ಯೆಸ್ ಯಮಹಾ, ಕೊನೆಗೂ ಭರ್ಜರಿ ಯಶಸ್ಸು
ಕಳೆದ ತಿಂಗಳು ಇಂಡಿಯಾ ಯಮಹಾ ಮೋಟರ್ ಕಂಪನಿಯು ದ್ವಿಚಕ್ರ ವಾಹನ ಮಾರಾಟದಲ್ಲಿ ಅತ್ಯುತ್ತಮ ಪ್ರಗತಿ ದಾಖಲಿಸಿದೆ. ಕಂಪನಿಯು ದೇಶಿ ಮಾರುಕಟ್ಟೆಯಲ್ಲಿ ಕಳೆದ ತಿಂಗಳು 27,050 ಯುನಿಟ್ ವಾಹನ ಮಾರಾಟ ಮಾಡಿದ್ದು, ಕಳೆದ ವರ್ಷದ ಫೆಬ್ರವರಿ ತಿಂಗಳಿನ 23,384 ಯುನಿಟ್ ವಾಹನ ಮಾರಾಟಕ್ಕೆ ಹೋಲಿಸಿದರೆ ಶೇಕಡ 23ರಷ್ಟು ಏರಿಕೆ ಕಂಡಿದೆ.
ಇದೇ ಸಮಯದಲ್ಲಿ ಕಂಪನಿಯು ಜಾಗತಿಕ ಮಾರುಕಟ್ಟೆಗೆ ಸುಮಾರು 13,605 ಯುನಿಟ್ ವಾಹನ ರಫ್ತು ಮಾಡಿದೆ. ಕಳೆದ ವರ್ಷದ ಫೆಬ್ರವರಿಯಲ್ಲಿ ಕಂಪನಿ 9,662 ವಾಹನ ರಫ್ತು ಮಾಡಿತ್ತು. ಫೆಬ್ರವರಿ 2012ರಲ್ಲಿ ಕಂಪನಿಯ ಒಟ್ಟಾರೆ ವಾಹನ ಮಾರಾಟ 40,655 ಯುನಿಟ್ ಆಗಿತ್ತು. ಕಳೆದ ವರ್ಷ ಇದೇ ಅವಧಿಯಲ್ಲಿ ಇದು 33,046 ಯುನಿಟ್ ಆಗಿತ್ತು.
"ಕಂಪನಿಯು ಕಳೆದ ತಿಂಗಳು ಕೂಡ ಸದೃಢ ಮಾರಾಟ ಪ್ರಗತಿ ಮುಂದುವರೆಸಿದೆ. ಇದಕ್ಕೆ ವೈಝಡ್ಎಫ್-ಆರ್15, ಎಫ್ ಝಡ್ ಸೀರಿಸ್ ಮತ್ತು ಎಸ್ ಝಡ್ ಸೀರಿಸ್ ಬೈಕುಗಳು ಪ್ರಮುಖ ಕಾರಣವಾಗಿದೆ" ಎಂದು ಇಂಡಿಯಾ ಯಮಹಾ ಮೋಟರ್ ಪ್ರೈವೇಟ್ ಲಿಮಿಟೆಡ್ ನ ರಾಯ್ ಕುರಿಯನ್ ಹೇಳಿದ್ದಾರೆ.
ಯಮಹಾ ಕಂಪನಿಯು ಇತ್ತೀಚೆಗೆ ವೈಝಡ್ಎಫ್ ಆರ್ 15 ಬೈಕಿಗೆ ವರ್ಷದ ಆವೃತ್ತಿ ಬೈಕು ಎಂಬ ಪ್ರಶಸ್ತಿ ಪಡೆದಿತ್ತು. ಜೊತೆಗೆ ಎನ್ ಡಿಟಿವಿ ಕಾರು ಮತ್ತು ಬೈಕ್ ಪ್ರಶಸ್ತಿಯನ್ನು ಕೂಡ ಕಂಪನಿ ಪಡೆದಿದೆ. (ಕನ್ನಡ ಡ್ರೈವ್ ಸ್ಪಾರ್ಕ್ )


Click it and Unblock the Notifications









