ಅತಿ ಶೀಘ್ರದಲ್ಲೇ ಹೋಂಡಾ ಸಿಬಿ ಹಾರ್ನೆಟ್ 160ಆರ್ ಬಿಡುಗಡೆ
ದೇಶದ ಎರಡನೇ ದ್ವಿಚಕ್ರ ವಾಹನ ತಯಾರಿಕ ಸಂಸ್ಥೆಯಾಗಿರುವ ಹೋಂಡಾ ಮೋಟಾರುಸೈಕಲ್ ಆ್ಯಂಡ್ ಮತ್ತು ಸ್ಕೂಟರ್ ಇಂಡಿಯಾ ಸಂಸ್ಥೆಯು ಅತಿ ಶೀಘ್ರದಲ್ಲೇ ಸಿಬಿ ಹಾರ್ನೆಟ್ 160ಆರ್ ಬಿಡುಗಡೆ ಮಾಡಲಿದೆ. ಬಲ್ಲ ಮೂಲಗಳ ಪ್ರಕಾರ ಹೋಂಡಾ ಸಿಬಿ ಹಾರ್ನೆಟ್ 160ಆರ್ ಮುಂಬರುವ 2015 ನವೆಂಬರ್ 19ರಂದು ಬಿಡುಗಡೆಯಾಗಲಿದೆ.
ನಿಮ್ಮ ಮಾಹಿತಿಗಾಗಿ ಹೋಂಡಾ ಸಿಬಿ ಹಾರ್ನೆಟ್ 160ಆರ್ ಮೊದಲ ಬಾರಿ 2015 ರೇವ್ ಫೆಸ್ಟ್ ನಲ್ಲಿ ಅನಾವರಣಗೊಂಡಿತ್ತು. ಇದು ಈಗಾಗಲೇ ಮಾರುಕಟ್ಟೆಯಲ್ಲಿರುವ ಹೋಂಡಾ ಸಿಬಿ ಟ್ರಿಗರ್ ಮಾದರಿಯನ್ನು ಬದಲಾಯಿಸಿಕೊಳ್ಳುವ ಸಾಧ್ಯತೆಯಿದೆ.

ನೂತನ ಹೋಂಡಾ ಸಿಬಿ ಹಾರ್ನೆಟ್ 160ಆರ್ 162.71 ಸಿಸಿ, ಸಿಂಗಲ್ ಸಿಲಿಂಡರ್, ಏರ್ ಕೂಲ್ಡ್ ಎಂಜಿನ್ ನಿಂದ ನಿಯಂತ್ರಿಸಲ್ಪಡಲಿದ್ದು, 14.61 ಎನ್‌ಎಂ ತಿರುಗುಬಲದಲ್ಲಿ 14.5 ಅಶ್ವಶಕ್ತಿಯನ್ನು ಉತ್ಪಾದಿಸಲಿದೆ. ಅಲ್ಲದೆ 5 ಸ್ಪೀಡ್ ಗೇರ್ ಬಾಕ್ಸ್ ನಿಂದ ನಿಯಂತ್ರಿಸಲ್ಪಡಲಿದೆ.
ಇನ್ನು ಮೈಲೇಜ್ ಸಂಬಂಧಪಟ್ಟ ಮಾಹಿತಿಗಳು ಬಿಡುಗಡೆ ವೇಳೆಯಲ್ಲಷ್ಟೇ ತಿಳಿದು ಬರಲಿದೆ. ಹಾಗಿದ್ದರೂ ಪ್ರತಿ ಲೀಟರ್ ಗೆ ಅಂದಾಜು 50 ಕೀ.ಮೀ. ಗಿಂತಲೂ ಹೆಚ್ಚಿನ ಇಂಧನ ಕ್ಷಮತೆ ನೀಡುವ ಸಾಧ್ಯತೆಯಿದೆ.

ಇನ್ನುಳಿದಂತೆ 17 ಇಂಚುಗಳ ಅಲಾಯ್ ವೀಲ್, ಮುಂಭಾಗ ಹಾಗೂ ಹಿಂಭಾಗದಲ್ಲಿ ಡಿಸ್ಕ್ ಬ್ರೇಕ್, ಕೊಂಬಿ ಬ್ರೇಕಿಂಗ್ ಸಿಸ್ಟಂ (ಸಿಬಿಎಸ್), ಮುಂದುಗಡೆ ಮೊನೊ ಶಾಕ್ ಹಾಗೂ ಹಿಂದುಗಡೆ ಟೆಲಿಸ್ಕಾಪಿಕ್ ಸಸ್ಫೆನ್ಷನ್ ಪಡೆಯಲಿದೆ. ಆಕ್ರಮಣಕಾರಿ ಮಸಲರ್ ಶೈಲಿಯ ವಿನ್ಯಾಸ, ಆ್ಯಂಗುಲರ್ ಹೆಡ್ ಲೈಟ್, ಎಕ್ಸ್ ವಿನ್ಯಾಸಿತ ಟೈಲ್ ಲೈಟ್, ಕಪ್ಪು ಪ್ಲಾಸ್ಟಿಕ್ ಪ್ಯಾನೆಲ್ ಮುಂತಾದವುಗಳು ಇನ್ನಿತರ ಆಕರ್ಷಣೆಯಾಗಲಿದೆ.
ಸುಜುಕಿ ಜಿಕ್ಸರ್, ಯಮಹಾ ಎಫ್ ಝಡ್-ಎಸ್ ಮತ್ತು ಟಿವಿಎಸ್ ಅಪಾಚಿ 160 ಮಾದರಿಗಳಿಗೆ ಪೈಪೋಟಿ ಒಡ್ಡಲಿರುವ ಹೋಂಡಾ ಹಾರ್ನೆಟ್ 160ಆರ್, 85,000 ರು.ಗಳಿಂದ 95,000 ರು.ಗಳ ಬೆಲೆ ಪರಿಧಿಯಲ್ಲಿ ಬಿಡುಗಡೆಯಾಗುವ ಸಾಧ್ಯತೆಯಿದೆ.
ಪ್ರಸಕ್ತ ಸಾಲಿನಲ್ಲಿ 15 ಹೊಸ ಹಾಗೂ ಪರಿಷ್ಕೃತ ಮಾದರಿಗಳನ್ನು ಬಿಡುಗಡೆ ಮಾಡುವುದಾಗಿ ಹೋಂಡಾ ಘೋಷಿಸಿತ್ತು. ಈ ಪೈಕಿ ಹಾರ್ನೆಟ್ 14ನೇ ಉತ್ಪನ್ನವಾಗಿದ್ದು, ವರ್ಷಾಂತ್ಯದೊಳಗೆ ಮಗದೊಂದು ಮಾದರಿಯನ್ನು ಪರಿಚಯಿಸಲಿದೆ.


Click it and Unblock the Notifications