ವಿಶ್ವದ ಲಾಭದಾಯಕ ಕಂಪನಿಯಾಗಿ ಹೊರಹೊಮ್ಮಿದ ಬಜಾಜ್
ಜಗತ್ತಿನ ಹೆಚ್ಚು ಲಾಭದಾಯಕ ವಾಹನ ಕಂಪನಿಯಾಗಿ ದೇಶದ ಎರಡನೇ ಬೃಹತ್ ದ್ವಿಚಕ್ರವಾಹನ ಕಂಪನಿ ಬಜಾಜ್ ಆಟೋ ಹೊರಹೊಮ್ಮಿದೆ. ಇದರೊಂದಿಗೆ ಕಂಪನಿಯು 2012-13ನೇ ಹಣಕಾಸು ವರ್ಷದಲ್ಲಿ ಸುಮಾರು 20 ಸಾವಿರ ಕೋಟಿ ರುಪಾಯಿ ವಹಿವಾಟು ನಡೆಸಿ ವಿಶ್ವದ ಮೂರನೇ ಬೃಹತ್ ವಹಿವಾಟುದಾರ ವಾಹನ ಕಂಪನಿಯಾಗಿಯೂ ಹೊರಹೊಮ್ಮಿದೆ.
ತೆರಿಗೆ ಪಾವತಿ ಮತ್ತು ಬಡ್ಡಿಗೆ ಮುನ್ನದ ಲೆಕ್ಕದಲ್ಲಿ ಬಜಾಜ್ ಆಟೋ ಅಪರೇಟಿಂಗ್ ಲಾಭ ಸುಮಾರು 4 ಸಾವಿರ ಕೋಟಿ ರುಪಾಯಿ ತಲುಪಿದೆ. ಇದು ಶೇಕಡ 20.2ರಷ್ಟು ಏರಿಕೆಯಾದ ಹಿನ್ನಲೆಯಲ್ಲಿ ಜಗತ್ತಿನ ವಾಹನ ಕಂಪನಿಗಳಲ್ಲೇ ಹೆಚ್ಚು ಲಾಭದಾಯಕ ಕಂಪನಿಯಾಗಿದೆ.
ಇದರೊಂದಿಗೆ ಬಜಾಜ್ ಆಟೋ ಕಂಪನಿಯನ್ನು ವರ್ಷದ ಅತ್ಯುತ್ತಮ ಕಂಪನಿಯಾಗಿ ಎಕಾನಮಿಕ್ ಟೈಮ್ಸ್ ಆಯ್ಕೆ ಮಾಡಿತ್ತು. ಬಜಾಜ್ ಕಂಪನಿಯ ನಿರ್ವಹಣಾ ಲಾಭ ದೇಶದ ಇತರ ವಾಹನ ಕಂಪನಿಗಳಿಗಿಂತ ಎರಡು ಪಟ್ಟು ಹೆಚ್ಚಿದೆ. 2011-12ನೇ ಆರ್ಥಿಕ ವರ್ಷದಲ್ಲಿ ಕಂಪನಿಯು ಸುಮಾರು 38 ಲಕ್ಷ ವಾಹನ ಮಾರಾಟ ಮಾಡಿತ್ತು.
ಇಷ್ಟುಮಾತ್ರವಲ್ಲದೇ ರಫ್ತು ವಹಿವಾಟಿನಲ್ಲೂ ಕಂಪನಿಯು ಮುಂದಿದೆ. ಬಜಾಜ್ ಆಟೋ ಒಟ್ಟಾರೆ ಉತ್ಪಾದನೆಯಲ್ಲಿ ಶೇಕಡ 36ರಷ್ಟನ್ನು ರಫ್ತು ಮಾಡುತ್ತಿದೆ. 36 ವಾಹನ ರಫ್ತು ಕಂಪನಿಗಳಲ್ಲಿ ಬಜಾಜ್ ಆಟೋಗೆ 12ನೇ ಸ್ಥಾನವಿದೆ. ಒಟ್ಟಾರೆ ದೇಶದ ಬಜಾಜ್ ಅಟೋ ಲಾಭದಾಯಕತೆಯ ಮಾನದಂಡದಲ್ಲಿ ಜಗತ್ತಿನಲ್ಲಿಯೇ ಪ್ರಪ್ರಥಮ.


Click it and Unblock the Notifications









