ಸ್ಕೂಟರ್ ಮಾರಾಟದಲ್ಲಿ ಪ್ರಗತಿ, ಹೋಂಡಾ ಮೇಲುಗೈ

2010-11 ಆರ್ಥಿಕ ವರ್ಷಾವಧಿಯ ಮೊದಲ ಏಳು ತಿಂಗಳೊಳಗೆ ಸುಮಾರು ಶೇ.52ರಷ್ಟು ಪ್ರಗತಿಯನ್ನು ಸ್ಕೂಟರ್ ಮಾರುಕಟ್ಟೆ ಕಂಡಿದೆ. ಏಪ್ರಿಲ್ ನಿಂದ ಅಕ್ಟೋಬರ್ 2010 ತನಕ ಒಟ್ಟು ಸುಮಾರು 11, 63, 127 ಸ್ಕೂಟರ್ ಗಳು ಮಾರಾಟವಾಗಿದೆ.ಕಳೆದ ವರ್ಷ ಇದೇ ಅವಧಿಯಲ್ಲಿ ಕೇವಲ 7,64,643 ವಾಹನಗಳು ಮಾರಾಟವಾಗಿತ್ತು.
ಅಕ್ಟೋಬರ್ ತಿಂಗಳೊಂದರಲ್ಲೇ ಶೇ.104.27ರಷ್ಟು ಪ್ರಗತಿ ಸಾಧಿಸಿದ್ದು, 1,88,633 ವಾಹನಗಳು ಮಾರಾಟವಾಗಿದ್ದು, 2009ರ ಅಕ್ಟೋಬರ್ ನಲ್ಲಿ 92,346 ಮಾತ್ರ ಮಾರಾಟ ಕಂಡಿತ್ತು ಎಂದು SIAM ವರದಿ ಹೇಳುತ್ತದೆ.
ಹೊಸ ಹೊಸ ಗ್ರಾಹಕರ ಜೊತೆಗೆ ಸ್ಕೂಟರ್ ಪ್ರೇಮಿ ಹಳೆ ಗ್ರಾಹಕರ ಅಭಿರುಚಿಗೆ ತಕ್ಕಂತೆ ಕಂಪೆನಿಗಳು ಹೊಸ ವಿಧಾನದೊಂದಿಗೆ ಮಾರುಕಟ್ಟೆಯಲ್ಲಿ ಜಾಲವನ್ನು ವಿಸ್ತರಿಸುತ್ತಿವೆ. ಮುಖ್ಯವಾಗಿ ನಗರ ಹಾಗೂ ಹಳ್ಳಿಗಳ ಯುವ ಪೀಳಿಗೆ ಮತ್ತೆ ಸ್ಕೂಟರ್ ನತ್ತ ಆಕರ್ಷಿತರಾಗುತ್ತಿರುವುದೇ ಸ್ಕೂಟರ್ ಮಾರಾಟ ಅಧಿಕವಾಗಲು ಕಾರಣ ಎನ್ನುತ್ತದೆ SIAM.
ಹೋಂಡಾ ಮೋಟರ್ಸ್ ಮೇಲುಗೈ: ದೇಸಿ ಮಾರುಕಟ್ಟೆಯಲ್ಲಿ ಇದರ ಸಂಪೂರ್ಣ ಲಾಭ ಪಡೆದಿದ್ದು ಹೋಂಡಾ ಮೋಟರ್ಸ್ ಹಾಗೂ ಸ್ಕೂಟರ್ಸ್ ಇಂಡಿಯಾ ಲಿ. ಆಗಸ್ಟ್ ನಿಂದ ಅಕ್ಟೋಬರ್ ಅವಧಿಯ ಮಾರಾಟದಲ್ಲಿ ಶೇ. 35.41 ಏರಿಕೆಯೊಂದಿಗೆ 5,20,466 ವಾಹನಗಳನ್ನು ಮಾರಾಟ ಮಾಡಿದೆ. ಕಳೆದ ವರ್ಷ ಇದೇ ಅವಧಿಯಲ್ಲಿ 3,84,369 ವಾಹನಗಳನ್ನು ಮಾರಿತ್ತು. ಸ್ಕೂಟರ್ ಮಾರುಕಟ್ಟೆಯಲ್ಲಿ ಶೇ. 44.75ರಷ್ಟು ಪಾಲನ್ನು ಹೊಂದಿರುವ HMSI, ಅಗ್ರಸ್ಥಾನ ಕಾಯ್ದುಕೊಂಡು, ಹೊಸ ಹೊಸ ಮಾದರಿಗಳನ್ನು ಹೊರತರುತ್ತಿದೆ.
