ಐಕಾನಿಕ್ ವೆಸ್ಪಾ ಸ್ಕೂಟರ್ ಶೀಘ್ರದಲ್ಲಿ ರಸ್ತೆಗೆ

ವೆಸ್ಪಾ ಎಲ್ಎಕ್ಸ್125 ಸ್ಕೂಟರ್ 2012ರಲ್ಲಿ ದೇಶದ ರಸ್ತೆಗಿಳಿಯಲಿದ್ದು, ಟಿವಿಎಸ್ ಮತ್ತು ಹೋಂಡಾ ಕಂಪನಿಗೆ ಪ್ರಬಲ ಪೈಪೋಟಿ ನೀಡುವ ಸಾಧ್ಯತೆಯಿದೆ. ವೆಸ್ಪಾ ಬಿಡುಗಡೆಯ ನಂತರ ಕಂಪನಿಯು ತನ್ನದೇ ಬ್ರಾಂಡ್ ನಲ್ಲಿ ಹಲವು ವಾಹನಗಳನ್ನು ಹೊರತರಲಿದೆ. ಇದರಲ್ಲಿ ವೆಸ್ಪಾದ 7 ಸ್ಕೂಟರ್ ಬ್ರಾಂಡ್, ಬೈಕ್ ಗಳು ಮತ್ತು ಸಣ್ಣ ವಾಣಿಜ್ಯ ವಾಹನಗಳು ಸೇರಿರಲಿವೆ.
ನೂತನ ವೆಸ್ಪಾ ಮುಂದಿನ ವರ್ಷದ ಮೊದಲ ತ್ರೈಮಾಸಿಕದಲ್ಲಿ ರಸ್ತೆಗಿಳಿಯಲಿದೆ. ಎಲ್ಎಕ್ಸ್125 ಆಟೋಮ್ಯಾಟಿಕ್ ಮತ್ತು ವೆಸ್ಪಾ ವಿನ್ಯಾಸದ ಸಿಂಗಲ್ 4 ಸಿಲಿಂಡರ್ ಎಂಜಿನ್ ಹೊಂದಿರಲಿದೆ. ಮುಂದಿನ ವರ್ಷ ರಸ್ತೆಗಿಳಿಯಲಿರುವ ವೆಸ್ಪಾವನ್ನು ಶೇಕಡಾ 100ರಷ್ಟು ಸ್ಥಳೀಕರಣ ಮಾಡಲಾಗುವುದು ಎಂದು ಕಂಪನಿಯ ಮುಖ್ಯ ವ್ಯವಸ್ಥಾಪಕ ನಿರ್ದೇಶಕರು ಹೇಳಿದ್ದಾರೆ.
ಮಹಾರಾಷ್ಟ್ರದ ಘಟಕಕ್ಕೆ 3 ಕೋಟಿ ಯೂರೋ ಹೂಡಿಕೆ ಮಾಡಲಾಗಿದ್ದು, ವರ್ಷಕ್ಕೆ 15 ಲಕ್ಷ ಯೂನಿಟ್ ಉತ್ಪಾದನಾ ಸಾಮರ್ಥ್ಯ ಹೊಂದಿದೆ. ಬೇಡಿಕೆ ಮತ್ತು ಅವಶ್ಯಕತೆಯನ್ನು ನೋಡಿಕೊಂಡು ಉತ್ಪಾದನೆಯನ್ನು ಹೆಚ್ಚಿಸಲಾಗುವುದು ಎಂದು ಅವರು ಹೇಳಿದ್ದಾರೆ. ಈಗ ದೇಶದಲ್ಲಿ ಕಂಪನಿಯ 70 ಡೀಲರ್ ಗಳಿದ್ದಾರೆ.
ವೆಸ್ಪಾ ಬ್ರಾಂಡ್ ಗೆ ಉತ್ತೇಜನ ನೀಡಲು ನಾಲ್ಕು ವರ್ಷಗಳ ಹಿಂದೆ ವೆಸ್ಪಾ ವರ್ಲ್ಡ್ ಕ್ಲಬ್ ಮಾಡಲಾಗಿತ್ತು. ಈಗ 35 ಅಂತರ್ ರಾಷ್ಟ್ರೀಯ ವೆಸ್ಪಾ ಕ್ಲಬ್ ಗಳಿವೆ. ಇಟಲಿಯಲ್ಲಿ 685 ವೆಸ್ಪಾ ಕ್ಲಬ್ ಗಳಿವೆ. ಇಲ್ಲಿ ಈಗಾಗಲೇ 1.7 ಕೋಟಿ ವೆಸ್ಪಾ ಮಾರಾಟ ಮಾಡಲಾಗಿದೆ.
ಇದು 3ನೇ ಬಾರಿ: ಐಕಾನಿಕ್ ವೆಸ್ಪಾ ಇಲ್ಲಿಗೆ ಬರುತ್ತಿರುವುದು ಇದು ಮೂರನೇ ಬಾರಿ. ಪಿಯಾಜಿಯೊ ಕಂಪನಿಯು ಬಜಾಜ್ ಆಟೊ ಸಹಭಾಗಿತ್ವದಲ್ಲಿ 1960ರಲ್ಲಿ ವೆಸ್ಪಾ ಸ್ಕೂಟರ್ ಉತ್ಪಾದಿಸಲು ಆರಂಭಿಸಿತ್ತು. ಆದರೆ 1971ರಲ್ಲಿ ಇಂದಿರಾ ಗಾಂಧಿಯವರ ಖಾಸಗೀಕರಣ ಕಾರ್ಯಕ್ರಮಗಳ ಹಿನ್ನೆಲೆಯಲ್ಲಿ ಪಿಯಾಜಿಯೊ ಪರವಾನಿಗೆ ರದ್ದಾಗಿತ್ತು. ಸಹಭಾಗಿತ್ವ ಕೊನೆಗೊಂಡ ನಂತರ ಚೇತಕ್ ಹೆಸರಿನಲ್ಲಿ ಬಜಾಜ್ ಉತ್ಪಾದನೆ ಮುಂದುವರೆಸಿತ್ತು. 1983ರಲ್ಲಿ ಎಲ್ ಎಂ ಎಲ್ ಮೋಟಾರ್ಸ್ ನೊಂದಿಗಿನ ಸಹಭಾಗಿತ್ವದಲ್ಲಿ ದೇಶದಲ್ಲಿ ಮತ್ತೆ ವೆಸ್ಪಾ ಇಲ್ಲಿಗೆ ಬಂದಿತ್ತು. ಕಳೆದ 2007ರಲ್ಲಿ ಮತ್ತೆ ಭಾರತಕ್ಕೆ ಬರುವುದಾಗಿ ಪಿಯಾಜಿಯೊ ಹೇಳಿತು. ಮುಂದಿನ ವರ್ಷ ರಸ್ತೆಗಿಳಿಯುತ್ತಿರುವುದನ್ನು ಸೇರಿಸಿದರೆ ಕಂಪನಿ ಮೂರನೇ ಬಾರಿ ಇಲ್ಲಿನ ಮಾರುಕಟ್ಟೆಯಲ್ಲಿ ಅದೃಷ್ಟ ಪರೀಕ್ಷೆ ಮಾಡಿದಂತಾಗುತ್ತದೆ. [ದ್ವಿಚಕ್ರವಾಹನ]


Click it and Unblock the Notifications








