ರಾಯಲ್ ಎನ್‌ಫೀಲ್ಡ್‌ನಿಂದ ಹೊಸ ಲ್ಯಾಂಡ್ ಸ್ಪೀಡ್ ದಾಖಲೆ
ವಿಶ್ವ ಪ್ರಸಿದ್ಧ ಬೋನ್‌ವಿಲ್ ಸಾಲ್ಟ್ ಫ್ಲ್ಯಾಟ್ಸ್‌ನಲ್ಲಿ ದಾಖಲೆ ಸ್ಥಾಪಿಸುವುದು ಪ್ರತಿಯೊಬ್ಬ ರೇಸರ್‌ನ ಕನಸಾಗಿರುತ್ತದೆ. ಇಂತಹ ಪ್ರಯತ್ನದಲ್ಲಿ ಕೆಲವರು ಮಾತ್ರ ಯಶಸ್ಸು ಕಾಣುತ್ತಾರೆ. ಇನ್ನು ಕೆಲವರು ಗೆಲುವಿನ ವರೆಗೂ ಸತತ ಪ್ರಯತ್ನವನ್ನು ಮುಂದುವರಿಸುತ್ತಾರೆ.
ಇಂತಹ ಮಹತ್ ಸಾಧನೆ ಮಾಡಿದ ಪಟ್ಟಿಗೆ ಮಹಿಳೆಯೊಬ್ಬಾಕೆ ಸೇರ್ಪಡೆಯಾಗಿದ್ದಾರೆ. ಹೌದು, ದೈಹಿಕ ಚಿಕಿತ್ಸೆಯಲ್ಲಿ ಡಾಕ್ಟರೇಟ್ ಪಡೆದುಕೊಂಡಿರುವ ನ್ಯಾಂಡಿನ್ ಡಿ ಫ್ರೆಟಾಸ್ ತನ್ನ ರಾಯಲ್ ಎನ್‌ಫೀಲ್ಡ್ ಬೈಕ್‌ನಲ್ಲಿ ಹೊಸ ಲ್ಯಾಂಡ್ ಸ್ಪೀಡ್ ದಾಖಲೆ ಸ್ಥಾಪಿಸಿದ್ದಾರೆ.

ಬೋನ್‌ವಿಲ್ ಸಾಲ್ಟ್ ಫ್ಲ್ಯಾಟ್‌ನಲ್ಲಿ 500 ಮೋಡಿಫೈಡ್ ಫುಶ್-ರೊಡ್ ಪಾರ್ಷಿಯಲಿ ಸ್ಟ್ರೀಮ್‌ಲೈನ್ಡ್ ಅಥವಾ 500 ಎಂಪಿಪಿಎಸ್ ವಿಭಾಗದಲ್ಲಿ ರಾಯಲ್ ಎನ್‌ಫೀಲ್ಡ್‌ನೊಂದಿಗೆ ಕಣಕ್ಕಿಳಿದಿದ್ದ ಈಕೆ ಗಂಟೆಗೆ 157.2 ಕೀ.ಮೀ. (ಅನಧಿಕೃತ) ವೇಗದಲ್ಲಿ ಸಂಚರಿಸುವ ಮೂಲಕ ನೂತನ ದಾಖಲೆ ಬರೆದಿದ್ದಾರೆ.
ಹೆಸರಾಂತ ಟ್ಯೂನರ್ ಹಾಗೂ ನಿರ್ವಹಣಾ ಭಾಗಗಳ ತಯಾರಕರಾಗಿರುವ ಮ್ಯಾಟ್ ಕ್ಯಾಪ್ರಿ ಎಂಬವರು, ನ್ಯಾಂಡಿನ್ ಅವರ ಕಾಂಟಿನೆಂಟಲ್ ಜಿಟಿ ಬೈಕ್‌ನಲ್ಲಿ ಕೆಲವೊಂದು ಮಾರ್ಪಾಡುಗಳನ್ನು ತಂದಿದ್ದರು. ಅವರು ಬೈಕ್‌ನ ಕ್ಯಾಮ್‌ಶಾಫ್ಟ್, ಸಿಲಿಂಡರ್ ಹೆಡ್, ಥ್ರಾಟಲ್ ಬಾಡಿ, ಪಿಸ್ತಾನ್ ಮತ್ತು ಎಕ್ಸಾಸ್ಟ್ ಸಿಸ್ಟಂಗಳಲ್ಲಿ ಸುಧಾರಣೆ ತಂದಿದ್ದರು. ಈ ಮೂಲಕ ಎಂಜಿನ್ ಔಟ್‌ಫುಟ್ 60 ಪಿಎಸ್‌ಗೆ ಏರಿಕೆಯಾಗಿತ್ತು.
ಈ ಬಗ್ಗೆ ಪ್ರತಿಕ್ರಿಯಿಸಿರುವ ನ್ಯಾಂಡಿನ್ ಸಾಮಾನ್ಯ ರಸ್ತೆ ಬೈಕ್‌ಗಿಂತಲೂ ಅದ್ಭುತ ಅನುಭವ ವಿಶೇಷ ಟ್ಯೂನ್ ಮಾಡಿರುವ ಕಾಂಟಿನೆಂಟಲ್ ಜಿಟಿಯಿಂದ ಲಭಿಸಿರುತ್ತದೆ ಎಂದಿದ್ದಾರೆ. ಅಂದ ಹಾಗೆ ಈಕೆ ಇದು ಮೂರನೇ ಬಾರಿಗೆ ಬೋನ್‌ವಿಲ್ ಸಾಲ್ಟ್ ಫ್ಲಾಟ್ಸ್‌ನಲ್ಲಿ ಸವಾಲು ಸ್ವೀಕರಿಸುತ್ತಿದ್ದಾರೆ. ಈ ಹಿಂದೆ ಪರಿಷ್ಕೃತ ಟ್ರಯಂಪ್ ಥಂಡರ್‌ಬರ್ಡ್ ಸ್ಟ್ರೋಮ್ 1900 ಬೈಕ್ ಬಳಸಿದ್ದರಲ್ಲದೆ ಗಂಟೆಗೆ ಗರಿಷ್ಟ 235 ಕೀ.ಮೀ. ವೇಗ ಗಿಟ್ಟಿಸಿಕೊಳ್ಳುವಲ್ಲಿ ಯಶಸ್ವಿಯಾಗಿದ್ದರು.


Click it and Unblock the Notifications








