ಸ್ಕೂಟರ್ ಬೇಕೆಂದ ಅಪ್ಪ, ಬೈಕ್ ಮಾತ್ರ ಸಾಕೆಂದನು ಮಗರಾಯ

ಕೆಲವು ದಿನದ ಹಿಂದೆ ಬಜಾಜ್ ಆಟೋ ಚೇರ್ಮನ್ ರಾಹುಲ್ ಬಜಾಜ್, ಕಂಪನಿಯು ಮತ್ತೆ ಸ್ಕೂಟರ್ ಮಾರುಕಟ್ಟೆಗೆ ಪ್ರವೇಶಿಸುವ ಇಂಗಿತ ವ್ಯಕ್ತಪಡಿಸಿದ್ದರು. ಆದರೆ ಆ ಮಾತನ್ನು ನಿರಾಕರಿಸಿದ ಅವರ ಮಗ ಮತ್ತು ಕಂಪನಿಯ ವ್ಯವಸ್ಥಾಪಕ ನಿರ್ದೇಶಕ ರಾಜೀವ್ ಬಜಾಜ್ "ಕಂಪನಿ ಕೇವಲ ಬೈಕ್ ಸೆಗ್ಮೆಂಟ್ ಗೆ ಮಾತ್ರ ಗಮನ ನೀಡಲಿದೆ" ಎಂದು ಸ್ಪಷ್ಟಪಡಿಸಿದ್ದಾರೆ.
"ಕಂಪನಿಯು ಜಾಗತಿಕ ಬೈಕ್ ಮಾರುಕಟ್ಟೆಗೆ ಹೆಚ್ಚಿನ ಗಮನ ನೀಡಲಿದ್ದು, ಸ್ಕೂಟರ್ ಸೆಗ್ಮೆಂಟ್ ಗೆ ಪ್ರವೇಶಿಸುವುದಿಲ್ಲ" ಎಂದು ರಾಜೀವ್ ಬಜಾಜ್ ಹೇಳಿದ್ದಾರೆ. 2009-10ರ ಆರ್ಥಿಕ ವರ್ಷದ ಅಂತ್ಯದಲ್ಲಿ ಕಂಪನಿ ಸ್ಕೂಟರ್ ಉತ್ಪಾದನೆ ಸ್ಥಗಿತಗೊಳಿಸಲಿದೆ ಎಂದು 2009ರ ಡಿಸೆಂಬರ್ ನಲ್ಲಿಯೇ ಕಂಪನಿ ಪ್ರಕಟಿಸಿತ್ತು. ಈ ಮೂಲಕ ದೇಶದ ವಾಹನ ಮಾರುಕಟ್ಟೆಯಲ್ಲಿ "ಹಮಾರ ಬಜಾಜ್" ಕ್ರಾಂತಿ ಕೊನೆಗೊಳಿಸಿತ್ತು.
ನಿರೀಕ್ಷೆಯಷ್ಟು ಮಾರಾಟ ಕಾಣದ ಹಿನ್ನಲೆಯಲ್ಲಿ ಸ್ಕೂಟರ್ ಉತ್ಪಾದನೆಯತ್ತ ಕಂಪನಿ ಗಮನಹರಿಸುವುದಿಲ್ಲವೆಂದು ರಾಜೀವ್ ಬಜಾಜ್ ಸ್ಪಷ್ಟಪಡಿಸಿದ್ದಾರೆ. "ಈಗ ನಾವು ಮೋಟರ್ ಸೈಕಲ್ ಸ್ಪಷಲಿಸ್ಟ್, ನಾವು ಸ್ಕೂಟರ್ ಉತ್ಪಾದಿಸಲಾರೆವು" ಎಂದವರು ಮಾರ್ಮಿಕವಾಗಿ ನುಡಿದರು.
ಆದರೆ ದೇಶದ ಒಟ್ಟಾರೆ ಸ್ಕೂಟರ್ ಮಾರುಕಟ್ಟೆ ಗಮನಾರ್ಹ ಪ್ರಗತಿ ಕಾಣುತ್ತಿದೆ. ಹೋಂಡಾ ಮೋಟರ್ ಸೈಕಲ್ ಆಂಡ್ ಸ್ಕೂಟರ್ ಇಂಡಿಯಾದ ಗೇರ್ ಲೆಸ್ ಸ್ಕೂಟರ್ ಮೂಲಕ ಕಳೆದ ಏಪ್ರಿಲ್-ಜನವರಿ ಆರ್ಥಿಕ ವರ್ಷದಲ್ಲಿ ದೇಶದ ಸ್ಕೂಟರ್ ಮಾರುಕಟ್ಟೆಯಲ್ಲಿ 16,97,204 ಯೂನಿಟ್ ಮಾರಾಟಕಂಡಿದ್ದು ಶೇ. 40.57ರಷ್ಟು ಪ್ರಗತಿ ಕಂಡಿತ್ತು. ಇದಕ್ಕೂ ಹಿಂದಿನ ವರ್ಷದ ಇದೇ ಅವಧಿಯಲ್ಲಿ 11,57,902 ಸ್ಕೂಟರ್ ಮಾರಾಟಗೊಂಡಿದ್ದವು.


Click it and Unblock the Notifications








