇರಿದಂತೆ ಹಲವು ದೇಶಗಳನ್ನು ದಾಟಿ ಬಂದಿದ್ದಾರೆ. ಅಷ್ಟಕ್ಕೂ ಹೀಗೆ ರಸ್ತೆ ಮಾರ್ಗವಾಗಿ ಅವರು ಬರುವ ಉದ್ದೇಶವಾದ್ರೂ ಏನು ಅಂದ್ರೆ, ತಮ್ಮ ತಾಯಿಯನ್ನು ಭೇಟಿ ಮಾಡಲು ಎಂದು ಹೇಳಿಕೊಂಡಿದ್ದಾರೆ. ಇವರ ಉತ್ತರ ವಿಚಿತ್ರವೆನಿಸಿದರೂ ಇದರ ಹಿಂದಿನ ಕಾರಣಗಳು ಅವರ ಉತ್ಸಾವನ್ನು ವ್ಯಕ್ತಪಡಿಸುತ್ತವೆ.
ಲಂಡನ್ ನಿವಾಸಿಯಾದ ವಿರಾಜಿತ್ ಮುಂಗಲೆ, ಮಹಾರಾಷ್ಟ್ರದ ಥಾಣೆಯಲ್ಲಿರುವ ತಮ್ಮ ತಾಯಿಯನ್ನು ಭೇಟಿಯಾಗಲು ಕಾರಿನಲ್ಲಿ ಬಂದಿದ್ದಾರೆ. ತಮ್ಮ 25 ವರ್ಷದ ಹಳೆಯ ಟೊಯೋಟಾ ಲ್ಯಾಂಡ್ ಕ್ರೂಸರ್ ಪ್ರಾಡೋದಲ್ಲಿ 59 ದಿನಗಳ ಕಾಲ ಪ್ರಯಾಣಿಸಿ ಗಮ್ಯ ಸ್ಥಳವನ್ನು ತಲುಪಿದ್ದಾರೆ. ಅವರು ಏಪ್ರಿಲ್ 20 ರಂದು ಲಂಡನ್‌ನಲ್ಲಿ ಹೊರಟು, ಜೂನ್ 17 ರಂದು ತಮ್ಮ ತಾಯಿಯ ಮನೆಗೆ ತಲುಪಿದ್ದಾರೆ.

ವಿರಾಜಿತ್ ಮೊದಲ ಬಾರಿಗೆ ತಮ್ಮ ತಾಯಿಯನ್ನು ಭೇಟಿಯಾಗುತ್ತಿಲ್ಲ. ಆಕೆಗಾಗಿ ಆಗಾಗ್ಗೆ ಲಂಡನ್‌ನಿಂದ ವಿಮಾನದಲ್ಲಿ ಬಂದು ಹೋಗುತ್ತಾರೆ. ಆದರೆ ಈ ಬಾರಿ ತಮ್ಮ ವಿಶ್ವಾಸಾರ್ಹ ಟೊಯೊಟಾ ಎಸ್‌ಯುವಿಯನ್ನು ನಂಬಿಕೊಂಡು ಭಾರತಕ್ಕೆ ಬಂದಿದ್ದಾರೆ. ದಿನಕ್ಕೆ ಸುಮಾರು 400 ರಿಂದ 600 ಕಿ.ಮೀ ಓಡಿಸುತ್ತಾ, ಕೆಲವೊಮ್ಮೆ ರಸ್ತೆಗಳು ಉತ್ತಮವಾಗಿದ್ದರೆ 1,000 ಕಿ.ಮೀವರೆಗೆ ಓಡಿಸಿರುವುದಾಗಿ ವಿರಾಜಿತ್ ಹೇಳಿಕೊಂಡಿದ್ದಾರೆ.
ಆರಂಭದಲ್ಲಿ ನನ್ನ ಪ್ಲಾನ್ ಕೇಳಿ ಹೆಂಡತಿ ತಮಾಷೆಯಾಗಿ ತೆಗೆದುಕೊಂಡಿದ್ದಳು, ಬಳಿಕ ಗಂಭೀರತೆಯನ್ನು ಅರಿತುಕೊಂಡು ಸಂಪೂರ್ಣ ಬೆಂಬಲಿಸಿದಳು. ಟೊಯೋಟಾ ಲ್ಯಾಂಡ್ ಕ್ರೂಸರ್ ಪ್ರಾಡೋವನ್ನು ಲಂಡನ್‌ನಿಂದ ಥಾಣೆಗೆ ಓಡಿಸಲು ಅನೇಕ ವರ್ಷಗಳ ಹಿಂದೆಯೇ ಪ್ಲಾನ್ ಮಾಡಲಾಗಿತ್ತು. ಆದರೆ ಕೋವಿಡ್ -19 ಏಕಾಏಕಿ ಈ ಯೋಜನೆಯನ್ನು ವಿಳಂಬಗೊಳಿಸಿದೆ ಎಂದು ವಿರಾಜಿತ್ ತಿಳಿಸಿದರು.

