ಹೋಂಡಾಕ್ಕೆ ಗುದ್ದಲಿ ಪೂಜೆ ಮಾಡಿದ ಡಿವಿ ಸದಾನಂದ ಗೌಡ
ಬೆಂಗಳೂರು, ಸೆ 30: ದೇಶದಲ್ಲಿ ಹೋಂಡಾ ಮೋಟರ್ ಸೈಕಲ್ಸ್ ಆಂಡ್ ಸ್ಕೂಟರ್ಸ್ ಇಂಡಿಯಾದ ಮೂರನೇ ಘಟಕಕ್ಕೆ ಕೋಲಾರ ಸಮೀಪದ ನರಸಪುರದಲ್ಲಿ ಶಂಕುಸ್ಥಾಪನೆಯಾಗಿದೆ. ಈ ಘಟಕದಲ್ಲಿ ಸುಮಾರು 3 ಸಾವಿರ ಜನರಿಗೆ ಉದ್ಯೋಗ ದೊರಕುವ ನಿರೀಕ್ಷೆಯನ್ನು ಕಂಪನಿ ವ್ಯಕ್ತಪಡಿಸಿದೆ.
ಬೆಂಗಳೂರಿನಿಂದ 52 ಕಿ.ಮೀ. ದೂರದ ನರಸಪುರ ಇಂಡಸ್ಟ್ರಿಯಲ್ ಏರಿಯಾದಲ್ಲಿ ನೂತನ ಘಟಕ ನಿರ್ಮಾಣವಾಗುತ್ತಿದೆ. ಇದು ಹೋಂಡಾ ಕಂಪನಿಯ ದೇಶದ ಮೂರನೇ ಘಟಕ. ಈ ಘಟಕಕ್ಕೆ ಕಂಪನಿಯು ಆರಂಭಿಕವಾಗಿ 1,350 ಕೋಟಿ ರು. ಹೂಡಿಕೆ ಮಾಡಲಿದೆ.
"ಕಂಪನಿಯು ಕೋಲಾರ ಘಟಕದಲ್ಲಿ ವಾರ್ಷಿಕ 12 ಲಕ್ಷ ಬೈಕ್ ಮತ್ತು ಸ್ಕೂಟರ್ ಉತ್ಪಾದಿಸಲಿದೆ. ಈ ಘಟಕದಲ್ಲಿ 2013ರ ಮೊದಲಾರ್ಧದಲ್ಲಿ ಉತ್ಪಾದನೆ ಆರಂಭವಾಗಲಿದೆ. ಈ ಘಟಕದಲ್ಲಿ ಸುಮಾರು 3 ಸಾವಿರ ಜನರಿಗೆ ಉದ್ಯೋಗ ದೊರಕಲಿದೆ ಎಂದು ಕಂಪನಿಯ ಸಿಇಒ ಕೇಟಾ ಮರಮಸ್ಟು ಹೇಳಿದ್ದಾರೆ.
ನೂತನ ಘಟಕದಿಂದ ಕಂಪನಿಯ ದೇಶದ ಒಟ್ಟಾರೆ ವಾಹನ ಉತ್ಪಾದನೆ 40 ಲಕ್ಷ ಯುನಿಟ್ ಗೆ ತಲುಪಲಿದೆ. ಇದರಲ್ಲಿ 16 ಲಕ್ಷ ಮಾನೆಸರ್ ಘಟಕದಲ್ಲಿ, ಎರಡನೇ ಘಟನ ರಾಜಸ್ಥಾನದ ತಪುಕರದಲ್ಲಿ 12 ಲಕ್ಷ ಯುನಿಟ್ ಮತ್ತು ನರಸಪುರದಲ್ಲಿ 12 ಲಕ್ಷ ಯುನಿಟ್ ಉತ್ಪಾದನೆಯಾಗಲಿದೆ ಎಂದು ಕಂಪನಿಯ ಉಪಾಧ್ಯಕ್ಷರಾದ ಎನ್ ಕೆ ರತನ್ ಹೇಳಿದ್ದಾರೆ.
ಹೀರೋ ಮೋಟರ್ಸ್ ಆಂಡ್ ಸ್ಕೂಟರ್ಸ್ ಇಂಡಿಯಾ ಈಗ ಆಟೋಮ್ಯಾಟಿಕ್ ಸ್ಕೂಟರ್ ಗಳಾದ ಆಕ್ಟಿವಾ, ಡಿಯೊ ಮತ್ತು ಏವಿಯೇಟರ್ ಗಳನ್ನು ಉತ್ಪಾದಿಸುತ್ತದೆ. ಜೊತೆಗೆ 6 ಬೈಕ್ ಗಳಾದ ಸಿಬಿ ಟ್ವಿಸ್ಟರ್, ಸಿಬಿ ಶೈನ್, ಸಿಬಿ ಯುನಿಕಾರ್ನ್, ಸಿಬಿ ಯುನಿಕಾರ್ನ್ ಡಾಜ್ಲರ್ ಮತ್ತು ಸಿಬಿಆರ್ 250ಆರ್ ಬೈಕುಗಳನ್ನು ಉತ್ಪಾದಿಸುತ್ತಿದೆ.


Click it and Unblock the Notifications








