ದಿನದ ಬೈಕ್: ಹೆಚ್ಚಿನ ಜನರ ಮೆಚ್ಚಿನ ಡಿಸ್ಕವರ್ 150

ಡಿಸ್ಕವರ್ 150 ಸಿಸಿ ಬೈಕ್ 4 ಸ್ಟ್ರೋಕ್ ಏರ್ ಕೂಲ್ಡ್, ಸಿಂಗಲ್ ಸಿಲಿಂಡರ್, 2 ಕವಾಟದ ಎಂಜಿನ್ ಹೊಂದಿದೆ. ಇದರಲ್ಲಿ ಡಿಟಿಎಸ್ಐ ತಂತ್ರಜ್ಞಾನ ಪ್ಲಸ್ ಪಾಯಿಂಟ್. ಡಿಟಿಎಸ್ಐ ಅಂದ್ರೆ ಡಿಜಿಟಲ್ ಟ್ವಿನ್ ಸ್ಪಾರ್ಕ್ ಇಗ್ನಿಶನ್ ಟೆಕ್ನಾಲಜಿ. ಈ ಸೆಗ್ಮೆಂಟ್ ಗಳಲ್ಲಿ ಇಂತಹ ಡಿಟಿಎಸ್ಐ ಎಂಜಿನ್ ಅಳವಡಿಸಿದ ಮೊದಲ ಬೈಕ್ ಕೂಡ ಡಿಸ್ಕವರ್. ಡಿಸ್ಕವರ್ ತೂಕ ಕೇವಲ 121 ಕೆ.ಜಿ. ಭಾರ ಕಡಿಮೆಯಿದ್ದರೂ, ದರ ಕಡಿಮೆಯಿದ್ದರೂ ಡಿಸ್ಕವರ್ ಹೆಚ್ಚು ಜನರಿಗೆ ಇಷ್ಟವಾಗಿರುವ ಬೈಕಾಗಿದೆ.
ಈ ಬೈಕ್ 5 ಸ್ಪೀಡ್ ಗೇರ್ ಬಾಕ್ಸ್ ಹೊಂದಿದೆ. 5ನೇ ಗೇರ್ ನಲ್ಲಿ ಡಿಸ್ಕವರ್ ಡೀಸಂಟಾಗಿ ಪ್ರತಿಗಂಟೆಗೆ 25 ಕಿ.ಮೀ. ವೇಗದಲ್ಲಿ ಸಾಗುತ್ತದೆ. 100 ಸಿಸಿ ಡಿಸ್ಕವರ್ ನಂತಹ ಲುಕ್ 150 ಸಿಸಿಯಲ್ಲೂ ಮುಂದುವರೆದಿದೆ. ನಿರ್ಮಾಣ ಗುಣಮಟ್ಟ ಅತ್ಯುತ್ತಮವಾಗಿಲ್ಲ. ಆದರೆ ಇದರ ದರಕ್ಕೆ ಹೋಲಿಸಿದರೆ ನಿರ್ಮಾಣ ಗುಣಮಟ್ಟದ ಕುರಿತು ಮಾತನಾಡುವ ಹಾಗಿಲ್ಲ.
ಬಜಾಜ್ ನ ಹೆಚ್ಚಿನ ಬೈಕ್ ಸೀಟ್ ಗಳು ಒಂದಿಷ್ಟು ಹಾರ್ಡಾಗಿಯೇ ಇವೆ. ಹಾಗಾಗಿ ಹೆಚ್ಚು ಆರಾಮದಾಯಕತೆ ಅನಿಸುವುದಿಲ್ಲ. ನಗರಗಳಲ್ಲಿ ಪ್ರಯಾಣಿಸುವುಕ್ಕಿಂತ ಹೆದ್ದಾರಿ ರೈಡ್ ಒಂದಿಷ್ಟು ಕಂಫರ್ಟ್ ಎನಿಸುತ್ತದೆ. ರೈಡಿಂಗ್ ಗುಣಮಟ್ಟ ಅತ್ಯುತ್ತಮವಾಗಿದ್ದು, ಬೈಕ್ ನಿಯಂತ್ರಣ ಕೂಡ ಸುಲಭವಾಗಿದೆ. ಪ್ರತಿಗಂಟೆಗೆ ಸುಮಾರು 90 ಕಿ.ಮೀ. ವೇಗದಲ್ಲಿ ಪ್ರಯಾಣಿಸಿದಾಗ ಒಂದಿಷ್ಟು ನರ್ವಸ್ ಆದೀತು. ಈ ಬೈಕ್ ನಲ್ಲಿ ಆರಾಮವಾಗಿ ಪ್ರತಿಗಂಟೆಗೆ 70 ಕಿ.ಮೀ.ಯಿಂದ 80 ಕಿ.ಮೀ. ವೇಗದಲ್ಲಿ ಸಾಗಬಹುದು.
