ಹರ್ಲಿ, ಡುಕಾಟಿ ಬೈಕ್ ಸದ್ದಿನಲ್ಲಿ ಬೆಂಗಳೂರು ಹೆಸರಿದೆ!!
ನಂಬಿದರೆ ನಂಬಿ. ಡುಕಾಟಿ, ಹರ್ಲಿ, ಯಮಹಾ ಸೂಪರ್ ಬೈಕುಗಳ ಎಂಜಿನ್ ಸದ್ದಿನ ಕಣಕಣದಲ್ಲೂ ಬೆಂಗಳೂರು ಹೆಸರಿದೆ. ಈ ಬೈಕುಗಳಿಗೂ ಬೆಂಗಳೂರಿಗೂ ಹಲವು ದಶಕಗಳ ನಂಟಿದೆ. ನೀವು ನಂಬ್ತಿರೋ ಇಲ್ವೋ... ಈ ಎಲ್ಲಾ ಬೈಕುಗಳಿಗೆ ಬೆಂಗಳೂರಿನಿಂದಲೇ ಎಂಜಿನ್ ಭಾಗಗಳನ್ನು ಪೂರೈಸಲಾಗುತ್ತದೆ.
ಯಮಹಾ, ಹರ್ಲಿ ಡೇವಿಡ್ ಸನ್ ಮತ್ತು ಡುಕಾಟಿ ಸೇರಿದಂತೆ ಹೆಚ್ಚಿನ ಅಂತಾರಾಷ್ಟ್ರೀಯ ಬ್ರಾಂಡುಗಳಿಗೆ ಎಂಜಿನ್ ಬಿಡಿಭಾಗಗಳನ್ನು ಬೆಂಗಳೂರಿನ ಸನ್ಸಿರಾ ಎಂಜಿನಿಯರಿಂಗ್(ಎಸ್ಇ) ಪೂರೈಸುತ್ತಿದೆ ಎಂದು ಟೈಮ್ಸ್ ಆಫ್ ಇಂಡಿಯಾ ವರದಿ ಮಾಡಿದೆ.
ಸನ್ಸಿರಾ ಎಂಜಿನಿಯರಿಂಗ್ ಕಳೆದ ಮೂರು ದಶಕಗಳಿಂದ ಈ ಕಂಪನಿಗಳಿಗೆ ಎಂಜಿನ್ ಬಿಡಿಭಾಗ ಪೂರೈಸುತ್ತದೆ. ತನ್ನ ಗುಣಮಟ್ಟದ ಸೇವೆಗಾಗಿ ಎಸ್ ಇ ಕಂಪನಿಯು ಅತ್ಯುತ್ತಮ ಗುಣಮಟ್ಟ ಮತ್ತು ಸೇವಾ ಕಂಪನಿ ಎಂಬ ಸರ್ಟಿಫಿಕೆಟ್ ಪಡೆದಿದೆ. ಅಂದಹಾಗೆ ಈ ಕಂಪನಿಯ ಎಂಡಿ ಹೆಸರು ಎಸ್ ಶೇಖರ್.
ಡುಕಾಟಿ ಕಂಪನಿಯು ಸನ್ಸಿರಾ ಎಂಜಿನಿಯರಿಂಗ್ ಕಂಪನಿಗೆ ವರ್ಷದ ಕ್ವಾಲಿಟಿ ಆಂಡ್ ಸರ್ವಿಸ್ ಕಂಪನಿ ಪ್ರಶಸ್ತಿ ನೀಡಿದೆ. ಇಂತಹ ಪ್ರಶಸ್ತಿ ಪಡೆಯುತ್ತಿರುವ ಮೊದಲ ಭಾರತದ ಕಂಪನಿ ಇದಾಗಿದೆ.
ಭಾರತವು ಜಾಗತಿಕವಾಗಿ ಪ್ರಮುಖ ವಾಹನ ಬಿಡಿಭಾಗ ಪೂರೈಕೆದಾರ ದೇಶವಾಗಿದೆ. ಇಲ್ಲಿಂದ ಥೈಲಾಂಡ್ ಮತ್ತು ಕೊರಿಯಾಗಳ ಬೈಕು ಕಂಪನಿಗಳಿಗೆ ಬಿಡಿಭಾಗ ಪೂರೈಕೆ ಮಾಡಲಾಗುತ್ತದೆ. ದೇಶದ ವಾಹನ ಬಿಡಿಭಾಗ ರಫ್ತು ಸುಮಾರು ಶೇಕಡ 30ರಷ್ಟು ವರ್ಷಕ್ಕೆ ಅಭಿವೃದ್ಧಿಕಾಣುತ್ತಿದೆ.


Click it and Unblock the Notifications









