ವಿದೇಶದಲ್ಲಿ ವಿಮಾನ ಖರೀದಿಸಿ ಭಾರತೀಯ ಸಂಸ್ಕೃತಿಯಂತೆ ಪೂಜೆ ನೆರವೇರಿಸಿದ ಯುವಕ
ಭಾರತದಲ್ಲಿ ಹೊಸ ವಾಹನ ಖರೀದಿಸಿದರೆ ಅದನ್ನು ನಮ್ಮ ಕುಟುಂಬಕ್ಕೆ ಸ್ವಾಗತಿಸುತ್ತೇವೆ. ಇದು ಕೇವಲ ಭಾರತದಲ್ಲಿ ಮಾತ್ರವಲ್ಲ, ವಿದೇಶದಲ್ಲಿ ನೆಲೆಸಿರುವ ಅನೇಕ ಭಾರತೀಯರು ಸಹ ಇಂತಹ ಸಂಪ್ರದಾಯಗಳನ್ನು ಅನುಸರಿಸುತ್ತಾರೆ. ಇತ್ತೀಚೆಗೆ ಸಣ್ಣ ವಿಮಾನವನ್ನು ಖರೀದಿಸಿದ ವ್ಯಕ್ತಿಯೊಬ್ಬರು ಭಾರತೀಯ ಸಂಸ್ಕೃತಿಯಂತೆ ಪೂಜೆಯನ್ನು ನೆರವೇರಿಸಿದ್ದಾರೆ. ಈ ವಿಡಿಯೋವನ್ನು ಮುದಿತ್ ಆನಂದ್ ತಮ್ಮ ಇನ್ಸ್ಟಾಗ್ರಾಮ್ ಪುಟದಲ್ಲಿ ಹಂಚಿಕೊಂಡಿದ್ದು, ಹಲವರ ಗಮನ ಸೆಳೆದಿದೆ. ಅನೇಕರಂತೆ ಮುದಿತ್ ಆನಂದ್ ಅವರಿಗೂ ವಿಮಾನವನ್ನು ಖರೀದಿಸುವುದು ಅವರ ಕನಸಾಗಿದ್ದು, ಅವರು ಈ ಕನಸನ್ನು ನನಸಾಗಿಸಿಕೊಂಡಿದ್ದಾರೆ.
ವಿಡಿಯೋದಲ್ಲಿ ಮುದಿತ್ ಆನಂದ್ ತಮ್ಮ ಹೊಸ ವಿಮಾನದ ಮುಂದೆ ತೆಂಗಿನಕಾಯಿಯನ್ನು ಒಡೆದು, ಹಾರತಿ ತೆಗೆಯುವುದನ್ನು ನೋಡಬಹುದು. ನಂತರ ವಿಮಾನದ ಮೂಗಿನ ಮೇಲೆ ಸ್ವಸ್ತಿಕ್ ಚಿಹ್ನೆಯನ್ನು ಬರೆಯುತ್ತಾರೆ. ಕ್ಯಾಬಿನ್ ಒಳಗೂ ಅದೇ ರೀತಿ ಮಾಡಿದ್ದು, ವಿಮಾನದ ಚಕ್ರಗಳ ಮುಂದೆ ನಾವು ನಿಂಬೆಹಣ್ಣನ್ನು ಸಹ ನೋಡಬಹುದು. ಸ್ವಸ್ತಿಕ್ ಚಿಹ್ನೆಯನ್ನು ಹಿಂದೂ ಧರ್ಮದಲ್ಲಿ ಸಮೃದ್ಧಿ ಮತ್ತು ಅದೃಷ್ಟದ ಸಂಕೇತವೆಂದು ಪರಿಗಣಿಸಲಾಗುತ್ತದೆ.

ಇಂತಹ ಆಚರಣೆಯನ್ನು ನಾವು ನೋಡುತ್ತಿರುವುದು ಇದೇ ಮೊದಲಲ್ಲ. ಕಳೆದ ವರ್ಷ ಹೈದರಾಬಾದ್‌ನ ಉದ್ಯಮಿಯೊಬ್ಬರು ಹೊಸದಾಗಿ ಖರೀದಿಸಿದ ಏರ್‌ಬಸ್ ಎಸಿಎಚ್ -135 ಹೆಲಿಕಾಪ್ಟರ್ ಅನ್ನು ಪೂಜೆ ಮಾಡಿಸಲು ದೇವಾಲಯಕ್ಕೆ ತೆಗೆದುಕೊಂಡು ಹೋಗಿದ್ದರು. ಇದಲ್ಲದೆ, ತಮ್ಮ ಸೂಪರ್ ಕಾರುಗಳಿಗೆ ಪೂಜಾ ಆಚರಣೆಗಳನ್ನು ಮಾಡುವ ವಿಡಿಯೋಗಳು ಆಗಿದ್ದವು.
ಕಳೆದ ವರ್ಷ, ಹೊಚ್ಚ ಹೊಸ ಲ್ಯಾಂಬೊರ್ಗಿನಿ ಹುರಾಕನ್ ಎಸ್‌ಟಿಒ ಕಾರಿಗೆ ವಿತರಣೆಗೂ ಮೊದಲು ಪೂಜೆ ಮತ್ತು ಆಚರಣೆಯನ್ನು ನಡೆಸಲಾಯಿತು. ಅಂತೆಯೇ, 5 ಕೋಟಿ ರೂ.ಗಳ ಹೊಚ್ಚ ಹೊಸ ಬೆಂಟ್ಲೆ ಬೆಂಟೈಗಾ ಐಷಾರಾಮಿ ಎಸ್‌ಯುವಿಯನ್ನು ಡೆಲಿವರಿ ನಂತರ ದೇವಾಲಯಕ್ಕೆ ಕೊಂಡೊಯ್ದು ಇದೇ ರೀತಿಯ ಪೂಜೆಗಳನ್ನು ನೆರವೇರಿಸಿದ್ದರು.