ಮೈಲೇಜ್ ಮತ್ತು ದರ: ಡಿಸ್ಕವರ್ ಹೆಚ್ಚು ಜನಪ್ರಿಯಗೊಂಡಿರುವುದೇ ತನ್ನ ಮೈಲೇಜ್ ನಿಂದಾಗಿ. ಮತ್ತೆ ಇದರ ದರ ಕೂಡ ಈ ಬ್ರಾಂಡನ್ನು ಫೇಮಸ್ಸಾಗಿಸಿದೆ. ಪ್ರತಿಲೀಟರ್ ಇಂಧನಕ್ಕೆ 125 ಸಿಸಿ ಬೈಕ್ 70 ಕಿ.ಮೀ.ಗಿಂತ ಹೆಚ್ಚು ಮೈಲೇಜ್ ನೀಡುತ್ತದೆ. ಇದಕ್ಕೆ ಹೋಲಿಸಿದರೆ 150 ಸಿಸಿ ಮೈಲೇಜ್ ತುಸು ಕಮ್ಮಿ ಇದೆ. ಡಿಸ್ಕವರ್ 150 ಸಿಸಿ ಬೈಕ್ ಪ್ರತಿಲೀಟರ್ ಗೆ ಸುಮಾರು 58 ರಿಂದ 60 ಕಿ.ಮೀ. ಮೈಲೇಜ್ ನೀಡುತ್ತದೆ. ಬಜಾಜ್ ಡಿಸ್ಕವರ್ 150 ಸಿಸಿ ಬೈಕ್ ಗೆ ಬೆಂಗಳೂರು ಎಕ್ಸ್ ಶೋರೂಂ ದರ ಸುಮಾರು 47,526 ರೂಪಾಯಿ ಇದೆ.
ಡಿಸ್ಕವರ್ 125 ಸಿಸಿ: ಬಜಾಜ್ ಡಿಸ್ಕವರ್ 125 ಸಿಸಿ ನೋಡಲು ಒಂದಿಷ್ಟು ಆಕರ್ಷಕವಾಗಿದೆ. ಗ್ರಾಫಿಕ್ಸ್, ವಿನ್ಯಾಸ ಎಲ್ಲವೂ ಸೂಪರ್. ಆಕರ್ಷಕ ಇಂಧನ ಟ್ಯಾಂಕ್ ಮತ್ತು ಹೆಡ್ ಲ್ಯಾಂಪ್ ಗಮನಸೆಳೆಯುತ್ತದೆ. ಬಜಾಜ್ ಡಿಸ್ಕವರ್ ನ ಬೃಹತ್ ವೀಲ್ ಬೇಸ್, ವಿನ್ಯಾಸ, ಭಾರದಿಂದಾಗಿ ನಿಯಂತ್ರಣ ಸುಲಭವಾಗಿದೆ. ಆದರೆ ಉದ್ದದ ವ್ಯಕ್ತಿಗಳಿಗೆ ಇದರಲ್ಲಿ ಮಾಡುವ ರೈಡ್ ಕಂಫರ್ಟ್ ಎನಿಸದು. ಮೈಲೇಜ್ ವಿಷಯಕ್ಕೆ ಬಂದರೆ ಡಿಸ್ಕವರ್ 125 ಹೆಚ್ಚು ಇಷ್ಟವಾಗುತ್ತದೆ. ಇದರಲ್ಲಿ ಸಾಮಾನ್ಯ ವೇಗದಲ್ಲಿ ಸಂಚರಿಸಿದರೆ ಅಂದರೆ ಪ್ರತಿಗಂಟೆಗೆ 55 ಕಿ.ಮೀ. ಸಾಗಿದರೆ ಪ್ರತಿಲೀಟ್ ಇಂಧನಕ್ಕೆ ನಗರಗಳಲ್ಲಿ ಸುಮಾರು 60 ಕಿ.ಮೀ. ಸಾಗಬಹುದು.


Click it and Unblock the Notifications