ಸುರಕ್ಷತೆ ಮುಖ್ಯ: ವಿರಾಜಿತ್ ಪ್ರಕಾರ, ಲಂಡನ್‌ನಿಂದ ಪ್ರಾರಂಭಿಸಿ ದಿನಕ್ಕೆ 600 ಕಿಲೋಮೀಟರ್ ಹಾಗೂ ಆಯ್ದ ದಿನಗಳಲ್ಲಿ 1000 ಕಿ.ಮೀ ಓಡಿಸಿದರೂ, ಯಾವುದೇ ಕಾರಣಕ್ಕೂ ವಾಹನವನ್ನು ರಾತ್ರಿಯಲ್ಲಿ ಓಡಿಸಿಲ್ಲ. ಪ್ರಯಾಣಕ್ಕೂ ಮುನ್ನ ಕಾರಿನ ವಾಡಿಕೆಯ ಸರ್ವಿಸ್ ಮಾಡಿಸಲಾಗಿತ್ತು. ಯಾವುದೇ ವಿಶೇಷ ಮಾಡಿಫಿಕೇಷನ್ ಮಾಡಲಿಲ್ಲ ಎಂದು ಹೇಳಿದ್ದಾರೆ.
ಎಸ್‌ಯುವಿ ಪೋಲೆಂಡ್‌ನಲ್ಲಿ ಕೆಲ ಸಮಸ್ಯೆಗಳನ್ನು ಎದುರಿಸಿತ್ತು, ಆದರೆ ಅದನ್ನು ಸರಿಪಡಿಸಲಾಯಿತು. ಉಳಿದ ಪ್ರಯಾಣವು ತೊಂದರೆಯಿಲ್ಲದೆ ಹಾದುಹೋಯಿತು. ತಮ್ಮ ಬ್ರಿಟಿಷ್ ಪಾಸ್ಪೋರ್ಟ್ ಯಾವುದೇ ತೊಂದರೆಯಿಲ್ಲದೆ ಎಲ್ಲಾ ದೇಶಗಳನ್ನು ಪ್ರವೇಶಿಸಲು ಸಹಾಯ ಮಾಡಿತು. ಸದ್ಯ ಬ್ರಿಟಿಷ್ ಪ್ರಜೆ ಈಗ ಲಂಡನ್‌ಗೆ ತಮ್ಮ ಎಸ್‌ಯುವಿಯನ್ನು ರವಾನಿಸಲು ಯೋಜಿಸಿದ್ದಾರೆ.

ಇಂತಹ ಅಂತರ್-ಖಂಡೀಯ ಪ್ರಯಾಣ ಇತ್ತೀಚಿನೆ ದಿನಗಳಲ್ಲಿ ಸಾಮಾನ್ಯವಾದರೂ, ವಿರಾಜಿತ್ ಅವರನ್ನು ಹೆಚ್ಚು ವಿಶೇಷಗೊಳಿಸುವುದು ಅವರ ಎರಡನೇ ತಲೆಮಾರಿನ ಟೊಯೊಟಾ ಲ್ಯಾಂಡ್ ಕ್ರೂಸರ್ ಪ್ರಾಡೋ. ಸುಮಾರು 25 ವರ್ಷಗಳಷ್ಟು ಹಳೆಯದಾದ ಈ ಎಸ್‌ಯುವಿ ಯಾವುದೇ ಸಮಸ್ಯೆಗಳಿಲ್ಲದೆ ಇಷ್ಟು ದೂರವನ್ನು ಕ್ರಮಿಸಬಲ್ಲದು ಎಂಬುದು ಟೊಯೊಟಾ ಕಾರುಗಳ ವಿಶ್ವಾಸಾರ್ಹತೆಯ ಪ್ರಮಾಣವನ್ನು ಹೇಳುತ್ತದೆ.
ಡ್ರೈವ್‌ಸ್ಪಾರ್ಕ್ ಕನ್ನಡ ವೆಬ್‌ಸೈಟ್ ತ್ವರಿತವಾಗಿ ಆಟೋಮೊಬೈಲ್ ಸಂಬಂಧಿಸಿದ ಸುದ್ದಿಗಳನ್ನು ನೀಡುತ್ತದೆ. ಜೊತೆಗೆ ಸೋಷಿಯಲ್ ಮೀಡಿಯಾಗಳ ಮೂಲಕ ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಶೇರ್ ಮಾಡುತ್ತೇವೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊಗಳನ್ನು ಪಡೆಯಲು ನಮ್ಮ ಫೇಸ್‌ಬುಕ್, ಇನ್‌ಸ್ಟಾಗ್ರಾಮ್, ಯೂಟ್ಯೂಬ್ ಪೇಜ್‌ಗಳೊಂದಿಗೆ ಫಾಲೋ ಮಾಡಿ. ನಿಮಗೆ ನಮ್ಮ ಯಾವುದೇ ಸುದ್ದಿ ಇಷ್ಟವಾದರೆ ಲೈಕ್, ಕಾಮೆಂಟ್ ಮಾಡುವುದನ್ನು ಮರೆಯದಿರಿ.


Click it and Unblock the Notifications