ವಿಮಾನ ವಿಶೇಷತೆಗಳು: ಮುದಿತ್ ಆನಂದ್ ಪೂಜೆ ಮುಗಿಸಿದ ನಂತರ, ವಿಮಾನವನ್ನು ಹಾರಿಸುತ್ತಾರೆ. ಬಳಿಕ ಕ್ಯಾಬಿನ್ ಒಳಗಿನಿಂದ ಆಕಾಶದ ನೋಟವನ್ನು ವೀಡಿಯೊ ಮೂಲಕ ತೋರಿಸಿದ್ದಾರೆ. ಇಲ್ಲಿ ಕಂಡುಬರುವ ವಿಮಾನವು ಪೈಪರ್ ಚೆರೋಕಿ 140 ಆಗಿದೆ. ಇದು ಪೈಪರ್ ಏರ್ ಕ್ರಾಫ್ಟ್ ನಿರ್ಮಿಸಿದ 2 ಮತ್ತು 4 ಆಸನಗಳ ಲಘು ವಿಮಾನವಾಗಿದೆ. ಈ ವಿಮಾನವನ್ನು ತರಬೇತಿ, ಏರ್ ಟ್ಯಾಕ್ಸಿ ಮತ್ತು ವೈಯಕ್ತಿಕ ಬಳಕೆಗಾಗಿ ವಿನ್ಯಾಸಗೊಳಿಸಲಾಗಿದೆ.
ಇದು ಸಿಂಗಲ್ ಪ್ರೊಪೆಲ್ಲರ್ ಹಗುರವಾದ ವಿಮಾನವಾಗಿದ್ದು, 1964ರಲ್ಲಿ ಬಿಡುಗಡೆಗೊಳಿಸಲಾಗಿತ್ತು. ಇದನ್ನು ಆರಂಭದಲ್ಲಿ ಕೇವಲ 2 ಆಸನಗಳೊಂದಿಗೆ ತರಬೇತಿಗಾಗಿ ವಿನ್ಯಾಸಗೊಳಿಸಲಾಯಿತು. ಈ ಎಂಜಿನ್ 150 ಬಿಹೆಚ್‌ಪಿ ಪವರ್ ಉತ್ಪಾದಿಸುತ್ತದೆ. ನಂತರ 1971 ರಲ್ಲಿ, ಅದೇ ವಿಮಾನದ 4 ಆಸನಗಳ ಆವೃತ್ತಿಯನ್ನು ಸಹ ಪ್ರಾರಂಭಿಸಲಾಯಿತು.
ಪೈಪರ್ ಚೆರೋಕಿ 140ನ ನಿಖರವಾದ ಬೆಲೆ ತಿಳಿದಿಲ್ಲ. ನಾವು ಆನ್‌ಲೈನ್‌ನಲ್ಲಿ ನೋಡಿದಾಗ, ಬಳಸಿದ ಪೈಪರ್ ಚೆರೋಕಿ 140ನ ಬೆಲೆ ಸುಮಾರು 57 ಲಕ್ಷ ರೂ. ಇದೆ. ವೀಡಿಯೊದಲ್ಲಿ ಕಂಡುಬರುವ ವಿಮಾನವು ಬಳಸಲ್ಪಟ್ಟಿದೆ, ಅಂದರೆ ಮುದಿತ್ ಆನಂದ್ ಸೆಕೆಂಡ್‌ಹ್ಯಾಂಡ್‌ನಲ್ಲಿ ಖರೀದಿಸಿರಬಹುದು. ಈ ನಿರ್ದಿಷ್ಟ ವಿಮಾನಕ್ಕೆ ಅವರು ಪಾವತಿಸಿದ ಬೆಲೆ ನಮಗೆ ತಿಳಿದಿಲ್ಲ.
ಡ್ರೈವ್‌ಸ್ಪಾರ್ಕ್ ಕನ್ನಡ ವೆಬ್‌ಸೈಟ್ ತ್ವರಿತವಾಗಿ ಆಟೋ ಮೊಬೈಲ್ ಸಂಬಂಧಿಸಿದ ಸುದ್ದಿಗಳನ್ನು ನೀಡುತ್ತದೆ. ಜೊತೆಗೆ ಸೋಷಿಯಲ್ ಮೀಡಿಯಾಗಳ ಮೂಲಕ ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಶೇರ್ ಮಾಡುತ್ತೇವೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊ ಗಳನ್ನು ಪಡೆಯಲು ನಮ್ಮ ಫೇಸ್ ಬುಕ್, ಇನ್‌ಸ್ಟಾಗ್ರಾಮ್, ಯೂಟ್ಯೂಬ್ ಪೇಜ್‌ಗಳೊಂದಿಗೆ ಫಾಲೋ ಮಾಡಿ. ನಿಮಗೆ ನಮ್ಮ ಯಾವುದೇ ಸುದ್ದಿ ಇಷ್ಟವಾದರೆ ಲೈಕ್, ಕಾಮೆಂಟ್ ಮಾಡುವುದನ್ನು ಮರೆಯದಿರಿ.


Click it and Unblock the Notifications








