ಹೋಂಡಾ ಒಂದೇ ದಿನದಲ್ಲಿ ಎರಡು ಲಕ್ಷ ದ್ವಿಚಕ್ರ ವಾಹನಗಳ ಮಾರಾಟ
ಹೋಂಡಾ ಮೋಟಾರ್ ಸೈಕಲ್ ಆ್ಯಂಡ್ ಸ್ಕೂಟರ್ ಇಂಡಿಯಾ ಪ್ರೈವೇಟ್ ಇಂಡಿಯಾ ಲಿಮಿಟೆಡ್ (ಎಚ್‌ಎಂಎಸ್‌ಐ) ಸಂಸ್ಥೆಯು 'ದಂತೆರಾಸ್' ಹಬ್ಬದ ದಿನದಂದು ಎರಡು ಲಕ್ಷಕ್ಕೂ ಹೆಚ್ಚು ದ್ವಿಚಕ್ರ ವಾಹನಗಳ ಮಾರಾಟದ ದಾಖಲೆ ಸ್ಥಾಪಿಸಿದೆ.
ದಂತೆರಾಸ್ ಹಬ್ಬದ ಪ್ರಯುಕ್ತ ಹೋಂಡಾ ಶೋ ರೂಂ ಗಳನ್ನು ಬೆಳಗ್ಗೆ ಐದು ಗಂಟೆಗೆ ತೆರೆಯಲಾಗಿತ್ತು. ಅಲ್ಲದೆ ಅಂದಿನ ದಿನ ಶೋ ರೂಂ ನೌಕರರು ತಡ ರಾತ್ರಿ 11 ಗಂಟೆಯ ವರೆಗೂ ದುಡಿದಿದ್ದರು ಎಂಬುದನ್ನು ಹೋಂಡಾ ತಿಳಿಸಿದೆ.

ದೇಶದಲ್ಲಿ ದ್ವಿಚಕ್ರ ವಾಹನ ಮಾರಾಟದಲ್ಲಿ ಎರಡನೇ ಸ್ಥಾನದಲ್ಲಿರುವ ಹೋಂಡಾ, ಸ್ಕೂಟರ್ ವಿಭಾಗದಲ್ಲಿ ಹಾಗೂ 125 ಸಿಸಿ ವಿಭಾಗದಲ್ಲಿ ನಂ.1 ಆಕ್ಟಿವಾ ಹಾಗೂ ಸಿಬಿ ಶೈನ್ ಮಾದರಿಗಳನ್ನು ಹೊಂದಿದೆ. ಇದಲ್ಲದೆ ಸಂಸ್ಥೆಯ ಇನ್ನಿತರ ಡ್ರೀಮ್ ಸಿರೀಸ್, ಲಿವೊ ಮಾದರಿಗಳಿಗೂ ಹೆಚ್ಚಿನ ಬೇಡಿಕೆ ವ್ಯಕ್ತವಾಗಿತ್ತು.
ಪ್ರಸಕ್ತ ಸಾಲಿನಲ್ಲಿ 15 ಹೊಸ ಹಾಗೂ ಪರಿಷ್ಕೃತ ಮಾದರಿಗಳನ್ನು ಬಿಡುಗಡೆ ಮಾಡುವುದಾಗಿ ಘೋಷಿಸಿದ್ದ ಹೋಂಡಾ ಈಗಾಗಲೇ 13 ಮಾದರಿಗಳನ್ನು ಪರಿಚಯಿಸಿದೆ. ವರ್ಷಾಂತ್ಯದೊಳಗೆ ಇನ್ನೆರಡು ದ್ವಿಚಕ್ರ ವಾಹನಗಳ ಆಗಮನವಾಗಲಿದೆ.


Click it and Unblock the Notifications