ಕಳೆದ ವರ್ಷಾಂತ್ಯದಲ್ಲಿ ಸ್ಕೂಟರ್ ಮಾರುಕಟ್ಟೆ ನಿಧಾನಗತಿಯಲ್ಲಿದ್ದಾಗ, ಬಜಾಜ್ ಸಂಸ್ಥೆ ತೆಗೆದುಕೊಂಡ ನಿರ್ಣಯ ಇತರೆ ಕಂಪೆನಿಗಳನ್ನು ಕೂಡಾ ವಿಚಲಿತಗೊಳಿಸಿತು. ಆದರೆ, ಈ ಅವಧಿಯಲ್ಲಿ 2,54,812 ವಾಹನಗಳನ್ನು ಮಾರಾಟ ಮಾಡಿದ ಟಿವಿಎಸ್ ಸ್ಕೂಟರ್ ಕಳೆದ ವರ್ಷಕ್ಕಿಂತ ಶೇ. 21.91ರಷ್ಟು ಪ್ರಗತಿ ಸಾಧಿಸಿತು. 2009ರಲ್ಲಿ 1,75,953 ವಾಹನಗಳ ಮಾರಾಟ ಕಂಡಿತ್ತು. ಹೀರೋ ಹೊಂಡಾ ಕೂಡಾ ಹಿಂದಿನ ಮಾರಾಟ ಸಂಖ್ಯೆ 1,11,811ಯನ್ನು ಹಿಂದಿಕ್ಕಿ 1,76,950 ವಾಹನಗಳನ್ನು ಮಾರಾಟ ಮಾಡಿ ಅಚ್ಚರಿ ಮೂಡಿಸಿತು.
ಈ ಮಾರಾಟ ಪ್ರಗತಿ ಸಾಧನೆಯಲ್ಲಿ ಗೇರ್ ರಹಿತ ವಾಹನ ಪ್ಲೆಷರ್ ಹೆಚ್ಚಿನ ಪಾಲು ಹೊಂದಿದೆ. ತಿಂಗಳಿಗೆ 27,000 ವಾಹನಗಳನ್ನು ಮಾರಾಟ ಮಾಡುತ್ತಿರುವ ಹೀರೋ ಹೋಂಡಾ ಶೀಘ್ರದಲ್ಲೇ 35,000 ಮಾರಾಟ ಮಾಡುವ ಹಂತ ಮುಟ್ಟಲಿದೆ. ಗ್ರಾಹಕರಿಂದ ಹೆಚ್ಚುತ್ತಿರುವ ಬೇಡಿಕೆಯೇ ಇದಕ್ಕೆಲ್ಲ ಕಾರಣ.
ಸ್ಕೂಟರ್ ಮಾರುಕಟ್ಟೆ ಕತೆ ಅಷ್ಟೇ. ಬಜಾಜ್ ಹಾದಿಯಲ್ಲೇ ಉಳಿದವರು ಸಾಗುತ್ತಾರೆ ಎಂಬ ನಂಬಿಕೆ ಹುಸಿಯಾಗುತ್ತಿದ್ದು, ಹೊಸ ಹೊಸ ವಿನ್ಯಾಸಗಳೊಂದಿಗೆ ಹೊಸ ಕಂಪೆನಿಗಳು ಮಾರುಕಟ್ಟೆಗೆ ಇಳಿಯುತ್ತಿವೆ. ಹೀರೋಹೋಂಡಾ ಹಾಗೂ ಟಿವಿಎಸ್ ಸ್ಕೂಟರ್ ಕಂಪೆನಿ ಸಮಸ್ಥಿತಿಯನ್ನು ಕಾಯ್ದುಕೊಂಡು ಪೈಪೋಟಿ ಮುಂದುವರೆಸಿವೆ.


Click it and Unblock the Notifications








